ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಅಧ್ಯಯನ; ಬ್ರಿಗೇಡ್‌ ಸಮಾವೇಶ

ಜಿಲ್ಲಾ ಬಿಜೆಪಿ ಪ್ರಮುಖರಿಗೆ ಪೀಕಲಾಟ; ಕಾರ್ಯಕರ್ತರಲ್ಲಿ ಗೊಂದಲ
Last Updated 3 ಜನವರಿ 2017, 9:58 IST
ಅಕ್ಷರ ಗಾತ್ರ

ವಿಜಯಪುರ: ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ನೇತೃತ್ವದ ತಂಡ ಜಿಲ್ಲೆಯ ಬರ ಅಧ್ಯಯನಕ್ಕಾಗಿ ಒಂದೆಡೆ ಭೇಟಿ ನೀಡಿದರೆ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ, ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ‘ಹಿಂದ’ ಸಂಘಟನೆಗಾಗಿ ಮಂಗಳವಾರ ಇನ್ನೊಂದೆಡೆ ನಗರದಲ್ಲೇ ಸಮಾವೇಶ ಆಯೋಜಿಸಿದ್ದಾರೆ.

ಪಕ್ಷದ ನಾಯಕರು ಒಂದೇ ದಿನ ಜಿಲ್ಲೆಗೆ ಭೇಟಿ ನೀಡಲಿದ್ದು, ಸ್ಥಳೀಯ ಮುಖಂಡರು ಯಾರ ಜತೆ ಗುರುತಿಸಿಕೊಳ್ಳಬೇಕು ಎಂಬ ಸಂಕಟದಲ್ಲಿ ಮುಳುಗಿದ್ದಾರೆ. ‘ಹಿಂದ’ ಸಂಘಟನೆಗಾಗಿ ಕೆ.ಎಸ್‌. ಈಶ್ವರಪ್ಪ ಜಿಲ್ಲಾ ಪ್ರವಾಸ ನಡೆಸಿದ ಎಲ್ಲ ಸಂದರ್ಭದಲ್ಲೂ, ಜಿಲ್ಲೆಯ ಬಿಜೆಪಿ ಪ್ರಮುಖರು ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದರು.

ಬಹಿರಂಗವಾಗಿ ಗೋಚರಿಸಿ ಕೊಳ್ಳದಿದ್ದರೂ ನಗರದ ಸರ್ಕಾರಿ ಪ್ರವಾಸಿ ಮಂದಿರಕ್ಕೆ ತೆರಳಿ ಭೇಟಿಯಾಗುತ್ತಿದ್ದರು. ಆದರೆ ಇದೀಗ ಜಿಲ್ಲಾ ಪ್ರಮುಖರಿಗೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ. ಜಗದೀಶ ಶೆಟ್ಟರ್‌ ನೇತೃತ್ವದ ತಂಡವೂ ಮಂಗಳವಾರ ನಗರಕ್ಕೆ ಬರಲಿದ್ದು, ನಂತರ ಜಿಲ್ಲೆಯ ಮೂರ್ನಾಲ್ಕು ಸ್ಥಳಗಳಲ್ಲಿ ಬೆಳೆ ಹಾನಿಗೀಡಾಗಿರುವು ದನ್ನು ಪರಿಶೀಲಿಸಿದೆ. ಹುಬ್ಬಳ್ಳಿಯಿಂದ ಬರುವ ತಂಡ ನಗರಕ್ಕೆ ಎಷ್ಟು ಗಂಟೆ ವೇಳೆಗೆ ಬರಲಿದೆ. ಎಲ್ಲಿ ಪರಿಶೀಲನೆ ನಡೆಸಲಿದೆ ಎಂಬ ಮಾಹಿತಿ ರಾತ್ರಿಯಾದರೂ ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ, ಉಳಿದ ಯಾವೊಬ್ಬ ಪ್ರಮುಖ ನಾಯಕರಿಗೂ ಗೊತ್ತಿಲ್ಲ.

ಇನ್ನೂ ಕೆ.ಎಸ್‌.ಈಶ್ವರಪ್ಪ ಬಾಗಲಕೋಟೆ ಜಿಲ್ಲಾ ಸಮಾವೇಶ ಮುಗಿಸಿಕೊಂಡು ಮಧ್ಯಾಹ್ನ 3ರ ವೇಳೆಗೆ ವಿಜಯಪುರಕ್ಕೆ ಬರಲಿದ್ದಾರೆ. ನಂತರ ಇಲ್ಲಿನ ಬ್ರಿಗೇಡ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬರ ಅಧ್ಯಯನ ತಂಡದ ಸಮಯ ಇನ್ನೂ ನಿಗದಿ ಯಾಗದಿರುವುದು ಮುಖಂಡರು ಸೇರಿದಂತೆ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ.

ಬರ ಅಧ್ಯಯನ ತಂಡದ ಆಗಮನಕ್ಕೆ ಕಾದು ಕೂತು, ಜತೆಯಲ್ಲಿ ಪ್ರವಾಸ ನಡೆಸುವುದೋ ? ಇಲ್ಲ ಬ್ರಿಗೇಡ್‌ ಸಮಾವೇಶದಲ್ಲಿ ಪಾಲ್ಗೊಳ್ಳುವುದೋ ಎಂಬ ದ್ವಂದ್ವ ಕಾಡಲಾರಂಭಿಸಿದೆ ಎಂದು ಹೆಸರು ಬಹಿರಂಗಗೊಳಿಸಳೂ ಚ್ಛಿಸದ ಜಿಲ್ಲೆಯ ಬಿಜೆಪಿ ಪ್ರಮುಖ ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಶ್ವರಪ್ಪ ‘ಹಿಂದ’ ಸಂಘಟನೆಗೆ ಸಂಘ ಪರಿವಾರದ ಕೃಪಾಕಟಾಕ್ಷ ದೊರೆತಿದೆ. ರಾಷ್ಟ್ರೀಯ ವರಿಷ್ಠರು ಯಾವ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಂಘಟನೆಗಾಗಿ ನಾಯಕರು ಬಂದಾಗ ಸೌಜನ್ಯಕ್ಕೂ ಭೇಟಿಯಾಗದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಭವಿಷ್ಯಕ್ಕೆ ತೊಂದರೆಯಾಗುವುದು ಎಂಬ ಆತಂಕವನ್ನು ಮುಖಂಡರೊಬ್ಬರು ವ್ಯಕ್ತಪಡಿಸಿದರು.

ಇತ್ತ ಬರ ಅಧ್ಯಯನಕ್ಕೆ ಜಗದೀಶ ಶೆಟ್ಟರ ನೇತೃತ್ವದ ತಂಡ ಪಕ್ಷದಿಂದ ಅಧಿಕೃತವಾಗಿ ಬರುತ್ತಿದೆ. ಅವರ ಜತೆ ತೆರಳದಿದ್ದರೆ ಪಕ್ಷ ನಿಷ್ಠೆಯ ಪ್ರಶ್ನೆ ಎದುರಾಗಲಿದೆ. ಮುಖಂಡರ ನಡುವಿನ ತಿಕ್ಕಾಟದಲ್ಲಿ ನಮ್ಮ ಸಂಕಟ ಯಾರಿಗೂ ಅರ್ಥವಾಗದಂತಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದರು.

ಜಿಲ್ಲಾ ಬಿಜೆಪಿ ಪ್ರಮುಖರನ್ನು ಈ ಕುರಿತು ಪ್ರಶ್ನಿಸಿದರೆ ಮುಂಚೆಯೇ ನಮ್ಮ ಕಾರ್ಯಕ್ರಮ ನಿಗದಿಯಾಗಿತ್ತು. ಈಚೆಗೆ ಈಶ್ವರಪ್ಪ ಕಾರ್ಯಕ್ರಮ ನಿಗದಿಯಾಗಿದೆ ಎನ್ನುತ್ತಾರೆ. ಬ್ರಿಗೇಡ್‌ನ ಸಂಚಾಲಕರು ಆರಂಭದಲ್ಲೇ ನಮ್ಮ ಸಮಾವೇಶದ ದಿನ, ಸಮಯ ನಿಗದಿಪಡಿಸಿದ್ದೆವು.

ಬರ ಅಧ್ಯಯನ ಇಂದು:  ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಶಾಸಕರಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಮುಖಂಡ ಡಾ.ಎಂ.ನಾಗರಾಜ ಅವರನ್ನು  ಒಳಗೊಂಡ  ಬರ ಅಧ್ಯಯನ ತಂಡ ಇದೇ 3ರಂದು ಜಿಲ್ಲೆಗೆ ಭೇಟಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT