ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಗೆ ಜೀವ ತುಂಬಿದ ಮಕ್ಕಳು

ಪೌರಾಣಿಕ ನಾಟಕದ ಮೂಲಕ ರಂಜಿಸಿದ ವಿದ್ಯಾರ್ಥಿಗಳು
Last Updated 2 ಜನವರಿ 2017, 11:51 IST
ಅಕ್ಷರ ಗಾತ್ರ

ರಾಮನಗರ: ಆಧುನಿಕ ಯುಗದಲ್ಲಿ ಸಿನಿಮಾ, ಟಿವಿಗಳ ಹಾವಳಿಯಿಂದ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವ ರಂಗಭೂಮಿ ಕ್ಷೇತ್ರಕ್ಕೆ ಶಾಲಾ ಮಕ್ಕಳು ಮರು ಜೀವ ತುಂಬುವ ಪ್ರಯತ್ನ ಮಾಡಿದರು. ಪೌರಾಣಿಕ ನಾಟಕ ಪ್ರದರ್ಶನ ನೀಡಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡರು.

ತಾಲ್ಲೂಕಿನ ಬಿಡದಿಯ ಹೆಜ್ಜಾಲದಲ್ಲಿ ಜಯ ಕರ್ನಾಟಕ ಸಂಘಟನೆ, ಶ್ರೀ ಕ್ಷಿಪ್ರ ಪ್ರಸಾದ ಮಹಾಗಣಪತಿ ದೇವಸ್ಥಾನ ಟ್ರಸ್ಟ್ ಹಾಗೂ ಚೊಕ್ಕಲಿಂಗ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ವಿದ್ಯಾಮಾತ ಫೌಂಡೇಷನ್ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಹೆಜ್ಜಾಲ ನಾಡು ನುಡಿ ಹಬ್ಬದಲ್ಲಿ ಚೊಕ್ಕಲಿಂಗ ಶಾಲೆಯ ಪ್ರೌಢಶಾಲೆ ವಿದ್ಯಾರ್ಥಿಗಳು ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ಕುರುಕ್ಷೇತ್ರವನ್ನು ಕಣ್ಣಿಗೆ ಕಟ್ಟಿಕೊಟ್ಟರು.

ಮಕ್ಕಳ ಅಮೋಘ ನಟನೆ, ಮಿಂಚಿನ ಕಂಠ ಹಾಗೂ ವೇಷ ಭೂಷಣಗಳಿಗೆ ಪ್ರೇಕ್ಷಕರು ಮನ ಸೋತು ಚಪ್ಪಾಳೆಯ ಮೂಲಕ ಹುರಿದುಂಬಿಸಿದರು. ಮಕ್ಕಳ ಪ್ರತಿಭೆಗೆ ಹಿರಿಯ ರಂಗಭೂಮಿ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಕೃಷ್ಣ, ಕರ್ಣ, ಭೀಮ, ಅರ್ಜುನ, ದುರ್ಯೋಧನ, ದುಶ್ಯಾಸನ ದ್ರೋಣ, ಭೀಷ್ಮನ ಪಾತ್ರಗಳು ಗಮನ ಸೆಳೆದವು.

ನಾಟಕ ಪ್ರದರ್ಶನವನ್ನು ಉದ್ಘಾಟಿಸಿದ  ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಮಾತನಾಡಿ ‘ರಾಮಾಯಣ, ಮಹಾಭಾರತ ಸೇರಿದಂತೆ ನಾನಾ ಪೌರಾಣಿಕ ನಾಟಕವನ್ನು ಮಕ್ಕಳು ಪ್ರದರ್ಶಿಸುತ್ತಿರುವುದು ಶ್ಲಾಘನೀಯ. ರಂಗಭೂಮಿಯ ಅನುಭವ ಪಡೆದ ಮಕ್ಕಳು ಭವಿಷ್ಯದಲ್ಲಿ ಯಾವ ಕ್ಷೇತ್ರದವನ್ನಾದರೂ ಯಶಸ್ವಿಯಾಗಿ ಮುನ್ನಡೆಸುತ್ತಾರೆ. ಮಕ್ಕಳಿಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದ ಮೇಲೆ ಅಭಿರುಚಿ ಮೂಡಿಸಲು ಇದೊಂದು ಅತ್ಯುತ್ತಮ ವೇದಿಕೆ’ ಎಂದರು.

‘ಜಯ ಕರ್ನಾಟಕ ಸಂಘಟನೆ ವತಿಯಿಂದ ನಡೆ ಸ್ವಚ್ಛತೆಯ ಕಡೆ ಎಂಬ ಘೋಷವಾಕ್ಯದಡಿ ಬೆಂಗಳೂರಿನಲ್ಲಿ ಇದೇ 24ರಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಪ್ರಕಾಶ್ ರೈ ಮಾತನಾಡಿ ‘ಸಂಘಟನೆಯು ಕನ್ನಡಪರ ಹೋರಾಟಗಳ ಜೊತೆಗೆ ನಡುವೆ ಸಾಹಿತ್ಯ, ಸಂಗೀತ, ಕ್ರೀಡೆ, ರಂಗಭೂಮಿ ಕ್ಷೇತ್ರದ ಉಳಿವಿಗೆ ಸಂಘಟನೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ’ ಎಂದರು.

ನಾಟಕ ನಿರ್ದೇಶಕ ಕುರುಬರಕರೇನಹಳ್ಳಿ ರಾಮಚಂದ್ರ ಹಾಗೂ ಸಹ ನಿರ್ದೇಶಕ ಕೆ.ಟಿ.ವೆಂಕಟಾಚಾರ್ ನಿರ್ದೇಶನದಲ್ಲಿ ವಿದ್ಯಾಲಯದ ಪ್ರಾಥಮಿಕ ಮತ್ತು ಪ್ರೌಡಶಾಲಾ ವಿದ್ಯಾರ್ಥಿಗಳು ನಾಟಕದ ತಾಲೀಮು ನಡೆಸಿದ್ದರು.

ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಕೆ.ಎನ್. ಜಗದೀಶ್, ಕಾರ್ಯಾಧ್ಯಕ್ಷ ನಾರಾಯಣ್, ಜಿಲ್ಲಾ ಉಪಾಧ್ಯಕ್ಷ ಭಾಗೇಶ್ ರೈ, ಪ್ರಮುಖರಾದ ರವಿ, ಅರುಣ್, ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT