ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇವಪ್ರಸಾದ್‌ಗೆ ದುಃಖತಪ್ತ ವಿದಾಯ

ದುಃಖದ ಮಡುವಿನಲ್ಲಿ ಹಾಲಹಳ್ಳಿ ಎಲ್ಲಿ ನೋಡಿದರಲ್ಲಿ ಜನವೋ ಜನ
Last Updated 5 ಜನವರಿ 2017, 10:13 IST
ಅಕ್ಷರ ಗಾತ್ರ

ಚಾಮರಾಜನಗರ: ಹಾಲಹಳ್ಳಿ ಬುಧವಾರ ಅಕ್ಷರಶಃ ದುಃಖದ ಮಡುವಿನಲ್ಲಿ ಮಲಗಿತ್ತು. ಗ್ರಾಮದ ಬೀದಿಗಳಲ್ಲಿ ನೀರವ ಮೌನ ಆವರಿಸಿತ್ತು. ನೇಸರ ನೆತ್ತಿ ಸುಡುತ್ತಿದ್ದರೂ ನೆರೆದಿದ್ದ ಜನರ ದುಃಖದ ಕಟ್ಟೆ ಒಡೆದಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ. ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಅವರ ಪಾರ್ಥಿವ ಶರೀರ ಇಟ್ಟಿದ್ದ ಮೈದಾನದತ್ತ ಎಲ್ಲರೂ ಮೆಲ್ಲನೆ ಹೆಜ್ಜೆಹಾಕುತ್ತಿದ್ದರು.

ಸರದಿ ಸಾಲಿನಲ್ಲಿ ನಿಂತು ಪಾರ್ಥಿವ ಶರೀರದ ಬಳಿಗೆ ಬಂದಾಗ ತಮಗೆ ಅರಿವು ಇಲ್ಲದೆಯೇ ಅಗಲಿದ ನಾಯಕನಿಗೆ ಕೈಮುಗಿಯುತ್ತಿದ್ದರು. ಕೆಲವು ಅಭಿಮಾನಿಗಳು ಜೈಕಾರ ಮೊಳಗಿಸುತ್ತಿದ್ದರು. ಮತ್ತೆ ಕೆಲವರು ಮನದಾಳದಿಂದ ಒತ್ತರಿಸಿ ಬರುತ್ತಿದ್ದ ದುಃಖ ತಡೆಯಲಾರದೆ ಕಣ್ಣೀರು ಸುರಿಸುತ್ತಿದ್ದರು. ಮೆಚ್ಚಿನ ನಾಯಕನ ಚಿರನಿದ್ರೆಯ ಚಿತ್ರಣವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು.

ಬೆಳಿಗ್ಗೆಯಿಂದಲೇ ಗುಂಡ್ಲುಪೇಟೆ ಸೇರಿದಂತೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಜಮಾಯಿಸಿದ್ದರು.

ಪಕ್ಷಭೇದ ಮರೆತು ಬಿಜೆಪಿ, ಜೆಡಿಎಸ್‌ ಸೇರಿದಂತೆ ವಿವಿಧ ಸಂಘ–ಸಂಸ್ಥೆಯ ಮುಖಂಡರು ಸೇರಿದ್ದರು. ಎಲ್ಲರ ಮನದಲ್ಲೂ ಮಹದೇವಪ್ರಸಾದ್‌ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ ಗುಣಗಾನ ನಡೆಯುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಸರ್ಕಾರವೇ ಹಾಲಹಳ್ಳಿಗೆ ಬಂದಿತ್ತು.

ಬೆರಳೆಣಿಕೆಯಷ್ಟು ಸಚಿವರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಸಚಿವರು ಬಂದು ತಮ್ಮ ಸಹೋದ್ಯೋಗಿಯ ಅಂತಿಮ ದರ್ಶನ ಪಡೆದರು. ವಿರೋಧ ಪಕ್ಷದ ಮುಖಂಡರ ದಂಡೇ ಬಂದಿತ್ತು. ಇದು ಮಹದೇವಪ್ರಸಾದ್‌ ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಗ್ರಾಮದ ಹೊರವಲಯದಲ್ಲಿ ಮಹದೇವಪ್ರಸಾದ್‌ ಅವರಿಗೆ ಸೇರಿದ ತೋಟವಿದೆ. ಈ ತೋಟ ಅವರಿಗೆ ಅಚ್ಚುಮೆಚ್ಚು. ಇಲ್ಲಿ ತೆಂಗಿನ ಗಿಡ ಬೆಳೆಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಕಾರ್ಯಕ್ರಮಗಳಲ್ಲಿ ಅವರೇ ಹೇಳುತ್ತಿದ್ದರು.

ಮೆರವಣಿಗೆ ಮೂಲಕ ತೋಟಕ್ಕೆ ಪಾರ್ಥಿವ ಶರೀರ ತರಲಾಯಿತು. ಈ ವೇಳೆ ಅಭಿಮಾನಿಗಳು ತೋಟದೊಳಕ್ಕೆ ನುಗ್ಗಲು ಯತ್ನಿಸಿದರು. ಪ್ರವೇಶ ದ್ವಾರದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಪುತ್ರ ಗಣೇಶ್‌ಪ್ರಸಾದ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಮಹದೇವಪ್ರಸಾದ್‌ ಅವರ ಪ್ರೀತಿಯ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ಮಾಡಲಾಯಿತು.

ಪತ್ನಿ ಅಸ್ವಸ್ಥ: ಮಹದೇವಪ್ರಸಾದ್‌ ಅವರ ಪಾರ್ಥಿವ ಶರೀರದ ಪಕ್ಕದಲ್ಲಿಯೇ ಪತ್ನಿ ಡಾ.ಎಂ.ಸಿ.ಮೋಹನ್‌ಕುಮಾರಿ(ಡಾ.ಗೀತಾ ಮಹದೇವಪ್ರಸಾದ್‌), ಪುತ್ರ ಎಚ್‌.ಎಂ.ಗಣೇಶ್‌ಪ್ರಸಾದ್‌, ಸೊಸೆ ವಿದ್ಯಾಶ್ರೀ ಸೇರಿದಂತೆ ಕುಟುಂಬದ ಸದಸ್ಯರು ನೆರೆದಿದ್ದರು. ಪಾರ್ಥಿವ ಶರೀರ ನೋಡಿ ಗೀತಾ ಅವರು ಬಿಕ್ಕಿಬಿಕ್ಕಿ ಅತ್ತರು. ಅಸ್ವಸ್ಥಗೊಂಡ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರು. ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್‌.ಜಯಣ್ಣ, ಆರ್‌.ನರೇಂದ್ರ ಅವರು ಸ್ಥಳದಲ್ಲಿಯೇ ಹಾಜರಿದ್ದು, ತಮ್ಮ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್‌.ಸಿ.ಮಹದೇವಪ್ಪ, ಕಾಗೋಡು ತಿಮ್ಮಪ್ಪ, ಕೃಷ್ಣಪ್ಪ, ಎಂ.ಬಿ. ಪಾಟೀಲ, ಎಚ್‌.ಕೆ.ಪಾಟೀಲ್, ಕೆ.ಆರ್‌.ರಮೇಶ್‌ಕುಮಾರ್‌, ಆರ್. ರೋಷನ್‌ ಬೇಗ್‌, ಪ್ರಿಯಾಂಕ್‌ ಖರ್ಗೆ, ಬಸವರಾಜ ರಾಯರೆಡ್ಡಿ, ಈಶ್ವರ್‌ ಖಂಡ್ರೆ, ಎಸ್‌.ಎಸ್.ಮಲ್ಲಿಕಾರ್ಜುನ್‌, ಟಿ.ಬಿ.ಜಯಚಂದ್ರ, ದಿನೇಶ್‌ ಗುಂಡೂರಾವ್, ಕೆ.ಜೆ.ಜಾರ್ಜ್‌, ಉಮಾಶ್ರೀ, ವಿನಯ್‌ ಆರ್. ಕುಲಕರ್ಣಿ, ಸಂತೋಷ್‌ ಲಾಡ್‌, ಎ.ಮಂಜು, ರಾಮಲಿಂಗರೆಡ್ಡಿ, ತನ್ವೀರ್‌ ಸೇಠ್‌, ಯು.ಟಿ.ಖಾದರ್, ಡಾ.ಶರಣ ಪ್ರಕಾಶ್‌ ಪಾಟೀಲ್, ಎಚ್‌.ಆಂಜನೇಯ, ಬಿ.ರಮಾನಾಥ ರೈ, ಪ್ರಮೋದ್‌ ಮಧ್ವರಾಜ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್‌ ಅವರು ಅಂತಿಮ ದರ್ಶನ ಪಡೆದರು.

ಶಾಸಕ ಪುಟ್ಟರಂಗಶೆಟ್ಟಿ ಅವರು ಅಸ್ವಸ್ಥಗೊಂಡರು. ಅವರಿಗೆ ವೈದ್ಯರು ಸ್ಥಳದಲ್ಲಿಯೇ ಚಿಕಿತ್ಸೆ ನೀಡಿದರು. ಬಂದೋಬಸ್ತ್‌ಗೆ ನಿಯೋಜಿಸಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರು ಸ್ಥಳದಲ್ಲಿಯೇ ಅಸ್ವಸ್ಥಗೊಂಡರು. ಕೂಡಲೇ, ಅವರನ್ನು ಆಂಬುಲೆನ್ಸ್‌ನಲ್ಲಿ ಬೇಗೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಜಿಲ್ಲಾಧಿಕಾರಿ ಬಿ.ರಾಮು ನೇತೃತ್ವದಡಿ ಇಡೀ ಜಿಲ್ಲಾಡಳಿತವೇ ಜಿಲ್ಲಾ ಉಸ್ತುವಾರಿ ಸಚಿವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT