ನಳಪಾಕ

ಸಾರು ತಂಬುಳಿ ರೊಟ್ಟಿ ಮತ್ತು ವಡೆ

ಕುಂದಾಪುರ ತಾಲೂಕಿನ ಕೋಟದವರಾದ ಶೈಲಜ ಎಸ್‌.  ಅಡಿಗ ಪಾಕಪ್ರವೀಣೆ. ಇವರ ಪತಿ ಕೋಟ ಸದಾಶಿವ ಅಡಿಗರು ಕೂಡ ಪಾಕಶಾಸ್ತ್ರದಲ್ಲಿ ಪರಿಣತರು. ರುಚಿಗೆ ಮಾತ್ರವಲ್ಲದೆ ಶುಚಿತ್ವ ಹಾಗೂ ಆರೋಗ್ಯವನ್ನೂ ಕಾಪಾಡುವ ಅಡುಗೆಗಳ ಬಗ್ಗೆ ಇವರಿಗೆ ಹೆಚ್ಚು  ಒಲವು. ಕೆಲವು ಖಾದ್ಯಗಳನ್ನು   ತಯಾರಿಸುವ  ವಿಧಾನವನ್ನು  ಶೈಲಜ ಇಲ್ಲಿ ಹಂಚಿಕೊಂಡಿದ್ದಾರೆ.

ನುಗ್ಗೆಕಾಯಿ ಸಾರು
ಬೇಕಾಗುವ ಸಾಮಗ್ರಿಗಳು

ಟೊಮ್ಯಾಟೊ ಒಂದು, 2 ಕತ್ತರಿಸಿದ ನುಗ್ಗೆಕಾಯಿ, ಸಾರಿನ ಪುಡಿ 3 ಚಮಚ, ತೆಂಗಿನಕಾಯಿ ಹಾಲು ಕಾಲು ಕಪ್, ಕರಿಬೇವು, ಕೊತ್ತಂಬರಿ ಸೊಪ್ಪು, ಬೆಲ್ಲ ಅರ್ಧ ಚಮಚ, ಹುಣಸೆರಸ ಮತ್ತು ಉಪ್ಪು ರುಚಿಗೆ ತಕ್ಕಷ್ಟು.     
ಒಗ್ಗರಣೆಗೆ: ಎಣ್ಣೆ, ಸಾಸಿವೆ.
ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಟೊಮ್ಯಾಟೊ ಮತ್ತು ನೀರನ್ನು ಹಾಕಿ ಬೇಯಿಸಿಕೊಳ್ಳಿ,ಇದು ತಣ್ಣಗಾದ ಮೇಲೆ ಟೊಮ್ಯಾಟೊ ಅನ್ನು ಕಿವುಚಿ, ನಂತರ ಸಾರಿನ ಹದಕ್ಕೆ ಬೇಕಾಗುವಷ್ಟು ನೀರು ಸೇರಿಸಿ ಕುದಿಯಲು ಇಡಿ, ನಂತರ ಕತ್ತರಿಸಿದ ನುಗ್ಗೆಕಾಯಿ ಹಾಕಿ ಬೇಯಿಸಿ, ಉಪ್ಪು ಹುಳಿ ಬೆಲ್ಲ ಹಾಕಿ ಕುದಿಸಿ. ನಂತರ ಸಾರಿನ ಪುಡಿ ಹಾಕಿ ಕುದಿಸಿ, ಕಾಯಿ ಹಾಲು ಹಿಂಡಿ, ಕರಿಬೇವು ಹಾಕಿ. ಇದು ಕುದ್ದ ಬಳಿಕ ಇಳಿಸಿ ಕೊತ್ತಂಬರಿ ಸೊಪ್ಪು ಉದುರಿಸಿ ಎಣ್ಣೆ, ಸಾಸಿವೆಯ ಒಗ್ಗರಣೆ ಹಾಕಿ. ಇದು ಬಿಸಿ ಅನ್ನ ಹಾಗೂ ರಾಗಿಮುದ್ದೆಗೂ ಚೆನ್ನಾಗಿರುತ್ತದೆ.

*
ಕಿತ್ತಳೆ ಹಣ್ಣಿನ ಸಿಪ್ಪೆಯ ತಂಬುಳಿ
ಬೇಕಾಗುವ ಸಾಮಗ್ರಿಗಳು: ತುಪ್ಪ 1 ಚಮಚ, ಚಿಟಿಕೆ ಜೀರಿಗೆ, 2-3 ಕಾಳು ಕರಿಮೆಣಸು, ಹೆಚ್ಚಿದ ಕಿತ್ತಳೆ ಹಣ್ಣಿನ ಸಿಪ್ಪೆ 2 ಚಮಚ, ತೆಂಗಿನ ತುರಿ 2-3 ಚಮಚ, ಮಜ್ಜಿಗೆ ಒಂದು ಕಪ್, ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಒಣಮೆಣಸಿನ ಕಾಯಿ.

ತಯಾರಿಸುವ ವಿಧಾನ: ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ನಂತರ ಜೀರಿಗೆ, ಕಾಳುಮೆಣಸು ಹಾಕಿ ಹುರಿಯಿರಿ, ಹೆಚ್ಚಿದ ಕಿತ್ತಳೆ ಸಿಪ್ಪೆ ಹಾಕಿ ಬಾಡಿಸಿ ನಂತರ ತೆಂಗಿನ ತುರಿ ಹಾಕಿ ಬಾಡಿಸಿ ,ಇವೆಲ್ಲವನ್ನೂ ಮಿಕ್ಸಿ ಜಾರಿನಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ರುಬ್ಬಿದ ಮಿಶ್ರಣಕ್ಕೆ ಉಪ್ಪು ಮತ್ತು ಮಜ್ಜಿಗೆ ಸೇರಿಸಿ ಎಣ್ಣೆಯಲ್ಲಿ ಮಾಡಿದ ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಒಣಮೆಣಸಿನ ಒಗ್ಗರಣೆ ಹಾಕಿದರೆ ಹಿತವಾದ ರುಚಿಯ ಕಿತ್ತಳೆ ಸಿಪ್ಪೆಯ ತಂಬುಳಿ ಸಿದ್ಧವಾಗುತ್ತದೆ. ಇದರ ಸೇವನೆ ಶೀತಕ್ಕೆ ತುಂಬಾ ಉತ್ತಮ.

*
ಕುಚ್ಚಿಗೆ ಅಕ್ಕಿ ರೊಟ್ಟಿ
ಬೇಕಾಗುವ ಸಾಮಗ್ರಿಗಳು

ನೆನೆಸಿದ ಕುಚ್ಚಿಗೆ ಅಕ್ಕಿ 2 ಕಪ್, ನೆನೆಸಿದ ಬೆಳ್ತಿಗೆ ಅಕ್ಕಿ (ದೋಸೆ ಅಕ್ಕಿ) 1 ಕಪ್, ತೆಂಗಿನಕಾಯಿ ತುರಿ 1 ಕಪ್, ಈರುಳ್ಳಿ 2, ಹಸಿಮೆಣಸಿನಕಾಯಿ 2, ಶುಂಠಿ ಒಂದು ಇಂಚು, ಕರಿಬೇವಿನ ಎಲೆಗಳು 10, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ನೆನೆಸಿದ ಕುಚ್ಚಿಗೆ ಅಕ್ಕಿ, ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ತುರಿ ಮತ್ತು ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬಿದ್ದು ಸ್ವಲ್ಪ ಗಟ್ಟಿಯಾಗಿ ಇರಬೇಕು. ನಂತರ ರುಬ್ಬಿದ ಮಿಶ್ರಣಕ್ಕೆ ಹೆಚ್ಚಿದ ಈರುಳ್ಳಿ, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿ ಹಾಕಿ ತವಾದ ಮೇಲೆ ರೊಟ್ಟಿಯ ಹಾಗೆ ತಟ್ಟಿದರೆ ರುಚಿಯಾದ ಕುಚ್ಚಿಗೆ ಅಕ್ಕಿ ರೊಟ್ಟಿ ರೆಡಿ. ಇದನ್ನು ತೆಂಗಿನ ಎಣ್ಣೆ, ಉಪ್ಪಿನ ಕಾಯಿ, ಬೆಲ್ಲದ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.

*
ತಿಳಿಸಾರು
ಬೇಕಾಗುವ ಸಾಮಗ್ರಿಗಳು: ತೊಗರಿ ಬೇಳೆ ಒಂದು ಮುಷ್ಟಿ, ಟೊಮ್ಯಾಟೊ 2, ಹಸಿಮೆಣಸಿನಕಾಯಿ 2, ಶುಂಠಿ ಒಂದು ಇಂಚು, ಚಿಟಿಕೆ ಇಂಗು, ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು, ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ: ಎಣ್ಣೆ, ಸಾಸಿವೆ.
ತಯಾರಿಸುವ ವಿಧಾನ: ಕುಕ್ಕರ್‌ಗೆ ತೊಗರಿ ಬೇಳೆ, ಟೊಮ್ಯಾಟೊ, ಶುಂಠಿ, ಇಂಗು ಹಾಕಿ ಬೇಯಿಸಿ, ಎಲ್ಲವನ್ನೂ ಮಿಕ್ಸಿ ಜಾರಿನಲ್ಲಿ ತೆಗೆದುಕೊಂಡು ರುಬ್ಬಿ. ನಂತರ ರುಬ್ಬಿರುವುದನ್ನು ಸೋಸಿಕೊಳ್ಳಿ. ಸೋಸಿದ ನೀರಿಗೆ ಉಪ್ಪು ಸೇರಿಸಿ ಕುದಿಸಿ, ಇಳಿಸಿದ ಮೇಲೆ ನಿಂಬೆರಸ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿ, ಎಣ್ಣೆ ಸಾಸಿವೆ ಒಗ್ಗರಣೆ ಹಾಕಿದರೆ ಬಿಸಿ ಬಿಸಿ ಅನ್ನದ ಜೊತೆ ಸವಿಯಲು ಬಿಸಿ ಬಿಸಿ ತಿಳಿ ಸಾರು ರೆಡಿ.

*
ಗಾರ್ಗೆ (ಅಕ್ಕಿ ವಡೆ)
ಬೇಕಾಗುವ ಸಾಮಗ್ರಿಗಳು

ಮೂರು ಗಂಟೆಗಳ ಕಾಲ ನೆನೆಸಿದ ದೋಸೆ ಅಕ್ಕಿ ಒಂದು ಪಾವು,ಅರ್ಧ ಗಂಟೆ ನೆನೆಸಿದ ಉದ್ದು 3 ಚಮಚ ಮತ್ತು ಮೆಂತೆ 1 ಚಮಚ,ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:  ನೆನೆಸಿದ ಉದ್ದು ಮತ್ತು ಮೆಂತೆಗೆ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ,ನೆನೆಸಿದ ಅಕ್ಕಿಯ ನೀರನ್ನು ಚೆನ್ನಾಗಿ ಬಾರಿ ಸ್ವಲ್ಪ ಹೊತ್ತು ಆರಲು ಬಿಡಿ,ನಂತರ ಅದನ್ನು ಮಿಕ್ಸಿ ಜಾರಿಗೆ ತೆಗೆದುಕೊಂಡು ಪುಡಿಮಾಡಿ, ಪುಡಿಮಾಡಿದ್ದನ್ನು ಜರಡಿ ಹಿಡಿಯರಿ, ಪುನಃ ಜರಡಿಯಲ್ಲಿ ಉಳಿದ ಅಕ್ಕಿ ತರಿಯನ್ನು ಪುಡಿ ಮಾಡಿ ಜರಡಿ ಹಿಡಿಯಿರಿ. ಹೀಗೆ ಪೂರ್ತಿ ಅಕ್ಕಿ ಜರಡಿ ಹಿಡಿದು ತಯಾರಾದ ಅಕ್ಕಿ ಹಿಟ್ಟನ್ನು ಅರೆದ ಉದ್ದು ಮೆಂತೆ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ,ಉಪ್ಪು ಹಾಕಿ ಕಲಸಿ ಇದು ಚಕ್ಕುಲಿ ಹಿಟ್ಟಿನ ಹದಕ್ಕಿಂತಲೂ ಗಟ್ಟಿಯಾಗಿರಬೇಕು. ಹೀಗೆ ತಯಾರಾದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ.ಈ ಉಂಡೆಗಳನ್ನು ಒಂದು ಪಂಚೆಯ ಮೇಲೆ ದೂರ ದೂರ ಜೋಡಿಸಿ, ಅದರ ಮೇಲೆ ಇನ್ನೊಂದು ಪಂಚೆಯನ್ನು ಹಾಸಿ ಕೈಯಲ್ಲಿ ಎಲ್ಲಾ ಉಂಡೆಗಳನ್ನು ಒಂದೊಂದಾಗಿ ಒತ್ತಿ ಎಣ್ಣೆಯಲ್ಲಿ ಕರಿದರೆ ಉಬ್ಬಿದ ಗಾರ್ಗೆ ಅಥವಾ ಅಕ್ಕಿ ವಡೆ ತಯಾರಾಗುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಪ್ರಜಾವಾಣಿ ರೆಸಿಪಿ
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

12 Jul, 2017
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಪ್ರಜಾವಾಣಿ ರೆಸಿಪಿ
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

7 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017