ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ ಸರಣಿಗಳತ್ತ ದಾಪುಗಾಲು

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ

ವರ್ಷಾಂತ್ಯದ ಎರಡು ಪ್ರಮುಖ ಟೂರ್ನಿಗಳಲ್ಲಿ ಅಮೋಘ ಗೆಲುವು ದಾಖಲಿಸಿರುವ ಈ ಆಟಗಾರನ ಮಹತ್ವದ ಗುರಿ ತಲುಪುವ ಇಚ್ಛೆ ಈಡೇರುವ ಹಂತ ಸಮೀಪಿಸಿದೆ. ಇದಕ್ಕಾಗಿ ಇಂಡೋನೇಷ್ಯಾದಲ್ಲಿ ಕಠಿಣ ಅಭ್ಯಾಸ ನಡೆಯುತ್ತಿದೆ. ಕಳೆದ ಬಾರಿ ಉತ್ತಮ ಸಾಧನೆಯಾಗಿದ್ದರೂ ಅಂತಿಮ ಹಂತಗಳಲ್ಲಿ ಮುಗ್ಗರಿಸಿದ್ದ ಆಟಗಾರ ಈ ಬಾರಿ ಉತ್ತಮ ಆರಂಭ ಕಂಡಿದ್ದು ಮುಂದಿನ ಹಾದಿಯಲ್ಲಿ ಭರವಸೆ ಮೂಡಿದೆ.

ಡಿಸೆಂಬರ್‌ ಮೊದಲ ಮತ್ತು ಎರಡನೇ ವಾರಗಳಲ್ಲಿ ನಡೆದ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಫೆಡರೇಷನ್ ಆಶ್ರಯದ ಬಾಂಗ್ಲಾ ಅಂತರರಾಷ್ಟ್ರೀಯ ಚಾಲೆಂಜ್‌ ಮತ್ತು ನೇಪಾಳ ಅಂತರರಾಷ್ಟ್ರೀಯ ಸರಣಿಯಲ್ಲಿ ಜಯ ಸಾಧಿಸಿದ ಅಭಿಷೇಕ್ ಎಲಿಗಾರ ಇನ್ನೆರಡು ಪ್ರಮುಖ ಟೂರ್ನಿಗಳಲ್ಲಿ ಜಯ ಸಾಧಿಸಿ ಸೂಪರ್ ಸರಣಿಗಳಲ್ಲಿ ಆಡುವ ಕನಸು ಕಂಡಿದ್ದಾರೆ. ಈ ಕನಸು ನನಸಾಗಿಸುವ ಭರವಸೆಯೂ ಅವರಲ್ಲಿದೆ.

ಬಾಂಗ್ಲಾ ಚಾಲೆಂಜ್‌ನಲ್ಲಿ ವಿಯೆಟ್ನಾಂ, ನೇಪಾಳ ಮತ್ತು ಶ್ರೀಲಂಕಾದ ಆಟಗಾರರ ಸವಾಲನ್ನು ಎದುರಿಸಿ ಕೊನೆಗೆ ಭಾರತೀಯ ತಾರೆಯ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಅಭಿಷೇಕ್‌, ನೇಪಾಳ ಸೀರೀಸ್‌ನಲ್ಲಿ ನೇಪಾಳ, ಪಾಕಿಸ್ತಾನ ಮತ್ತು ವಿಯೆಟ್ನಾಂ ಆಟಗಾರರಿಗೆ ಬಿಸಿ ಮುಟ್ಟಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಬಾಂಗ್ಲಾದಿಂದ ನೇಪಾಳ ತಲುಪುವಷ್ಟರಲ್ಲಿ ಶ್ರೇಯಾಂಕವನ್ನು ಆರರಿಂದ ಎರಡಕ್ಕೆ ಏರಿಸಿಕೊಂಡ ಅವರು ಅಂತರರಾಷ್ಟ್ರೀಯ ಮಟ್ಟದ ರ‍್ಯಾಂಕಿಂಗ್‌ನಲ್ಲೂ ಅಮೋಘ ಮುನ್ನಡೆ ಕಂಡಿದ್ದಾರೆ.

ಬಾಂಗ್ಲಾ ಚಾಲೆಂಜ್‌ಗೆ ತೆರಳುವಾಗ ಅವರ ರ‍್ಯಾಂಕಿಂಗ್‌ 180 ಆಗಿತ್ತು. ನೇಪಾಳ ಸೀರೀಸ್ ಮುಗಿದಾಗ ಅದು 170ಕ್ಕೆ ಏರಿದೆ. ಜನವರಿ 16ರಿಂದ ನಡೆಯಲಿರುವ ಮಲೇಷ್ಯಾ ಗ್ರ್ಯಾಂಡ್‌ ಪ್ರಿ ಗೋಲ್ಡ್‌ ಮತ್ತು ನಂತರ ಭಾರತದಲ್ಲಿ ನಡೆಯಲಿರುವ ಸೈಯದ್‌ ಮೋದಿ ಗ್ರ್ಯಾಂಡ್ ಪ್ರಿ ಟೂರ್ನಿಯನ್ನು ಗುರಿಯಾಗಿರಿಸಿಕೊಂಡು ಈಗ ಅವರು ಇಂಡೋನೇಷ್ಯಾದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ಟೂರ್ನಿಗಳಲ್ಲಿ ಗೆದ್ದು ರ‍್ಯಾಂಕಿಂಗ್‌ನಲ್ಲಿ 80ರ ಒಳಗೆ ಸ್ಥಾನ ಗಿಟ್ಟಿಸಿದರೆ ಸೂಪರ್ ಸೀರೀಸ್‌ಗಳಲ್ಲಿ ಆಡಬಹುದು ಎಂಬುದು ಅವರ ಲೆಕ್ಕಾಚಾರ.

ಧಾರವಾಡದ ಆಟಗಾರ
ಅಭಿಷೇಕ್‌ ಎಲಿಗಾರ ಧಾರವಾಡದ ಆಟಗಾರ. ಕ್ರೀಡಾ ಪ್ರೋತ್ಸಾಹಕರಾದ ಉದಯ ರವಿ – ಅನಿತಾ ದಂಪತಿಯ ಪುತ್ರ. ಅಭಿಷೇಕ್ ಸಹೋದರ ಋಷಿಕೇತ್ ಎಲಿಗಾರ ಉತ್ತಮ ಬ್ಯಾಡ್ಮಿಂಟನ್ ಪಟು. ಅಣ್ಣನ ಆಟ ನೋಡುತ್ತ ರ‍್ಯಾಕೆಟ್ ಹಿಡಿದ ಅಭಿಷೇಕ್‌ ಕನಸಿಗೆ ಬಣ್ಣ ತುಂಬಲು ಧಾರವಾಡದಲ್ಲಿ ಸಾಕಷ್ಟು ಸೌಲಭ್ಯ ಇರಲಿಲ್ಲ. ಆದ್ದರಿಂದ ಅವರ ಗಮನ ಬೆಂಗಳೂರಿನತ್ತ ಹರಿಯಿತು. ಅಲ್ಲಿ ಅವರ ಕ್ರೀಡಾ ಜೀವನದ ದಿಕ್ಕು ಬದಲಾಯಿತು.

16 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಎರಡು ಬಾರಿ ರಾಜ್ಯಕ್ಕೆ ಚಾಂಪಿಯನ್ ಆದ ಅವರು 16 ವರ್ಷದೊಳಗಿನವರ ವಿಭಾಗದಲ್ಲಿ ಸತತ ಎರಡು ಬಾರಿ ರಾಜ್ಯದ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಆಟಗಾರ ವಿಮಲ್‌ ಕುಮಾರ್‌ ಕಣ್ಣಿಗೆ ಬಿದ್ದ ಬಳಿಕ ಅವರಿಗೆ ಉನ್ನತ ತರಬೇತಿ ಲಭಿಸಿತು.

ಎರಡನೇ ಅಧ್ಯಾಯ
ಸಾಧನೆಯ ಹಾದಿಯಲ್ಲಿ ಉತ್ತಮ ಹೆಸರು ಮಾಡುತ್ತಿದ್ದಾಗಲೇ ಗಾಯದ ಸಮಸ್ಯೆ ಕಾಡಿತು. ಗುಣಮುಖರಾದ ನಂತರ ಅಭಿಷೇಕ್‌ ಕ್ರೀಡಾ ಜೀವನದ ಎರಡನೇ ಅಧ್ಯಾಯ ಆರಂಭಗೊಂಡಿತು. ಮುಕ್ತ ಟೂರ್ನಿಗಳ ಕಡೆಗೆ ಗಮನ ಹರಿಸಿದ ಅವರು ಥಾಯ್ಲೆಂಡ್‌, ಇಂಡೋನೇಷ್ಯಾ ಮುಂತಾದ ಕಡೆಗೆ ಹೆಜ್ಜೆ ಹಾಕಿದರು. ಥಾಯ್ಲೆಂಡ್‌ ಓಪನ್ ಗ್ರ್ಯಾಂಡ್ ಪ್ರಿ ಟೂರ್ನಿ, ಸ್ಟೈಲಿಂಗ್ ಫಿಶ್‌ ಥಾಯ್ಲೆಂಡ್‌ ಅಂತರರಾಷ್ಟ್ರೀಯ ಸರಣಿ ಹಾಗೂ ವಿಕ್ಟರ್ ಇಂಡೋನೇಷ್ಯಾ ಚಾಲೆಂಜ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ವರೆಗೆ ತಲುಪಿ ಭರವಸೆ ಹೆಚ್ಚಿಸಿಕೊಂಡರು.

ಕಳೆದ ಬಾರಿಯ ಅನುಭವ ಈ ಬಾರಿ ಸಾಧನೆಗೆ ‘ಟಾನಿಕ್‌’ನಂತೆ ಕೆಲಸ ಮಾಡಿತು. ಭಾರತದಲ್ಲಿ ಅನೂಪ್ ಶ್ರೀಧರ್ ಅವರ ಗರಡಿಯಲ್ಲಿ ಪಳಗಿರುವ ಅಭಿಷೇಕ್‌ ಇಂಡೋನೇಷ್ಯಾದಲ್ಲಿ ಜಾಫರ್ ರೊಸೊಬಿನ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.

ವರ್ಷದ ಹೆಚ್ಚಿನ ದಿನಗಳನ್ನು ವಿದೇಶದಲ್ಲೇ ಕಳೆಯುತ್ತಿದ್ದರೂ ಹುಟ್ಟೂರಿನ ಅಸ್ಮಿತೆ ಅವರಿಂದ ದೂರವಾಗಲಿಲ್ಲ. ‘ಧಾರವಾಡಕ್ಕೆ ಬಂದಾಗಲೆಲ್ಲ ಕ್ರೀಡಾ ಆಸಕ್ತರು ಸನ್ಮಾನ ಮಾಡುತ್ತಾರೆ, ಬೆಂಬಲ ನೀಡುತ್ತಾರೆ. ಇದು ನನ್ನಲ್ಲಿನ ಉತ್ಸಾಹ ಇಮ್ಮಡಿಗೊಳ್ಳಲು ಕಾರಣ’ ಎಂದು ಇಂಡೋನೇಷ್ಯಾದಿಂದ ‘ಪ್ರಜಾವಾಣಿ’ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

‘ಇಂಥ ಟೂರ್ನಿಗಳಲ್ಲಿ ಆಡಲು ತುಂಬ ಹಣ ವ್ಯಯಿಸಬೇಕಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅನೇಕರು ಟೂರ್ನಿಯಿಂದ ದೂರ ಹೋಗಿರುವುದನ್ನು  ಕಣ್ಣಾರೆ ಕಂಡಿದ್ದೇನೆ. ನನ್ನ ಪಾಲಿಗೆ ಇಂಥ ಸ್ಥಿತಿ ಉಂಟಾಗಲಿಲ್ಲ ಎಂಬುದು ಸಮಾಧಾನದ ಸಂಗತಿ. ಆದರೆ ಹಣದ ಕೊರತೆಯಿಂದ ಯಾರಿಗೂ ಈ ರೀತಿ ಆಗಬಾರದು ಎಂಬುದು ನನ್ನ ಆಶಯ’ ಎಂದು ಹೇಳಿ 22 ವರ್ಷದ ಅಭಿಷೇಕ್ ಭಾವುಕರಾದರು.

ರಾಷ್ಟ್ರೀಯ ಚಾಂಪಿಯನ್ ಆಗುವ ಆಸೆ ಇತ್ತು
ಎರಡು ಬಾರಿ ರಾಜ್ಯ ಚಾಂಪಿಯನ್‌ ಆಗಿದ್ದೆ. ರಾಷ್ಟ್ರೀಯ ಚಾಂಪಿಯನ್ ಆಗಬೇಕು ಎಂಬ ಆಸೆ ಇತ್ತು. ಆದರೆ ಅಷ್ಟರಲ್ಲಿ ಮುಕ್ತ ಟೂರ್ನಿಗಳ ಕಡೆಗೆ ಗಮನ ಹರಿಯಿತು. ಈ ಕುರಿತು ಬೇಸರವೇನೂ ಇಲ್ಲ. ಮುಕ್ತ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರುವುದು ಹೆಮ್ಮೆಯ ವಿಷಯ.

ಇನ್ನಷ್ಟು ರಾಷ್ಟ್ರೀಯ, ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಈ ಸಾಧನೆ ನೆರವಾಗುವ ಭರವಸೆ ಇದೆ ಎಂದು ಅಭಿಷೇಕ್ ಎಲಿಗಾರ ಹೇಳಿದರು.

ಮಗನ ಸಾಧನೆಗೆ ಪಾಲಕರು ಕೂಡ ಖುಷಿಯಾಗಿದ್ದಾರೆ. ‘ಇದು ಸಂತಸದ ಕ್ಷಣ. ತೊಂದರೆಗಳನ್ನು ಮೆಟ್ಟಿ ನಿಂತು ಅಭಿಷೇಕ್ ಹೆಸರು ಮಾಡುತ್ತಿದ್ದಾನೆ. ಸೂಪರ್ ಸೀರೀಸ್‌ಗಳಲ್ಲಿ ಆಡಲು ಪ್ರವೇಶ ಪಡೆಯುತ್ತಾನೆ ಎಂಬ ವಿಶ್ವಾಸವಿದೆ’ ಎಂದು ಉದಯರವಿ ಹಾಗೂ ಅನಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT