ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಬಡ್ಡಿ ದರ ಕಡಿತ ಆರ್ಥಿಕತೆಗೆ ಶಕ್ತಿವರ್ಧಕ

Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ದೇಶದ ಅತಿದೊಡ್ಡ ಬ್ಯಾಂಕ್‌  ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸೇರಿದಂತೆ  ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳು  ಸಾಲಗಳ ಮೇಲಿನ ಬಡ್ಡಿ ದರಗಳನ್ನು ಗಮನಾರ್ಹವಾಗಿ ತಗ್ಗಿಸಿರುವುದು ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯಾಗಿದೆ. ಇದು ಸದ್ಯದ ಅನಿವಾರ್ಯವೂ ಆಗಿತ್ತು. ಖಾಸಗಿ ವಲಯದ ಬ್ಯಾಂಕ್‌ಗಳೂ ಈಗ ಬಡ್ಡಿ ದರ ಕಡಿತ ಮಾಡಿವೆ.

ಹೀಗಾಗಿ  ಗೃಹ, ವಾಹನ ಖರೀದಿ, ವೈಯಕ್ತಿಕ ಮತ್ತು ಉದ್ದಿಮೆ ವಹಿವಾಟಿಗೆ ನೀಡುವ ಸಾಲಗಳು ಅಗ್ಗವಾಗಲಿವೆ.  ಜೊತೆಗೆ ರಿಟೇಲ್‌ ಸಾಲ ವಲಯದಲ್ಲಿ ಇನ್ನು ಮುಂದೆ ಬ್ಯಾಂಕ್‌ಗಳು ಪರಸ್ಪರ ಪೈಪೋಟಿಗೂ ಇಳಿಯಲಿವೆ. ಇದರಿಂದ, ಅರ್ಥ ವ್ಯವಸ್ಥೆಗೆ ಈ ಸಂದರ್ಭದಲ್ಲಿ ಅಗತ್ಯವಾಗಿದ್ದ ಶಕ್ತಿವರ್ಧಕ ದೊರೆತಂತೆ ಆಗಿದೆ.  ಮಧ್ಯಂತರ ಅವಧಿಯಲ್ಲಿ ಅರ್ಥ ವ್ಯವಸ್ಥೆ ಯನ್ನು ಬಲಪಡಿಸುವಲ್ಲಿ  ಅಗ್ಗದ ಬಡ್ಡಿ ದರಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ.

ಬಡ್ಡಿ ದರ ಇಳಿಯುತ್ತಿದ್ದಂತೆ ಗೃಹೋಪಯೋಗಿ ಉತ್ಪನ್ನ, ವಾಹನ ತಯಾರಿಕೆ, ಗೃಹ ನಿರ್ಮಾಣ ವಲಯಗಳು ಗಮನಾರ್ಹವಾಗಿ ಚೇತರಿಕೆ ಕಾಣಲಿವೆ ಎಂದು ಆಶಿಸಬಹುದು. ನೋಟು ರದ್ದತಿಯಿಂದ ಸರಕು ಮತ್ತು ಸೇವೆಗಳ ಉಪಭೋಗ ಕಡಿಮೆಯಾಗಿತ್ತು. ಈಗ,  ಬಡ್ಡಿ ದರ ಕಡಿತ ನಿರ್ಧಾರವು ಬೇಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ನೆರವಾಗಲಿದೆ.

ಬಂಡವಾಳ ಹೂಡಿಕೆಯನ್ನೂ ಉತ್ತೇಜಿಸಲಿದೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರ ಗರಿಷ್ಠ  ಶೇ 0.9ರಷ್ಟು   ತಗ್ಗಿರುವುದರಿಂದ,  ಗೃಹ ಸಾಲವಂತೂ 6 ವರ್ಷಗಳಲ್ಲಿ ಮೊದಲ ಬಾರಿಗೆ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಯಲಿದೆ.  ಬಡ್ಡಿ ದರಗಳ ಇಳಿಕೆ ಪ್ರಮಾಣ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿರಲಿದೆ.

ಎಂಸಿಎಲ್‌ಆರ್‌  ಕಡಿತ ಮಾಡುವುದು ಎಂದರೆ, ಹೊಸ ಸಾಲಗಾರರು ಅಗ್ಗದ ದರದಲ್ಲಿ ಸಾಲ ಪಡೆಯಲಿದ್ದಾರೆ ಎಂದರ್ಥ.  ಗೃಹಸಾಲಗಳು ಒಂದು ವರ್ಷದ  ಎಂಸಿಎಲ್‌ಆರ್‌  ಅವಧಿ ಆಧರಿಸಿರುವುದರಿಂದ, ಹಳೆ ಸಾಲಗಳ ಬಡ್ಡಿ ಅವಧಿ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಹೊಸ ಬಡ್ಡಿ ದರಗಳ ಪ್ರಯೋಜನಕ್ಕೆ ಅರ್ಹವಾಗುತ್ತವೆ. 20 ವರ್ಷಗಳಷ್ಟು ದೀರ್ಘಾವಧಿಯ ಗೃಹ ಸಾಲಗಳ ಮರು ಪಾವತಿ ಅವಧಿಯು  ಸರಿಸುಮಾರು 3 ವರ್ಷಗಳಷ್ಟು ಕಡಿಮೆಯಾಗಲಿದೆ. ಇದರಿಂದ ಗೃಹ ಸಾಲಗಾರರ ಮೇಲಿನ ಹಣಕಾಸಿನ ಹೊರೆ ಗಮನಾರ್ಹವಾಗಿ ತಗ್ಗಲಿದೆ.

ಮಂದಗತಿಯಲ್ಲಿ ಇರುವ ಮತ್ತು ಆರ್ಥಿಕ ವೃದ್ಧಿ ದರ ಕುಸಿತ ಕಾಣುತ್ತಿರುವ ದೇಶಿ ಅರ್ಥ ವ್ಯವಸ್ಥೆಗೆ ಈ ನಿರ್ಧಾರ ಉತ್ತೇಜನ ನೀಡಲಿದೆ. ಕಳೆದ ವರ್ಷದ ಶೇ 10.9ಕ್ಕೆ ಹೋಲಿಸಿದರೆ 2016ರ ಡಿಸೆಂಬರ್‌ 9ರ ಹೊತ್ತಿಗೆ ಬ್ಯಾಂಕ್‌ ಠೇವಣಿ ಹೆಚ್ಚಳವು ಶೇ 15.9ರಷ್ಟು ವೃದ್ಧಿ ಕಂಡಿತ್ತು. ಆದರೆ, ಹಿಂದಿನ ವರ್ಷದ ಶೇ 10.6ರಷ್ಟಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ  ಸಾಲ ವಿತರಣೆಯ ಬೆಳವಣಿಗೆಯು ಕೇವಲ ಶೇ 5.8ರಷ್ಟಿತ್ತು. ಈ ಅಂತರ ತಗ್ಗಿಸಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು  ಬ್ಯಾಂಕ್‌ಗಳು ಬಡ್ಡಿ ದರ ಕಡಿತ ಮಾಡಲು ಮುಂದಾಗಿರುವುದು ಭರವಸೆದಾಯಕ. 

2008ರಲ್ಲಿ ಘಟಿಸಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ ಅತಿ ದೊಡ್ಡ ಪ್ರಮಾಣದ ಬಡ್ಡಿ ದರ ಕಡಿತದ ನಿರ್ಧಾರ ಇದಾಗಿದೆ. ನೋಟುಗಳ ರದ್ದತಿಯಿಂದ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಿ, ಪೇಟೆಯಲ್ಲಿ ಉತ್ಸಾಹ ಮೂಡಿಸಲೂ ಈ ನಿರ್ಧಾರ ನೆರವಾಗಲಿದೆ.  ಸಾಲ ವಿತರಣೆ ಪ್ರಮಾಣದ ಹೆಚ್ಚಳದಿಂದ ಸಹಜವಾಗಿಯೇ ಅರ್ಥ ವ್ಯವಸ್ಥೆಗೆ ಹೆಚ್ಚಿನ ಬಲ ಬರಲಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ 2015ರ ಜನವರಿಯಿಂದ ಈಚೆಗೆ ಶೇ 1.75ರಷ್ಟು ಅಲ್ಪಾವಧಿ ಬಡ್ಡಿ ದರ ಕಡಿತ ಮಾಡಿದ್ದರೂ ಬ್ಯಾಂಕ್‌ಗಳು ಅದರ ಪೂರ್ಣ ಪ್ರಯೋಜನವನ್ನು ಸಾಲಗಾರರಿಗೆ ವರ್ಗಾಯಿಸಿರಲಿಲ್ಲ. ಈಗ ಗಮನಾರ್ಹ ಪ್ರಮಾಣದಲ್ಲಿ ಬಡ್ಡಿ ಕಡಿತ ಮಾಡುವ ಮೂಲಕ ಆ ಲೋಪವನ್ನು ಸರಿಪಡಿಸಿಕೊಳ್ಳಲು  ಮುಂದಾಗಿವೆ.  ನೋಟು ರದ್ದತಿಯಿಂದ ಉಂಟಾಗಿರುವ ಸಂಕಷ್ಟಗಳಿಗೆ ಸಾಂತ್ವನ ನೀಡಲು, ಬ್ಯಾಂಕ್‌ಗಳಿಗೆ ಹರಿದು ಬಂದಿರುವ ಹೆಚ್ಚುವರಿ ಹಣದ ಸದ್ಬಳಕೆಗೆ  ಮತ್ತು ಬಡ ಹಾಗೂ ಕೆಳ ಮಧ್ಯಮ ವರ್ಗಕ್ಕೆ ಹೆಚ್ಚಿನ ಸಾಲ ನೀಡಲು ಮುಂದಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಈಗಾಗಲೇ ನಗರ ಹಾಗೂ ಗ್ರಾಮೀಣ ಬಡವರಿಗೆ ಸಾಲದ ರಿಯಾಯಿತಿಗಳನ್ನು ಪ್ರಧಾನಿ ಪ್ರಕಟಿಸಿದ್ದಾರೆ.  ಈಗ ಬ್ಯಾಂಕ್ ಬಡ್ಡಿದರಗಳನ್ನೂ ಕಡಿತ ಮಾಡಿರುವುದರಿಂದ ಮುಂಬರುವ ದಿನಗಳಲ್ಲಿ ಬಂಡವಾಳ ಹೂಡಿಕೆ ಮತ್ತು ಸರಕು– ಸೇವೆಗಳ ಬೇಡಿಕೆ ಹೆಚ್ಚಳಗೊಂಡು ಆರ್ಥಿಕ ಚಟುವಟಿಕೆಗಳು ಚೇತರಿಕೆಯ ಹಾದಿಗೆ ಮರಳುವ ಸಾಧ್ಯತೆಯಂತೂ ಈಗ ನಿಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT