ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಷಗಿರಿಯಲ್ಲಿ ಸಡಗರದ ಅಕ್ಷರ ಜಾತ್ರೆ

Last Updated 31 ಡಿಸೆಂಬರ್ 2016, 4:28 IST
ಅಕ್ಷರ ಗಾತ್ರ

ಅಕ್ಕಿಆಲೂರ: ‘ಕನ್ನಡಿಗರು ಇಂಗ್ಲಿಷ್ ಭಾಷಾ ವ್ಯಾಮೋಹಕ್ಕೆ ಒಳಗಾಗಿ ಸ್ವಯಂ ಮೋಸ ಮಾಡಿಕೊಳ್ಳುತ್ತಿದ್ದಾರೆ. ಪರ ಭಾಷಾ ವ್ಯಾಮೋಹದಿಂದ ಹೊರಬಂದು ಕನ್ನಡ ಉಳಿಸುವ–ಬೆಳೆಸುವ ಕಾಯಕದಲ್ಲಿ ಪ್ರತಿಯೊಬ್ಬರೂ ತೊಡಗಬೇಕಿದೆ’ ಎಂದು ಶಾಸಕ ಮನೋಹರ ತಹಶೀಲ್ದಾರ್ ನುಡಿದರು.

ಇಲ್ಲಿಗೆ ಸಮೀಪದ ಶೇಷಗಿರಿಯಲ್ಲಿ ಶುಕ್ರವಾರ ಹಾನಗಲ್ ತಾಲ್ಲೂಕಿನ 2 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ವಿಜಯಕಾಂತ ಪಾಟೀಲ ಮಾತನಾಡಿ, ‘ಭಾಷೆಯ ಬೆಳವಣಿಗೆ ಕುರಿತು ಮಾತನಾಡುವರ ಸಂಖ್ಯೆ ಹೆಚ್ಚುತ್ತಿದ್ದು, ಮಾತನಾಡಿದಂತೆ ನಡೆಯುವರು ವಿರಳ ಆಗುತ್ತಿದ್ದಾರೆ. ಮಾತಿಗಿಂತಲೂ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕಿದೆ’ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ‘ನಾಳೆಗಾಗಿ ಸಾಹಿತ್ಯದ ಅವಶ್ಯಕತೆ ಹೆಚ್ಚಿದೆ. ಯುವ ಪೀಳಿಗೆಗೆ ಬರವಣಿಗೆಯ ರೀತಿ–ನೀತಿಗಳನ್ನು ಕಲಿಸಬೇಕಿದೆ. ಹೊಸ ಯುಗದ ಬರಹಗಾರರಿಗೆ ಸಮ್ಮೇಳನಗಳ ಮೂಲಕ ಅವಕಾಶ ಒದಗಿಸಿಕೊಡ ಬೇಕಿದೆ. ಸಾಹಿತ್ಯದ ಮೂಲಕ ಭಾಷೆ ಯನ್ನು ಬೆಳೆಸುವ ಕೈಂಕರ್ಯದಲ್ಲಿ ಎಲ್ಲರು ತೊಡಗಬೇಕಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಕನ್ನಡ ಕಟ್ಟುವ ಕೆಲಸ ಪರಿಷತ್ತಿನಿಂದ ಮಾತ್ರ ಸಾಧ್ಯವಿಲ್ಲ. ಈ ಕಾಯಕದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಕೈ ಜೋಡಿಸಬೇಕಿದೆ’ ಎಂದರು.

ಪರಿಷತ್ತಿನ ತಾಲ್ಲೂಕಾಧ್ಯಕ್ಷ ನಾಗರಾಜ್‌ ಅಡಿಗ ಬ್ರಹ್ಮದೇವ ಹದಳಗಿ ಅವರ ಜಾನಪದ ವಿಮರ್ಶೆ ಕೃತಿ ಬಿಡುಗಡೆಗೊಳಿಸಿದರು. ಸಾಹಿತಿ ಡಾ.ಆನಂದ ಋಗ್ವೇದಿ ಪರಿಚಯಿಸಿದರು. ಸಮ್ಮೇಳನಾಧ್ಯಕ್ಷ, ಬ್ರಹ್ಮದೇವ ಹದಳಗಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ವಿದ್ಯಾ ಪಾಟೀಲ, ಹೊಂಕಣ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಗದೀಶ ಚಂದಣ್ಣನವರ, ಉಪಾಧ್ಯಕ್ಷೆ ಗೀತಾ ಬಣಕಾರ, ದಾನಪ್ಪ ಘಂಟೇರ, ಜಿ.ಎಂ.ಅಪ್ಪಾಜಿ, ಪ್ರೊ.ವಿ.ಜಿ. ಶಾಂತಪೂರಮಠ, ಶಂಕ್ರಣ್ಣ ಗುರಪ್ಪನವರ ಇದ್ದರು.
ನಿಧಿ ಅಡಿಗ ಪ್ರಾರ್ಥಿಸಿದರು. ಅಂಬಿಕಾ ಅಕ್ಕಿವಳ್ಳಿ ನಾಡಗೀತೆ ಹೇಳಿದರು. ಪ್ರಭು ಗುರಪ್ಪನವರ ಸ್ವಾಗತಿಸಿದರು. ನಿರಂಜನ ಗುಡಿ ಆಶಯ ನುಡಿ ನುಡಿದರು. ವಿಷ್ಣು ಪಟಗಾರ ನಿರ್ವಹಿಸಿದರು.

ಲೇಜಿಂ ನೃತ್ಯ, ಕೋಲಾಟದ ಸೋಗಸು...
ಸಮ್ಮೇಳನದ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಬ್ರಹ್ಮದೇವ ಹದಳಗಿ ಅವರ ಮೆರವಣಿಗೆ ನಾಡು–ನುಡಿಯ ಸಂಸ್ಕೃತಿ, ಪರಂಪರೆ ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮೆರವಣಿಗೆಗೆ ಸಾಂಪ್ರದಾಯಿಕ ಚಾಲನೆ ನೀಡಿದರು. ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ಗ್ರಾಮ ನವವಧುವಿನಂತೆ ಸಿಂಗಾರಗೊಂಡು ಕಣ್ಮನ ಸೆಳೆಯಿತು. ಪ್ರತಿಯೊಂದು ಮನೆಗಳ ಎದುರು ರಂಗೋಲಿ ಹಾಕಿ, ತಳಿರು–ತೋರಣಗಳಿಂದ ಅಲಂಕರಿಸಲಾಗಿತ್ತು. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೂ ಅಲ್ಲಲ್ಲಿ ಪೂಜೆ ಸಲ್ಲಿಸಿದ್ದು ಕಂಡು ಬಂದಿತು.

ಡೊಳ್ಳು, ಝಾಂಜ್‌ ಸೇರಿದಂತೆ ಇನ್ನಿತರ ವಾದ್ಯಗಳು ವೈಭವ ಹೆಚ್ಚಿಸಿದ್ದವು. ಅಕ್ಕಿಆಲೂರಿನ ಮಾದರಿ ಕೇಂದ್ರ ಶಾಲೆಯ ವಿದ್ಯಾರ್ಥಿಗಳ ಲೇಜಿಂ
ನೃತ್ಯ, ವಿದ್ಯಾರ್ಥಿನಿಯರ ಲಂಬಾಣಿಯರ ಕೋಲಾಟ ಸೊಗಸು ಹೆಚ್ಚಿಸಿತು.

  ಅಂಗನವಾಡಿ ಕೇಂದ್ರಗಳ ಮಕ್ಕಳು ರಾಷ್ಟ್ರನಾಯಕರ, ಸಾಧುಸಂತರ, ಮೇರು ಸಾಹಿತಿಗಳ ವೇಷಭೂಷಣದಲ್ಲಿ ಕಂಗೊಳಿಸಿದರು.
ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿನ ಡಾ.ಪಂ.ಪುಟ್ಟರಾಜ್‌ ಕವಿ ಗವಾಯಿಗಳ ಪ್ರಧಾನ ವೇದಿಕೆ ತಲುಪಿ ತೆರೆಕಂಡಿತು.
  ಇದಕ್ಕೂ ಮೊದಲು ತಾಲ್ಲೂಕಾ ತಹಶೀಲ್ದಾರ್ ಶಕುಂತಲಾ ಚೌಗಲಾ ರಾಷ್ಟ್ರ ಧ್ವಜಾರೋಹಣ, ಪರಿಷತ್ತಿನ ತಾಲ್ಲೂಕಾಧ್ಯಕ್ಷ ನಾಗರಾಜ್‌ ಅಡಿಗ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

‘ನಿರ್ಲಕ್ಷವೇ  ಪ್ರತ್ಯೇಕತೆ ಹಿಂದಿನ ಸತ್ಯ’
ಅಕ್ಕಿಆಲೂರ: ‘ಇದೀಗ ಎಲ್ಲೆಡೆ ಪ್ರತ್ಯೇಕತೆಯ ಕೂಗು ಜೋರಾಗಿ ಕೇಳಿ ಬರಲಾರಂಭಿಸಿದೆ. ಪ್ರತ್ಯೇಕತೆಯ ಕೂಗಿನ ಹಿಂದೆ ಪ್ರಾದೇಶಿಕತೆಯ ಕಡೆಗಣನೆ, ಅಭಿವೃದ್ಧಿ ಬಗೆಗೆ ನಿರ್ಲಕ್ಷ್ಯ ಧೋರಣೆ ಅಡಗಿದೆ’ ಎಂದು ಸಮ್ಮೇಳನ ಅಧ್ಯಕ್ಷ ಬ್ರಹ್ಮದೇವ ಹದಳಗಿ ಪ್ರತಿಪಾದಿಸಿದರು.

ಶೇಷಗಿರಿಯಲ್ಲಿ ನಡೆದ ಹಾನಗಲ್‌ ತಾಲ್ಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನದದಲ್ಲಿ ಮಾತನಾಡಿದರು. ‘ಕೆಲ ಪ್ರದೇಶಗಳನ್ನು ನಿರಂತರವಾಗಿ ಕಡೆಗಣಿಸುತ್ತಿರುವುದು ಸ್ಪಷ್ಟ ಗೋಚರಿಸುತ್ತಿದೆ. ಹೀಗಾಗಿ ಅಲ್ಲಿಯ ಜನರಲ್ಲಿ ತಾವು ನಿಂತ ನೆಲದಲ್ಲಿಯೇ ಪರಕೀಯ ಎಂಬ ಭಾವನೆ ಮೂಡುತ್ತಿದೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ ದೃಷ್ಟಿಯಿಂದ ನಿರ್ಲಕ್ಷ್ಯ ವಹಿಸಿದಾಗ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಲು ಪ್ರತ್ಯೇಕವಾಗಿ ಸಂಘಟನೆಯಾಗಬೇಕು ಎನ್ನುವ ಭಾವನೆ ಅವರಲ್ಲಿ ಮೂಡುತ್ತದೆ’ ಎಂದರು.

‘ಆಡಳಿತದಲ್ಲಿ ಸಂಪೂರ್ಣ ಕನ್ನಡೀಕರಣ ಸಾಧ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ನೀತಿ ಬದಲಾಗಬೇಕಿದೆ. ಕನ್ನಡ ಬರಹಗಾರರ ಪರಿಸ್ಥಿತಿ ಸುಧಾರಣೆಯಾಗಬೇಕಿದೆ. ಕನ್ನಡ ಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ದಾರಿ ಇದ್ದು, ಸಾಹಿತ್ಯದಿಂದ ನಾವು ಎಲ್ಲವನ್ನೂ ಕಲಿಯಬಹುದಾಗಿದೆ’ ಎಂದರು.

‘ಭಾಷೆ ಉತ್ತಮ ಸಾಹಿತ್ಯ, ಸಂಸ್ಕೃತಿಯ ಪ್ರತಿಬಿಂಬ. ಮಾತೃ ಭಾಷೆಯ ಮೇಲೆ ಇತರ ಭಾಷೆಗಳ ಯಜಮಾನಿಕೆಯ ಅವಶ್ಯಕತೆ ಇಲ್ಲ. ಎಲ್ಲ ಭಾಷೆಗಳೂ ಕೂಡ ತಮ್ಮದೇ ಆದ ಸಾಂಸ್ಕೃತಿಕ ಕೊಡುಗೆ ನೀಡಿವೆ. ಅದನ್ನು ಮನಗಂಡು ಗೌರವಿಸಿದಾಗ ಎಲ್ಲಾ ಭಾಷಾ ವರ್ಗಗಳ ಜನರು ಕೂಡ ಸೌಹಾರ್ದತೆಯಿಂದ ಬದುಕಲು ಸಾಧ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT