ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಕಳೆದುಕೊಂಡವರಿಗೆ ಸಿಕ್ಕಿಲ್ಲ ಪರಿಹಾರ

Last Updated 31 ಡಿಸೆಂಬರ್ 2016, 4:43 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ತಾಲ್ಲೂಕಿನ ಚೆಂದೂರಟೇಕ್‌ ಗ್ರಾಮದ ಆರು ಜನ ರೈತರು ಪರಿಹಾರಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ತಾಲ್ಲೂಕಿನ  ಚಂದೂರ ಮತ್ತು ಮಹಾರಾಷ್ಟ್ರದ -ಟಾಕಳಿ ಗ್ರಾಮಗಳ ಮಧ್ಯ ಕೆಆರ್‌ಡಿಸಿಎಲ್ ಇಲಾಖೆಯಿಂದ ₹ 18 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಹಿಂದೆಯೇ ಮೂರು ಎಕರೆಗಿಂತಲೂ ಹೆಚ್ಚಿನ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಸರ್ಕಾರ ಇದುವರೆಗೂ ಸಂತ್ರಸ್ಥ ರೈತರಿಗೆ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

‘ಸಂಸದ ಪ್ರಕಾಶ ಹುಕ್ಕೇರಿ  2–3 ವರ್ಷಗಳಲ್ಲಿ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ತಮಗೆ ಇದುವರೆಗೂ ಪರಿಹಾರ ದೊರಕಿಲ್ಲ. ಅತ್ತ ಭೂಮಿಯನ್ನೂ ಕಳೆದುಕೊಂಡಿದ್ದೇವೆ. ಇತ್ತ ಪರಿಹಾರ ಧನವೂ ಕೈ ಸೇರಿಲ್ಲ. ರೈತರ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ನೊಂದ ರೈತರು ಅಳಲು ತೋಡಿಕೊಳ್ಳುತ್ತಾರೆ.

ತಾಲ್ಲೂಕಿನ ಚಂದೂರ ಗ್ರಾಮದ 6 ಜನ ರೈತರಾದ ಅಶೋಕ ಗಾಯಕವಾಡ, ವಿರೇಂದ್ರ ಪಾಟೀಲ, ಭರಮು ಚೌಗಲಾ, ಅಕಾರಾಮ ಗಾಯಕವಾಡ, ಮಹಾವೀರ ಚೌಗಲಾ, ಜಯಪಾಲ ಚೌಗಲಾ, ಧನಪಾಲ ಚೌಗಲಾ  ಮತ್ತಿತರ ರೈತರು ಸೇತುವೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ 3 ಎಕರೆಗಿಂತ ಹೆಚ್ಚು  ಜಮೀನನ್ನು ನೀಡಿದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಗಡಿ ಭಾಗದಲ್ಲಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಚಂದೂರ–-ಟಾಕಳಿ ಗ್ರಾಮಗಳ ಮಧ್ಯದಲ್ಲಿ ₹ 18 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಒಟ್ಟು ಮೂರು ಎಕರೆ ಜಮೀನ ಅವಶ್ಯಕವಿತ್ತು. ಎರಡು ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಲಿರುವ ಸೇತುವೆ ನಿರ್ಮಾಣಕ್ಕಾಗಿ ಅನ್ನದಾತರು ತಾವು ನಂಬಿ ಜೀವ ಕಟ್ಟಿಕೊಂಡಿದ್ದ ಭೂಮಿಯನ್ನೆ  ಸರ್ಕಾರಕ್ಕೆ ನೀಡಿದ್ದಾರೆ.

ಆಗಿನ ಮಾರುಕಟ್ಟೆ ದರದನ್ವಯ ಪ್ರತಿ ಎಕರೆಗೆ  ₹ 18 ಲಕ್ಷ ಹಣ ನೀಡುವುದಾಗಿ ಅಧಿಕಾರಿಗಳು  ಹೇಳಿದ್ದರು. ಆ ಬೆಲೆಗೆ ರೈತರ ಒಪ್ಪಿಗೆ ನೀಡಿಲ್ಲ. ಇದೀಗ ಪ್ರತಿ ಎಕರೆಗೆ ₹ 35 ಲಕ್ಷ  ನೀಡುವಂತೆ ಒತ್ತಾಯಿಸಿದ್ದಾರೆ.

‘ಕಳೆದ ಮೂರು ವರ್ಷದಿಂದ ಹಣಾನೂ ಇಲ್ಲ, ಬೆಳೇನೂ ಇಲ್ಲದೇ ಕಂಗಾಲಾಗಿದ್ದೇವೆ. ನಮ್ಮ ಗೋಳು ಕೇಳಲು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಪುರಸೊತ್ತು ಇಲ್ಲದಂತಾಗಿದೆ. ಜನಪ್ರತಿನಿಧಿಗಳಿಂದ ಕೇವಲ ಭರವಸೆಯ ಮಾತುಗಳೇ ದೊರಕುತ್ತಿವೆ’ ಎಂದು ಸಂತ್ರಸ್ಥ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕಳೆದ 4 ವರ್ಷದಿಂದ ಕೃಷಿಕರು ಬೆಳೆನೂ ಇಲ್ಲದೆ ಭೂಮಿ ಇಲ್ಲದೆ ಕೈಕಟ್ಟಿ ಕುಳಿತುಕೊಳ್ಳುವ ದಯನೀಯ ಪರಿಸ್ಥಿತಿ ಎದುರಾಗಿದೆ. ಎರಡು ರಾಜ್ಯಗಳಿಗೆ ಸೇತುವೆ ನಿರ್ಮಾಣ ಕಾರ್ಯ ಮಾಡುತ್ತಿರುವುದು ಒಳ್ಳೆಯದೇ. ಆದರೆ, ಭೂಮಿ ಕಳೆದುಕೊಂಡು ರೈತರಿಗೆ ಮಾತ್ರ ಪರಿಹಾರ ನೀಡದೆ ಇರುವದು ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

‘ಚಂದೂರ-–ಟಾಕಳಿ ಮಧ್ಯದಲ್ಲಿ ನಿರ್ಮಾಣ ಮಾಡುತ್ತಿರುವ ಸೇತುವೆಗಾಗಿ ಈಗಾಗಲೇ ಜಮೀನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪರಿಹಾರ ಹಣ ನೀಡುವ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ರೈತರಿಗೆ ಮಾರುಕಟ್ಟೆ ದರದ ಪ್ರಕಾರ ಅತೀ ಶೀಘ್ರದಲ್ಲಿ  ಹಣ ನೀಡಲಾಗುವುದು’ ಎಂದು ಕೆಆರ್‌ಡಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ವೈ.ಗುಡರಟ್ಟಿ ಹೇಳುತ್ತಾರೆ.
- ಸುಧಾಕರ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT