ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರಿಗಿಂತ ಭಷ್ಟಾಚಾರಿ ಅಪಾಯಕಾರಿ

ಕಲಾಸಂಕುಲ ಸಂಸ್ಥೆಯಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಕುಂ.ವೀ
Last Updated 2 ಜನವರಿ 2017, 9:31 IST
ಅಕ್ಷರ ಗಾತ್ರ

ರಾಯಚೂರು: ‘ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಮೂಲಕ ಚಾಪೆ ಕೆಳಗೆ ತೋರಿದರೆ, ಭ್ರಷ್ಟರು ತಮ್ಮ ಬಳಿ ಇರುವ ಕಪ್ಪುಹಣ್ಣವನ್ನು ಬಿಳಿ ಮಾಡಿಕೊಳ್ಳಲು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ’ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ  ಕಲಾ ಸಂಸ್ಥೆಯ ತನ್ನ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಾಂಸ್ಕೃತಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭ್ರಷ್ಟರನ್ನು ಶಿಕ್ಷೆಗೆ ಗುರಿಪಡಿಸುವ ಕ್ರಮಕ್ಕೆ ನನ್ನ ಬೆಂಬಲ ಇದೆ. ಆದರೆ, ನೋಟು ರದ್ದತಿ ಮಾಡುವುದಕ್ಕೂ ಮುನ್ನ ಸರ್ಕಾರ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳದ ಕಾರಣ ಶ್ರೀಸಾಮಾನ್ಯರು ತೊಂದರೆ ಪಡುವಂತಾಗಿದೆ. ಈಗ ಉದ್ಭವಿಸಿರುವ ಸಮಸ್ಯೆಯನ್ನು ಕೇಂದ್ರ ಸರ್ಕಾರ ಶೀಘ್ರ ಹೋಗಲಾಡಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಗೆ ಬರಬೇಕಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆ  (ಐಐಟಿ) ಬೇರೆ ಜಿಲ್ಲೆಗೆ ಹೋಗಲು ಇಲ್ಲಿನ ರಾಜಕೀಯ ಮುಖಂಡರ ವಿಫಲತೆಯೇ ಕಾರಣ’ ಎಂದು ಟೀಕಿಸಿದರು.‘ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ರೈತರ ಕಣ್ಣಲ್ಲಿ ನೀರು ಬರುತ್ತಿದೆ. ಆದರೂ ಸರ್ಕಾರ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವಕರ್ಮರು ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಅದ್ಭುತ ಶಿಲ್ಪಕಲೆಗಳನ್ನು ಚಿತ್ರಿಸಿದ್ದಾರೆ. ಪ್ರಶಸ್ತಿಗಳು ಸರ್ಕಾರದಿಂದಲೇ ಬರಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ.ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಕಲಾಸಂಕುಲ ಸಂಸ್ಥೆ ಕಾರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಬಸನಗೌಡ ಬ್ಯಾಗವಾಟ್‌ ಮಾತನಾಡಿ, ‘ಪ್ರತಿಯೊಬ್ಬರು ಆನ್‌ಲೈನ್ ಮೂಲಕ ಆರ್ಥಿಕ ವ್ಯವಹಾರ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಕೃಷಿ ವಿ.ವಿ. ಕುಲಪತಿ ಪಿ.ಎಂ.ಸಾಲಿಮಠ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ, ನಗರೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಸಾವಿತ್ರಿ ಪುರುಷೋತ್ತಮ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಂಟು ಜನರಿಗೆ ಕರ್ನಾಟಕ ಸಮಾಜ ಸೇವಾರತ್ನ ಪ್ರಶಸ್ತಿ, ಮಂಗಳೂರಿನ ಡಾ.ವಿಶ್ವನಾಥ ನಾಯಕರಿಗೆ ಕರ್ನಾಟಕ ವೈದ್ಯ ರತ್ನ, ಇಬ್ಬರಿಗೆ ಕರ್ನಾಟಕ ಸಹಕಾರ ರತ್ನ, ಆರು ಜನರಿಗೆ ಕರ್ನಾಟಕ ರತ್ನಶ್ರೀ, ಮೂವರಿಗೆ ಜನನಾಯಕ, ಇಬ್ಬರಿಗೆ ಕರ್ನಾಟಕ ಡಿವಿಜಿ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಪುರಸ್ಕಾರ ಪಡೆದ ಸ್ಕೌಟ್ಸ್‌ನ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ದೀಪಕ್ ಎನರ್ಜಿ ಮುಖ್ಯಸ್ಥ ಶಿವಾನಂದ ಠಾಕೂರ್ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮುಖಂಡರಾದ ಜಗದೀಶ ಗುಪ್ತಾ, ಕಡಗೋಲ್ ಆಂಜನೇಯ, ಕೆ.ಎಂ.ಪಾಟೀಲ್, ಕೊಟ್ರೇಶಪ್ಪ ಕೋರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT