ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಕಾಲೇಜುಗಳಿಗೆ ಮುಳುವಾದ ಅವಧಿ ವಿಸ್ತರಣೆ

ಎರಡು ವರ್ಷಗಳ ಕೋರ್ಸ್‌ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ನಿರಾಸಕ್ತಿ
Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇವಲ ಎರಡು ವರ್ಷಗಳ ಹಿಂದೆ ₹ 1 ಲಕ್ಷದವರೆಗೂ ಬಿಕರಿಯಾಗಿದ್ದ ಬಿ.ಇಡಿ ಸೀಟುಗಳನ್ನು ಈಗ ಕೇಳುವವರೇ ಇಲ್ಲ. ಸರ್ಕಾರಿ ಕೋಟಾದ ಸೀಟುಗಳಿಗೂ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ.

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಸಮಿತಿ (ಎನ್‌ಸಿಟಿಇ) ಶಿಫಾರಸಿನಂತೆ ಒಂದು ವರ್ಷ ಇದ್ದ ಬಿ.ಇಡಿ ಶೈಕ್ಷಣಿಕ ಅವಧಿಯನ್ನು 2015–16ನೇ ಸಾಲಿನಿಂದ ಎರಡು ವರ್ಷಕ್ಕೆ ವಿಸ್ತರಿಸಿದ ನಂತರ ಇಂತಹ ಸಮಸ್ಯೆಗಳು ಎದುರಾಗಿವೆ.

ಆರು ಸರ್ಕಾರಿ, 52 ಅನುದಾನಿತ ಕಾಲೇಜುಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 420 ಬಿ.ಇಡಿ ಕಾಲೇಜುಗಳಿವೆ. ಅನುದಾನಿತ ಕಾಲೇಜುಗಳು ಸರ್ಕಾರಿ ಕೋಟಾದ ಅಡಿ ಶೇ 75ರಷ್ಟು, ಖಾಸಗಿ ಕೋಟಾದ ಅಡಿ 25ರಷ್ಟು ಸೀಟು ಭರ್ತಿ ಮಾಡಿಕೊಳ್ಳಬಹುದು. ಖಾಸಗಿ ಕಾಲೇಜುಗಳಲ್ಲಿ ಈ ಅನುಪಾತದ ಪ್ರಮಾಣ 50: 50 ರಷ್ಟಿದೆ. ಎಲ್ಲ ಕಾಲೇಜುಗಳಲ್ಲೂ ಸೇರಿ ಪ್ರತಿ ವರ್ಷ 36 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ.

ಸರ್ಕಾರಿ ಕೋಟಾದ ಸೀಟಿಗೂ ನಿರಾಸಕ್ತಿ: ಕೇಂದ್ರೀಯ ದಾಖಲಾತಿ ಘಟಕ ಸರ್ಕಾರಿ ಕೋಟಾದ ಸೀಟುಗಳನ್ನು ನಿಗದಿತ ಅನುಪಾತದ ಆಧಾರದ ಮೇಲೆ ಭರ್ತಿ ಮಾಡಲು ಪದವೀಧರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತದೆ. ಈ ಹಿಂದೆ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ಒಂದು ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿದ್ದವು. ಆದರೆ, ಈ ವರ್ಷ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ 25 ಸಾವಿರ ದಾಟಿಲ್ಲ. ವಿವಿಧ ಕಾಲೇಜುಗಳಿಗೆ ಭರ್ತಿ ಮಾಡಬೇಕಾದ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆಯೇ ಸುಮಾರು 20 ಸಾವಿರ ಇದೆ. ಹಾಗಾಗಿ, ಅರ್ಜಿ ಹಾಕಿದ ಎಲ್ಲರಿಗೂ ಸೀಟು ಸುಲಭವಾಗಿ ದೊರೆಯುತ್ತದೆ.

ಖಾಸಗಿ ಕೋಟಾ ಕೇಳುವವರಿಲ್ಲ: ಸರ್ಕಾರಿ ಕೋಟಾದ ಅಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಬಿ.ಇಡಿ ಪ್ರವೇಶ ಸುಲಭವಾಗಿ ದೊರೆಯುವ ಕಾರಣ ಖಾಸಗಿ ಕೋಟಾದ ಅಡಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳೇ ಇಲ್ಲದಂತೆ ಆಗಿದೆ.

ಅನುದಾನಿತ ಕಾಲೇಜುಗಳು ಶೇ 25ರಷ್ಟು ಹಾಗೂ ಖಾಸಗಿ ಕಾಲೇಜುಗಳು ಶೇ 50ರಷ್ಟು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದರೂ ಬಹುತೇಕ ಕಾಲೇಜುಗಳಲ್ಲಿ ಒಂದೂ ಸೀಟು ಭರ್ತಿಯಾಗಿಲ್ಲ.  ‘ಒಂದು ವರ್ಷದ ಅವಧಿ ಇದ್ದಾಗ 100 ವಿದ್ಯಾರ್ಥಿಗಳಿಗೆ ಅವಕಾಶವಿತ್ತು. ಅವಧಿ ವಿಸ್ತರಣೆಯಾದ ನಂತರ 50ರಷ್ಟು ಸೀಟು ಕಡಿತ ಮಾಡಿದ್ದೇವೆ.

ಈಗ ಖಾಸಗಿ ಕೋಟಾದಡಿ ಲಭ್ಯವಿರುವ ಶೇ 25ರಷ್ಟು ಸೀಟುಗಳೂ ಖಾಲಿ ಉಳಿದಿವೆ. ಸುಸಜ್ಜಿತ ಕಟ್ಟಡ, ನುರಿತ ಶಿಕ್ಷಕರು ಇರುವ ಕಾಲೇಜಿಗೇ ಈ ಸ್ಥಿತಿ ಬಂದಿದೆ. ಇದೇ ಸ್ಥಿತಿ ಮುಂದುವರಿದರೆ ಸಿಬ್ಬಂದಿಗೆ ಸಂಬಳ ಕೊಡಲೂ ಸಾಧ್ಯವಾಗುವುದಿಲ್ಲ’ ಎಂದು ಖಾಸಗಿ ಕಾಲೇಜುಗಳ ಸ್ಥಿತಿ ಬಿಚ್ಚಿಟ್ಟರು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್‌.ಕೃಷ್ಣಮೂರ್ತಿ.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಪ್ರತಿ ವರ್ಷ ಬಿ.ಇಡಿ ಕಾಲೇಜುಗಳು ಜನವರಿ ಒಳಗೆ ಆರಂಭವಾಗುತ್ತಿದ್ದವು. ಈ ವರ್ಷ ನಿಗದಿತ ಅರ್ಜಿ ಸಲ್ಲಿಕೆಯಾಗದ ಕಾರಣ ಜ. 15ರವರೆಗೂ ಅವಧಿ ವಿಸ್ತರಿಸಲಾಗಿದೆ. 2013ರಲ್ಲಿ ಆಯ್ಕೆಯಾಗಿ ಬಿ.ಇಡಿ ಪೂರೈಸದ 733 ಪಿಯು ಉಪನ್ಯಾಸಕರು ಈ ಬಾರಿ ಬಿ.ಇಡಿ ಪ್ರವೇಶ ಪಡೆಯಲು ಶಿಷ್ಯವೇತನ ಸಹಿತ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಶೈಕ್ಷಣಿಕ ಅವಧಿಯೂ ಏರುಪೇರು: ಬಿ.ಇಡಿ ಶೈಕ್ಷಣಿಕ ಅವಧಿ ಮೊದಲು ಜುಲೈನಿಂದ ಆರಂಭವಾಗುತ್ತಿತ್ತು. ದಶಕದ ಹಿಂದೆ ಈ ಅವಧಿ ನವೆಂಬರ್‌ಗೆ ಬದಲಾಗಿತ್ತು. ಈ ವರ್ಷ ಅರ್ಜಿ ಸಲ್ಲಿಕೆಯ ಅವಧಿ ಮುಂದೂಡಿರುವ ಕಾರಣ ಎಲ್ಲ ಪ್ರಕ್ರಿಯೆ ಮುಗಿದು ಕಾಲೇಜುಗಳು ಆರಂಭವಾಗಲು ಎರಡು ತಿಂಗಳು ವಿಳಂಬವಾಗಲಿದೆ. ಪದವಿ ಪರೀಕ್ಷಾ ಫಲಿತಾಂಶ ಜುಲೈ ಒಳಗೇ ಬರುವ ಕಾರಣ ವಿದ್ಯಾರ್ಥಿಗಳು ಆರೇಳು ತಿಂಗಳು ಕಾಯದೇ ಸ್ನಾತಕೋತ್ತರ ಪದವಿಗೆ ಸೇರುತ್ತಾರೆ.

ಬಿ.ಇಡಿ ಮೇಲೆ ಪರಿಣಾಮ ಬೀರಲು ಇದೂ ಒಂದು ಕಾರಣ’ ಎಂದು ವಿಶ್ಲೇಷಿಸುತ್ತಾರೆ ದಾವಣಗೆರೆ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ವಾಮದೇವಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT