ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದರ್ಶನ ಮಾದರಿಯಾಗಲಿ: ಸಿಇಒ

ರಾಯಚೂರು: ಅಣಕು ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆ
Last Updated 31 ಡಿಸೆಂಬರ್ 2016, 8:49 IST
ಅಕ್ಷರ ಗಾತ್ರ

ರಾಯಚೂರು: ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್  ಆಶಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದೀಯ ವ್ಯವಹಾರ ಹಾಗೂ ಶಾಸನಗಳ ರಚನಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ  ಆಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಅವುಗಳದ್ದೆ ಆದ ಜವಾಬ್ದಾರಿಗಳಿವೆ. ಯಾವುದೇ ಕಾನೂನನ್ನು ಶಾಸಕಾಂಗದಲ್ಲಿ ಜಾರಿಗೆ ತರಲಾಗುತ್ತದೆ ಎಂದರು.

ನಗರಸಭೆ ಉಪಾಧ್ಯಕ್ಷ ಜಯಣ್ಣ ಮಾತನಾಡಿ, ಶಾಸಕಾಂಗ ಹಾಗೂ ಕಾರ್ಯಾಂಗ ದೂರದೃಷ್ಟಿ ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕಿದೆ. ಆದರೆ ಇವೆರಡೂ ಅಂಗಗಳ ಕಾರ್ಯಕ್ಷಮತೆ ಈಚೆಗೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.

ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ವೇಷ ಭೂಷಣ ಹಾಕಿಕೊಂಡಿರುವುದು ಸಂತೋಷ. ಅವರ ವರ್ತನೆಗಳ ಅನುಕರಣೆ ಬೇಡ ಎಂದರು.

ಜಿಲ್ಲೆಯ ಪ್ರತಿ ತಾಲ್ಲೂಕುಗಳಿಂದ 15 ವಿದ್ಯಾರ್ಥಿಗಳಂತೆ ಒಟ್ಟು 75 ವಿದ್ಯಾರ್ಥಿಗಳು  ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಉಪನ್ಯಾಸಕ ಶರಣಪ್ಪ ಮತ್ತು ಮುಖ್ಯೋಪಾಧ್ಯಾಯ ರಾಜಕುಮಾರ್ ಕಾರ್ಯನಿರ್ವಹಿಸಿದರು.

ಸಂಸದೀಯ ವ್ಯವಹಾರಗಳು ಹಾಗೂ ಶಾಸನಗಳ ರಚನಾ ಇಲಾಖೆಯ ವೀಕ್ಷಕರಾಗಿ ಶ್ರೀನಿವಾಸ ಜೋಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ರಾಮಾಂಜನೇಯ ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಉತ್ಸಾಹ: ಅಣಕು ಸಂಸತ್ತಿನಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಚರ್ಚೆ ನಡೆಸಲು ಉತ್ಸಾಹ ಇದ್ದರೂ ಸಮಯದ ಅಭಾವದಿಂದ ಒಬ್ಬರಿಗೆ ಒಂದೇ ಪ್ರಶ್ನೆ ಕೇಳಲು ಅವಕಾಶ ಇತ್ತು.

ಉಪ ಪ್ರಶ್ನೆಗೂ ಅವಕಾಶ ಇರಲಿಲ್ಲ. ಆದರೂ ಆಡಳಿತ ಪಕ್ಷದವರ ಉತ್ತರಕ್ಕೆ ತೃಪ್ತಿಯಾಗದ ವಿರೋಧ ಪಕ್ಷದವರು ತಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲವೆಂದು ಪದೇ ಪದೇ ಹೇಳಿದರೂ ಸಭಾಧ್ಯಕ್ಷರು ಮುಂದಿನ ಪ್ರಶ್ನೆ ಕೇಳುವಂತೆ ಸೂಚಿಸಿದರು. ಈ ನಡುವೆ ಗದ್ದಲದ ವಾತಾವರಣ ಕಾಣಿಸಿತು.  ಕಲಾಪ ಆರಂಭಕ್ಕೂ ಮುನ್ನ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ನಂತರ ಆರಂಭವಾದ ಪ್ರಶ್ನೋತ್ತರ ಅವಧಿಯ ಚರ್ಚೆಯಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿರುವ ಬಗ್ಗೆ ವಿದ್ಯಾರ್ಥಿನಿಯೊಬ್ಬಳು  ಪ್ರಶ್ನಿಸಿದಳು. ಇದಕ್ಕೆ ಶಿಕ್ಷಣ ಸಚಿವರ ಉತ್ತರದಿಂದ ತೃಪ್ತರಾಗದ ವಿರೋಧಪಕ್ಷದ ಸದಸ್ಯರನ್ನು ಸಮಾಧಾನ ಮಾಡಲು ಮುಖ್ಯಮಂತ್ರಿ ಉತ್ತರ ನೀಡಬೇಕಾಯಿತು.

ಮತ್ತೊಬ್ಬ ವಿದ್ಯಾರ್ಥಿಯು ಕೈದಿಗಳಿಗೆ ದಿನಕ್ಕೆ ₹ 98 ಖರ್ಚು ಮಾಡುವ ಸರ್ಕಾರ, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ₹33 ಖರ್ಚು ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಕೈದಿಗಳು ಜೈಲಿನಲ್ಲಿ ಕೌಶಲದ ಕೆಲಸ ಮಾಡುತ್ತಾರೆ. ಮಕ್ಕಳು ಮಾಡುವುದಿಲ್ಲ ಎಂಬ ಧಾಟಿಯಲ್ಲಿ ಉತ್ತರಿಸಿದ್ದರಿಂದ ಕೆಂಡಮಂಡಲವಾದ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳ ಆಶಯ ಮಕ್ಕಳು ಶಾಲೆ ಬಿಟ್ಟು ಬಾಲಕಾರ್ಮಿಕರಾಗಲಿ ಎನ್ನುವಂತಿದೆ. ವಿದ್ಯಾಭ್ಯಾಸವನ್ನು ಅನುತ್ಪಾದಕ ಕ್ಷೇತ್ರವೆಂದು ಪರಿಗಣಿಸಬೇಡಿ ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ನೋಟ್‌ ಬುಕ್‌, ಬ್ಯಾಗ್‌ ನೀಡಿ ಸರ್ಕಾರವೇ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಜೋರು ದನಿಯಲ್ಲಿ ವಿದ್ಯಾರ್ಥಿಯೊಬ್ಬಳು ಪ್ರಶ್ನಿಸಿದಳು. ಇದಕ್ಕೆ ಉತ್ತರ ನೀಡಿದ ಸಚಿವ, ತಾರತಮ್ಯ ಮಾಡುತ್ತಿಲ್ಲ. ದಮನಿತ ವರ್ಗದವರನ್ನು ಮೇಲಕ್ಕೆ ಎತ್ತುವ ಕಾರ್ಯ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಸನಾರುಕ್ಸಾನ (ಸಭಾಧ್ಯಕ್ಷೆ), ಚಿದಾನಂದ (ಮುಖ್ಯಮಂತ್ರಿ), ಭವಾನಿ (ಗೃಹ), ಬಿ.ಗಿರೀಶ ಕುಮಾರ್ (ಶಿಕ್ಷಣ), ತಿಮ್ಮಯ್ಯ (ಕಾನೂನು), ಈರೇಶ (ಸಮಾಜ ಕಲ್ಯಾಣ), ಕರಿಯಪ್ಪ (ಆರೋಗ್ಯ), ರವಿ ಕುಮಾರ (ಇಂಧನ ಮತ್ತು ಲೋಕೋಪಯೋಗಿ), ವಚನಶ್ರೀ (ಗ್ರಾಮೀಣಾಭಿವೃದ್ಧಿ), ಭಾಗ್ಯಶ್ರೀ (ಕೃಷಿ) ಸಚಿವರಾಗಿ ಮತ್ತು ಹನುಮಂತು ವಿರೋಧ ಪಕ್ಷದ ನಾಯಕನಾಗಿದ್ದರು.

ಪ್ರಥಮ ಸ್ಥಾನ ಪಡೆದ ದೇವಸುಗೂರಿನ ಸರ್ಕಾರಿ ಪ್ರೌಢಶಾಲೆಯ ಮೈಲಾರಲಿಂಗ, ದ್ವಿತೀಯ ಸ್ಥಾನ ಪಡೆದ ಕೈರವಾಡಗಿ ಸರ್ಕಾರಿ ಸರಕಾರಿ ಪ್ರೌಢಶಾಲೆ  ಶರಣಬಸವ ರಾಜ್ಯ ಮಟ್ಟದ ಅಣಕು ಸಂಸತ್‌ಗೆ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT