ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ ಐಲ್‌’

ಪಿಚ್ಚರ್ ನೋಡಿ
Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ

ಕ್ರೌರ್ಯವನ್ನೇ ವೈಭವೀಕರಿಸಿಕೊಂಡು ರೂಪುಗೊಳ್ಳುವ ಸಿನಿಮಾಗಳಿಗೆ ಯಾವ ಕಾಲದಲ್ಲಿಯೂ ಬರವಿಲ್ಲ. ಆದರೆ ಅವುಗಳಲ್ಲಿ ಆ ಕ್ಷಣದ ರೋಚಕತೆಯನ್ನು ಮೀರಿ ಮನಸ್ಸಿನ ಆಳದಲ್ಲಿ ಉಳಿಯುವ ಚಿತ್ರಗಳು ವಿರಳ. ದಕ್ಷಿಣ ಕೊರಿಯಾದ ಕಿಮ್‌ ಕಿ ಡುಕ್‌ನ ‘ದ ಐಲ್‌’ ಸಿನಿಮಾ ಈ ಕಾರಣಕ್ಕೇ ಅಪರೂಪ, ವಿಶಿಷ್ಟ ಅನ್ನಿಸಿಕೊಳ್ಳುವುದು.

‘ದ ಐಲ್‌’ ಸಿನಿಮಾ ಮನುಷ್ಯನ ಮನಸ್ಸಿನೊಳಗಿನ ಕ್ರೌರ್ಯವನ್ನು ಹಸಿಹಸಿಯಾಗಿ ಬಿಚ್ಚಿಡುವ ರೀತಿ ಎಂಥವರನ್ನೂ ಬೆಚ್ಚಿಬೀಳಿಸುವ ಹಾಗಿದೆ. ಆದರೆ ಹಾಗೆ ಬೆಚ್ಚಿಬೀಳಿಸಿ ಸುಮ್ಮನಾಗದೇ ಅದು ಮನುಷ್ಯನ ಮೂಲಭೂತ ಗುಣಗಳ ಶೋಧನೆಯ ಆಳಕ್ಕಿಳಿಯುವ ಕಾರಣಕ್ಕೆ ಇದು ನೆನಪಿಟ್ಟುಕೊಳ್ಳಬೇಕಾದ ಸಿನಿಮಾ.
ಫಿಷಿಂಗ್ ರೆಸಾರ್ಟ್‌ ನಿರ್ವಹಿಸುವ ಹೀ–ಜಿನ್‌ ಮಹಾಮೌನಿ. ನೀರಿನ ನಡುವೆ ತೇಲುವ ಮನೆಗಳಲ್ಲಿ ವಿಲಾಸದ ಸಮಯ ಕಳೆಯಲು ಬರುವ ಜನರನ್ನು ದಡದಿಂದ ಅಲ್ಲಿಗೆ ತಲುಪಿಸುವ ಕೆಲಸವನ್ನು ಅವಳು ಮಾಡುತ್ತಾಳೆ. ಮನಸ್ಸಿಗೆ ಬಂದಾಗ ಅವರಿಗೆ ಮೈಸುಖವನ್ನೂ ಉಣಿಸುತ್ತಾಳೆ.

ಒಮ್ಮೆ ಕೊಲೆ ಮಾಡಿ ಬಂದ ಅಪರಾಧಿಯೊಬ್ಬ ಆ ತೇಲುಮನೆಗೆ ಬಂದು ಸೇರಿಕೊಳ್ಳುತ್ತಾನೆ. ಆ ಮಹಾಮೌನಿ ಹೆಣ್ಣು ಮತ್ತು ಅವನ ನಡುವೆ ಅಮೂರ್ತ ಸಂಬಂಧವೂ ಬೆಳೆಯುತ್ತದೆ. ಈ ಸಂಬಂಧದ ನಡುವಿನ ಘರ್ಷಣೆ, ಆಕರ್ಷಣೆಗಳ ದ್ವಂದ್ವವನ್ನು ನಿರ್ದೇಶಕರು ಮೌನಭಾಷೆಯಲ್ಲಿಯೇ ಕಟ್ಟುತ್ತಾ ಹೋಗುತ್ತಾರೆ.

ಕಿಮ್‌ ಕಿ ಡುಕ್‌ ನಿರ್ದೇಶನದ ಸಿನಿಮಾಗಳಲ್ಲಿ ಮಾತು ಅತೀ ಎನ್ನುವಷ್ಟು ಕಮ್ಮಿ. ಈ ಸಿನಿಮಾದಲ್ಲಿಯೂ ಅವರು ದೃಶ್ಯ ಮತ್ತು ಹಿನ್ನೆಲೆ ಸಂಗೀತದ ಮೂಲಕವೇ ಮಾತಿಗೆ ಮೀರಿದ ಅನುಭವವನ್ನು ನೋಡುಗನ ಮನಸಲ್ಲಿ ಊರುತ್ತಾ ಹೋಗುತ್ತಾರೆ. ಹೀಗೆ ಮಾತಿಗೆ ಮೀರಿದ್ದನ್ನು ಹೇಳಹೊರಡುವುದರಿಂದಲೇ ಮನಸ್ಸಿನೊಳಗಿನ ಹಿಂಸೆಯನ್ನು ಹಸಿಹಸಿಯಾಗಿ ‘ಕಾಣಿಸುವ’ ದಾರಿಯನ್ನು ಅವರು ಆಯ್ದುಕೊಂಡಿದ್ದಿರಬಹುದು.

ಕೆಲವು ದೃಶ್ಯಗಳಂತೂ ತೆರೆಯ ಮೇಲೆ ನೋಡಲೂ ಕಷ್ಟವಾಗುವಷ್ಟು ವಿಜೃಂಭಿಸುತ್ತವೆ. ಆದರೆ ಇವನ್ನೆಲ್ಲ ಬಳಸಿಕೊಂಡು ನಿರ್ದೇಶಕರು ಕಟ್ಟುವ ಕಲಾಕೃತಿ ಮಾತ್ರ ಬಹಳ ಗಟ್ಟಿಯಾದದ್ದು. ನೆನಪಿನಲ್ಲಿ ಉಳಿಯುವಂಥದ್ದು.

‘ದ ಐಲ್‌’ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ goo.gl/88uaOR  ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT