ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಒಳಿತಿಗಾಗಿ ‘ನಗದುರಹಿತ’ ವ್ಯವಹರಿಸಿ’

Last Updated 31 ಡಿಸೆಂಬರ್ 2016, 4:53 IST
ಅಕ್ಷರ ಗಾತ್ರ

ಬಾಗಲಕೋಟೆ: ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ನಗದುರಹಿತವಾಗಿ ವ್ಯವಹರಿಸಬೇಕು. ಗರಿಷ್ಠ ಬೆಲೆ ನೋಟು ರದ್ದಿನಿಂದ ದೇಶಕ್ಕೆ ಒಳ್ಳೆಯ ಕಾಲ ಬಂದಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ ಸಿಂಹ ಸಲಹೆ ನೀಡಿದರು.

ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ನೋಟು ಬದಲು ದೇಶ ಮೊದಲು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಎಟಿಎಂ, ಮೊಬೈಲ್‌ಗಳು ಹೊಸದಾಗಿ ಬಂದಾಗ ನಾವು ಹೇಗೆ ಹೊಂದಿಕೊಂಡಿದ್ದೇವೋ ಹಾಗೆಯೇ ಈಗ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಬಳಸಿ ನಗದು ರಹಿತ ವಹಿವಾಟಿಗೂ ಹೊಂದಿಕೊಳ್ಳಬೇಕು. ಇದರಿಂದ ಅಧಿಕ ತೆರಿಗೆ ಸಂಗ್ರಹವಾಗುತ್ತದೆ. ಆ ಹಣವನ್ನು ದೇಶದ ಬಡವರ ಅಭಿವೃದ್ಧಿಗೆ ಬಳಸಿಕೊಳ್ಳಲು ನೆರವಾಗುತ್ತದೆ ಎಂದರು.

ಕಪ್ಪು ಹಣ ಇದ್ದವರು ಈಗಾಗಲೇ ನೋಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ನೋಟು ರದ್ದುಗೊಳಿಸಿದ ದಿನದಿಂದ ಬ್ಯಾಂಕ್‌ಗಳಲ್ಲಿ ಈವರೆಗೆ ನಡೆಸಿದ ಎಲ್ಲ ವ್ಯವಹಾರವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನವರಿ 1ರ ಬಳಿಕ ಯಾರ ಖಾತೆಗೆ ಎಷ್ಟು ಹಣ ಜಮೆ ಆಗಿದೆ ಎನ್ನುವುದು ಬಯಲಾಗುವುದು ಎಂದು ತಿಳಿಸಿದರು.

ವಿಧವಾ ವೇತನ, ವೃದ್ಧಾಪ್ಯ ವೇತನ, ಪಿಂಚಣಿ, ಕೃಷಿ ಸಾಲ, ಗ್ಯಾಸ್ ಸೇರಿದಂತೆ ಅನೇಕ ವ್ಯವಹಾರಗಳು ಬ್ಯಾಂಕ್‌ ಮೂಲಕವೇ ನಡೆಯುತ್ತಿವೆ. ಈ ಮೊದಲು ಮನೆಯಲ್ಲಿ ಅಮ್ಮ ಅನಕ್ಷರಸ್ಥೆಯಾದರೂ ಅವರಿಗೆ ಮಿಕ್ಸರ್‌, ಗ್ಯಾಸ್‌ ಸ್ಟೌ, ಟಿವಿಯಂಥ ಹಚ್ಚಲು ಕಲಿತಿದ್ದಾರೆ. ಇಷ್ಟೆಲ್ಲ ಕಲಿಸಿದ ಮಕ್ಕಳು ತಮ್ಮ ಪಾಲಕರಿಗೆ ಬ್ಯಾಂಕ್‌ ಕಾರ್ಡ್‌ ಬಗ್ಗೆ ತಿಳಿಸುವದಿಲ್ಲವೇ ಎಂದರು.

ಇಡೀ ದೇಶದ ಸಂಪತ್ತು ಶೇ 4ರಿಂದ 5ರಷ್ಟು ಜನರ ಕೈಯಲ್ಲಿದೆ ಎಂದು ಹೇಳಲಾಗುತ್ತಿದೆ. ಚಿನ್ನ, ರಿಯಲ್‌ ಎಸ್ಟೇಟ್‌ ವ್ಯಾಪಾರಿಗಳ ಬಳಿ ಕಾಳಧನ ಕ್ರೋಡೀಕರಣಗೊಂಡಿದೆ. ಇವೆಲ್ಲವೂ ಹೊರಬರಬೇಕು. 2020ರ ವೇಳೆಗೆ ಬಡವರಿಗೆ ಮನೆ, ಅಡುಗೆ ಅನಿಲ ನೀಡುವ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಹೊಂದಿದ್ದಾರೆ. ಕಾಳಧನದಿಂದ ಬರುವ ಹಣವನ್ನು ಜನಕಲ್ಯಾಣ ಯೋಜನೆಗಳಿಗೆ ಬಳಸಲಾಗುತ್ತಿದೆ. ದೇಶದ ಪರಿಸ್ಥಿತಿಯನ್ನು ಸರಿದಾರಿಗೆ ತರುವಲ್ಲಿ ಪ್ರಧಾನಿ ಹೆಜ್ಜೆ ಇಟ್ಟಿದ್ದು, ಅವರೊಂದಿಗೆ ನಾವು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗಾಂಧೀಜಿಗಿಂತ ರಾಹುಲ್‌ ಸರಳ!:
ಹಳೆಯ ನೋಟು ರದ್ದುಮಾಡಿದ ನಂತರ ರಾಹುಲ್‌ ಗಾಂಧಿ ಅವರು ಬ್ಯಾಂಕ್‌ ಮುಂದೆ ನಿಂತು ₹ 4 ಸಾವಿರ ನೋಟು ಬದಲಾಣೆ ಮಾಡಿಕೊಂಡು ಹೋಗಿದ್ದಾರೆ. ಮಾಡಕೊಂಡು ಹೋಗಿ ಒಂದುವರೆ ತಿಂಗಳು ಕಳೆದರೂ ಮತ್ತೆ ಬ್ಯಾಂಕ್‌ಗೆ ಬಂದಿಲ್ಲ. ಕೇವಲ ₹ 4 ಸಾವಿರದಲ್ಲಿ ಜೀವನ ನಡೆಸುತ್ತಿರುವ ಅವರು ಮಹಾತ್ಮ ಗಾಂಧೀಜಿ ಅವರಿಗಿಂತ ಸರಳ ಜೀವನ ನಡೆಸುತ್ತಿದ್ದಾರೆ ಎಂದು ಕುಟುಕಿದರು.

ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ  ಮಾತನಾಡಿದರು. ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ರಾಜಶೇಖರ ಶೀಲವಂತ, ಎಂ.ಕೆ.ಪಟ್ಟಣಶೆಟ್ಟಿ, ಶಂಕರಗೌಡ ಪಾಟೀಲ, ಯುವ ಮೋರ್ಚಾದ ಪದಾಧಿಕಾರಿಗಳಾದ ಬಸವರಾಜ ಯಂಕಂಚಿ, ರಾಜು ಚಿಕ್ಕನಗೌಡರ, ಎಸ್. ಎಂ. ಬನ್ನಿ, ಶೇಖರ ದಮ್ಮೂರ, ಕರುಣಾಕರ, ತಮ್ಮಣಗೌಡ ಸೇರಿದಂತೆ ಸಾವಿರಾರು ಯುವ ಮೋರ್ಚಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT