ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಸಚಿವ ಮಹದೇವಪ್ರಸಾದ್‌ ಹೃದಯಾಘಾತದಿಂದ ಸಾವು

Last Updated 3 ಜನವರಿ 2017, 13:17 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ (59) ಮಂಗಳವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಗರದ ಹೊರವಲಯದ ಸೆರಾಯ್‌ ರೆಸಾರ್ಟ್‌ನಲ್ಲಿ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ ಲೇಖಕಿ ಡಾ.ಗೀತಾ ಪ್ರಸಾದ್‌ ಮತ್ತು ಪುತ್ರ ಕೈಗಾರಿಕೋದ್ಯಮಿ ಗಣೇಶ್‌ ಪ್ರಸಾದ್‌ ಇದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಹೋಬಳಿಯ ಹಾಲಹಳ್ಳಿ ಗ್ರಾಮ ಅವರ ಹುಟ್ಟೂರು. ಮೈಸೂರಿನ ಕುವೆಂಪು ನಗರದಲ್ಲಿ ಸಚಿವರ ಕುಟುಂಬ ನೆಲೆಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಾಪ್ತರಾಗಿದ್ದ ಮಹದೇವಪ್ರಸಾದ್‌ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಯ ರಜತ ಮಹೋತ್ಸವದಲ್ಲಿ ಭಾಗವಹಿಸಲು ಸಚಿವರು ಸೋಮವಾರ ರಾತ್ರಿಯೇ ನಗರಕ್ಕೆ ಬಂದಿದ್ದರು. ಆಪ್ತ ಸ್ನೇಹಿತರೊಬ್ಬರ ಮನೆಯಲ್ಲಿ ರಾತ್ರಿ ಊಟ ಮಾಡಿಕೊಂಡು, ಮೂಕ್ತಿಹಳ್ಳಿ ಸಮೀಪದಲ್ಲಿರುವ ಉದ್ಯಮಿ ಸಿದ್ಧಾರ್ಥ ಹೆಗ್ಡೆ ಒಡೆತನದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಸಚಿವರ ಜತೆಗೆ ಬಂದಿದ್ದ ಅವರ ಇಬ್ಬರು ಆಪ್ತ ಸ್ನೇಹಿತರಾದ ಮಾರ್ಕೆಟ್‌ ಫೆಡರೇಷನ್‌ ನಿರ್ದೇಶಕ ಹಾಗೂ ಸಿನಿಮಾ ನಿರ್ಮಾಪಕ ವೈ.ಎನ್‌.ಶಂಕರೇಗೌಡ ಮತ್ತು ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷ ನಾಜೀಮ್‌ವುದ್ದೀನ್‌ ಇನ್ನೊಂದು ಕೊಠಡಿಯಲ್ಲಿ ತಂಗಿದ್ದರು. ಕಾರ್ಯಕ್ರಮಕ್ಕೆ ಹೊರಡುವ ಸಮಯ ಕಳೆಯದರೂ ಅವರು ಕೊಠಡಿಯಿಂದ ಹೊರ ಬರದಿದ್ದಾಗ ಅನುಮಾನಗೊಂಡು ಅವರ ಸ್ನೇಹಿತರು, ಬೆಳಿಗ್ಗೆ 9 ಗಂಟೆ ಸುಮಾರಿಗೆ ರೆಸಾರ್ಟ್‌ ಸಿಬ್ಬಂದಿಯಿಂದ ಬಾಗಿಲು ತೆರೆಸಿದ್ದಾರೆ.

ಮಲಗಿದ ಹಾಸಿಗೆಯಲ್ಲೇ ಸಚಿವರು ಚಿರನಿದ್ರೆಗೆ ಜಾರಿರುವುದು ಕಂಡುಬಂದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಇಬ್ಬರು ಸರ್ಕಾರಿ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ತಂಡ ಸಚಿವರು ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಖಚಿತಪಡಿಸಿದ ನಂತರ, ಜಿಲ್ಲಾಧಿಕಾರಿ ಜಿ.ಸತ್ಯವತಿ ಸಚಿವರ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸ್ಥಳದಲ್ಲಿ ಜಮಾಯಿಷಿದರು. ರೆಸಾರ್ಟ್‌ ಆವರಣದಲ್ಲಿ ಕೆಲ ಕಾಲ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತಿ. ಜಿಲ್ಲಾ ಶಸಸ್ತ್ರ ಪಡೆ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಗೌರವ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು 10 ನಿಮಿಷ ಕಾಲ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಸಚಿವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಮಧ್ಯಾಹ್ನ 12.10ರ ಸುಮಾರಿಗೆ ಅಂಬುಲೆನ್ಸ್‌ನಲ್ಲೇ ಸಚಿವರ ಪಾರ್ಥಿವ ಶರೀರವನ್ನು ಬೇಲೂರು ಮಾರ್ಗವಾಗಿ ಮೈಸೂರಿಗೆ ಕೊಂಡೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT