ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿ.ವಿ. ಬೆಳ್ಳಿಹಬ್ಬದ ಪಯಣ

ಸಂಗತ
Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ
ಕನ್ನಡ ವಿಶ್ವವಿದ್ಯಾಲಯ ಇದೇ ಎಂಟಕ್ಕೆ 25ನೇ ವರ್ಷಕ್ಕೆ ಕಾಲಿಡುತ್ತಿದೆ. ಕನ್ನಡದ ಸಮಸ್ತ ಸಂಗತಿಗಳಿಗಾಗಿಯೇ ಹುಟ್ಟಿಕೊಂಡ ಈ ಸಂಸ್ಥೆ ಸಾಗಿಬಂದ ಪಯಣವನ್ನು ಅವಲೋಕಿಸಲು ಇದು ಸಕಾಲ.
 
ವಿಶ್ವವಿದ್ಯಾಲಯದ ಆರಂಭದ ಕುಲಪತಿ ಡಾ. ಚಂದ್ರಶೇಖರ ಕಂಬಾರ ಸೃಷ್ಟಿಶೀಲ ಕವಿ. ಅವರೊಳಗೊಬ್ಬ ಶಿಲ್ಪಿಯಿದ್ದರು. ಹಾಗಾಗಿಯೇ ಕನ್ನಡ ವಿಶ್ವವಿದ್ಯಾಲಯವು ಕನ್ನಡಿಗರಿಗಾಗಿ ಏನು ಮಾಡಬೇಕು, ಕರ್ನಾಟಕದ ಅಖಂಡತೆಯನ್ನು ಹೇಗೆ ಪ್ರತಿನಿಧಿಸಬೇಕು, ವಿ.ವಿ.ಗಳು ಜ್ಞಾನಕೇಂದ್ರಗಳು ಎಂತಾದರೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಯಾವ ಯಾವ ಬಗೆಯ, ಯಾರ ಯಾರ ಜ್ಞಾನ ಪುನರುಜ್ಜೀವನಗೊಳ್ಳಬೇಕು ಎಂಬ ಎಚ್ಚರ ಕಂಬಾರರಿಗೆ ಇತ್ತು. ಇದಕ್ಕೆ ಬೇಕಾದ ಚಾರಿತ್ರಿಕ ಬುನಾದಿ 70ರ ದಶಕದ ಹೊತ್ತಿಗೆ ರೂಪುಗೊಂಡು ಅದರ ಪರಿಣಾಮ 90ರ ದಶಕದಲ್ಲಿ ಸಾಕಾರವಾಗಿತ್ತು. ದಲಿತ– ಬಂಡಾಯ ಚಳವಳಿಗಳು ಅದಾಗಲೇ ಆಗಿದ್ದವು.
 
ಬೂಸಾ ಚಳವಳಿ ಎಚ್ಚರಿಸಿತ್ತು. ಗೋಕಾಕ ಚಳವಳಿ ಪ್ರತಿಧ್ವನಿಸಿತ್ತು. ಅಂತೆಯೇ ಹಿಂದುಳಿದ ವರ್ಗಗಳಲ್ಲಿ ಸೂಕ್ತವಾದ ಕಿಚ್ಚು ಬೆಳಕಾಗುತ್ತಿತ್ತು. ಎಲ್ಲ ಸಮಾಜವಾದಿ ಹಾಗೂ ಮಾರ್ಕ್ಸ್‌ವಾದಿ ಚಿಂತಕರು ಅಖಂಡವಾದ ಕನ್ನಡ ನಾಡಿನ ಅಸ್ತಿತ್ವಕ್ಕಾಗಿ ದನಿ ಎತ್ತಿದ್ದರು. ಈ ಬಗೆಯ ಐತಿಹಾಸಿಕ ಒತ್ತಡಗಳಿಂದಾಗಿಯೇ ಕನ್ನಡ ವಿಶ್ವವಿದ್ಯಾಲಯವು ಜನರ ವಿಶ್ವವಿದ್ಯಾಲಯದ ಬಗೆಯಲ್ಲಿ ತಲೆ ಎತ್ತಿತು. ಇಂತಹ ಒಂದು ಅರ್ಥಪೂರ್ಣ ಕನ್ನಡತ್ವಕ್ಕೆ ಪಕ್ಷಾತೀತವಾಗಿ ಹಲವು ರಾಜಕೀಯ ಮುಖಂಡರು ಸಹ ಒತ್ತಾಸೆಯಾಗಿ ನಿಂತರು. 
 
ಬಳ್ಳಾರಿ ಜಿಲ್ಲೆಯ ಹಂಪಿ ಬಳಿ 800 ಎಕರೆಗಳ ವಿಶಾಲ ಅಂಗಳದಲ್ಲಿ 1992ರ ಜನವರಿ 8ರಂದು ವಿಶ್ವವಿದ್ಯಾಲಯ ತಲೆ ಎತ್ತಿತು. ಬರಡು ಪ್ರದೇಶದಂತಿದ್ದ ಈ ಬಯಲನ್ನು ಹಸಿರು ಆವರಣವನ್ನಾಗಿಸಿ, ಹೊಸ ಪೀಳಿಗೆಗೆ ಬೇಕಾದ ದೇಸಿ ಚಿಂತನೆಗಳ ಸಮೃದ್ಧಿಯ ನೆಲೆಯನ್ನಾಗಿ ಮಾಡಲಾಗಿದೆ. ಜಗತ್ತಿನ ಅಂಚಿನ ಭಾಷೆಗಳ ಅಧ್ಯಯನಕ್ಕೆ ಮೀಸಲಾದ ಹಲವಾರು ವಿ.ವಿ.ಗಳ ಪಟ್ಟಿಯಲ್ಲಿ ಕನ್ನಡ ವಿ.ವಿ. ಬಹಳ ಮೇಲಿದೆ. ಕನ್ನಡ ಭಾಷೆ, ಸಾಹಿತ್ಯದಲ್ಲಿ ಉನ್ನತ ಮಟ್ಟದ ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸಬೇಕಾದ ಮುಖ್ಯ ಆಶಯ ಇಲ್ಲಿದೆ.  ಕನ್ನಡ ಸಾಹಿತ್ಯವನ್ನು ಆಧರಿಸಿ ಬೆಳೆದ ಕಲೆ, ಸಂಸ್ಕೃತಿ, ಸಂಗೀತ, ನಾಟಕ, ಜನಪದ ಕಲೆ, ವರ್ಣಚಿತ್ರ, ಶಿಲ್ಪಶಾಸ್ತ್ರ, ವ್ಯಾಕರಣ, ಖಗೋಳಶಾಸ್ತ್ರ, ಸಿದ್ಧವೈದ್ಯ, ಕರಕುಶಲ ಕ್ಷೇತ್ರ, ಪಾರಂಪರಿಕ ದೇಸಿ ಜ್ಞಾನ, ತಂತ್ರಜ್ಞಾನ, ವಿಜ್ಞಾನಗಳಲ್ಲಿ ಉನ್ನತ ಅಧ್ಯಯನಗಳಿಗೆ ಅವಕಾಶ, ಹಸ್ತಪ್ರತಿಗಳ ಸಂಗ್ರಹ, ಆದಿವಾಸಿ–ಅಲೆಮಾರಿಗಳ ಜೀವನಕ್ರಮಗಳನ್ನು ಶೋಧಿಸುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರಿಗೆ ಬೇಕು ಎಂಬಂತಹ ಕಂಬಾರರ ಆಶಯವನ್ನು ಎಲ್ಲ ಕುಲಪತಿಗಳೂ ನಿರ್ವಹಿಸಿದ್ದಾರೆ. 
 
ವಿಶ್ವವಿದ್ಯಾಲಯವು ಪ್ರಾಚೀನ ಪರಂಪರೆಗಳನ್ನು ವಿಮರ್ಶಾತ್ಮಕವಾಗಿ ಸಂಶೋಧಿಸಿದೆ. ದಮನಕ್ಕೆ ಒಳಗಾದ ಜ್ಞಾನಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಜನರ ಅರಿವಿನ ಬೇರುಗಳನ್ನು ಆಶ್ರಯಿಸಿ ಹೊಸ ಕಾಲದ ಚಿಂತನೆಗಳನ್ನು ಬಿತ್ತಿದೆ. 1200ಕ್ಕೂ ಹೆಚ್ಚಿನ ವೈವಿಧ್ಯ ವಿಷಯಗಳ ಕೃತಿಗಳನ್ನು ಪ್ರಕಟಿಸಲಾಗಿದೆ.
 
ಸಾಂಪ್ರದಾಯಿಕ ವಿ.ವಿ.ಗಳು ಕಡೆಗಣಿಸಿದ್ದ ಅಲಕ್ಷಿತರು, ಅಂಚಿನವರು, ಮಹಿಳೆಯರು, ಆದಿವಾಸಿಗಳು, ದಲಿತರು, ಅತ್ಯಂತ ಹಿಂದುಳಿದ ಸಮುದಾಯಗಳ ಜೀವನ ಕ್ರಮಗಳನ್ನು ಶೋಧಿಸುವ ಎರಡು ಸಾವಿರ ಯೋಜನೆಗಳನ್ನು ರೂಪಿಸಲಾಗಿದೆ. ವಿಶ್ವವಿದ್ಯಾಲಯ ಈವರೆಗೆ ನೀಡಿರುವ ಎಂ.ಫಿಲ್. ಮತ್ತು ಪಿಎಚ್.ಡಿ. ಪದವಿಗಳು ವೈಚಾರಿಕ ಅರಿವನ್ನು ಬೆಳೆಸುವಂತಿವೆ.
 
‘ನಾಡೋಜ’ ಪದವಿಗಳು ವಿ.ವಿ. ನೀಡುವ ಅತ್ಯುನ್ನತ ಗೌರವ ಪದವಿಗಳು.  ಗೌರವ ಡಾಕ್ಟರೇಟ್ ಪದವಿಗಳನ್ನು ಅಕ್ಷರ ಜ್ಞಾನದ ಆಚೆಗಿನ ಜನಪದ ಕಲಾವಿದರಿಗೂ; ದೇಸಿ ಬೇಸಾಯದ ರೈತರಿಗೂ, ಅಂಚಿನ ಜ್ಞಾನಗಳ ಸಂರಕ್ಷಕರಿಗೂ ನೀಡುತ್ತ ಬರಲಾಗಿದೆ. ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನ, ಭಾಷಾ ವಿಜ್ಞಾನ, ಲಲಿತಕಲೆ ಮತ್ತು ವಿಜ್ಞಾನ ನಿಕಾಯದ ನಾಲ್ಕು ಅಧ್ಯಯನ ವಲಯಗಳಿವೆ. 10 ಅಧ್ಯಯನ ಪೀಠಗಳಿವೆ. ನಾಲ್ಕು ಅಧ್ಯಯನ ವಿಸ್ತರಣಾ ಕೇಂದ್ರಗಳನ್ನು ಬಾದಾಮಿ, ಕುಪ್ಪಳಿ, ಕೊಳ್ಳೇಗಾಲ, ಕೂಡಲಸಂಗಮಗಳಲ್ಲಿ ತೆರೆಯಲಾಗಿದೆ. ಕೂಡಲಸಂಗಮದಲ್ಲಿ ವಚನ ಪರಂಪರೆಯ ಆಯಾಮಗಳನ್ನು ಸಂಶೋಧನೆಗೆ ತೊಡಗಿಸಿದ್ದರೆ; ಕೊಳ್ಳೇಗಾಲವು ದೇಸಿ ಸಂಸ್ಕೃತಿಯ ಅಧ್ಯಯನ ಕೇಂದ್ರವನ್ನು ಒಳಗೊಂಡಿದೆ. ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ನೂರಾರು ಶಿಕ್ಷಣ ಸಂಸ್ಥೆಗಳು ಪಿಎಚ್.ಡಿ. ಪದವಿ ಅಧ್ಯಯನಗಳಿಗೆ ಬಾಗಿಲು ತೆರೆದಿವೆ. 12 ಅಧ್ಯಯನ ಪತ್ರಿಕೆಗಳನ್ನು ಪ್ರಕಟಿಸಲಾಗುತ್ತಿದೆ. ಈ ವರ್ಷದಿಂದ ಎಲ್ಲ ವಿಭಾಗಗಳಲ್ಲೂ ಪದವಿ ತರಗತಿ ಆರಂಭಿಸಲಾಗಿದೆ. ಅಧ್ಯಯನ, ಬೋಧನೆ, ಸಂಶೋಧನೆ, ಪ್ರಕಟಣೆ ಒಟ್ಟಿಗೆ ಮೇಳೈಸುವ ಸವಾಲನ್ನು ಎದುರಿಸಬೇಕಾಗಿದೆ. ದೂರಶಿಕ್ಷಣ ವ್ಯವಸ್ಥೆ ಮೂಲಕವೂ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ. 
 
ಇಷ್ಟೆಲ್ಲ ಕೆಲಸಗಳಿಗೆ ಈ ಕಾಲು ಶತಮಾನದ ಅವಧಿಯಲ್ಲಿ ಕರ್ನಾಟಕ ಸರ್ಕಾರ ಈವರೆಗೆ ನೀಡಿರುವ ಒಟ್ಟು ಮೊತ್ತ ₹ 58 ಕೋಟಿ. ಖಾಸಗಿ ಸಂಸ್ಥೆಯೊಂದು ಒಂದು ವರ್ಷದಲ್ಲೇ ₹ 100 ಕೋಟಿ ವೆಚ್ಚ ಮಾಡುವಂತಿರುವ ಈ ಕಾಲದಲ್ಲಿ, ಕನ್ನಡಕ್ಕಾಗಿಯೇ ತಲೆ ಎತ್ತಿದ ವಿಶ್ವವಿದ್ಯಾಲಯವೊಂದಕ್ಕೆ ವರ್ಷಕ್ಕೆ ₹ 2 ಕೋಟಿಯನ್ನು ಸರ್ಕಾರ ಕೊಡುಮಾಡುತ್ತಾ ಬಂದಿದೆ. 
 
ಕನ್ನಡ ವಿ.ವಿ.ಗೆ  ಅರಿವಿನ ಬಡತನವಿಲ್ಲ. ಆದರೆ ಆರ್ಥಿಕವಾಗಿ ತುಂಬ ಕಷ್ಟದಲ್ಲಿದೆ. ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ವಲಯವನ್ನು ವರ್ತಮಾನೀಕರಿಸಲು ಬೇಕಾದ ಬೃಹತ್‌ ಯೋಜನೆಗಳಿಗೆ ಸರ್ಕಾರಗಳು ಆರ್ಥಿಕ ಬಲ ನೀಡುತ್ತಿಲ್ಲ. ಕರ್ನಾಟಕದ ಗತಜ್ಞಾನ ಪರಂಪರೆಗಳ ಬದುಕನ್ನು ಪುನರುಜ್ಜೀವನಗೊಳಿಸಿ ಜಗತ್ತಿನ ಮುಂದೆ ಸ್ವತಂತ್ರವಾಗಿ ನೆಲೆಗೊಳ್ಳಲು ವಿವೇಚಿಸುತ್ತಿರುವಾಗ ಜಾಗತೀಕರಣದ ಮಾದರಿಗಳು ವಿಶ್ವವಿದ್ಯಾಲಯದ ಬುನಾದಿಯನ್ನೇ ಪ್ರಶ್ನಿಸುತ್ತಿವೆ. ವಿಶ್ವವಿದ್ಯಾಲಯದಿಂದ ಬೆಟ್ಟದಷ್ಟು ನಿರೀಕ್ಷೆಯನ್ನು ಜನ ಇಟ್ಟುಕೊಂಡಿದ್ದಾರೆ. ಇಷ್ಟೆಲ್ಲ ಕೆಲಸಗಳನ್ನು ಮಾಡಲು ದೊಡ್ಡ ಸಂಖ್ಯೆಯ ಮಾನವ ಸಂಪತ್ತು ಬೇಕು. ಇಡೀ ವಿಶ್ವವಿದ್ಯಾಲಯದಲ್ಲಿರುವ ಒಟ್ಟು ವಿದ್ವಾಂಸರ ಸಂಖ್ಯೆ 60ನ್ನು ಮೀರುವುದಿಲ್ಲ. ಇಷ್ಟೇ ಜನರಿಂದ ಸಾಕಷ್ಟು ಕೆಲಸ ಆಗಿದೆ. ನಾಡಿನ ನೂರಾರು ವಿದ್ವಾಂಸರನ್ನು ಜೊತೆಗೂಡಿಸಿಕೊಂಡು ಕನ್ನಡದ ಅರಿವಿನ ಬೇಸಾಯವನ್ನು ಬಡತನದಲ್ಲಿಯೇ ಆದರೆ ಸುಸ್ಥಿರವಾಗಿ ಮಾಡಲಾಗಿದೆ. ಕನ್ನಡ ವಿ.ವಿ. ಮಾಡಿದ್ದೆಲ್ಲ ಉನ್ನತವಾದದ್ದು ಎಂದು ಹೇಳಲಾರೆ. ಇಲ್ಲೂ ಕಳಪೆ ಕೆಲಸಗಳು ಆಗಿವೆ. ಸಂಸ್ಥೆಯೊಂದರಲ್ಲಿ ಅಂತಹ ತಪ್ಪನ್ನು ಹುಡುಕುವ ಬದಲು ಒಳ್ಳೆಯದನ್ನು ಗುರುತಿಸಲಿಕ್ಕೂ ಅವಕಾಶವಿದೆ. ಈ ನಿಟ್ಟಿನಲ್ಲಿ ನಾವು ಹೊಸದಾಗಿ ಮಾಡಬೇಕಾದ ಕೆಲಸಗಳು ಹಲವಾರಿವೆ. 
 
ಬೆಳ್ಳಿಹಬ್ಬದ ಸಂದರ್ಭದಲ್ಲಿ ವಿ.ವಿ. ಮುನ್ನಡೆಯ ಬಗ್ಗೆ ಚಿಂತನ ಮಂಥನಗಳು ನಡೆದಿವೆ. ಕನ್ನಡವನ್ನು ಮುನ್ನೆಲೆಗೆ ತರುವ ಹತ್ತಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ನೂರು ಕೃತಿಗಳನ್ನು ತರುವ ಯೋಜನೆ ಕಾರ್ಯ ಆರಂಭಿಸಿದೆ. ಜಾಗತೀಕರಣದ ಹಾವಳಿ ಎದುರಿಸಿ ಅದನ್ನು ಹೊಸ ತಲೆಮಾರಿಗೆ ಹೊಂದುವಂತೆ ಮರುನಿರ್ಮಾಣ ಮಾಡುವ ಜನಪರ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.  ಇವುಗಳಿಗೆ ಬೇಕಾದ ತಜ್ಞ ಮಾನವ ಸಂಪತ್ತನ್ನು ನೇಮಿಸಿಕೊಳ್ಳಲು ಕನಿಷ್ಠ 100 ಸಂಶೋಧಕ ಸಹಾಯಕರನ್ನೂ, ಅಧ್ಯಾಪಕರನ್ನೂ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ಸರ್ಕಾರ ತಕ್ಕ ಬೆಂಬಲ ನೀಡಬೇಕಾಗಿದೆ. ಇಲ್ಲದಿದ್ದರೆ ವಿ.ವಿ. ಉಳಿಯುವುದು ಕಷ್ಟವಿದೆ.
 
ವಿಶ್ವವಿದ್ಯಾಲಯಗಳು ತಮ್ಮ ಆರ್ಥಿಕ ಮೂಲಗಳನ್ನು ತಾವೇ ಕಂಡುಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಜ್ಞಾನ ಸೃಷ್ಟಿಸುವ ವಿ.ವಿ.ಗಳು ವ್ಯಾಪಾರಿ ಕೇಂದ್ರಗಳಲ್ಲ. ಕನ್ನಡ ವಿಶ್ವವಿದ್ಯಾಲಯ ಹುಟ್ಟಿದ್ದು ಕನ್ನಡಿಗರ ಅಖಂಡತೆಯನ್ನು ಸ್ಥಾಪಿಸುವ ಕಾರಣಕ್ಕಾಗಿ. ಜ್ಞಾನ ಸೃಷ್ಟಿ ಹಾಗೂ ನಾಡುನುಡಿಯ ಸಂರಕ್ಷಣೆ ಆ ನಾಡಿನ ಜವಾಬ್ದಾರಿಯೇ ಆಗಿರುತ್ತದೆ. ಕನ್ನಡ ವಿಶ್ವವಿದ್ಯಾಲಯದ ಹೆಸರಲ್ಲಿ ₹ 100 ಕೋಟಿಯನ್ನು ಇಡುಗಂಟಾಗಿ ಇಟ್ಟರೂ ಸಾಕು; ಅದರ ಬಡ್ಡಿಯಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಬಹುದು. ಜಗತ್ತಿನ ದೊಡ್ಡ ದೊಡ್ಡ ವಿ.ವಿ.ಗಳು ಜಾಗತೀಕರಣದ ಹೆದ್ದಾರಿಗಳಲ್ಲಿ ಮಾನವ ಸಂಬಂಧಗಳ ಜ್ಞಾನವನ್ನೆಲ್ಲ ಮಾರುಕಟ್ಟೆಯ ಲಾಭಕ್ಕೆ ತಕ್ಕಂತೆ ಸರಕಾಗಿ ಮಾರ್ಪಡಿಸುವ ವ್ಯಾಪಾರಿ ಕೌಶಲಗಳತ್ತ ವೇಗವಾಗಿ ಮುನ್ನುಗ್ಗಿವೆ. ಕನ್ನಡ ವಿಶ್ವವಿದ್ಯಾಲಯವು ನಮ್ಮ ಪೂರ್ವಿಕರ ಅರಿವನ್ನು ವರ್ತಮಾನದ ಬೆಳಕಿನಲ್ಲಿ ವಿಸ್ತರಿಸುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಹೆಸರಿನ ವಿನಾಶಕಾರಿ ಚಿಂತನೆಗಳಿಗೆ ಪರ್ಯಾಯಗಳನ್ನು ಹುಡುಕುತ್ತಿರುವ ವಿಶ್ವವಿದ್ಯಾಲಯಕ್ಕೆ ಸರ್ಕಾರಗಳು ಬೆನ್ನೆಲುಬಾಗಬೇಕಾಗಿದೆ; ಹಾಗೇ ನಾಡಿನ ಪ್ರಜ್ಞಾವಂತರ ಒತ್ತಾಸೆಯೂ ಬೇಕು. 
 
ಕನ್ನಡ ವಿಶ್ವವಿದ್ಯಾಲಯವನ್ನು ಉಳಿದೆಲ್ಲ ವಿ.ವಿ.ಗಳ ರೀತಿಯಲ್ಲಿ ಒಂದೇ ಎಂದು ತೀರ್ಮಾನಿಸಬಾರದು. ಅದರಿಂದಾಗಿ ಕನ್ನಡ ವಿಶ್ವವಿದ್ಯಾಲಯದ ಉದ್ದೇಶಕ್ಕೆ ತೊಂದರೆ ಉಂಟಾಗುತ್ತದೆ. ಈಗಾಗಲೇ ಎದುರಾಗಿರುವ ಇಂತಹ ಶೈಕ್ಷಣಿಕ ಆಡಳಿತಾತ್ಮಕ ಸಮಸ್ಯೆಗಳನ್ನು  ಬಗೆಹರಿಸಿಕೊಳ್ಳಬೇಕಾದದ್ದು ಕೇವಲ ಇಲ್ಲಿನ ವಿದ್ವಾಂಸರು, ವಿದ್ಯಾರ್ಥಿಗಳು, ನೌಕರರ ಹೊಣೆಯಷ್ಟೇ ಅಲ್ಲ; ಇಡಿಯಾಗಿ ಕನ್ನಡ ನಾಡು ಕೂಡ ಇದರಲ್ಲಿ ಭಾಗಿಯಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT