ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಹಾದಿಯಲ್ಲಿ ಗುರುತು ಅರಸಿದವರು

Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ

ಜೆಹಾನ್ ದಾರುವಾಲ
ಫಾರ್ಮುಲಾ ರೇಸ್‌ಗೆ ಜಾಗತಿಕವಾಗಿ ಕ್ರೀಡಾ ಮಾನ್ಯತೆ ನೀಡಿರುವುದರಿಂದ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಯುವಕರು ಫಾರ್ಮುಲಾ ರೇಸರ್‌ಗಳಾಗಲು ಆಸಕ್ತಿ ತೋರುತ್ತಿದ್ದಾರೆ. ಗ್ರೇಟರ್ ನೊಯಿಡಾ ಸಮೀಪ ಫಾರ್ಮುಲಾ ಟ್ರ್ಯಾಕ್ ನಿರ್ಮಾಣವಾಗಿರುವುದು ಯುವ ರೇಸರ್‌ಗಳಲ್ಲಿ ಭರವಸೆ ಮೂಡಿಸಿದೆ. ಭಾರತದಲ್ಲಿ ಫಾರ್ಮುಲಾ ಒನ್ (ಎಫ್ಒನ್) ರೇಸರ್‌ಗಳ ಸಂಖ್ಯೆ ತೀರಾ ವಿರಳ. ನರೇನ್ ಕಾರ್ತಿಕೇಯನ್ ಮತ್ತು ಚಂದ್ರಾಹುಕ್ ಹೊರತು ಪಡಿಸಿ ಬೇರೆ ಯಾರೂ ಎಫ್ಒನ್ ಅಥವಾ ಅಂತರ ರಾಷ್ಟ್ರೀಯ ರೇಸ್ ಆಡಿಲ್ಲ. ಇದೀಗ  ಭಾರತೀಯ ಯುವ ರೇಸರ್ ಜೆಹಾನ್ ದಾರುವಾಲ ಎಫ್ಒನ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಲಂಡನ್‌ ಬ್ರಿಟಿಷ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಜೆಹಾನ್, ಯುರೋಪ್ ಟೂರ್ನಿಗಳಲ್ಲಿ ಭಾಗವಹಿಸಿ ಹಲವಾರು ಟ್ರೋಫಿಗಳನ್ನು ಗೆದ್ದಿದ್ದಾರೆ. ಜೆಹಾನ್ ದಾರುವಾಲ ಮೂಲತಃ ಮುಂಬೈನವರು. ಅವರಿಗೆ ರೇಸ್‌ನಲ್ಲಿ ಆಸಕ್ತಿ ಮೂಡಿಸಿದ್ದು ಬಾಂಬೆ ಟೈಮ್ಸ್ ಪತ್ರಿಕೆ. ಅವರ ತಂದೆ ಬ್ಯುಸಿನೆಸ್ ಮ್ಯಾನ್ ಆಗಿದ್ದರಿಂದ ಮನೆಗೆ ಹಲವಾರು ಪತ್ರಿಕೆಗಳನ್ನು ತರಿಸುತ್ತಿದ್ದರು.

ದಿನಾ ಬೆಳಿಗ್ಗೆ ಚಹಾ ಹೀರುತ್ತ ಮನೆಯ ಹಾಲ್‌ನಲ್ಲಿ ಪತ್ರಿಕೆ ಓದುವುದು ಇವರ ತಂದೆಯ ಹವ್ಯಾಸ. ಈ ವೇಳೆ ಅಪ್ಪನ ಜೊತೆ ಕೂರುತ್ತಿದ್ದ ಜೆಹಾನ್‌, ಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರಂತೆ. ಜೆಹಾನ್‌ ಆಸಕ್ತಿಯಿಂದ ನೋಡುತ್ತಿದ್ದದು ಬೈಕ್ ಮತ್ತು ಕಾರ್ ರೇಸ್ ಸುದ್ದಿಗಳನ್ನು ಮಾತ್ರ! ಬಾಂಬೆ ಟೈಮ್ಸ್ ಪತ್ರಿಕೆ ಹೆಚ್ಚಾಗಿ ಕಾರ್ ರೇಸ್ ಸುದ್ದಿಗಳು ಮತ್ತು ಚಿತ್ರಗಳನ್ನು ಪ್ರಕಟಿಸುತ್ತಿತ್ತು. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ರೇಸರ್ ಆಗುವ ಕನಸು ಕಂಡರು.

ಮಗ ಚೆನ್ನಾಗಿ ಓದಿಕೊಂಡು ಬ್ಯುಸಿನೆಸ್ ಮಾಡಲಿ ಎಂದು ಬಯಸಿದ್ದರು ಅವರ ಪೋಷಕರು. ಆದರೆ ಮಗ ಕಾರ್ ರೇಸರ್ ಆಗುತ್ತೇನೆ ಎಂದಾಗ ಆತಂಕವಾಯಿತು. ಆದರೂ ಅವರ ತಂದೆ ಮಗನ ಆಸೆಗೆ ಅಡ್ಡಿಪಡಿಸದೆ ಲಂಡನ್‌ಗೆ ಕಳುಹಿಸಿ ತರಬೇತಿ ಕೊಡಿಸಿದ್ದು ವಿಶೇಷ. ಗೆಲುವಿನ ಹಾದಿಯಲ್ಲಿರುವ ಜೆಹಾನ್‌ಗೆ ಎಫ್ಒನ್‌ನಲ್ಲಿ ನಂಬರ್ ಒನ್ ಆಗಬೇಕು ಎಂಬ ಗುರಿಯಿದೆ.
twitter.com/daruvalajehan 

*
ಅರುಣ್ ಸುರೇಶ್ ಕುಮಾರ್
ಇದು ಸಾಮಾಜಿಕ ಜಾಲತಾಣಗಳ ಯುಗ. ಜಾಲತಾಣಗಳ ಮೂಲಕವೇ ನಮ್ಮ ದೈನಂದಿನ ಕೆಲಸ ಕಾರ್ಯಗಳು ಅಥವಾ ವಹಿವಾಟನ್ನು ನಡೆಸುವ ಕಾಲ ಬಹಳ ದೂರವೇನಿಲ್ಲ! ಆದರೆ ಸಾಮಾಜಿಕ ಜಾಲತಾಣಗಳಲ್ಲಿರುವ ವೈಯಕ್ತಿಕ ಮಾಹಿತಿ, ಬ್ಯಾಂಕ್ ಅಕೌಂಟ್, ಇತರೆ ಮಾಹಿತಿಗಳನ್ನು ಬೇರೆಯವರು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಜಾಲತಾಣಗಳಲ್ಲಿ ಸೃಷ್ಟಿಯಾಗುವ ಬಗ್‌ಗಳಿಂದ ಕಳ್ಳರು ಸುಲಭವಾಗಿ ಹ್ಯಾಕ್ ಮಾಡಬಹುದು ಎಂಬುದನ್ನು ಭಾರತೀಯ ವಿದ್ಯಾರ್ಥಿಯೊಬ್ಬ ಫೇಸ್‌ಬುಕ್‌ ಕಂಪೆನಿಗೆ ತೋರಿಸಿಕೊಟ್ಟು 21 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.

ಕೇರಳ ರಾಜ್ಯದ ಕೊಲ್ಲಂನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿರುವ ಅರುಣ್ ಸುರೇಶ್ ಕುಮಾರ್ ಈ ಸಾಧನೆ ಮಾಡಿದ್ದಾರೆ. ಅರುಣ್‌ಗೆ ಚಿಕ್ಕ ವಯಸ್ಸಿನಿಂದಲೂ ಕಂಪ್ಯೂಟರ್ ಮೇಲೆ ಅತೀವ ಆಸಕ್ತಿ. ಹಾಗಾಗಿಯೇ ಅವರು ಕಂಪ್ಯೂಟರ್ ಸೈನ್ಸ್‌ ಪದವಿಗೆ ಸೇರಿದ್ದು ಎಂದು ಅವರ ಪೋಷಕರು ಹೇಳುತ್ತಾರೆ.

ಅರುಣ್ 2016ರ ಏಪ್ರಿಲ್‌ನಿಂದ ಆಗಸ್ಟ್ ತಿಂಗಳವರೆಗೂ ಫೇಸ್‌ಬುಕ್ ಖಾತೆಗಳ ಮೇಲೆ ಸಂಶೋಧನೆ ನಡೆಸುತ್ತಾರೆ. ಫೇಸ್‌ಬುಕ್ ಖಾತೆದಾರರು ತಮ್ಮ ಫೇಸ್‌ಬುಕ್‌ ಖಾತೆ ಮತ್ತು ಪೇಜ್‌ಗಳನ್ನು ನಿರ್ವಹಣೆ ಮಾಡುತ್ತಿರುತ್ತಾರೆ. ನಿತ್ಯವೂ ಬರಹ, ಮಾಹಿತಿ, ಚಿತ್ರ, ಡಾಟಾ, ವಿಡಿಯೊ, ಆಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ವೇಳೆ ಖಾತೆದಾರರಿಗೆ ಗೊತ್ತಿಲ್ಲದಂತೆ ಸೆಟ್ಟಿಂಗ್ಸ್ ಟೂಲ್‌ಗಳಲ್ಲಿ ಕೆಲವು ‘ಬಗ್’ಗಳು ಸೃಷ್ಟಿಯಾಗುತ್ತಿರುತ್ತವೆ.

ಆ ಬಗ್‌ಗಳ ಮೂಲಕ ಹ್ಯಾಕರ್‌ಗಳು ಖಾತೆದಾರರ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂಬುದನ್ನು ಅರುಣ್ ವಿವರವಾಗಿ ಬರೆದು ಫೇಸ್‌ಬುಕ್‌ ಕಂಪೆನಿಗೆ ಮೇಲ್ ಮಾಡುತ್ತಾರೆ. ಹೀಗೆ ಮೂರು ಬಗ್‌ಗಳ ಕುರಿತು ಮಾಹಿತಿ ಕಳುಹಿಸುತ್ತಾರೆ.

ಅರುಣ್ ಪ್ರಸ್ತಾಪಿಸಿದ ಬಗ್ ಮೂಲಕ ಖಾತೆಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂಬುದು ಫೇಸ್‌ಬುಕ್‌ ತಂತ್ರಜ್ಞರಿಗೆ ಗೊತ್ತಾಗುತ್ತದೆ. ಈ ಸಂಶೋಧನೆಗಾಗಿ ಅರುಣ್‌ಗೆ ಕಂಪೆನಿ ಬಹುಮಾನ ನೀಡಿದೆ. ‘ನನ್ನ  ತಂದೆ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದು, ಈ ಹಣವನ್ನು ನನ್ನ ಉನ್ನತ ವ್ಯಾಸಂಗಕ್ಕೆ ಬಳಸುತ್ತೇನೆ’ ಎನ್ನುತ್ತಾರೆ ಅರುಣ್.
http://bit.ly/2hJd0Mm

*
ಹೇಮಂತ್ ವಿ ಜೋಸೆಫ್
ಯಾರೇ ಕಳ್ಳತನ ಮಾಡಿ ಸಿಕ್ಕಿಬಿದ್ದರೆ, ಅವರನ್ನು ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸುತ್ತಾರೆ. ಅದಕ್ಕೆ ನ್ಯಾಯಾಲಯದಲ್ಲಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅಧ್ಯಯನ ಅಥವಾ ಸಂಶೋಧನೆ ದೃಷ್ಟಿಯಿಂದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದರೆ ಅಂಥವರಿಗೆ ಗೂಗಲ್, ಫೇಸ್‌ಬುಕ್‌, ಮೈಕ್ರೋಸಾಫ್ಟ್, ಆ್ಯಪಲ್‌ನಂಥ ದೈತ್ಯ ಕಂಪೆನಿಗಳು ಡಾಲರ್ ಲೆಕ್ಕದಲ್ಲಿ ಬಹುಮಾನ ಘೋಷಿಸುತ್ತವೆ! ಇದು ಎಂತಹ ವಿಚಿತ್ರ ಅಲ್ಲವೇ!

ಕೇರಳ ರಾಜ್ಯದ ಕೊಚ್ಚಿಯಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿದ್ದ ಹೇಮಂತ್ ಜೋಸೆಫ್, ಆ್ಯಪಲ್ ನೆಟ್‌ವರ್ಕ್‌ಗೆ ಕನ್ನ ಹಾಕುವ ಮೂಲಕ ಕಳೆದು ಹೋಗುವ ಐಫೋನ್ ಪಾಸ್‌ವರ್ಡ್‌ಗಳನ್ನು ಮರುಸಂಗ್ರಹಿಸಿಕೊಟ್ಟಿದ್ದಕ್ಕೆ ಆ್ಯಪಲ್ ಕಂಪೆನಿಯವರು 20 ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನ ಕೊಡುವುದರ ಜೊತೆ ಕೆಲಸವನ್ನೂ ಕೊಟ್ಟಿದ್ದಾರೆ! ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿರುವಾಗಲೇ ಹೇಮಂತ್ ಈ ಸಾಧನೆ ಮಾಡಿದ್ದಾರೆ.

ಸಾಫ್ಟ್‌ವೇರ್ ಬಗ್ಗೆ ಅಷ್ಟೊಂದು ಗೊತ್ತಿಲ್ಲದಿದ್ದರೂ ಆಸಕ್ತಿಯಿಂದ ಹಾಗೂ ವೆಬ್ ಡೆವಲಪರ್ ಗೆಳೆಯರ ಸಹಾಯದಿಂದ ಕಂಪ್ಯೂಟರ್ ಅಪ್ಲಿಕೇಶನ್, ನೆಟ್‌ವರ್ಕಿಂಗ್ ಅಪ್ಲಿಕೇಶನ್ ಕಲಿತವರು. ದತ್ತಾಂಶ ಭದ್ರತೆಗೆ ಮತ್ತೊಂದು ಹೆಸರು ಎಂದೇ ಜನಪ್ರಿಯವಾಗಿರುವ ಆ್ಯಪಲ್ ಸರ್ವರ್ ಹ್ಯಾಕ್ ಮಾಡಿ (ಕಂಪೆನಿ ಗಮನಕ್ಕೆ ತಂದು) ಪಾಸ್‌ವರ್ಡ್‌ ಕಳೆದುಕೊಂಡಿರುವ ಗ್ರಾಹಕರಿಗೆ ಕೆಲವೇ ಗಂಟೆಗಳಲ್ಲಿ ಮರಳಿ ಪಾಸ್‌ವರ್ಡ್‌ ಸಂಗ್ರಹಿಸಿಕೊಟ್ಟಿದ್ದಾರೆ.

ಗ್ರಾಹಕರ ವೈಯಕ್ತಿಕ ಮಾಹಿತಿ ಎಲ್ಲಿಯೂ ಸೋರಿಕೆಯಾಗದಂತೆ ಎಚ್ಚರ ವಹಿಸಿ ಕೆಲಸ ಮಾಡಿದ್ದು ವಿಶೇಷ. ಪ್ರಸ್ತುತ, ಪಾಸ್‌ವರ್ಡ್‌ ಕಳೆದುಕೊಂಡ ಗ್ರಾಹಕರು ಕಂಪೆನಿಯ ಕಸ್ಟಮರ್ ಕೇಂದ್ರಕ್ಕೆ ಕರೆ ಮಾಡಿ ಅಲ್ಲಿಂದ ಎಂಜಿನಿಯರ್‌ಗಳಿಗೆ ಮಾಹಿತಿ ರವಾನಿಸಿ ಅದು ಮರು ಸಂಗ್ರಹಣೆಗೊಂಡು ಬರಲು ನಾಲ್ಕೈದು ದಿನಗಳು ಬೇಕು.

ಕೆಲವೊಮ್ಮೆ ವಾರಗಳೇ ಬೇಕಾಗಬಹುದು. ಆದರೆ ಹೇಮಂತ್, ಐಫೋನ್, ಐಪ್ಯಾಡ್‌ಗಳ ಪಾಸ್‌ವರ್ಡ್‌ಗಳನ್ನು ಕೆಲವೇ ಗಂಟೆಗಳಲ್ಲಿ ಸಂಗ್ರಹಿಸಿಕೊಡುತ್ತಾರೆ. ಹಳೆಯ ಐಪ್ಯಾಡ್ ಖರೀದಿಸಿ ಹ್ಯಾಕ್ ಮಾಡುವ ತಂತ್ರಜ್ಞಾನ ಕರಗತ ಮಾಡಿಕೊಂಡಿದ್ದಾಗಿ ಹೇಮಂತ್ ಹೇಳುತ್ತಾರೆ. www.hemanthjoseph.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT