ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದಲ್ಲಿ ಸಂವೇದನೆ ಕಾಣೆ

ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ಸಮಾವೇಶ: ಪ್ರಾಧ್ಯಾಪಕ ರಹಮತ್‌ ತರೀಕೆರೆ ಕಳವಳ
Last Updated 5 ಜನವರಿ 2017, 10:50 IST
ಅಕ್ಷರ ಗಾತ್ರ

ಹೊಸಪೇಟೆ: ‘ಸಾಹಿತ್ಯದಲ್ಲಿ ಸೂಕ್ಷ್ಮ ಸಂವೇದನೆ ಕಾಣೆ ಆಗುತ್ತಿದೆ. ಅಷ್ಟೇ ಅಲ್ಲ, ಸಂವೇದನಾರಹಿತ ಸಾಹಿತ್ಯ ಸಂಶೋಧನೆಗಳೇ ಹೆಚ್ಚಾಗಿ ಆಗುತ್ತಿವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ರಹಮತ್‌ ತರೀಕೆರೆ ತಿಳಿಸಿದರು.

ಶಂಬಾ ಜೋಶಿ ಅವರ ಜನ್ಮದಿನದ ಅಂಗವಾಗಿ ಬುಧವಾರ ವಿ.ವಿ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಶೋ ಧನಾ ಸಮಾವೇಶದಲ್ಲಿ ‘ಸಾಹಿತ್ಯ ಸಂಶೋಧನೆ; ಸವಾಲು ಮತ್ತು ಸಾಧ್ಯತೆ’ ಕುರಿತು ಮಾತನಾಡಿದರು.

ಒಂದೇ ಸತ್ಯವನ್ನು ಇಟ್ಟುಕೊಂಡು ಹುಡುಕಾಟ ಮಾಡಬಾರದು. ಅದನ್ನು ಭಿನ್ನ ನೆಲೆಗಳಲ್ಲಿ ನೋಡಬೇಕು. ದಲಿ ತರು, ಮಹಿಳೆಯರ ದೃಷ್ಟಿಯಿಂದ ನೋಡಿ ದರೆ ಭಿನ್ನ ಫಲಿತಗಳನ್ನು ಕಾಣಬಹುದು ಎಂದರು.

ಜನಪದ, ವಚನ ಸಾಹಿತ್ಯದ ಬಗ್ಗೆ ಅನೇಕ ಸಂಶೋಧನೆಗಳು ಆಗಿವೆ. ಶಂಬಾ ಜೋಶಿ, ಎಂ.ಎಂ. ಕಲಬುರ್ಗಿ, ಪಂಡಿತ್‌ ತಾರಾನಾಥ ಅವರ ಬಗ್ಗೆ ಸಂಶೋಧನಾ ಆಕರಗಳಾಗಿಲ್ಲ. ಹೀಗೆ ಹಲವು ವಿಷಯಗಳನ್ನು ಸಂಶೋಧಕರು ತಲುಪಲು ಸಾಧ್ಯವಾಗಿಲ್ಲ ಎಂದರು. ಹೊಸ ಸಾಹಿತ್ಯದ ಸಂಶೋಧನಾ ಆಕರಗಳಿಗೆ ಮನಸ್ಸು ಮಾಡಬೇಕಾಗಿದೆ. ಇಂದಿನ ಸಂದರ್ಭದಲ್ಲಿ ಸಾಹಿತ್ಯದ ಬಗೆಗಿನ ನಮ್ಮ ಪರಿಕಲ್ಪನೆ ಬದಲಾಗುವ ಅಗತ್ಯವಿದೆ. ಸಂಶೋಧನೆ ಕುರಿತ ಮನ ಸ್ಥಿತಿ ಕೂಡ ಬದಲಾಗಬೇಕು.

ಆಸಕ್ತಿ, ಕುತೂಹಲ, ಪ್ರಶ್ನೆ ಮತ್ತು ಅನುಮಾನ ಗಳು ಇರದಿದ್ದರೆ ಸಂಶೋಧನೆ ಮಾಡಲು ಸಾಧ್ಯವಿಲ್ಲ. ಈ ನಾಲ್ಕೂ ಸಂಗತಿಗಳು ಸಂಶೋಧನಾಕಾರರಲ್ಲಿ ಇರಬೇಕು ಎಂದು ತಿಳಿಸಿದರು.

‘ಸಮಾಜ ಸಂಶೋಧನೆ ಏಕೆ?’ ಕುರಿತು ಮಾತನಾಡಿದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಚಂದ್ರ ಪೂಜಾರ್‌, ಸಂಶೋಧನೆ ಕೇವಲ ಪದವಿ ಪಡೆಯುವುದಕ್ಕಾಗಿ ಎಂಬುದು ವಾಸ್ತವ ವಿಚಾರ. ಆದರೆ, ಪದವಿ ಜತೆಗೆ ಹೊಸ ವಿಚಾರಗಳನ್ನು ಸೃಷ್ಟಿಸಿ, ಸಮಾಜದಲ್ಲಿ ಬದಲಾವಣೆ ತರಬೇಕು ಎಂದರು.

ಹೊಸ ವಿಚಾರಗಳು ಜನರನ್ನು ಸಬಲರಾಗಿ ಮಾಡುತ್ತವೆ. ಜತೆಗೆ ಆ ವಿಚಾರಗಳು ಜನರ ಪ್ರಜ್ಞೆಯ ವಿಚಾರ ಗಳಾಗಿ ಬದಲಾಗಬೇಕು. ಅನ್ಯಾಯ, ಅನೈತಿಕ, ಶೋಷಣೆ, ಲಿಂಗ ತರತಮ ಎಂಬುದು ಕೇವಲ ಪುಸ್ತಕಗಳಿಗೆ ಸೀಮಿತ ವಿಷಯಗಳಾಗಿವೆ. ಇವುಗಳು ಜನರ ಪ್ರಜ್ಞೆಯ ವಿಚಾರವಾಗಿಲ್ಲ. ಈ ಬಗ್ಗೆ ಜನ ರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಸಂಶೋಧಕರಿಂದ ಆಗಬೇಕು ಎಂದು ಹೇಳಿದರು.

ಹೆಣ್ಣನ್ನು ಇಂದಿಗೂ ಎರಡನೇ ದರ್ಜೆಯ ಪ್ರಜೆಯಾಗಿ ನೋಡುತ್ತೇವೆ. ಸಮಾಜದ ಈ ಮನಸ್ಥಿತಿ ಬದಲಾಗ ಬೇಕು. ಆ ನಿಟ್ಟಿನಲ್ಲಿ ಸಂಶೋಧಕರು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ತಾಳ್ಮೆ, ಶ್ರದ್ಧೆ ಮತ್ತು ಕುತೂಹಲ ಸಂಶೋಧನಾ ಕ್ಷೇತ್ರ ಬಯಸುತ್ತದೆ. ಹೊಸ ಸಂಶೋಧಕರು ಈ ಮೂರು ವಿಷಯಗಳಿಗೆ ಹೆಚ್ಚಿನ ಒತ್ತು ಕೊಡಬೇಕು. ಒಂದು ಕ್ಷಣವೂ ಮೈಮರೆಯದೆ ಬೌದ್ಧಿಕವಾಗಿ ಎಚ್ಚರವಾಗಿ ಇರಬೇಕು ಎಂದು ಹೇಳಿದರು.

ಸಂಶೋಧನೆಗೆ ಖಚಿತ ಚೌಕಟ್ಟು ಹಾಕಿಕೊಳ್ಳಬಾರದು. ಪ್ರಶ್ನೆಗಳನ್ನು ಹಾಕಿ ಕೊಳ್ಳುವ ಕುತೂಹಲ ವಿದ್ಯಾರ್ಥಿಗಳಲ್ಲಿ ಇರಬೇಕು. ಮಾತುಗಾರಿಕೆಗೆ ವಿಚಾರ ಸೃಷ್ಟಿಸುವ ಸಾಮರ್ಥ್ಯ ಇದೆ. ಮುಂದಿನ ದಿನಗಳಲ್ಲಿ ಮಾತುಗಾರಿಕೆಗೆ ಹೆಚ್ಚಿನ ಮಹತ್ವ ಇರುವುದರಿಂದ ಸಂವಹನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT