ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣಕೆರೆಗಳಿಗೆ ಅತಿಕ್ರಮಣದ ಕಾಟ

ಅವಸಾನದ ಅಂಚು ತಲುಪಿದ ಜಿಲ್ಲೆಯ 260 ಕೆರೆಗಳು
Last Updated 31 ಡಿಸೆಂಬರ್ 2016, 9:01 IST
ಅಕ್ಷರ ಗಾತ್ರ

ಯಾದಗಿರಿ: ಊರಿಗೊಂದು ಕೆರೆ ನಿರ್ಮಾಣ ಮಾಡುವುದಾಗಿ ಗ್ರಾಮೀಣಾ ಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಮೊನ್ನೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜಲ ಸಂರಕ್ಷಣಾ ಅಭಿಯಾನದಲ್ಲಿ ಪ್ರಕಟಿಸಿದ್ದಾರೆ. ಅದಕ್ಕಾಗಿ ಸರ್ಕಾರ ₹ 4 ಸಾವಿರ ಕೋಟಿ ಅನುದಾನ ವೆಚ್ಚ ಮಾಡು ತ್ತಿದೆ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲೆಯಲ್ಲಿನ 260ಕ್ಕೂ ಹೆಚ್ಚಿನ ಕೆರೆಗಳು ಅಭಿವೃದ್ಧಿ ಕಾಣದೆ ಅವಸಾನದ ಅಂಚು ತಲುಪುತ್ತಿವೆ.

‘ಕೆರೆ’ ಹಳ್ಳಿಜನರ ಬದುಕಿನ ಜೀವಸೆಲೆ. ಗ್ರಾಮೀಣ ಬದುಕಿನ ಜೀವ ನಾಡಿಯಾಗಿರುವ ಇಂಥ ಕೆರೆಗಳು ಕುಡಿ ಯುವ ನೀರು, ಅಂತರ್ಜಲ ಸಮೃದ್ಧಿಗೆ ಆಸರೆಯಾಗಿವೆ. ಆದರೆ, ಅತಿಕ್ರಮಣ, ಹೂಳು, ದುರಸ್ತಿ ಕಾಣದ ಏರಿ, ದಿಕ್ಕುತಪ್ಪಿದ ನೀರು ನಿರ್ವಹಣಾ ಪದ್ಧತಿ... ಕೆರೆಗಳ ಶಿಥಿಲಾವಸ್ಥೆಗೆ ಕಾರಣವಾಗಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿನ ಸುಮಾರು 72 ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಆದರೆ, ಎಷ್ಟೋ ಕೆರೆಗಳು ಅತಿಕ್ರಮಣಕ್ಕೊಳಗಾಗಿ ನೀರು ಸಂಗ್ರಹ ವಿಸ್ತರಣ ಭೂಮಿ ಬಿತ್ತನೆ ಗೊಳಗಾಗಿದೆ. ಅಲ್ಲದೇ ಕೆರೆಗಳಲ್ಲಿ ಡಿಟರ್ಜೆಂಟ್‌ ನಿಂದ ಬಟ್ಟೆ ತೊಳೆ ಯುವಂತಹ ಪದ್ಧತಿಯನ್ನು ಜನರು ರೂಢಿಸಿಕೊಂಡಿರುವುದರಿಂದ ಕೆರೆಗಳು ಸಂಪೂರ್ಣ ರಾಸಾಯನಿಕಗಳಿಂದ ತುಂಬಿಕೊಳ್ಳುತ್ತಿದ್ದು, ಕೆರೆಯಲ್ಲಿನ ಜಲಚರ ನಾಶವಾಗುತ್ತಿವೆ. ದನಕರುಗಳು ಸಹ ಈ ನೀರನ್ನೇ ಕುಡಿಯುವುದರಿಂದ ಅವುಗಳ ಅನಾರೋಗ್ಯಕ್ಕೂ ಕೆರೆ ನೀರು ಕಾರಣವಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ‘ಖಾನಾಪುರ’ ಮತ್ತು ‘ಗುಂಡಹಳ್ಳಿ’ ಕೆರೆಗಳು ಈ ಸ್ಥಿತಿಗೆ ನಿದರ್ಶನ ಎನ್ನಬಹುದು.

ಕೆರೆಗಳನ್ನು ಪುನರುಜ್ಜೀವ ನಗೊಳಿಸುವ ನಿಟ್ಟಿನಲ್ಲಿ ನರೇಗಾ ಯೋಜ ನೆಯಲ್ಲಿ ಕೈಗೆತ್ತಿಕೊಂಡಿರುವ  ಹೂಳು ತೆಗೆಯುವ ಕಾರ್ಯ ಕುಂಟುತ್ತಾ ಸಾಗಿದೆ. ಈ ದಿಸೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಸಮನ್ವಯತೆ ಕೊರತೆ ಕಾಡುತ್ತಿದೆ.

ಕುಸಿದ ನೀರು ಸಂಗ್ರಹ ಸಾಮರ್ಥ್ಯ: ಅತಿಕ್ರಮಣ ಒಂದು ಸಮಸ್ಯೆಯಾದರೆ; ಭಾರಿ ಹೂಳು ಬಗೆಹರಿಯದ ಸಮಸ್ಯೆಯಾಗಿ ನಿಂತಿದೆ. ಇದರಿಂದಾಗಿ ಕೆರೆಗಳಲ್ಲಿ ನೀರು ಸಂಗ್ರಹ ಸಾಮರ್ಥ್ಯ ಕುಸಿದಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 81ಎಂ.ಎಂ. ಇದೆ. ಆದರೆ, ಪ್ರಸಕ್ತ ವರ್ಷದಲ್ಲಿ 137 ಎಂ.ಎಂ ವಾಸ್ತವಿಕ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ 70ರಷ್ಟು ಹೆಚ್ಚಿಗೆ ಮಳೆಯಾಗಿದೆ. ಆದರೆ, ಹೂಳಿನಿಂದಾಗಿ ಹೆಚ್ಚುಹೆಚ್ಚು ನೀರನ್ನು ಸಂಗ್ರಹಿಸುವ ಶಕ್ತಿ ಕೆರೆಗಳಿಲ್ಲದಂತಾಗಿದೆ. ಇದರಿಂದಾಗಿ ಬೇಸಿಗೆಗೂ ಮುನ್ನವೇ ಕೆರೆಗಳು ಬತ್ತುವ ಸಂಭವ ಹೆಚ್ಚಿದೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ಯೋಜನೆಗಳೇನು: ವಿಶ್ವಬ್ಯಾಂಕ್‌, ನಬಾರ್ಡ್ ಸಹಕಾರೊಂದಿಗೆ ಅಂತರ್ಜಲ ಸುಧಾ ರಣೆಗಾಗಿ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಕೆರೆ ಅಭಿ ವೃದ್ಧಿಗೆ ಅನದಾನ ನೀಡುತ್ತವೆ. ಕೇಂದ್ರದ ವಿಶೇಷ ಅನುದಾನವೂ ಸಿಗುತ್ತದೆ. ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಯೂ ಅನುದಾನ ನೀಡುತ್ತಾ ಬಂದಿದೆ. ಭೂ ಸವಕಳಿ ಮತ್ತು ಅಂತರ್ಜಲಮಟ್ಟ ವೃದ್ಧಿಸಲು ನದಿಕಣಿವೆ ಯೋಜನೆ (ವಿಆರ್‌ಪಿ), ಬರಗಾಲ ಪೀಡಿತ ಪ್ರದೇಶಾಭಿವೃದ್ಧಿ ಯೋಜನೆ (ಡಿಡಿಪಿ), ಸಮಗ್ರ ಬಂಜರು ಅಭಿವೃದ್ಧಿ ಯೋಜನೆ (ಐಡಬ್ಲ್ಯುಡಿಪಿ) ಹಾಗೂ ಕೃಷ್ಣ ‘ಕಾಡಾ’ ಅಭಿವೃದ್ಧಿ ಪ್ರಾಧಿಕಾರದಿಂದ ಸಮಸ್ಯಾತ್ಮಕ ಭೂಮಿ ಅಭಿವೃದ್ಧಿ (ಬಸಿಗಾಲುವೆ)ಯಂತಹ ಅನೇಕ ಯೋಜನೆಗಳಿವೆ. ಆದರೂ ಜಿಲ್ಲೆಯಲ್ಲಿನ ಕೆರೆಗಳ ಸ್ಥಿತಿ ಬದಲಾಗಿಲ್ಲ.

ಕೆರೆಗಳ ಹೊಣೆಹೊತ್ತಿರುವ ಪ್ರತ್ಯೇಕ ಇರುವ ಸಣ್ಣ ನೀರಾವರಿ ಇಲಾಖೆ ಕೂಡ ಕೆರೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಈ ಇಲಾಖೆಯ ವ್ಯಾಪ್ತಿಗೆ ಒಟ್ಟು 72 ಕೆರೆಗಳು ಬರುತ್ತವೆ.
ಅವುಗಳೆಲ್ಲದರಲ್ಲೂ ನೀರಿನ ಸಂಗ್ರಹ ಇದೆ. ಆದರೆ, ಕೆರೆಗಳ ಪರಿಸರ, ನೀರಿನ ಶುದ್ಧತೆ ದಿನೇದಿನೇ ಹಾಳಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT