ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ಚೆಂದ ಮಿತ್ರಬಂಧ!

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ

ಮಾನವನನ್ನು ಸಂಘಜೀವಿ ಎನ್ನುತ್ತಾರೆ. ಈ ದೃಷ್ಟಿಯಿಂದ ಜಗತ್ತಿನಲ್ಲಿ ಪರಕೀಯರು ಯಾರೂ ಇಲ್ಲ. ಜಗತ್ತೆಂಬ ನಿಲುವುಗನ್ನಡಿಯಲ್ಲಿ ನಾವು ಮುಗುಳ್ನಕ್ಕರೆ ಅಲ್ಲಿ ಪ್ರತಿ ಮುಗುಳ್ನಗೆ ಮೂಡದಿರುತ್ತದೆಯೆ? ನಾವು ನಮಸ್ಕರಿಸಿದರೆ ಪ್ರತಿ ನಮಸ್ಕಾರ ಮಾಡದಿರುವವರಾರು? ಯೇಟ್ಸ್ ಕವಿ ಹೀಗೆನ್ನುತ್ತಾನೆ: ‘ಇಲ್ಲಿ ಯಾರೂ ಅಪರಿಚಿತರಿಲ್ಲ; ಎಲ್ಲರೂ ಗೆಳೆಯರೇ, ಆದರೆ ನೀವು ಭೇಟಿಯಾಗಿರದ ಗೆಳೆಯರು ಅಷ್ಟೆ’ (There are no strangers here; On*y friends you haven't yet met).

ಬದುಕನ್ನು ಸಹನೀಯವೂ ಸುಂದರವೂ ಆಗಿಸುವಂತಹವು ಸ್ನೇಹ-ಸಂಬಂಧಗಳು. ಹೀಗೆ ಮನುಷ್ಯನನ್ನು ಸಮಾಜದಲ್ಲಿ ಒಂದಾಗಿಸುವುದು ಎರಡು ಕೊಂಡಿಗಳು. ಒಂದು ಗೆಳೆಯರ ಗುಂಪು, ಮತ್ತೊಂದು ಸಂಬಂಧಿಗಳ ಗುಂಪು. ಹಾಗೇ ‘ನೆಂಟರಿಷ್ಟರು’ ಎಂಬ ಪದವನ್ನು ಬಿಡಿಸಿದಾಗ ‘ನೆಂಟರು’ ಬೇರೆ, ‘ಇಷ್ಟರು’ ಬೇರೆ ಎಂಬ ಅರ್ಥ ಗೋಚರಿಸುತ್ತದಾದರೂ ಇವರಿಬ್ಬರೂ ನಮ್ಮೊಂದಿಗೆ ಇರುವುದು ಅನಿವಾರ್ಯ ಎಂಬುದನ್ನೂ ಸೂಚಿಸುತ್ತದೆ.

‘ನೆಂಟರಿಷ್ಟರ’ ಸಂಬಂಧ ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ಗಮನಿಸೋಣ. ಬಂಧುತ್ವ ಉಂಟಾಗುವದೇ ರಕ್ತವಾಹಿನಿಯಿಂದ - ಅವರೇ ರಕ್ತಸಂಬಂಧಿಗಳು. ಇಲ್ಲಿ ಆಯ್ಕೆಗೆ ಅವಕಾಶವಿಲ್ಲ. ನಾವು ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿಯರನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ. ಅವೆಲ್ಲ ಪೂರ್ವಸ್ಥಾಪಿತ ಸಂಬಂಧಗಳು. ಆದರೆ ಗೆಳೆಯರನ್ನು ಮಾತ್ರ ಆಯ್ದುಕೊಳ್ಳುವ ಮುಕ್ತ ಅವಕಾಶ ನಮಗಿದೆ.

ಸ್ನೇಹಕ್ಕೆ ಯಾವ ಮಾನದಂಡಗಳೂ ಇಲ್ಲ. ಸಂಬಂಧ-ಸಂಬಂಧಿಗಳಲ್ಲಿ ಆಯಾ ವ್ಯಕ್ತಿಗೆ ಆ ಪಾತ್ರ, ಜವಾಬ್ದಾರಿ ನಿರ್ದಿಷ್ಟ, ಸ್ಪಷ್ಟ. ತಂದೆಯೆಂಬುವವನು ಮನೆಯಲ್ಲಿದ್ದರೂ ತಂದೆಯೇ ಹೊರಗೆ ಸಮಾರಂಭದಲ್ಲಿದ್ದರೂ ತಂದೆಯೇ. ಆದರೆ ಗೆಳೆತನದ ಭಾವ ಸಂಚಾರಿಭಾವ; ಅದು ಬಹಳ ರೂಪಾಂತರ ಹೊಂದಿ ಮನಸ್ಸಿಗೆ ಮುದವನ್ನೂ ಬದುಕಿಗೆ ಒತ್ತಾಸೆಯನ್ನೂ ನೀಡುವಂತಹದ್ದು. ಗೆಳೆಯ ತರಗತಿಯಲ್ಲಿದ್ದಾಗ ಸಹಪಾಠಿ, ಹೊರಗೆ ಆಟದಲ್ಲಿ ಜೊತೆಗಾರ, ಮೋಜಿನಲ್ಲಿ ಬಾಜಿಗಾರ; ಹೀಗೆ ವೈವಿಧ್ಯವುಂಟು ಗೆಳೆತನದಲ್ಲಿ.

ಹೀಗಾಗಿ ಸ್ನೇಹ ಎಂಬುದು ನಿತ್ಯನೂತನ. ಇಲ್ಲಿ ವ್ಯಕ್ತಿಗಳ ನಡುವಣ ಭಾವವಿನಿಮಯಕ್ಕೆ, ಆತ್ಮೀಯತೆಗೆ ಚೌಕಟ್ಟೇ ಇಲ್ಲ! ಸ್ನೇಹಸಂಬಂಧ ಇಳಿದಷ್ಟೂ ಆಳ, ಭಾವಿಸಿದಷ್ಟೂ ಅಗಲ, ಸವಿದಷ್ಟೂ ಸಿಹಿ! ಒಬ್ಬ ಆತ್ಮೀಯ ಗೆಳೆಯನಿದ್ದುಬಿಟ್ಟರೆ ಬಂಧುಗಳೆಲ್ಲರ ಭಾವನಷ್ಟವನ್ನು ಅವನೇ ತುಂಬಿಕೊಡಬಲ್ಲ. ‘ಗಂಟಿದ್ದಾಗ ನೆಂಟರು’ – ಎಂಬ ಮಾತೇ ಇದೆ.

ಆದರೆ ನಿಜವಾದ ಗೆಳೆತನದ ಪರೀಕ್ಷೆಯಾಗುವುದೂ ಕಷ್ಟಕಾಲದಲ್ಲೇ ಎಂಬುದೂ ಅಷ್ಟೇ ನಿಜ. ನಾವು ಸಾಮಾನ್ಯವಾಗಿ ಹೊಂದಿರುವ ಬಂಧುಗಳ ಗುಂಪಿನಲ್ಲಿ ಆಪತ್ತಿಗೆ ಒದಗುವವರು ಒಬ್ಬರೋ ಇಬ್ಬರೋ ಅಷ್ಟೆ. ಸ್ನೇಹಿತರಲ್ಲೂ ಕಷ್ಟಕ್ಕಾಗುವವರು ಕೆಲವೇ ಮಂದಿ.

ಆದರೆ ಒಮ್ಮೆ ಗೆಳೆತನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಬಿಟ್ಟರೆ ಅವರನ್ನು ನಮ್ಮ ಆತ್ಮಕ್ಕೆ ಬಂಧಿಸಿಕೊಂಡುಬಿಡಬೇಕು – ಎನ್ನುತ್ತಾನೆ ಶೇಕ್ಸ್‌ಪಿಯರ್. ಅವನ ಪ್ರಸಿದ್ಧ ಹ್ಯಾಮ್ಲೆಟ್ ನಾಟಕದ ಪೊಲೊನಿಯಸ್ ತನ್ನ ಮಗ ಲಿಯಾರ್ಟೆಗೆ ಹೇಳುವ ಬುದ್ಧಿವಾದದ ಮಾತುಗಳು ಹೀಗಿವೆ: ‘ನಿನಗಿರುವ ಮಿತ್ರರಲ್ಲಿ, ಅವರು ಮಿತ್ರರೆಂಬುದು ಖಚಿತವಾದ ಬಳಿಕ ಅವರನ್ನು ನಿನ್ನ ಆತ್ಮಕ್ಕೆ ಕಬ್ಬಿಣದ ಪಟ್ಟಿಗಳಿಂದ ಬಂಧಿಸಿಕೊಂಡುಬಿಡು.’ [Those friends thou hast, and their adoption tried, Grapp*e them unto thy sou* with hoops of stee* (Ham*et 1.3.62-3).]

ಗೆಳೆತನ ಎನ್ನುವುದು ಕೇವಲ ಮೋಜು–ಮಸ್ತಿಗಾಗಿ ಎನ್ನುವವರ ಗೆಳೆತನ ನಿಜವಾದ ಗೆಳೆತನ ಅಲ್ಲವೇ ಅಲ್ಲ. ಗೆಳೆಯನಿಗೆ ಜವಾಬ್ದಾರಿಗಳಿವೆ. ನಿಜವಾದ ಮಿತ್ರನಿಗೆ ಆದರ್ಶವಾಗಿ ಕಂಗೊಳಿಸುವವನು ಅಮಾತ್ಯರಾಕ್ಷಸನ ಗೆಳೆಯ ಚಂದನ. ತನ್ನ ಇಹಪರಗಳೆರಡನ್ನು ಪಣವಿಟ್ಟು ಅಮಾತ್ಯನನ್ನು ಉಳಿಸಲು ಪ್ರಯತ್ನಿಸುತ್ತಾನೆ ಅವನು.

‘ಗೆಳೆತನವೆನ್ನುವುದು ಒಂದು ಸಿಹಿಯಾದ ಜವಾಬ್ದಾರಿಯೇ ಹೊರತು ಅದೆಂದೂ ಅವಕಾಶವಾದಿತನವಲ್ಲ’ ಎನ್ನುತ್ತಾನೆ ಖಲೀಲ್ ಗಿಬ್ರಾನ್. (Friendship is a*ways a sweet responsibi*ity, never an opportunity).  ಏಳು–ಬೀಳುಗಳ ಹಾದಿಯಲ್ಲಿ ಗೆಳೆಯನನ್ನು ಮುನ್ನಡೆಸುತ್ತಾ ಸಾಗಿದಾಗಲೇ ಆ ಗೆಳೆತನಕ್ಕೊಂದು ಅರ್ಥ. ಈ ಜವಾಬ್ದಾರಿ ಹೊರಬಲ್ಲ ಹೆಗಲುಗಳನ್ನು ಹುಡುಕುವುದರಲ್ಲೇ ನಮ್ಮ ಆರಂಭದ ಬದುಕು ಕಳೆದುಹೋಗುತ್ತದೆ.

ಇಲ್ಲಿ ಮತ್ತೊಂದು ಮುಖ್ಯವಾದ ಅಂಶವಿದೆ. ನಮಗೆ ಉತ್ತಮ ಗೆಳೆಯರಿಲ್ಲ ಎಂದು ಕೊರಗುವವರಿದ್ದರೆ, ಅವರು ಸ್ವತಃ ತಾವು ಯಾರಿಗೆ ಉತ್ತಮ ಗೆಳೆಯರಾಗಿದ್ದಾರೆ ಎಂದು ಪ್ರಶ್ನಿಸಿಕೊಳ್ಳುವುದು ಒಳ್ಳೆಯದು. ಮತ್ತೊಬ್ಬರ ಹೆಗಲನ್ನು ಬೇಡುವ ಮೊದಲು ನಮ್ಮ ಹೆಗಲು ಯಾರಿಗೆ ಆಶ್ರಯವಾಗಿದೆ ಎಂದು ಯೋಚಿಸಬೇಕಾದ್ದು ಉತ್ತಮವಲ್ಲವೆ? ಯಾವುದೇ ಬಂಧ; ಅದು ರಕ್ತಸಂಬಂಧವಾಗಿರಲಿ ಅಥವಾ ಸ್ನೇಹಸಂಬಂಧವಾಗಿರಲಿ, ಅದು ದ್ವಿಮುಖವಾದ್ದು ಸಾಪೇಕ್ಷವಾದದ್ದು ಎಂಬುದನ್ನು ಗಮನಿಸಬೇಕು.

ನಾವು ಯಾವ ಬಗೆಯ ಮಿತ್ರಪ್ರೇಮವನ್ನಾಗಲೀ, ಮಿತ್ರತ್ವದ ಇತರ ಗುಣಗಳನ್ನಾಗಲೀ ಅಪೇಕ್ಷಿಸುತ್ತೇವೋ ಅದನ್ನು ನೀಡಲು ನಾವೂ ಸಿದ್ಧರಿರಬೇಕು. ಪೊಳ್ಳುಸ್ನೇಹ ಬಾಳದು.

ಗೆಳೆತನದ ಮಹತ್ವ ಇರುವುದೂ ಇಲ್ಲೇ. ಅದು ಎಷ್ಟು ಸುಲಭವೋ ಅಷ್ಟೇ ದುರ್ಬಲವೂ ಹೌದು. ಹೀಗಾಗಿ ಪರಿಚಿತರು ಉದುರಿಹೋಗಿ ನಿಜವಾದ ಗೆಳೆಯರು ಮಾತ್ರ ಕೊನೆಯಲ್ಲಿ ಉಳಿದುಕೊಳ್ಳುತ್ತಾರೆ. ಏನೇ ಆದರೂ ನಮಗೆ ತಕ್ಕಂತಹ ಗೆಳೆಯರು ಈ ಜಗತ್ತಿನಲ್ಲಿ ಖಂಡಿತ ಇರುತ್ತಾರೆ.

ರಾಮನಿಗೆ ಸುಗ್ರೀವನಿದ್ದಂತೆ, ದುರ್ಯೋಧನನಿಗೆ ಕರ್ಣನಿದ್ದನಲ್ಲವೆ?! ಸ್ವಲ್ಪ ಹೊರಮುಖವಾಗಿ ನಡೆದುಕೊಂಡರೆ ಸಾಕು ನಮ್ಮ ಮನಕೊಪ್ಪುವ ಮಿತ್ರರು ನಮಗೆ ದೊರೆಯುತ್ತಾರೆ. ಮಿತ್ರತ್ವದ ಸ್ಥಾಪನೆಗೂ ಒಂದು ಕಾಲ, ಸಂದರ್ಭ ಬೇಕು. ಪರಿಚಿತರೆಲ್ಲ ಮಿತ್ರರಾಗಲಾರರು. ಕಾಲದ ಕಠಿಣ ಕುಲಮೆಯಲ್ಲಿ ಈ ಗೆಳೆತನವೆಂಬ ಸಂಬಂಧ ಕೆನೆಗಟ್ಟಬೇಕು. ಇದಕ್ಕೆ ಸಮಯಾವಕಾಶವೂ ಬೇಕು. ಕೆಲವೊಮ್ಮೆ ಜೀವನವಿಡೀ ನಮ್ಮೊಂದಿಗಿದ್ದವರು ನಮ್ಮ ಅಂತರಂಗದ ಹೊರವಲಯದಲ್ಲೇ ಉಳಿದುಬಿಡಬಹುದು.

ಇನ್ನು ಕೆಲವೊಮ್ಮೆ ಹಲವರು ಪರಿಚಯವಾದ ಕೆಲವೇ ದಿನಗಳಲ್ಲಿ ನಮ್ಮ ಆತ್ಮೀಯವಲಯ ಸೇರಿ ಮಿತ್ರರಾಗಿ ಉಳಿಯಬಹುದು. ತೀರಾ ಎಳವೆಯ ಗೆಳೆತನ ಆಟಕೂಟಗಳಿಗಷ್ಟೆ ಸೀಮಿತ. ಆದರೆ ಕಿಶೋರ/ಯುವ ವಯಸ್ಸಿನ ವೇಳೆಗೆ ಒಂದಷ್ಟು ಉತ್ತಮ ಗೆಳೆಯರನ್ನು ಸಂಪಾದಿಸಿಕೊಂಡಿರದಿದ್ದರೆ ಬದುಕು ಬರಡಾದಂತೆ.

ಜೀವನದ ಸೊಗಸನ್ನು ಅನಭವಿಸಲು ಹಂಚಿಕೊಳ್ಳಲು ಉತ್ತಮ ಗೆಳೆಯ ಗೆಳತಿಯರಿರಬೇಕು. ಇಂದಿನ ಜನಾಂಗದ ಕೊರತೆ ಎದ್ದುಕಾಣುತ್ತಿರುವುದೇ ಈ ನಿಟ್ಟಿನಲ್ಲಿ.  ತಮ್ಮ ಮೊಬೈಲ್ ಲ್ಯಾಪ್‌ಟಾಪ್‌ಗಳನ್ನು ಬದಲಿಸಿದಂತೆ ಮಿತ್ರರನ್ನು ಬದಲಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಬಹು ಬೇಗ ಅರಿತರೆ ಒಳ್ಳೆಯದು.

ಇಂದು ಜೀವಯಾನದಲ್ಲಿ ಆತ್ಮೀಯತೆಯನ್ನು ಸ್ಥಾಪಿಸಿಕೊಳ್ಳಲಾಗದಷ್ಟು ವೇಗವಾಗಿಬಿಟ್ಟಿದೆಯೆ ಬದುಕಿನ ಗತಿ ಎಂಬ ಸಂದೇಹ ಕಾಡುತ್ತದೆ. ಕಾಲೇಜನ್ನು ದಾಟುವ ವಯಸ್ಸಾದರೂ ಇನ್ನೂ ಒಬ್ಬ ಆತ್ಮೀಯ ಮಿತ್ರ ಇಲ್ಲ ಎಂದಾದರೆ ಎಲ್ಲೋ ನಾವು ಎಡವಿದ್ದೇವೆ ಎಂದರ್ಥ.

ನಿಮ್ಮ ಆತ್ಮೀಯ ಮಿತ್ರರು ನಾಲ್ವರ ಹೆಸರು ಹೇಳಿರೆಂದರೆ ಹೇಳಬಲ್ಲವರೆಷ್ಟು ಮಂದಿ? ಸತ್ಯವಾಗಿಯೂ ಭಾವಿಸಿ, ನಮಗೆಷ್ಟು ಜನ ಮಿತ್ರರಿದ್ದಾರೆ ಎಂದು. ಒಬ್ಬರಿದ್ದರೆ ನಾವು ಭಾಗ್ಯಶಾಲಿಗಳು, ಇಬ್ಬರಿದ್ದರೆ ನಿಜವಾಗಿಯೂ ಪುಣ್ಯವಂತರು, ಮೂವರಿದ್ದಾರೆ ಎಂದರೆ ಸಂದೇಹ ಉಂಟಾಗುತ್ತದೆ, ನಾಲ್ಕು-ಐದು ಜನರಿದ್ದಾರೆ ಎಂದರೆ ಅದು ಸುಳ್ಳು!

ಹೌದು, ಪರಿಚಿತರು, ಸಹಪಾಠಿಗಳು, ಸಹೋದ್ಯೋಗಿಗಳು ಇವರೆಲ್ಲರ ಮಿತ್ರತ್ವ ಸೀಮಿತ ವಲಯಕ್ಕೆ, ಮಿತ ತರಂಗಕ್ಕೆ, ವಿಹಿತ ಕಕ್ಷೆಗೆ ಸೇರಿದ್ದು. ಆದರೆ ನಿಜವಾದ ಮಿತ್ರ ನಮ್ಮ ಅಂತರಂಗದ ಬೈಠಕ್ ಖಾನೆಯಲ್ಲಿ ಕುಳಿತುಕೊಳ್ಳುವವನು. ಇಂತಹವರು ಒಬ್ಬಿಬ್ಬರಿದ್ದರೆ ಅದು ನಮ್ಮ ಪುಣ್ಯ. ಕೃಷ್ಣನಿಗೆ ಎಷ್ಟೆಲ್ಲ ಜನಸಂಪರ್ಕ, ಅವನ ಸುತ್ತ ಏನೆಲ್ಲ ಮಾನವಸಂಬಂಧಗಳ ವ್ಯೂಹ. ಆದರೆ ಅವನಿಗೆಷ್ಟು ಮಿತ್ರರು?! ಒಬ್ಬನೇ. ಅವನು ಸಖ, ಆತ್ಮಸಖ ಅರ್ಜುನ! ನಮಗೆ ಇಬ್ಬರು ಮಿತ್ರರಿದ್ದಾರೆ ಎಂದರೆ ಅದೇ ನಮ್ಮ ಪುಣ್ಯ ಎಂದು ಭಾವಿಸಬೇಕಾದ್ದು ಈ ಕಾರಣಕ್ಕೆ.

ನಮ್ಮ ಭಾವವಿಕಾಸಕ್ಕೂ ಮಾನಸಿಕ ಬೆಳವಣಿಗೆಗೂ ಪೂರಕವಾಗುವುದು ಮಾನವೀಯ ಪ್ರೀತಿ-ವಿಶ್ವಾಸಗಳು. ಇವು ದೊರಕುವುದೂ ಬಂಧು-ಮಿತ್ರರಿಂದಲೇ. ಬಂಧುಗಳಲ್ಲಿ ನಮ್ಮ ಬಗ್ಗೆ ನಿರೀಕ್ಷೆ, ಸ್ಪರ್ಧೆ, ಈರ್ಷಾಸೂಯೆಗಳು ಇರುತ್ತವೆ. ಎಲ್ಲ ಕ್ಷೇತ್ರಗಳಲ್ಲಿ ನಮ್ಮನ್ನು ಮೀರಿ ಬೆಳೆಯಬೇಕೆಂಬ ಹಂಬಲ ಹುನ್ನಾರ ಬಂಧುಗಳಲ್ಲಿ.

ದಾಯಾದಿ ಮಚ್ಚರವೆಂಬ ಮಾತೇ ಇದೆ. ಹಾಗೆಂದ ಮಾತ್ರಕ್ಕೆ ಅವರಿಲ್ಲದ ಬದುಕು ಇರಲು ಸಾಧ್ಯವೂ ಇಲ್ಲ. ಆದರೆ ಆ ಸಂಬಂಧಕ್ಕೊಂದು ಮಿತಿಯಿದೆ ಸ್ವಾರ್ಥದ ಲೇಪವಿದೆ ಎಂಬುದಂತೂ ಅಲ್ಲಗಳೆಯಲಾಗದ ಸತ್ಯ. ಇತ್ತ ಸ್ನೇಹಿತರಲ್ಲಿ ಸ್ಪರ್ಧೆಯಿದ್ದರೂ ಅಲ್ಲಿ ಸೋತರೂ ಅಷ್ಟೇನು ನಷ್ಟವಿಲ್ಲ ಎನಿಸುವುದು ಸಾಮಾನ್ಯ ಅನುಭವ. ನಿಜವಾದ ಗೆಳೆತನದಲ್ಲಿ ಆರೋಗ್ಯಕಾರಿಯಾದ ಸ್ಪರ್ಧೆಯಿರುತ್ತದೆ. ನಿಜವಾದ ಗೆಳೆಯರು ಒಬ್ಬರು ಮತ್ತೊಬ್ಬರ ಗೆಲುವಿಗೆ ಆಸರೆಯಾಗಿ ನಿಂತು, ಗೆದ್ದಾಗ ಅಭಿನಂದಿಸುತ್ತಾರೆ.

ವಿರೋಧಗಳನ್ನು ಭಿನ್ನಾಭಿಪ್ರಾಯಗಳನ್ನು ಬಂಧುಗಳು ಪರಿಹರಿಸಿಕೊಳ್ಳುವ ಬಗೆ ಬೇರೆ, ಸ್ನೇಹಿತರು ಬಗೆಹರಿಸಿಕೊಳ್ಳುವ ಬಗೆ ಬೇರೆ. ಮೊದಲನೆಯದು ಬೂದಿಮುಚ್ಚಿದ ಕೆಂಡದಂತೆ ಅಥವಾ ಶಾಂತಗೊಂಡ ಅಗ್ನಿಪರ್ವತದಂತೆ. ಸಮಯ ಬಂದಾಗ ಉರಿ ಕಕ್ಕುತ್ತದೆ ಅಥವಾ ಸ್ಫೋಟಿಸುತ್ತದೆ. ಗೆಳೆಯರ ಜಗಳ ಮುಂಗಾರಿನ ಗುಡುಗಿನಂತೆ; ಹಿಂದೆಯೇ ತಣ್ಣನೆಯ ಪ್ರೀತಿಯ ಮಹಾವರ್ಷ.

ಅಕಸ್ಮಾತ್ ಆ ಗೆಳೆಯನ ಗೆಳೆತನ ಹಾರಿ ಹಗೆತನ ಬೆಳೆಯಿತೆಂದರೆ ಅವನೆಂದೂ ನಮ್ಮ ಗೆಳೆಯನಾಗೇ ಇರಲಿಲ್ಲ ಎಂದು ಭಾವಿಸತಕ್ಕದ್ದು. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗದ ಗೆಳೆತನ ಇದ್ದರೆಷ್ಟು ಬಿಟ್ಟರೆಷ್ಟು? ಬಂಧುಗಳಿರಬೇಕು ಬಾಂಧವ್ಯಕ್ಕೆ, ಆದರೆ ಬಂಧುಗಳೊಡನೆ ಎಲ್ಲವನ್ನೂ ಹಂಚಿಕೊಳ್ಳಲಾಗುವುದಿಲ್ಲ; ಅಲ್ಲಿ ಯಾವುದೋ ಭಯ, ಏನೋ ಸಂಕೋಚ.

ಯಾವ ಕ್ಷಣದಲ್ಲಿ ನಮ್ಮ ಮಾತುಗಳು ನಮಗೇ ತಿರುಗು ಬಾಣವಾಗುತ್ತವೋ ಎಂಬ ಭಯ. ನಮ್ಮ ಮಾತಿನ ಕುಣಿಕೆಯಲ್ಲಿ ನಮ್ಮನ್ನೇ ಬಂಧಿಸುವ ಗುಪ್ತ ಹುನ್ನಾರದ ಅಡ್ಡವಾಸನೆ ಅಲ್ಲಿ ಬಡಿಯುತ್ತಲೇ ಇರುತ್ತದೆ. ಆದರೆ ನಾವು ಗೆಳೆಯರೊಡನೆ ಹಂಚಿಕೊಳ್ಳದ ವಿಚಾರವೇ ಇಲ್ಲ; ಇಲ್ಲಿ ನಿರ್ಭೀತಿ, ನಿಸ್ಸಂಕೋಚ. ನಮ್ಮ ದೌರ್ಬಲ್ಯಗಳನ್ನೂ ತೋಡಿಕೊಂಡು ಸಾಂತ್ವನವನ್ನು ಪಡೆಯುತ್ತೇವೆ ಗೆಳೆಯರಲ್ಲಿ.

ನಿಜವಾದ ಗೆಳೆಯ ಜೊತೆಗಿದ್ದರೆ ಜಗತ್ತನ್ನೇ ಗೆಲ್ಲುವ ವಿಶ್ವಾಸ, ಧೈರ್ಯ ಇರುತ್ತದೆ. ಗೆಳೆಯರೇ ಬಂಧುಗಳಾಗಿಬಿಟ್ಟರೆ?! ಹಾಗಾಗದಿರುವುದೇ ಒಳಿತು. ಏಕೆಂದರೆ ಸ್ನೇಹದ ಪರಿಧಿ ಅನಂತ, ಬಂಧುತ್ವದ ಪರಿಧಿ ನಿಷ್ಕರ್ಷಿತ. ಇದೀಗ ಹೊಸ ವರ್ಷ ಆರಂಭವಾಗಿದೆ. ಎಲ್ಲರಿಗೂ ಅತ್ಯುತ್ತಮ ಗೆಳೆಯ-ಗೆಳತಿಯರು ದೊರೆಯಲಿ, ನಿಜವಾದ ಗೆಳೆತನದ ಪ್ರೀತಿ-ವಿಶ್ವಾಸಗಳ ತಂಬೆಲರು ಎಲ್ಲರ ಬಾಳಿನುದ್ದಕ್ಕೂ ಪಸರಿಸಲಿ.

ಸ್ನೇಹ ಎಂದರೆ...
* ಗೆಳೆತನ ಎನ್ನುವುದು ಕೇವಲ ಮೋಜು–ಮಸ್ತಿಗಾಗಿ ಅಲ್ಲ.

* ಏಳು–ಬೀಳುಗಳ ಹಾದಿಯಲ್ಲಿ ಗೆಳೆಯನನ್ನು ಮುನ್ನಡೆಸುತ್ತಾ ಸಾಗಿದಾಗಲೇ ಆ ಗೆಳೆತನಕ್ಕೊಂದು ಅರ್ಥ.

* ಪರಿಚಿತರೆಲ್ಲ ಮಿತ್ರರಾಗಲಾರರು.

* ಕೆಲವೊಮ್ಮೆ ಜೀವನವಿಡೀ ನಮ್ಮೊಂದಿಗಿದ್ದವರು ನಮ್ಮ ಅಂತರಂಗದ ಹೊರವಲಯದಲ್ಲೇ ಉಳಿದುಬಿಡಬಹುದು.

* ಜೀವನದ ಸೊಗಸನ್ನು ಅನಭವಿಸಲು ಉತ್ತಮ ಗೆಳೆಯ ಗೆಳತಿಯರಿರಬೇಕು.

* ನಿಜವಾದ ಗೆಳೆತನದಲ್ಲಿ ಆರೋಗ್ಯಕಾರಿಯಾದ ಸ್ಪರ್ಧೆಯಿರುತ್ತದೆ.

* ಗೆಳೆತನದ ನಡುವೆ ನನ್ನದು ನಿನ್ನದು ಎಂಬ ಭಾವ ಸಲ್ಲದು.

* ತೀರಾ ಆತ್ಮೀಯ ಗೆಳೆಯರ ನಡುವೆಯೂ ಹಣದ ವ್ಯವಹಾರ ಸಲ್ಲದು.

* ಸ್ನೇಹಿತರ ನಡುವೆ ಔಪಚಾರಿಕತೆ ಬೇಡ.

* ಸ್ನೇಹಿತರ ನಡುವೆ ಚರ್ಚೆ ಇರಲಿ.

* ಸ್ನೇಹಿತರ ನಡುವೆ  ಭಯ, ಸಂಕೋಚಕ್ಕೆ ಆಸ್ಪದವಿರದಿರಲಿ.

* ಸ್ನೇಹಿತರ ಮೇಲೆ ಅನುಮಾನ ಪಡಬೇಡಿ.

(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT