ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಜತೆ ಆತ್ಮಹತ್ಯೆ, ಅಪಘಾತಗಳ ಬರೆ

Last Updated 31 ಡಿಸೆಂಬರ್ 2016, 5:50 IST
ಅಕ್ಷರ ಗಾತ್ರ

ಹಾಸನ: ಮತ್ತೊಂದು ಸಂವತ್ಸರ ಮುಗಿಯುತ್ತ ಬಂದಿದೆ. 2016ಕ್ಕೆ ವಿದಾಯ ಹೇಳಿ 2017 ಅನ್ನು ಸ್ವಾಗತಿಸುತ್ತಿದ್ದೇವೆ. ಉರುಳಿ ಹೋದ ದಿನಗಳತ್ತ ಕಣ್ಣಾಡಿಸಿದರೆ ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಹತ್ತು ಹಲವು ಸಿಹಿ–ಕಹಿ ಘಟನೆಗಳು ನಡೆದಿವೆ.

ಸತತ ನಾಲ್ಕನೇ ವರ್ಷವೂ ಬರ ಆವರಿಸಿದೆ. ಅನ್ನದಾತನ ಮೇಲೆ ಪ್ರಕೃತಿ ಮುನಿಸು ಈ ವರ್ಷವೂ ಮುಂದುವರಿದಿದೆ. ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೂ ಕಡಿಮೆ ಏನಿಲ್ಲ. ಮಳೆ ಇಲ್ಲದೆ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾದವು. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಯಿತು. ಮಳೆ ಇಲ್ಲದೆ ಹೇಮಾವತಿ ಒಡಲು ಬರಿದಾಗುತ್ತಿದೆ.  

ಪ್ರಾಣ ತ್ಯಾಗ ಮಾಡಿದ ಯೋಧ
ಹಾಸನ ತಾಲ್ಲೂಕಿನ ತೇಜೂರು ಗ್ರಾಮದ ಸುಬೇದಾರ್‌ ಟಿ.ಟಿ. ನಾಗೇಶ್‌ ಅವರು ಸಿಯಾಚಿನ್‌ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟರು. ಫೆ. 3ರಂದು ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ನಾಗೇಶ್‌ ಸೇರಿದಂತೆ ಹತ್ತು ಯೋಧರು ಮೃತಪಟ್ಟಿದ್ದರು. ಪಾರ್ಥಿವ ಶರೀರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ತೇಜೂರಿನವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ರೈತರ ಸರಣಿ ಆತ್ಮಹತ್ಯೆ
ಸಾಲ ಬಾಧೆ, ಬೆಳೆ ನಷ್ಟದಿಂದ ಜಿಲ್ಲೆಯಲ್ಲಿ 52 ರೈತರು ಆತ್ಮಹತ್ಯೆ ಮಾಡಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರು ಮೃತರ ಮನೆಗಳಿಗೆ ಭೇಟಿ ನೀಡಿ ಸದಸ್ಯರಿಗೆ ಸಾಂತ್ವನ ಹೇಳಿ ಪರಿಹಾರದ ಚೆಕ್‌ ವಿತರಿಸಿದರು.

ಈ ನಡುವೆ ಕೇಂದ್ರದ ಬರ ಅಧ್ಯಯನ ತಂಡ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿತು. ಆದರೆ ಪರಿಹಾರ ಮಾತ್ರ ಇನ್ನೂ ಬಿಡುಗಡೆ ಆಗಿಲ್ಲ.

ಜಿ.ಪಂ. ಆಡಳಿತ ಕಾಂಗ್ರೆಸ್‌ ತೆಕ್ಕೆಗೆ
ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಶ್ವೇತಾ ದೇವರಾಜ್‌, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಎಚ್.ಪಿ. ಶ್ರೀನಿವಾಸ್‌ ಆಯ್ಕೆಯಾದರು. ಜೆಡಿಎಸ್‌ ಬಹುಮತ ಇರುವುದರಿಂದ ಭವಾನಿ ರೇವಣ್ಣ  ಅಧ್ಯಕ್ಷರಾಗುತ್ತಾರೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿಡಲಾಗಿತ್ತು. ಹೀಗಾಗಿ ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ರಾಜಕೀಯ ತಿಕ್ಕಾಟ ನಡೆದು ಮೇ 5, 16, 30ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೋರಂ ಅಭಾವದಿಂದ ಮುಂದೂಡಲಾಗಿತ್ತು. ನಾಲ್ಕನೇ ಬಾರಿಯೂ ಸಭೆಗೆ ಸದಸ್ಯರು ಗೈರು ಹಾಜರಾಗಿದ್ದರೆ ಸದಸ್ಯತ್ವ ಅನರ್ಹಗೊಳ್ಳುತ್ತಿತ್ತು.

ಗಮನ ಸೆಳೆದ ಸಿಗರನಹಳ್ಳಿ
ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರವೇಶ ವಿಚಾರಕ್ಕೆ ಸಂಬಂಧಿಸಿ ದಲಿತರು ಮತ್ತು ಸರ್ವಣೀಯರ ನಡುವೆ ಉಂಟಾದ ಘರ್ಷಣೆ ರಾಜ್ಯದ ಗಮನ ಸೆಳೆದಿತ್ತು. ಸಂಧಾನಕ್ಕೆ ಹೋಗಿದ್ದ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಪತ್ರಕರ್ತರ ಮೇಲೂ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿತ್ತು. ಹದಿನೈದು ದಿನ ಗ್ರಾಮದಲ್ಲಿ ನಿಷೇಧಾಜ್ಞೆ ಇತ್ತು. ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಶಾಂತಿ ಸಭೆಯೊಂದಿಗೆ ಪರಿಸ್ಥಿತಿ ನಿಯಂತ್ರಣಗೊಂಡು ಕೊನೆಗೆ ದಲಿತರಿಗೂ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಲಾಯಿತು. ಕೆಲ ದಿನಗಳ ಬಳಿಕ ರಾಜ್ಯಸಭಾ ಸದಸ್ಯ ಸೀತಾರಾಂ ಯೆಚೂರಿ ಭೇಟಿ ನೀಡಿದ್ದರು.

ಎಸಿ ವಿಜಯಾ ಆತ್ಮಹತ್ಯೆ ಯತ್ನ
ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮನನೊಂದು ಹಾಸನ ಉಪವಿಭಾಗಾಧಿಕಾರಿ ವಿಜಯಾ ಅವರು ಆತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಪಾರಾದರು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್‌ ನಾಯಕರು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದರು.

ದರ್ಶನ ಕರುಣಿಸಿದ ಹಾಸನಾಂಬೆ
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಜಿಲ್ಲೆಯ ಶಕ್ತಿದೇವತೆ ಹಾಸನಾಂಬೆ ಈ ಬಾರಿ 13 ದಿನ ಭಕ್ತರಿಗೆ ದರ್ಶನ ಕರುಣಿಸಿದಳು. ರಾಜ್ಯ, ಹೊರ ರಾಜ್ಯಗಳಿಂದ ಅಂದಾಜು 8 ಲಕ್ಷಕ್ಕೂ ಹೆಚ್ಚು ಜನರು ಚಳಿ, ಬಿಸಿಲು, ಹಗಲು–ರಾತ್ರಿಗಳನ್ನು ಲೆಕ್ಕಿಸದೆ ಸರದಿ ಸಾಲಿನಲ್ಲಿ ದೇವಿ ದರ್ಶನ ಪಡೆದರು.

ಮಸ್ತಕಾಭಿಷೇಕ ಮುಹೂರ್ತ ನಿಗದಿ
ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವ 2018ರ ಫೆ. 7ರಿಂದ 26ರವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ನಡೆದ  ಧಾರ್ಮಿಕ ಸಭೆಯಲ್ಲಿ ಜೈನ ಮುನಿಗಳು, ಜನಪ್ರತಿನಿಧಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮದ ದಿನಾಂಕವನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರಕಟಿಸಿದರು.
20 ದಿನಗಳ ಉತ್ಸವಕ್ಕೆ 30 ಲಕ್ಷ ಭಕ್ತರು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

ವಿಲಾಸಿ ಜೀವನಕ್ಕೆ ಕೊಲೆ
ಒಂದೇ ಕುಟುಂಬದ ಐವರು ಮಹಿಳೆಯರು ಹಣದ ಆಸೆಗಾಗಿ ಮೂವರು ಮಹಿಳೆಯರನ್ನು ಕೊಂದು ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ನೋವು–ನಲಿವು
* ಹಾಸನ ನಗರದಲ್ಲಿ ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಶಂಕುಸ್ಥಾಪನೆ ನೆರವೇರಿಸಿದರು.

* ಚನ್ನರಾಯಪಟ್ಟಣದ ಪಡುವಿನಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೇವರಾಜ್‌ ಅವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ.
* ಸಕಲೇಶಪುರದ ಪರಿಸರ ಪ್ರೇಮಿ ಜೆ.ಕೆ. ವೀರೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ.
*ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ವತಿಯಿಂದ 33ನೇ ಕಿರಿಯರ ಬಾಲಕ–ಬಾಲಕಿಯರ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಪಂದ್ಯಾವಳಿಗೆ ಜಿಲ್ಲೆಯ ಆತಿಥ್ಯ
*ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆಗೆ 12ನೇ ಸ್ಥಾನ
*ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ 24ನೇ ಸ್ಥಾನ
* ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮದಲ್ಲಿ ಶೌಚ ಗುಂಡಿ ನಿರ್ಮಾಣಕ್ಕಾಗಿ ಗುಂಡಿ ತೆಗೆಯುತ್ತಿದ್ದಾಗ 1835ನೇ ವರ್ಷದ ಬ್ರಿಟನ್ ರಾಜ ವಿಲಿಯಂ  ಭಾವಚಿತ್ರ ಹೊಂದಿರುವ ₹ 1 ಮುಖಬೆಲೆಯ 50 ಬೆಳ್ಳಿ ನಾಣ್ಯ ಪತ್ತೆ.
* ಚನ್ನರಾಯಪಟ್ಟಣ ತಾಲ್ಲೂಕು ಜನಿವಾರ ಕೆರೆಗೆ ಕಾರು ಬಿದ್ದು 7 ಜನರ ಸಾವು
*ಹಾಸನ ನಗರ ಸಮೀಪ ಖಾಸಗಿ ಬಸ್‌ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸಾಫ್ಟ್‌ವೇರ್‌ ಕಂಪೆನಿಯ ಮೂವರು ಉದ್ಯೋಗಿಗಳು ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರು
* ಅರಕಲಗೂಡು ತಾಲ್ಲೂಕಿನಲ್ಲಿ ಬೋರ್‌ವೆಲ್‌ ಲಾರಿ ಮಗುಚಿ ಐದು ಕೂಲಿ ಕಾರ್ಮಿಕರ ಸಾವು
* ಹಾಸನ ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ವೇಷಧಾರಿಯಿಂದ ನವಜಾತು ಗಂಡು ಶಿಶು ಅಪಹರಣ.
*ಹಾಸನ ತಾಲ್ಲೂಕಿನ ತಿರುಮಲ ದೇವರಗುಡ್ಡದ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರ ಕಡಿಯುತ್ತಿದ್ದ ಗುಂಪಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಮರಗಳ್ಳ ಸಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT