ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಸ್ಕ್‌ವರ್ಕ್‌ ನೌಕರರಿಂದ ಮುತ್ತಿಗೆ

ಕಾವೇರಿ ನೀರಾವರಿ ನಿಗಮ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಆಕ್ರೋಶ
Last Updated 3 ಜನವರಿ 2017, 9:14 IST
ಅಕ್ಷರ ಗಾತ್ರ

ಮಂಡ್ಯ: ಟಾಸ್ಕ್‌ವರ್ಕ್‌ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಹಾಗೂ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಟಾಸ್ಕ್‌ವರ್ಕ್‌ ದಿನಗೂಲಿ ನೌಕರರ ಸಂಘದ ಕಾರ್ಯಕರ್ತರು ಸೋಮವಾರ ಕಾವೇರಿ ನೀರಾವರಿ ನಿಗಮಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

4 ತಿಂಗಳಿಂದ ಸಂಬಳ ನೀಡಿಲ್ಲ. ಏಕಾಏಕಿ 250 ಟಾಸ್ಕ್‌ನೌಕರರನ್ನು ಕೆಲಸಕ್ಕೆ ಬರಬೇಡಿ, ಕೆ.ಆರ್‌.ಎಸ್‌. ಅಣೆಕಟ್ಟೆಯಲ್ಲಿ ನೀರು ಇಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಮಳವಳ್ಳಿ, ಕೆ.ಆರ್.ಎಸ್‌,  ಬನ್ನೂರು ಹಾಗೂ ರಾಮನಗರ ವಿಭಾಗಗಳಲ್ಲಿ ಸವಡೆಯವರು ಕೆಲಸ ನಿರ್ವಹಿಸುತ್ತಿ ದ್ದಾರೆ. ಮಂಡ್ಯ ವಿಭಾಗದಲ್ಲಿ ಮಾತ್ರ ಕೆಲಸಕ್ಕೆ ಬರಬೇಡಿ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ಜಲ ಸಂಪನ್ಮೂಲ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡಾಗ, ಕೆಲಸದಿಂದ ತೆಗೆಯಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರಂತರವಾಗಿ ಕೆಲಸ ನೀಡಬೇಕು. ಆದರೂ, ಅಧಿಕಾರಿಗಳು ಕೆಲಸ ನೀಡದೇ ತೆಗೆದುಹಾಕಲು ಮುಂದಾಗಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಆರ್‌. ಸುರೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಆರ್‌. ಸುರೇಶ್‌ ಮಾತನಾಡಿ, ನಾಲ್ಕು ತಿಂಗಳ ಸಂಬಳದ ಬಗ್ಗೆ ಮೇಲಾಧಿಕಾರಿಗಳಿಗೆ ಈ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದೆ. ಈಗ ಎರಡು ತಿಂಗಳ ಸಂಬಳ ನೀಡಲಾಗುವುದು. ಇನ್ನುಳಿದ ಸಂಬಳವನ್ನು ಹತ್ತು ದಿನಗಳೊಳಗೆ ಬಿಡುಗಡೆ ಮಾಡಲಾಗುವುದು ಎಂದರು.

ನೀರು ಇಲ್ಲದ ಸಂದರ್ಭದಲ್ಲಿ ವೇತನ ನೀಡಬೇಕು ಎಂದರೆ ಅದಕ್ಕೆ ಮೇಲಧಿಕಾರಿಗಳ ಅನುಮತಿ ಬೇಕು. ಕಾಲುವೆ ಶುಚಿಗೊಳಿಸುವ, ಕೆರೆಗಳಲ್ಲಿ ಬೆಳೆದಿರುವ ಗಿಡ ಕೀಳಿಸುವ ಕೆಲಸಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಮಾಧಾನ ಮಾಡಲು ಮುಂದಾದರು.

ಅದಕ್ಕೆ ಒಪ್ಪದ ಸಂಘದ ಶಿವಲಿಂಗಯ್ಯ, ವಿ.ಗಿರೀಗೌಡ, ಎಚ್‌. ಕುಮಾರ್‌, ಶಂಕರೇಗೌಡ ಸೇರಿದಂತೆ ಹಲವು ಸದಸ್ಯರು, ನಮಗೆ ಭರವಸೆಗಳು ಬೇಡ. 4 ತಿಂಗಳ ಸಂಬಳ ಕೊಡಿ. ಜತೆಗೆ ಕೆಲಸ ಯಾವಾಗಿನಿಂದ ಕೊಡುತ್ತೀರಿ ಎಂದು ಹೇಳಿ ಎಂದು ಆಗ್ರಹಿಸಿದರು. ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪ್ರತಿಭಟನೆ ಮುಂದುವರಿಸಿದರು. ಕೆಂಪೇಗೌಡ, ಪುಟ್ಟೇಗೌಡ, ಭಾರತಿ, ಚೆನ್ನಮ್ಮ, ಸಾವಿತ್ರಮ್ಮ, ಲಿಂಗರಾಜು, ರವಿ, ಬಸವರಾಜು, ಮಾದೇಗೌಡ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT