ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಯಿ ಚರಿತ್ರೆ-1

ಹಣ: ಅಂದಿನಿಂದ ಇಂದಿನವರೆಗೆ
Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ

₹500 ಮತ್ತು ₹1000 ಮುಖಬೆಲೆಯ ಹಳೆಯ ನೋಟುಗಳನ್ನು ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲು ನಿಗದಿಪಡಿಸಿದ್ದ 50 ದಿನಗಳ ಗಡುವು ಮುಗಿದು ಐದಾರು ದಿನಗಳು ಕಳೆದವು. ದೇಶದಲ್ಲಿ ಸದ್ಯ ಡಿಜಿಟಲ್‌ ಹಣದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ನಗದುರಹಿತ, ಡಿಜಿಟಲ್‌ ಪಾವತಿ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾಣ್ಯ ರೂಪದಲ್ಲಿದ್ದ ರೂಪಾಯಿಯಿಂದ ಹಿಡಿದು, ನೋಟು, ನಂತರ ಡಿಜಿಟಲ್‌ ರೂಪಾಯಿವರೆಗೆ ಭಾರತದ ಅರ್ಥ ವ್ಯವಸ್ಥೆ ಸಾಗಿ ಬಂದ ಹಾದಿ ನಿಜಕ್ಕೂ ಕುತೂಹಲದ ಗಣಿ.

ಜಗತ್ತಿನ ಹಣದ ಇತಿಹಾಸದಲ್ಲಿ ಭಾರತದ ರೂಪಾಯಿಗೂ ಬಹು ಮುಖ್ಯ ಸ್ಥಾನ ಇದೆ. ಹಣದ ವಹಿವಾಟು ಚಾಲ್ತಿಗೆ ಬಂದ ದೇಶಗಳ ಪೈಕಿ ಭಾರತವೂ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಭಾರತದ ರೂಪಾಯಿಗೆ ದೊಡ್ಡ ಚರಿತ್ರೆಯೇ ಇದೆ. ಅದರದ್ದು 2500ರಿಂದ 3000 ವರ್ಷಗಳ ಸುದೀರ್ಘ ಇತಿಹಾಸ.

ಪ್ರಪಂಚದ ಬೇರೆ ಕಡೆಗಳಲ್ಲಿ ಇದ್ದಂತೆ ಆರಂಭದಲ್ಲಿ ಭಾರತದಲ್ಲೂ ಇದ್ದಿದ್ದು ಕೊಡು-ಕೊಳ್ಳುವ ವ್ಯವಸ್ಥೆಯೇ. ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಅಥವಾ ಪಡೆಯಲು, ತಮ್ಮಲ್ಲಿರುವ ವಸ್ತುಗಳನ್ನು ಕೊಡುತ್ತಿದ್ದರು. ಭಾರತದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣೆಗೆ ಬಂದಿದ್ದು ಕ್ರಿ.ಪೂ 6ನೇ ಶತಮಾನದಲ್ಲಿ (ಸರಿ ಸುಮಾರು ಇದೇ ಅವಧಿಯಲ್ಲಿ ಅತ್ತ ಚೀನಾದಲ್ಲಿ ಮತ್ತು ಮಧ್ಯಪ್ರಾಚ್ಯದ ಲಿಡಿಯಾದಲ್ಲಿ ನಾಣ್ಯಗಳು ಟಂಕಿಸಲು ಆರಂಭಿಸಿದ್ದವು).

ಪುರಾತನ ಭಾರತದಲ್ಲಿದ್ದ ಮಹಾಜನಪದರ ಆಡಳಿತ (ಮಗಧ, ಕುರು, ಪಾಂಚಾಲ, ಸೌರಾಷ್ಟ್ರ ಇತ್ಯಾದಿ) ನಾಣ್ಯಗಳನ್ನು ಚಲಾವಣೆಗೆ ತಂದಿತ್ತು. ಬೆಳ್ಳಿಯನ್ನು ಚಪ್ಪಟೆಯಾಗಿ ತಟ್ಟಿ ಅದರಲ್ಲಿ ಚಿತ್ರಗಳನ್ನು ಅಚ್ಚೊತ್ತಲಾಗಿತ್ತು. ಆ ಕಾಲಕ್ಕೆ ಅದನ್ನು ‘ಪುರಾಣ’, ‘ಕರ್ಷಪಣ’ ಅಥವಾ ‘ಪಣ’ ಎಂದು ಕರೆಯುತ್ತಿದ್ದರಂತೆ. ಈ ನಾಣ್ಯಗಳು ನಿಗದಿತ ತೂಕವನ್ನು ಹೊಂದಿದ್ದವು. ಆದರೆ, ಆಕಾರ ಒಂದೇ ರೀತಿಯಲ್ಲಿರಲಿಲ್ಲ. ನಾಣ್ಯದಲ್ಲಿ ಇದ್ದ ಚಿಹ್ನೆಗಳೆಲ್ಲ ಆಯಾ ರಾಜವಂಶಕ್ಕೆ ಸಂಬಂಧಿಸಿದ್ದಾಗಿತ್ತು.

ನಂತರ ಅಧಿಕಾರಕ್ಕೆ ಬಂದ ಮೌರ್ಯರು (ಕ್ರಿ.ಪೂ 322–ಕ್ರಿ.ಪೂ185) ನಾಣ್ಯಕ್ಕೆ ಹೊಸ ರೂಪ ನೀಡಿದರು. ಚಿನ್ನ, ಬೆಳ್ಳಿ, ತಾಮ್ರ ಸೇರಿದಂತೆ ಬೇರೆ ಬೇರೆ ಲೋಹಗಳಿಂದ ನಾಣ್ಯಗಳನ್ನು ಆ ಕಾಲದಲ್ಲಿ ತಯಾರಿಸಲಾಗುತ್ತಿತ್ತು.

ಗುಪ್ತರ ಮೊದಲ ರಾಜ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಬರೆದಿರುವ ‘ಅರ್ಥಶಾಸ್ತ್ರ’ ಗ್ರಂಥದಲ್ಲಿ ನಾಣ್ಯಗಳ ಬಗ್ಗೆ ಉಲ್ಲೇಖ ಇದೆ. ಬೆಳ್ಳಿ ನಾಣ್ಯಗಳನ್ನು ‘ರುಪ್ಯರೂಪ’ ಎಂದು, ಚಿನ್ನದ ನಾಣ್ಯಗಳನ್ನು ‘ಸುವರ್ಣರೂಪ’ ಎಂದು, ತಾಮ್ರದಿಂದ ಮಾಡಿದ ನಾಣ್ಯವನ್ನು ‘ತಾಮರ ರೂಪ’ ಎಂದೂ, ಸೀಸದಿಂದ ಮಾಡಿದ ನಾಣ್ಯವನ್ನು ‘ಸೀಸರೂಪ’ ಎಂದು ಕರೆಯಲಾಗುತ್ತಿತ್ತು. ಮೌರ್ಯರು ತಮ್ಮ ರಾಜಮನೆತನದ ಮಾನದಂಡಕ್ಕೆ ತಕ್ಕಂತಹ ನಾಣ್ಯಗಳನ್ನು ರೂಪಿಸಿದ್ದರು.

ಆ ಬಳಿಕ ದೇಶದಲ್ಲಿ ಅಧಿಪತ್ಯ ಸಾಧಿಸಿದ ಗ್ರೀಸ್‌ ಮೂಲದ ರಾಜರು ನಾಣ್ಯಗಳಲ್ಲಿ ರಾಜ್ಯದ ಮುಖ್ಯಸ್ಥರ ಚಿತ್ರಗಳನ್ನು ಅಚ್ಚೊತ್ತಲು ಆರಂಭಿಸಿದರು. ನಾಣ್ಯದ ಒಂದು ಮುಖದಲ್ಲಿ ರಾಜನ ಚಿತ್ರವಿದ್ದರೆ, ಮತ್ತೊಂದು ಮುಖದಲ್ಲಿ ಆತ ಪೂಜಿಸುತ್ತಿದ್ದ ದೇವರ ಚಿತ್ರವನ್ನು ಬಿಡಿಸಲಾಗುತ್ತಿತ್ತು. ಇಂಡೋ-ಗ್ರೀಕ್‌ ರಾಜರ ವ್ಯಾಪ್ತಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಿಂದ ಪ್ರೇರಿತರಾಗಿ, ದೇಶದಲ್ಲಿದ್ದ ಇತರ ಆಡಳಿತ ವಂಶಗಳು, ಬುಡಕಟ್ಟು ಪ್ರದೇಶಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು, ತಮ್ಮದೇ ಆದಂತಹ ನಾಣ್ಯಗಳನ್ನು ತಯಾರಿಸಿ ಚಲಾವಣೆಗೆ ತಂದರು.

ಹೆಚ್ಚು ಸಂಖ್ಯೆಯಲ್ಲಿ ಚಿನ್ನದ ನಾಣ್ಯಗಳು ಚಲಾವಣೆಗೆ ಬಂದಿದ್ದು ಗುಪ್ತರ ಕಾಲದಲ್ಲಿ. ಗುಪ್ತ ಸಾಮ್ರಾಜ್ಯದ ರಾಜರು ನಡೆಸುತ್ತಿರುವ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಬಿಂಬಿಸುವ ಚಿತ್ರಗಳನ್ನು ನಾಣ್ಯಗಳಲ್ಲಿ ಕೆತ್ತಲಾಗುತ್ತಿತ್ತು. ಸಂಸ್ಕೃತದಲ್ಲಿ ಬರೆದಿದ್ದ ಶಾಸನಗಳನ್ನೂ ಬರೆಯಲಾಗುತ್ತಿತ್ತು. ಟರ್ಕಿಯ ಸುಲ್ತಾನರು ಉತ್ತರ ಭಾರತಕ್ಕೆ ಬಂದು ಅಧಿಕಾರ ಸ್ಥಾಪಿಸುವವರೆಗೆ ಈ ಸಂಪ್ರದಾಯ ಮುಂದುವರೆಯಿತು.

12ನೇ ಶತಮಾನದ ಹೊತ್ತಿಗೆ ದೆಹಲಿಯಲ್ಲಿ ಆಡಳಿತದ ಗದ್ದುಗೆ ಹಿಡಿದಿದ್ದ ಟರ್ಕಿ ಸುಲ್ತಾನರು ನಾಣ್ಯಗಳಲ್ಲಿದ್ದ ಭಾರತೀಯ ರಾಜರಿಗೆ ಸಂಬಂಧಿಸಿದ ಕೆತ್ತನೆಗಳಿಗೆ ಬದಲಿಗೆ ಇಸ್ಲಾಂ ಲಿಪಿಯನ್ನು ಅಚ್ಚೊತ್ತಲು ಆರಂಭಿಸಿದರು. ಆ ಕಾಲದಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ‘ಟಂಕಾ’ ಎಂದು ಕರೆಯಲಾಗುತ್ತಿತ್ತು. ಕಡಿಮೆ ಮೌಲ್ಯದ ಇತರೆ ನಾಣ್ಯಗಳನ್ನು ‘ಜಿಟ್ಟಲ್‌’ ಎನ್ನಲಾಗುತ್ತಿತ್ತು. ಭಿನ್ನ ಮುಖಬೆಲೆಯ ನಾಣ್ಯಗಳನ್ನು ತರುವ ಮೂಲಕ ವ್ಯವಸ್ಥಿತ ಹಣಕಾಸು ವ್ಯವಸ್ಥೆಯನ್ನು ಜಾರಿಗೆ ತರಲು ದೆಹಲಿ ಸುಲ್ತಾನರು ಪ್ರಯತ್ನಿಸಿದ್ದರು.

16ನೇ ಶತಮಾನದಲ್ಲಿ (ಕ್ರಿ.ಶ 1526) ಮೊಘಲ್‌ ಸಾಮ್ರಾಜ್ಯ ಅಧಿಪತ್ಯ ಸ್ಥಾಪಿಸುವುದರೊಂದಿಗೆ ಭಾರತದ ಹಣಕಾಸು ವ್ಯವಸ್ಥೆ ಮತ್ತೊಂದು ಮಜಲಿಗೆ ತೆರೆದುಕೊಂಡಿತು. ತಮ್ಮ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಏಕರೂಪದ ಮತ್ತು ಸಂಘಟಿತ ಹಣಕಾಸು ವ್ಯವಸ್ಥೆಯನ್ನು ಮೊಘಲರು ಜಾರಿಗೆ ತಂದರು.
ನಂತರ ಬಂದಿದ್ದೇ ರೂಪಾಯಿ. (ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT