ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮಿಯಾ ಮಸೀದಿ ಸಮಿತಿ ರದ್ದುಪಡಿಸಿ

ಕಾರ್ಯದರ್ಶಿ ಮತ್ತು ಅಧ್ಯಕ್ಷರ ಕಾರ್ಯವೈಖರಿಗೆ ಮುಸ್ಲಿಂ ಮುಖಂಡರ ಅಸಮಾಧಾನ
Last Updated 3 ಜನವರಿ 2017, 7:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ಬಾಗೇಪಲ್ಲಿಯ ಜಾಮಿಯಾ ಮಸೀದಿ ಸಮಿತಿಯನ್ನು ತಕ್ಷಣವೇ ರದ್ದುಪಡಿಸಿ, ಹೊಸ ಸಮಿತಿ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಾಗೇಪಲ್ಲಿಯ 9 ಮಸೀದಿಗಳ ಸಮಿತಿ ಮುಖಂಡರು ಸೋಮವಾರ ವಕ್ಫ್‌ ಮಂಡಳಿ ಜಿಲ್ಲಾ ಅಧಿಕಾರಿ ಫೌಜಿಯಾ ಸಿದ್ಧಿಕಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ವಕ್ಫ್‌ ಮಂಡಳಿ ಕಚೇರಿಗೆ ಭೇಟಿ ನೀಡಿದ 9 ಮಸೀದಿ ಸಮಿತಿಗಳ ಕಾರ್ಯದರ್ಶಿಗಳು, ಅಧ್ಯಕ್ಷರು ಮತ್ತು ಸಮುದಾಯದ ಜನರು ಜಾಮಿಯಾ ಮಸೀದಿ ಸಮಿತಿಯ ಕಾರ್ಯದರ್ಶಿ ಮತ್ತು ಅಧ್ಯಕ್ಷನ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದರು. 

ಪ್ರಸಕ್ತ ಜಾಮಿಯಾ ಮಸೀದಿ ಸಮಿತಿಯನ್ನು ವಕ್ಫ್‌ ಮಂಡಳಿಯ ಜಿಲ್ಲಾ ಅಧಿಕಾರಿ ಅವರು ಸಾಮಾನ್ಯ ಸಭೆ ಕರೆದು ಸಮುದಾಯದ ಜನರ ಗಮನಕ್ಕೆ ತರದೆ ಹಳೆಯ ಠರಾವಿನ ಆಧಾರದ ಮೇಲೆ ರಚಿಸಿದ್ದಾರೆ. ಸಮಿತಿ ಅಧ್ಯಕ್ಷ ನಿಸಾರ್‌ ಅಹಮ್ಮದ್‌ ಮತ್ತು ಕಾರ್ಯದರ್ಶಿ ಝಾಕೀರ್‌ ಹುಸೇನ್‌ ಅವರು ಇತರ ಸದಸ್ಯರಿಂದ ಪವರ್ ಆಫ್ ಅಟಾರ್ನಿ ಅಧಿಕಾರ ಪಡೆದು ಮನಸ್ಸಿಗೆ ಬಂದಂತೆ ಆಡಳಿತ ನಡೆಸಿ, ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಜಾಮಿಯಾ ಮಸೀದಿ ಸಮಿತಿ ಕಾರ್ಯದರ್ಶಿ ಮತ್ತು ಅಧ್ಯಕ್ಷ ಇಡೀ ಮುಸ್ಲಿಂ ಸಮುದಾಯಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ವಕ್ಫ್‌ ಮಂಡಳಿ ಆಸ್ತಿ ಖಾಸಗಿಯವರು ಅತಿಕ್ರಮಿಸಿ ಕೊಂಡರೂ ಪ್ರಶ್ನಿಸುತ್ತಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಸಮುದಾಯದ ಜನರಿಗೆ ತಿಳಿಸುವುದಿಲ್ಲ. ಪ್ರಶ್ನಿಸುವ ಮನೋಭಾವದ ಸದಸ್ಯರನ್ನು ಮೂಲೆ ಗುಂಪು ಮಾಡುತ್ತಾರೆ. ಸಾರ್ವಜನಿಕ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸಮಿತಿ ಕೆಲವರು ಹುಸೇನ್ ಶಾವಲಿ ದರ್ಗಾದ ಹುಂಡಿ ತೆರೆದು ಅದರಲ್ಲಿದ್ದ ಮೂರು ವರ್ಷಗಳ ಕಾಣಿಕೆ ಮೊತ್ತವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸಮಿತಿ  ಕಾರ್ಯವೈಖರಿ ಪ್ರಶ್ನಿಸುವವರ ವಿರುದ್ಧ ಸುಳ್ಳು ದೂರುಗಳನ್ನು ಕೊಟ್ಟು ಬಂಧನ ಭೀತಿ ತೋರಿಸುತ್ತಾರೆ. ಕಾರ್ಯ ದರ್ಶಿ ಮತ್ತು ಅಧ್ಯಕ್ಷರ ದುರ್ವತನೆ ಬಗ್ಗೆ ಅನೇಕ ಬಾರಿ ವಕ್ಫ್‌ ಮಂಡಳಿ ಜಿಲ್ಲಾ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲ್ಲೂಕಿಗೆ ಭೇಟಿ ನೀಡಿ ವಾಸ್ತವ ಅವಲೋಕಿಸುವ ಕೆಲಸ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕೂಡಲೇ ಜಾಮಿಯಾ ಮಸೀದಿ ಸಮಿತಿಯನ್ನು ರದ್ದುಪಡಿಸಿ, ಹೊಸ ಸಮಿತಿ ರಚನೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ನಿಮ್ಮ ನಿರ್ಧಾರವನ್ನು ಲಿಖಿತ ಹಿಂಬರಹದಲ್ಲಿ ನೀಡಬೇಕು ಎಂದು ಮುಖಂಡರು ಜಿಲ್ಲಾ ಅಧಿಕಾರಿ ಫೌಜಿಯಾ ಅವರಿಗೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಫೌಜಿಯಾ, ‘ಶೀಘ್ರದಲ್ಲಿಯೇ ಬಾಗೇಪಲ್ಲಿಗೆ ಭೇಟಿ ನೀಡಿ ಮುಸ್ಲಿಂ ಮುಖಂಡರ ಸಭೆ ನಡೆಸುತ್ತೇನೆ. ಅಲ್ಲಿ ಕೇಳಿಬರುವ ಅಭಿ ಪ್ರಾಯಗಳನ್ನು ಆಧರಿಸಿ ರಾಜ್ಯ ವಕ್ಫ್‌ ಮಂಡಳಿಗೆ ಪತ್ರ ಬರೆಯುತ್ತೇನೆ. ಮಂಡ ಳಿಯ ನಿರ್ದೇಶನ ಅನುಸಾರ ಮುಂದಿನ ಕ್ರಮ ಜರುಗಿಸುತ್ತೇನೆ’ ಎಂದರು. ಮುಖಂಡರಾದ ಸೈಯ್ಯದ್‌ ಕಲಿ ಮುಲ್ಲಾ, ಶಬ್ಬೀರ್‌ ಖಾನ್, ರಿಜ್ವಾನ್‌, ಹಮೀದ್, ಮೆಹಬೂಬ್‌ ಬೇಗ್‌, ಅಬ್ದುಲ್‌ ಮನ್ನಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT