ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ಸರ್ಕಾರಕ್ಕೆ ವರದಿ ನೀಡದ ಜಿಲ್ಲಾಡಳಿತ

ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ವಿಧಾನಸಭೆ ವಿರೋಧಪಕ್ಷದ ನಾಯಕ ಶೆಟ್ಟರ್ ಆರೋಪ
Last Updated 5 ಜನವರಿ 2017, 9:12 IST
ಅಕ್ಷರ ಗಾತ್ರ

ಯಾದಗಿರಿ: ‘ಬರ ಘೋಷಿತ ಪಟ್ಟಿಯಿಂದ ಯಾದಗಿರಿ ತಾಲ್ಲೂಕು ಕೈಬಿಟ್ಟು ಹೋಗಲು ಜಿಲ್ಲಾಡಳಿತ ವೈಫಲ್ಯ ಮುಖ್ಯ ಕಾರಣ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು. ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಬರ ಅಧ್ಯಯನ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಿಲ್ಲೆಯಲ್ಲಿ ಶಹಾಪುರ ತಾಲ್ಲೂಕನ್ನು ಮಾತ್ರ ಸರ್ಕಾರ ಬರ ಪಟ್ಟಿಯಲ್ಲಿ ಘೋಷಿಸಿದೆ. ಆದರೆ, ಶಾಶ್ವತ ನೀರಾವರಿ ವಂಚಿತವಾಗಿರುವ ಹೆಚ್ಚಿನ ಪ್ರದೇಶಗಳು ಯಾದಗಿರಿ ತಾಲ್ಲೂಕಿನಲ್ಲಿ ಇವೆ. ಇಲ್ಲಿ ಅಧಿಕಾರಿಗಳು ಬರ ಕುರಿತು ಸಮಪರ್ಕವಾಗಿ ಸರ್ವೆ ನಡೆಸಿಲ್ಲ. ಇದರಿಂದ ಬರ ಪರಿಸ್ಥಿತಿ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿಲ್ಲ. ಹಾಗಾಗಿ, ಜಿಲ್ಲಾಡಳಿತ ಕೂಡ ಸರ್ಕಾರಕ್ಕೆ ವರದಿ ನೀಡಿಲ್ಲ. ಇದರಿಂದಾಗಿ ಯಾದಗಿರಿ ತಾಲ್ಲೂಕು ಬರಪಟ್ಟಿಯಿಂದ ಹೊರಗುಳಿಯುವಂತಾಗಿದೆ. ರೈತರಿಗೆ ಆಗಿರುವ ಈ ಅನ್ಯಾಯಕ್ಕೆ ಜಿಲ್ಲಾಡಳಿತ, ಅಧಿಕಾರಿ ವರ್ಗ ನೇರ ಹೊಣೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಾದಗಿರಿ ತಾಲ್ಲೂಕಿನಲ್ಲಿ ಬಹುತೇಕ ಮಳೆಯಾಶ್ರಿತವಾಗಿ ಜೋಳದ ಬೆಳೆಯನ್ನು ರೈತರು ಬೆಳೆದಿದ್ದಾರೆ. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆ ಸಂಪೂರ್ಣ ವಿಫಲಗೊಂಡಿದೆ. ಪರಿಸ್ಥಿತಿ ಹೀಗಿದ್ದೂ ಅಧಿಕಾರಿಗಳು ಬರ ಅಧ್ಯಯನ, ಸರ್ವೆ ನಡೆಸದಿರುವುದು ಅಚ್ಚರಿ ಹುಟ್ಟಿಸಿದೆ. ಅಧಿಕಾರಿ ವರ್ಗದ ಮೇಲೆ ಜಿಲ್ಲಾಡಳಿತಕ್ಕೆ ಹಿಡಿತ ಇಲ್ಲ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಒಟ್ಟಾರೆ ತಾಲ್ಲೂಕಿನ ರೈತರಿಗೆ ಸಿಗಬೇಕಾದ ಬರಪರಿಹಾರವನ್ನು ಜಿಲ್ಲಾಡಳಿತ ತಪ್ಪಿಸಿದೆ’ ಎಂದರು.

ಅಧಿಕಾರಿಗಳ ವಂಚನೆ: ‘ಬೆಳೆವಿಮೆಗೆ ಸಂಬಂಧಿಸಿದಂತೆ ರೈತರ ಪಹಣಿಯಲ್ಲಿನ ಬೆಳೆಯನ್ನೇ ಅಧಿಕಾರಿಗಳು ನಮೂದಿಸಿಕೊಳ್ಳುವ ಮೂಲಕ ರೈತರನ್ನು ವಂಚಿಸುವ ಕೆಲಸ ಮಾಡಿದ್ದಾರೆ’ ಎಂದು ಜಗದೀಶ ಶೆಟ್ಟರ ಹರಿಹಾಯ್ದರು.

‘ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡುತ್ತಿಲ್ಲ. ಇದರಿಂದಾಗಿ ಅವರಿಗೆ ರೈತರು ಹೊಲದಲ್ಲಿ ಏನು ಬೆಳೆದಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಪಹಣಿಯಲ್ಲಿ ಎಂದೋ ನಮೂದಿಸಿರುವ ಬೆಳೆಯನ್ನೇ ಪ್ರಸಕ್ತ ವರ್ಷದ ಬರ ಅಧ್ಯಯನ ಪಟ್ಟಿಯಲ್ಲಿ ಸೇರಿಸುವ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಬೆಳೆಹಾನಿ, ಬರಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ₹4700 ಕೋಟಿ ಬಿಡುಗಡೆ ಮಾಡಿದೆ. ಆದರೆ, ಸಿಎಂ ಸಿದ್ದರಾಮಯ್ಯ ಕೇಂದ್ರ ಬರಪರಿಹಾರ ಬಿಡುಗಡೆ ಮಾಡಿಲ್ಲ ಎಂಬುದಾಗಿ ನೆಪ ಹೇಳುತ್ತಿದ್ದಾರೆ. ನೆಪಗಳಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಸಿಎಂ ಮನವರಿಕೆ ಮಾಡಿಕೊಳ್ಳಬೇಕಿದೆ. ಸರ್ಕಾರ ಬೆಳೆ ವಿಮೆ ಅವಧಿಯನ್ನು ಜ.10ರಿಂ ಜ.30ರವರೆಗೆ ವಿಸ್ತಿರಿಸಬೇಕು. ಆ ಮೂಲಕವಾದರೂ ರೈತರ ಹಿತಕಾಪಾಡಬೇಕು’ ಎಂದು ಶೆಟ್ಟರ್‌ ಒತ್ತಾಯಿಸಿದರು.

ಶಾಸಕ ಗೋವಿಂದ ಕಾರಜೋಳ, ಸಂಸದ ಶ್ರೀರಾಮುಲು, ಬಿಜೆಪಿ ಮುಖಂಡರಾದ ರಾಜೂಗೌಡ, ರೇವು ನಾಯಕ್ ಬೆಳಮಗಿ, ಎನ್‌.ರವಿಕುಮಾರ, ಎಂ.ನಾಗರಾಜ್, ನಾಗರತ್ನಾ ಕುಪ್ಪಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT