ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡೇತರ ಭಾಷೆ ಕಟಕಟೆಯಲ್ಲೇಕೆ?

Last Updated 30 ಡಿಸೆಂಬರ್ 2016, 19:54 IST
ಅಕ್ಷರ ಗಾತ್ರ

ಈಚೆಗೆ   ನೆರವೇರಿದ ‘ಬೆಂಗಳೂರು ಸಾಹಿತ್ಯ ಉತ್ಸವ’ ಕುರಿತು ವಿಮರ್ಶಕರಾದ ಎಸ್.ಆರ್.ವಿಜಯಶಂಕರ (ಸಂಗತ, ಪ್ರ.ವಾ., ಡಿ. 26) ಅದು ಇಂಗ್ಲಿಷ್ ಥಳಕಿನ ಉತ್ಸವವಾಗಿತ್ತೆಂದು ಪ್ರತಿಕ್ರಿಯಿಸಿದ್ದಾರೆ. ಕನ್ನಡದ ಬಗೆಗಿನ ಅವರ ಕಾಳಜಿ ಗಂಭೀರವೆನ್ನಿಸಿದರೂ ಸಾಹಿತ್ಯಾಸಕ್ತರಲ್ಲಿ ಕೆಲವು ಸಂದೇಹಗಳನ್ನು ಮೂಡಿಸುತ್ತದೆ. ಒಂದು ಭಾಷೆ ಇನ್ನೊಂದು ಭಾಷೆಯ ಪ್ರಗತಿಗೆ ಅವರು ಹೇಳುವಷ್ಟು ತೀವ್ರ ತೆರದಲ್ಲಿ ಅಡೆತಡೆಗಳನ್ನೊಡ್ಡುವುದೇ ಎನ್ನುವ ಪ್ರಶ್ನೆ ಅಂಕುರಿಸುತ್ತದೆ. ಕನ್ನಡದ ಸಾಂಸ್ಕೃತಿಕ, ಸಾಮಾಜಿಕ ನಿರೀಕ್ಷೆಗಳನ್ನು ಇಂಗ್ಲಿಷಾಗಲಿ, ಸಂಸ್ಕೃತವಾಗಲಿ ಹುಸಿಗೊಳಿಸುವುದಾದರೂ ಹೇಗೆ?

ನಾವೆಲ್ಲರೂ ಪರಿಭಾವಿಸಿರುವಂತೆ ಯಾವುದೇ ಭಾಷೆ ಮನುಷ್ಯರ ಪರಸ್ಪರ ಸಂಪರ್ಕ, ಸಂವಹನಕ್ಕಾಗಿ ಮನುಷ್ಯರದೇ ಬೌದ್ಧಿಕ ಕಟ್ಟೋಣ. ಮನಸ್ಸಿನಲ್ಲಿ ಆವಿರ್ಭವಿಸುವ ಚಿಂತನೆಗಳನ್ನು, ತುಡಿತಗಳನ್ನು ಅಭಿವ್ಯಕ್ತಿಸಬಲ್ಲ ನಿರ್ಮಿತಿ.

ಪದಗಳ ‘ಕೊಡು-ಪಡೆ’ಯಿಂದ ಭಾಷೆ ಗಟ್ಟಿಗೊಳ್ಳುತ್ತದೆ. ಹೊಸ ಹೊಸ ಅನುಭವಗಳಿಂದ ಅದು ಪುನರ್ ರೂಪ ಹೊಂದುತ್ತದೆ. ಎಂದಮೇಲೆ ಒಂದು ಭಾಷೆ ಅಳಿಯದಂತೆ ಉಳಿದುಕೊಳ್ಳಲು ಇನ್ನೊಂದನ್ನು ಎದುರಿಸಬೇಕಾಗುತ್ತದೆ ಎಂಬ ಧೋರಣೆಗೆ ಏನರ್ಥವಿದೆ? ಒಂದು ಭಾಷೆ ಮತ್ತೊಂದನ್ನು ಅತಿಕ್ರಮಿಸೀತು, ಆಕ್ರಮಿಸೀತು ಅಥವಾ ಸಂಪೂರ್ಣ ನಶಿಸುವಂತೆ ಪ್ರಭಾವಿಸೀತು ಎಂಬ ಆತಂಕ ಕೃತ್ರಿಮವಲ್ಲವೆ? ಸಂಸ್ಕೃತ, ಇಂಗ್ಲಿಷನ್ನು ಕಟಕಟೆಯಲ್ಲಿ ನಿಲ್ಲಿಸಿ ನೋಡಿ, ನಿಮ್ಮಿಂದ ಕನ್ನಡವನ್ನು ಮರೆಯುವಂತಾಗಿದೆ ಎನ್ನುವುದು ಹೇಗೆ ಸಮಂಜಸ?

ಆಸಕ್ತಿ, ವ್ಯವಧಾನವಿದ್ದಷ್ಟೂ ಹೊಸ ಹೊಸ ಭಾಷೆಗಳ ಕಲಿಕೆಯಿಂದ ಈಗಾಗಲೇ ಕಲಿತಿರುವ ಭಾಷೆಗಳು ಮತ್ತಷ್ಟು ಗಾಢವಾಗಿಯೇ ಕರಗತವಾಗುತ್ತವೆ. ‘ಇಂಥ ಭಾಷೆ ಕಲಿತರೆ ನೀನು ಮಾತನಾಡುವ ಭಾಷೆ ಮರೆಯುವೆ’ ಎಂದರೆ ಅಜ್ಜಿಯ ಮನೆಗೆ ರಜೆ ಕಳೆಯಲು ಬಂದ ಮೊಮ್ಮಗನಿಗೆ ‘ನೀನು ಪಕ್ಕದ ಮನೆಯ ಬೈಸಿಕಲ್ ಸವಾರಿ ಮಾಡಬೇಡ, ಊರಿಗೆ ಹೋದಮೇಲೆ ನಿನ್ನ ಬೈಸಿಕಲ್ ಸವಾರಿ ಮರೆತು ಹೋಗುತ್ತೆ’ ಎಂದು ಹೇಳಿದಂತಾಗುತ್ತದೆ!

ಕನ್ನಡಕ್ಕೆ ಜ್ಞಾನಪೀಠ ಗೌರವ ತಂದುಕೊಟ್ಟ ದ.ರಾ.ಬೇಂದ್ರೆ, ಮಾಸ್ತಿ, ಗಿರೀಶ್ ಕಾರ್ನಾಡರಿಗೆ ಅವರವರ ಮಾತೃಭಾಷೆಯೇನೂ ಮಹೋನ್ನತ ಸಾಧನೆಗೆ ಅಡ್ಡಿಯಾಗಲಿಲ್ಲ. ಅಂತೆಯೇ ವಿ.ಕೃ.ಗೋಕಾಕರಿಗೆ, ಅನಂತ ಮೂರ್ತಿಯವರಿಗೆ ಓದು, ಅಧ್ಯಾಪನ ಇಂಗ್ಲಿಷಲ್ಲಾದರೂ ಸೆಳೆದಿದ್ದು ಕನ್ನಡವೆ. ಕನ್ನಡದ ವಾತಾವರಣ ತಂದುಕೊಂಡಿದ್ದು ಅವರ ಪಾಲಿಗೆ ಗಳಿಸಿದ ಪ್ರಶಸ್ತಿಗಿಂತಲೂ ಹೆಗ್ಗಳಿಕೆ. ಸಂಸ್ಕೃತ, ಇಂಗ್ಲಿಷ್ ಜೀರ್ಣಿಸಿಕೊಂಡು ಕನ್ನಡ ಬೆಳೆಯಬೇಕಿದೆ ಎನ್ನುವುದಕ್ಕಿಂತ, ಒಂದನ್ನೊಂದು ಪೋಷಿಸಿಕೊಂಡು ಬೆಳೆಯಬೇಕಾದ್ದಿದೆ ಎನ್ನುವುದೇ ಯುಕ್ತ.

ಒಂದು ಭಾಷೆಯ ಮೂಲಕ ಅರ್ಜಿಸಿದ ಜ್ಞಾನ ಕಲಿಯುವ ಇನ್ನೊಂದು ಭಾಷೆಗೂ ವರ್ಗವಾಗುತ್ತದೆ. ಕೇವಲ ಮಾಹಿತಿಗಾಗಿ ಇಂಗ್ಲಿಷ್, ಜರ್ಮನ್, ಫ್ರೆಂಚ್ ಅಥವಾ ಲ್ಯಾಟಿನ್ ಅನ್ನು ಸೀಮಿತಗೊಳಿಸಿದರೆ ಅವುಗಳಲ್ಲಿನ ಸತ್ವ, ಸಂವೇದನೆ ಪರಿಚಯವಾಗದೆ ಅರಿವಿನ ಸಮಷ್ಟಿ ಅಷ್ಟರಮಟ್ಟಿಗೆ ದುರ್ಗಮವಾಗುವುದು.
ಇಂದಿನ ತೀಕ್ಷ್ಣ ಜಾಗತೀಕರಣದ ದಿನಮಾನಗಳಲ್ಲಿ ಜಗತ್ತೇ ಒಂದು ಕಿರು ಗ್ರಾಮವಾಗಿದೆ. ಬಹುಸಂದರ್ಭ, ಆಗುಹೋಗುಗಳೊಂದಿಗೆ ಅನುಸಂಧಾನಿಸುವ ಅನಿವಾರ್ಯತೆಯಿದೆ. ಸಾಧ್ಯವಾದಷ್ಟು ಹೆಚ್ಚಾಗಿ  ಹಲವು ಭಾಷೆಗಳನ್ನು ಕಲಿಯುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಇಂಗ್ಲಿಷ್ ಕಿಟಕಿ ಹಿರಿದಾಗಿಸಬೇಕಿದೆ. ನಾವು ಕುಳಿತಿರುವ ದೋಣಿಯನ್ನು ಎಷ್ಟೇ ಗಮನಿಸಿದರೂ ಅದರ ಹೊರರೂಪ ಗೋಚರಿಸದು. ಇಳಿದರೆ ಮಾತ್ರವೇ ಅದರ ಆಕೃತಿ, ಬಣ್ಣ, ಗಾತ್ರ, ಹುಟ್ಟು, ನಡೆಸುವ ಎಂಜಿನ್ ಕಾಣುವುದು. ಹಾಗೆಯೇ ಅನ್ಯ ಭಾಷೆಯ ಪರಿಚಯವಾದಾಗ ನಮ್ಮ ಭಾಷೆಯ ಸ್ವರೂಪ ತಿಳಿದೀತು.

ಜರ್ಮನಿ ಸಂಜಾತರಾದರೂ ಮ್ಯಾಕ್ಸ್‌ಮುಲ್ಲರ್ ವಿದ್ಯಾಭ್ಯಾಸ ಕೈಗೊಂಡಿದ್ದು ಬ್ರಿಟನ್ನಿನಲ್ಲಿ. ಅವರು ಪ್ಯಾರಿಸ್‌ಗೆ ಹೋಗಿ ಅಲ್ಲಿ ಹೈಗನ್ ಬರ್ನಾಫ್‌ರ ಮಾರ್ಗದರ್ಶನದಲ್ಲಿ ಸಂಸ್ಕೃತ ಕಲಿತು ಶ್ರೇಷ್ಠ ವಿದ್ವಾಂಸರಾದರು. ಇಂಗ್ಲೆಂಡಿನಲ್ಲಿ ಲಭ್ಯವಾದ ಹಸ್ತಪ್ರತಿಗಳನ್ನು ಬಳಸಿಕೊಂಡೆ ಋಗ್ವೇದ ಭಾಷ್ಯ ಪ್ರಕಟಿಸಿದರು. ‘ಹಿತೋಪದೇಶ’ವನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಿದರು. ಮೋಕ್ಷಮಲ್ಲರ ಭಟ್ಟರೆನಿಸಿದರು. ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ನಾಟಕ ಯುರೋಪಿನಾದ್ಯಂತ ಪ್ರಸಿದ್ಧವಾಗಿ ಭಾರತದ ಸಾಂಸ್ಕೃತಿಕ ಸಿರಿವಂತಿಕೆ ಮುಕ್ತಕಂಠದ ಶ್ಲಾಘನೆಗೊಳಗಾಯಿತು. ಜಗತ್ತು ತನ್ನ ಇತಿಹಾಸ
ದಲ್ಲಿ ಸೃಜನಶೀಲತೆಯನ್ನು ಹೇಗೆ ತರತಮವೆಣಿಸದೆ ಅಪ್ಪಿದೆ ಎನ್ನಲು ಇವನ್ನು ಉದಾಹರಿಸಿದೆನಷ್ಟೆ.

ಅಂತೆಯೆ ರೆವರೆಂಡ್ ಕಿಟ್ಟೆಲ್ ಕನ್ನಡದಲ್ಲಿ ಅಪಾರ ಪಾಂಡಿತ್ಯ ಗಳಿಸಿ 70,000 ಪದಗಳ ಕನ್ನಡ-ಇಂಗ್ಲಿಷ್ ನಿಘಂಟು ರಚಿಸಿ ಮನೆಮಾತಾದರು. ಪದಗಳ ಬೇಟೆಗೆ ಅವರು ಮಂಗಳೂರು, ಧಾರವಾಡದ ಸಂತೆ, ಜಾತ್ರೆಗಳಲ್ಲಿ ಕುದುರೆಯೇರಿ ಅಡ್ಡಾಡಿದ್ದೆಷ್ಟೋ?

ಕಳೆದ ಶತಮಾನದ ಬ್ರಿಟನ್ನಿನ ಪ್ರಸಿದ್ಧ ತರ್ಕಶಾಸ್ತ್ರಜ್ಞ ಲುಡ್ವಿಗ್ ವಿಟ್ಗನ್‌ಸ್ಟೈನ್‌ರ ಉದ್ಗಾರವಿದು: ‘ನನ್ನ ಭಾಷೆಯ ಇತಿಮಿತಿಗಳೆಂದರೆ ನನ್ನ ಜಗತ್ತಿನ ಇತಿಮಿತಿಗಳು’. ಭಾಷಾ ಸಾಮರಸ್ಯ ಸಹಿಷ್ಣುತೆಯ ಒಂದು ಪ್ರಮುಖ ಭಾಗ. ನಾವು ಕನ್ನಡಿಗರು ತಕ್ಕಷ್ಟು ಬೆಳೆದಿದ್ದೇವೆ. ಬಹು ಎಚ್ಚರಿಕೆಯಿಂದ ಯಾವುದು ಸ್ವೀಕಾರಾರ್ಹ ಅಥವಾ ಅಲ್ಲ ಎಂದು ತೀರ್ಮಾನಿಸಬಲ್ಲೆವು. ಅಮೆರಿಕ, ಇಂಗ್ಲೆಂಡ್, ಸಿಂಗಪುರದಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನಮ್ಮ ಮೇಲೆ ಭರವಸೆಯಿಟ್ಟು ಉನ್ನತ ಹುದ್ದೆಗಳನ್ನು ನೀಡಿರುವುದಕ್ಕಿಂತ ನಿದರ್ಶನ ಅನಗತ್ಯ.

ಸಾಹಿತ್ಯ ಸಮಾವೇಶಗಳಲ್ಲಿ ಎಷ್ಟು ಜನ ಸೇರಿದ್ದರೆನ್ನುವುದು ಮುಖ್ಯವೆನ್ನಿಸದು. ಸಾಗಿದ ಚರ್ಚೆ, ಸಂವಾದ, ವಿಷಯ ಮಂಡನೆಗಳು ಎಷ್ಟು ಮೌಲಿಕವೆನ್ನುವುದು ಪ್ರಾಧಾನ್ಯವಾಗುತ್ತದೆ. ನಮ್ಮ ನೆಲದಲ್ಲಿ ಕನ್ನಡೇತರ ಭಾಷೆಗಳು ಸಂಭ್ರಮಿಸಿದಾಗ ಓರೆಕೋರೆಗಳನ್ನು ಮೀರಿ ಹರ್ಷಿಸುವುರಲ್ಲಿ ಅಕ್ಷರಶಃ ಕನ್ನಡತನವಿದೆ. ಹಾಗಾಗಿ ಕನ್ನಡದ ಮನೆಯಂಗಳಕ್ಕೆ ಅನ್ಯ ಭಾಷೆ ಬಂದರೆ ಅತಿಥಿಯನ್ನು ‘ಏನು ಬಂದಿರಿ ಹದುಳವಿದ್ದಿರೆ’ ಎನ್ನೋಣ, ಕುಳ್ಳಿರೆನ್ನೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT