ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಸ್ತುಪ್ರದರ್ಶನ: 33 ಮಾದರಿ ಆಯ್ಕೆ

Last Updated 5 ಜನವರಿ 2017, 10:11 IST
ಅಕ್ಷರ ಗಾತ್ರ

ಚಾಮರಾಜನಗರ: ಸುತ್ತೂರು ಜಾತ್ರೆಯ ಅಂಗವಾಗಿ ನಗರದ ಜೆಎಸ್ಎಸ್ ಬಾಲಕರ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಕ್ಲಸ್ಟರ್‌ಮಟ್ಟದ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ 33ಮಾದರಿಗಳನ್ನು ಆಯ್ಕೆ ಮಾಡಲಾಯಿತು.

ವಿಜ್ಞಾನ ಮತ್ತು ಸಮಾಜ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಕೆ.ಸಿದ್ದಪ್ಪ ಅವರ ನೇತೃತ್ವದ ತಂಡದ ಸದಸ್ಯರು ಉತ್ತಮವಾದ ಮಾದರಿಗಳನ್ನು ಆಯ್ಕೆ ಮಾಡಿ ಜಾತ್ರೆಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಹೆಚ್ಚಿನ ಪೂರ್ವ ತಯಾರಿಯೊಂದಿಗೆ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ವ್ಯಾಪ್ತಿಯ 8 ಜೆಎಸ್‌ಎಸ್‌ ಪ್ರೌಢಶಾಲೆಗಳು ಹಾಗೂ ನಗರದ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ವಿಜ್ಞಾನದ ವಿವಿಧ ಮಾದರಿಗಳನ್ನು ತಯಾರಿಸಿದರು. ಪ್ರತಿ ವರ್ಷವೂ ಸುತ್ತೂರು ಜಾತ್ರೆಗೆ ಈ ವಸ್ತು ಪ್ರದರ್ಶನವನ್ನು ಶಾಲಾಮಟ್ಟದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಉತ್ತಮ ಮಾದರಿಯನ್ನು ಕ್ಲಸ್ಟರ್‌ಮಟ್ಟಕ್ಕೆ ಕಳುಹಿಸಲಾಗುತ್ತಿದೆ. 8 ಶಾಲೆಯ ವಿದ್ಯಾರ್ಥಿಗಳು ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಸುಮಾರು 112 ಮಾದರಿಗಳನ್ನು ಪ್ರದರ್ಶಿಸಿದರು.

ಪ್ರೊ.ಕೆ.ಸಿದ್ದಪ್ಪ ಅವರ ತಂಡದಲ್ಲಿ ನಿವೃತ್ತ ಉಪಕುಲಪತಿ ಮುಕ್ತಾ ಬಿ. ಕಾಗಲಿ, ಪ್ರೊ.ಮಲ್ಲಪ್ಪ, ಪ್ರೊ.ಗುರುನಂಜಯ್ಯ, ಪ್ರೊ.ಶಿವಲಿಂಗಸ್ವಾಮಿ, ಪ್ರೊ.ಸಿ.ಕೆ.ಚಂದ್ರಶೇಖರಯ್ಯ ಇದ್ದರು.ನಗರದ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆ, ತಾಳವಾಡಿ, ಉಡಿಗಾಲ, ಅರಕಲವಾಡಿ, ಸಂತೇಮರಹಳ್ಳಿ, ಯಳಂದೂರು, ಉಮ್ಮತ್ತೂರು ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ಕೆ.ಸಿದ್ದಪ್ಪ ಮಾತನಾಡಿ, ಮಕ್ಕಳ ಪ್ರತಿಭೆ ಹೊರತರಲು ಇಂಥ ವೇದಿಕೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.

ವಸ್ತು ಪ್ರದರ್ಶನ ಇತರ ಕಾರ್ಯಕ್ರಮಕ್ಕಿಂತ ಭಿನ್ನವಾಗಿದೆ. ಮಕ್ಕಳು ತಮ್ಮಲ್ಲಿ ವ್ಯಕ್ತವಾಗುವ ಭಾವನೆಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮವಾದ ಮಾದರಿಗಳನ್ನು ತಯಾರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಮಾದರಿಗಳನ್ನು ತಯಾರು ಮಾಡುವ ಜೊತೆಗೆ, ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಅದನ್ನು ವಿವರಿಸುವ ಕಲೆ ಕಲಿಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಅಕ್ಷರ ದಾಸೋಹ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ, ಮುಖ್ಯ ಶಿಕ್ಷಕರಾದ ಜ್ಞಾನದೇವ, ನಂಜುಂಡಸ್ವಾಮಿ, ಆರ್.ಎಸ್. ಲಿಂಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT