ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬಾರರ ಕೈಹಿಡಿದ ಒಲೆ ತಯಾರಿಕೆ

Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

‘ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ’ ಎಂಬ ನಾಣ್ಣುಡಿ ಮಣ್ಣಿನ ಮಡಿಕೆ ತಯಾರಿಕೆಗೆ ಸಂಬಂಧಿಸಿದೆ ಬಿಡಿ. ಆದರೆ ಈಗ ದೊಣ್ಣೆಗೆ ನಿಮಿಷದ ಮಾತು ಎಲ್ಲಿಂದ ಬಂತು? ಮಡಿಕೆ ಮಾಡುವುದನ್ನೇ ಕುಂಬಾರರು ಕೈಬಿಟ್ಟಿದ್ದಾರಲ್ಲ!. ಆದರೆ ಇದಕ್ಕೆ ಬದಲಿಯಾಗಿ ಅವರ ಕೈ ಹಿಡಿದಿವೆ ಮಣ್ಣಿನ ಒಲೆಗಳು.

ಉತ್ತರ ಕರ್ನಾಟಕದ ಕೊಪ್ಪಳ, ಗದಗ, ಬಳ್ಳಾರಿ ಜಿಲ್ಲೆಗಳಲ್ಲಿನ ವಿವಿಧ ಹಳ್ಳಿಗಳಲ್ಲಿನ ಕುಂಬಾರರ ಓಣಿಗಳಿಗೆ ಹೋದರೆ ಈಗ ಸಾಲು ಸಾಲಾಗಿ ಜೋಡಿಸಿಟ್ಟ ಮಣ್ಣಿನ ಒಲೆಗಳು ಕಾಣುತ್ತವೆ. ಮಡಿಕೆ ತಯಾರಿಕೆ ಈಗ ನೆಪ ಮಾತ್ರಕ್ಕೆ ಎಂಬಂತಾಗಿ ಬಿಟ್ಟಿದೆ. ಕಾಲ ಬದಲಾದಂತೆ ಜನರು ಬಳಸುತ್ತಿರುವ ವಸ್ತುಗಳಲ್ಲಿ ಬದಲಾವಣೆಯಾಗಿರುವುದು, ತಂತ್ರಜ್ಞಾನದಿಂದ ವಿವಿಧ ವಸ್ತುಗಳು ಗ್ರಾಮೀಣ ಮಾರುಕಟ್ಟೆಗೆ ಬಂದಿರುವುದರಿಂದ ಕುಂಬಾರರು ತಯಾರಿಸುತ್ತಿದ್ದ ಈ ಬಗೆಯ ಸಾಮಗ್ರಿಗಳ ಬೇಡಿಕೆ ಕುಗ್ಗಿದೆ.

‘ನಮ್ಮ ಕುಂಬಾರಿಕೆ ಕಲೆ ತತ್ತರಿಸಿ ಹೋಗೈತ್ರಿ, ಕುರಿಗಾರರು, ಕೃಷಿಕರು ನಮ್ಮ ವಸ್ತುಗಳನ್ನು ಕೈಬಿಟ್ಟು ಆರೋಗ್ಯಕ್ಕೆ ಹಾನಿ ಎನಿಸಿದ್ದರೂ ಪ್ಲಾಸ್ಟಿಕ್‌ ವಸ್ತುಗಳಿಗೆ ಮಾರು ಹೋಗಿದ್ದಾರೆ, ಈಗ ತಲಿಮ್ಯಾಗ ಹೊತ್ತು ಮಾರಿದ್ರೂ ಒಂದೊತ್ತಿನ ಹೊಟ್ಟಿ ತುಂಬಂಗಿಲ್ಲ. ಅದಕ್ಕ ಮಣ್ಣಿನ ಒಲಿ ಮಾಡಿ ಮಾರಿದ್ರ ಕುಟುಂಬ ನಡಿತೈತೆ ಎಂದು ಕೊಪ್ಪಳ ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಶಾಂತವ್ವ ಭರಮಪ್ಪ ಕುಂಬಾರ ಹಾಗೂ ಯಲಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮದ ಫಕೀರಪ್ಪ ಕುಂಬಾರ ಹೇಳುತ್ತಾರೆ.

ಮಣ್ಣಿನ ಒಲೆಗಳಿಗೇಕೆ ಬೇಡಿಕೆ: ಗ್ರಾಮೀಣ ಪ್ರದೇಶದ ಜನರು ಈ ಹೈಟೆಕ್ ಯುಗದಲ್ಲೂ ಮಣ್ಣಿನ ಒಲೆ ಮೇಲೆ ಅಡುಗೆ ಬೇಯಿಸುವುದನ್ನು ಮುಂದುವರೆಸಿಕೊಂಡು ಬಂದಿರುವುದು, ಹೊಲ ಗದ್ದೆಗಳಲ್ಲಿ, ಬಯಲು ಪ್ರದೇಶದಲ್ಲಿ ವಾಸವಿರುವವರು, ಅಲೆಮಾರಿ ಜನಾಂಗದವರಿಗೆ, ಜಾತ್ರಾ ಸಮಯದಲ್ಲಿ ಸಾಮೂಹಿಕವಾಗಿ ಅಡುಗೆ ತಯಾರು ಮಾಡುವವರಿಗೆ... ಈ ಮಣ್ಣಿನ ಒಲೆಗಳು ಅವಶ್ಯವಾಗಿರುವುದರಿಂದ ಇವುಗಳಿಗೆ ಬೇಡಿಕೆ ಹಾಗೇ ಉಳಿಯಲು ಕಾರಣವಾಗಿದೆ.

ಕುಂಬಾರರ ಒಲೆಯಲ್ಲೂ ವಿಜ್ಞಾನ
ಸಾಕಷ್ಟು ಬೇಡಿಕೆ ಹಾಗೂ ಕೈತುಂಬ ಕಾಸು ತಂದುಕೊಡುತ್ತಿರುವ ಮಣ್ಣಿನ ಒಲೆಗಳು ಬೇಗನೆ ಬಿಕರಿಯಾಗುತ್ತಿರುವುದರಿಂದ ಕುಂಬಾರರು ಸಾಕಷ್ಟು ಪ್ರಮಾಣದಲ್ಲಿ ಒಲೆಗಳನ್ನು ತಯಾರಿಸಲು ಮನೆಯ ಅಂಗಳ, ಕಟ್ಟೆ, ಮರದ ಅಡಿಯಲ್ಲಿ... ಹೀಗೆ ಕಾಲೂರಲು ಜಾಗವಿಲ್ಲದಂತೆ ಹಸಿಒಲೆಗಳನ್ನು ನೆರಳಲ್ಲಿ ಒಣಗಲು ಇಟ್ಟಿರುವುದು ಕಾಣುತ್ತದೆ.

ಈಗ ತಯಾರಿಸುತ್ತಿರುವ ಒಲೆಯಲ್ಲಿ ಹೆಚ್ಚು ಉರಿಯಲು ಆಮ್ಲಜನಕ ಪೂರೈಕೆಯಾಗುವಂತೆ ಕೊಂಚ ಗ್ರಾಮೀಣ ತಂತ್ರಗಾರಿಕೆ ತುಂಬಿರುವುದರಿಂದ ಮನೆಯಲ್ಲಿ ಹೊಗೆಯ ಪ್ರಮಾಣ ಕಡಿಮೆಯಾಗುತ್ತದೆ. ಒಲೆಯಲ್ಲಿ ಸರಳವಾಗಿ ಗಾಳಿ ತೂರಿಕೊಂಡು ಸೌದೆ ಹೊತ್ತಿ ಉರಿಯುವಂತಾಗಲು ಒಲೆಯ ಮೇಲ್ಭಾಗದಲ್ಲಿ ಎರಡು ರಂಧ್ರಗಳನ್ನು ಬಿಟ್ಟಿರುತ್ತಾರೆ. ಜೊತೆಗೆ ಒಲೆಯ ಹಿಂದೆ ಎರಡು ಸಣ್ಣ ತಗ್ಗುಗಳಂತೆ ಮಾಡಿರುವುದರಿಂದ ಒಲೆ ಒಳಗೆ ಜ್ವಾಲೆಯ ರೀತಿಯಲ್ಲಿ ಹೊತ್ತಿ ಉರಿಯಲು ಸಾಧ್ಯವಾಗುತ್ತಿದೆ.

ಇದೆಲ್ಲದರೊಂದಿಗೆ ಮುಖ್ಯ ಒಲೆಯ ಮೇಲೆ ಅಡುಗೆ ತಯಾರಾಗುತ್ತಿರುವಾಗಲೇ ಅದರ  ಪಕ್ಕದಲ್ಲಿ ಎರಡು ಗವಾಕ್ಷಿಗಳಿರುವುದರಿಂದ ಅದರ ಮೂಲಕ ಶಾಖ ಹೊರಬರುತ್ತಿದ್ದು ಅದರ ಮೇಲೆ ಮತ್ತೆರಡು ಸಣ್ಣ ವಸ್ತುಗಳಲ್ಲಿ ಬೇಳೆ, ಕಾಳು, ಚಹಾ ಹೀಗೆ ಏನಾದರೊಂದು ಬೇಯಿಸಬಹುದು ಎಂದು ಶರಣಪ್ಪ ಕುಂಬಾರ ವಿವರಣೆ ನೀಡುತ್ತಾರೆ.

ಒಲೆ ತಯಾರಿಕೆಗೆ ಅಚ್ಚು ಬಳಕೆ: ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಒಲೆಗಳನ್ನು ತಯಾರಿಸಬೇಕಾಗಿರುವುದರಿಂದ ಕುಂಬಾರರು ಅಚ್ಚುಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಕೆಲಸವೀಗ ಕೊಂಚ ಸರಳವೂ ಆಗಿದೆ. ಮುದ್ದೆಯ ಹಾಗೆ ಮಣ್ಣು ಹದಗೊಳಿಸಿಕೊಂಡು ಅಚ್ಚಿಗೆ ಹಾಕಿ, ಮೆಲ್ಲಗೆ ಅಚ್ಚು ಮೇಲಕ್ಕೆ ಎತ್ತಿದರೆ ಹಸಿ ಒಲೆ ತಯಾರಾಗುತ್ತದೆ. ನವಿರಾಗಿ ಆ ಒಲೆ ಎತ್ತಿ ನೆರಳಿಗೆ ಇಡುತ್ತಾರೆ.

ಸುಮಾರು 15 ದಿನಗಳವರೆಗೆ ನೆರಳಿಗೆ ಆರಿಸಿ ಭಟ್ಟಿಗೆ ಹಾಕಿ ಸುಡುತ್ತಾರೆ. ಭಟ್ಟಿ ಆರಿದ ನಂತರ ಮಾರುಕಟ್ಟೆಗೆ ಒಲೆಗಳನ್ನು ವಾಹನಗಳ ಮೂಲಕ ಸಾಗಿಸುತ್ತಾರೆ. ಹೀಗೆ ಮಣ್ಣು ಒಲೆಯಾಗಿ ಮಾರುಕಟ್ಟೆಗೆ ಸಾಗಲು ಕನಿಷ್ಠ ಪಕ್ಷ ಒಂದು ತಿಂಗಳು ಬೇಕಾಗುತ್ತದೆ. ಕುಟುಂಬದಲ್ಲಿ ನಾಲ್ಕಾರು ಜನರು ಇದ್ದರೆ ದಿನಕ್ಕೆ 50 ಒಲೆಗಳನ್ನು ತಯಾರಿಸಬಹುದು. ಒಂದು ಒಲೆಗೆ ಈ ಹಿಂದೆ ₹40 ರೂಪಾಯಿ ಇತ್ತು ಆದರೆ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ₹60ರಿಂದ ₹70 ರೂಪಾಯಿಗೆ ಏರಿಸಿದ್ದಾರೆ.

ಆದಾಗ್ಯೂ ಏರಿದ ಕೆರೆ ಮಣ್ಣು, ಕಟ್ಟಿಗೆ, ಮಣ್ಣಿಗೆ ಸೇರಿಸುವ ಕಟುಗ (ಜಿಗಟು ಮಣ್ಣು), ಸಾಗಾಣಿಕೆ ಮಾಡಲು ವಾಹನದ ಬಾಡಿಗೆ... ಹೀಗೆ ಪ್ರತಿಯೊಂದು ಬೆಲೆ ಹೆಚ್ಚಿಸಿಕೊಂಡ ಕಾರಣವಾಗಿ ಹೇಳಿಕೊಳ್ಳುವಂತಹ ಲಾಭವೇನೂ ಇವರಿಗೆ ದಕ್ಕುವುದಿಲ್ಲ. ಆದರೆ ಮಣ್ಣಿನ ಒಲೆಯಿಂದ ಹೊಟ್ಟೆ ತುಂಬುತ್ತದೆ ಎಂಬುದು ಕುಂಬಾರರ ಸಂತೃಪ್ತಿಯ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT