ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿಯ ನಡೆ...

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಹೆಚ್ಚೇನೂ ಬೇಡ, ಇದೇ ಏಳೆಂಟು ವರ್ಷಗಳ ಹಿಂದೆ ತಿರುಗಿ ನೋಡಿದರೆ ದೇವನಹಳ್ಳಿಯ ಹಳೇ ಚಹರೆ ಆಶ್ವರ್ಯ ಹುಟ್ಟಿಸುತ್ತದೆ. ಹೀಗಂತೂ ಇರಲಿಲ್ಲ ಈ ಪ್ರದೇಶ. ಜಾಗ ಖಾಲಿ ಇದೆ ಎಂದರೂ ಖರೀದಿ ಮಾಡುವವರೂ ಇರಲಿಲ್ಲ.

ಆದರೆ ದೇವನಹಳ್ಳಿ ಮತ್ತು ಸುತ್ತಮುತ್ತಲಿನ ವಲಯಗಳ ಬಂಗಾರದ ನಡೆ ಆರಂಭವಾದದ್ದು 2008ರ ನಂತರವೇ. ಈ ಭಾಗದತ್ತ ಜನಾಕರ್ಷಣೆ ಶುರುವಾದುದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿ ಬಿದ್ದ ಮೇಲೆ. ಅಲ್ಲಿಂದೀಚೆಗೇ ಈ ಭಾಗ ಹೊಸ ನೋಟ, ಹೊಸ ಮೈಮಾಟದಿಂದ ನಳನಳಿಸಲು ಆರಂಭಿಸಿದ್ದು.

ಈ ಭಾಗ ಇದ್ದಕ್ಕಿದ್ದಂತೆ ಒಂದೇ ರಾತ್ರಿಯಲ್ಲಿ ತನ್ನ ಅಸ್ತಿತ್ವ ಬದಲಿಸಿಕೊಳ್ಳಲಿಲ್ಲ. ಬೆಂಗಳೂರಿನ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಈ ಪ್ರದೇಶ ಈ ರೂಪಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಂಡಿದೆ. ಮುಂದಿನ ರೂಪಕ್ಕೆ ತಿರುಗಲು ಇನ್ನಷ್ಟು ಸಮಯ ತೆಗೆದುಕೊಳ್ಳಲಿದೆ. ಆದರೆ ಬದಲಾವಣೆ ಖಚಿತವಷ್ಟೆ.

ಕೇಂದ್ರ ಸರ್ಕಾರದಿಂದ ಹಳೇ ನೋಟು ರದ್ದತಿಗೆ ಆದೇಶ ಬಂದ ನಂತರ ಇದ್ದಕ್ಕಿದ್ದಂತೆ ರಿಯಲ್‌ ಎಸ್ಟೇಟ್‌ ವಹಿವಾಟು ಸ್ತಬ್ಧವಾಗಿದ್ದು ಸತ್ಯ. ಇನ್ನೇನು ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮ ನೆಲಕಚ್ಚಿ ಹೋಗಲಿದೆ ಎನ್ನುವ ಕೂಗೂ ಕೇಳಿ ಬಂತು. ಇಡೀ ದೇಶದ ಆರ್ಥಿಕತೆ ಇಂಥದ್ದೊಂದು ಸಂದಿಗ್ಧ ಸ್ಥಿತಿಗೆ ಬಂದು ನಿಂತಿರುವಾಗ ಬೆಂಗಳೂರು, ಅದರಲ್ಲೂ ಉತ್ತರ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಭವಿಷ್ಯ ತನ್ನತನವನ್ನು ಉಳಿಸಿಕೊಂಡು ಗಟ್ಟಿಯಾಗಿ ನಿಂತಿರುವುದು ವಿಶೇಷ.

ನೋಟು ರದ್ದತಿ ಮತ್ತು ಉದ್ಯಮ
ನೋಟು ರದ್ದತಿ ಒಂದು ಬಹುದೊಡ್ಡ ನಡೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ನಿರ್ಧಾರದಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಕರಾಳ ಛಾಯೆ ಆವರಿಸಿಕೊಳ್ಳಲಿದೆ ಎನ್ನುವ ಮಾತು ಸುಳ್ಳು ಎನ್ನುವುದು ಉದ್ಯಮಿಗಳ ನಿಲುವು.

ಅದರಲ್ಲೂ ದೇವಹನಹಳ್ಳಿಯ ಸುತ್ತ–ಮುತ್ತ ರಿಯಲ್‌ ಎಸ್ಟೇಟ್‌ ವಹಿವಾಟು ಮಹತ್ವ ಕಳೆದುಕೊಳ್ಳಲು ಸಾಧ್ಯವೇ ಇಲ್ಲ. ಮುಂದಿನ ದಿನಗಳಲ್ಲಿ ಈ ಭಾಗ ಇನ್ನಷ್ಟು ಮೌಲ್ಯ ಪಡೆದುಕೊಳ್ಳಲಿದೆ ಎನ್ನುತ್ತಾರೆ ಅವರು.

‘ಹೌದು, ಮುಂದಿನ ದಿನಗಲ್ಲಿ ಅಂತರರಾಷ್ಟ್ರೀಯ ಕಂಪೆನಿಗಳು ಈ ಭಾಗದಲ್ಲಿ ನೆಲೆಯೂರಲಿವೆ. ಈ ಬೆಳವಣಿಗೆಯ ನಂತರ ದೇವನಹಳ್ಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಪ್ರಸ್ತುತ ನೋಟು ರದ್ದತಿ ಪ್ರಕ್ರಿಯೆಯಿಂದಾಗಿ ವಹಿವಾಟು ಕೆಲ ದಿನ ನಿಶ್ಚಲಗೊಂಡಿರುವುದು ನಿಜ. ಆದರೆ ಇದರಿಂದ ರಿಯಲ್‌ ಎಸ್ಟೇಟ್‌ ಬೆಲೆ ಕುಸಿಯುತ್ತದೆ ಎಂದು ಅರ್ಥವಲ್ಲ. ಇದೆಲ್ಲ ಮುಗಿದು ಸ್ಥಿರತೆ ಬಂದ ಮೇಲೆ ಈ ಭಾಗದ ಬೆಲೆ ಇನ್ನಷ್ಟು ಹೆಚ್ಚಲಿದೆ’ ಎನ್ನುತ್ತಾರೆ ಕಾಂಕಾರ್ಡ್‌ ಸಮೂಹದ  ಅಧ್ಯಕ್ಷರಾದ ಬಿ.ಎಸ್. ಶಿವರಾಮ.

ಕಪ್ಪು ಹಣದ ಹರಿವು ಇಲ್ಲಿಲ್ಲ
ಈ ಭಾಗದ ಬೇಡಿಕೆ ಬಹುತೇಕ ಉತ್ತರ ಬೆಂಗಳೂರಿನ ವೃತ್ತಿಪರರಿಂದ ಬರುತ್ತದೆ. ಮುಖ್ಯವಾಗಿ ಮಾನ್ಯತಾ ಟೆಕ್ ಪಾರ್ಕ್, ಕಿರ್ಲೋಸ್ಕರ್ ಬ್ಯುಸಿನೆಸ್ ಪಾರ್ಕ್ ಸೇರಿದಂತೆ ಈ ಭಾಗದ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ವೃತ್ತಿಪರರು ಈ ಭಾಗದಲ್ಲಿಯೇ ಮನೆ ಕೊಳ್ಳಲು ಬಯಸುತ್ತಾರೆ.
ಅಂತೆಯೇ ಈ ಭಾಗದ ವ್ಯವಹಾರ ಕೂಡ ಬಹುತೇಕ ಸಾಫ್ಟ್‌ವೇರ್‌ ಉದ್ಯೋಗಿಗಳನ್ನೇ ಗುರಿಯಾಗಿರಿಸಿಕೊಂಡು ನಡೆಯುತ್ತಿದೆ. ಉದ್ಯೋಗಿಗಳಲ್ಲಿ ಕಪ್ಪು ಹಣದ ಹರಿವು ಇಲ್ಲ. ಹೀಗಾಗಿ ಇಲ್ಲಿನ ವ್ಯವಹಾರದ ಮೇಲೆ ನೋಟು ರದ್ದತಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಶೇ 99ರಷ್ಟು ಜನ ಸಂಬಳ, ಪಿಎಫ್‌ ಹಾಗೂ ಬ್ಯಾಂಕ್‌ ಸಾಲವನ್ನು ಅವಲಂಬಿಸಿರುತ್ತಾರೆ.

ಹೀಗಿದೆ ಮೌಲ್ಯ
ಈ ಪ್ರದೇಶದ ವಾಣಿಜ್ಯ ಮತ್ತು ವಸತಿ ಬೆಲೆಗಳೆರಡೂ ಸಮತೋಲನದಲ್ಲಿ ಸಾಗಿವೆ. ತೀರಾ ಹೆಚ್ಚೇನೂ ಅಲ್ಲ, ಕಡಿಮೆಯೂ ಇಲ್ಲ.  ಪ್ರಸ್ತುತ ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ₹1000ದಿಂದ ₹5000ವರೆಗೂ ನಡೆಯುತ್ತಿದೆ. ಪ್ರದೇಶದ ಅಭಿವೃದ್ಧಿ, ಯೋಜನೆ, ಬಿಲ್ಡರ್‌ಗಳ ಹೆಸರು... ಸೇರಿದಂತೆ ಅನೇಕ ಕಾರಣಗಳು ಈ ಬೆಲೆಯನ್ನು ನಿರ್ಧರಿಸುವ ಮಾನದಂಡಗಳಾಗಿವೆ. ನೋಟು ರದ್ದತಿಯ ನಂತರ ಮನೆಗಳನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ನಿಜ. ಆದರೆ ದೇವನಹಳ್ಳಿ ಅದ್ಭುತ ಭವಿಷ್ಯವಿರುವ ವಲಯ, ಹೀಗಾಗಿ ಕೇಳಿದ ಬೆಲೆಗೆ ಕೊಡಲು ಸಿದ್ಧರಿಲ್ಲ.

ಹೆಬ್ಬಾಳದಿಂದ ಯಲಹಂಕವರೆಗಿನ ಬಳ್ಳಾರಿ ರಸ್ತೆಯನ್ನು ಉತ್ತರ ಬೆಂಗಳೂರಿನ ಪ್ರಮುಖ ಪ್ರದೇಶವೆಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ವಸತಿ ಬೆಳವಣಿಗೆಯಲ್ಲಿ ಒಂದು ಮಹತ್ವದ ಅಭಿವೃದ್ಧಿ ಉಂಟಾಗಿರುವುದಂತೂ ಸತ್ಯ.

ಈ ರಸ್ತೆಯ ಮೌಲ್ಯವನ್ನು ಹೆಚ್ಚಿಸಲು ಕಾರಣವಾದ ಮತ್ತೊಂದು ಪ್ರಮುಖ ಅಂಶವೆಂದರೆ ಸಿಕ್ಸ್‌ ಲೇನ್ ರಸ್ತೆಯ ಅನುಕೂಲತೆ. ಇದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ.

ಅಲ್ಲದೇ, ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಮತ್ತು ಆರೋಗ್ಯ ಕೇಂದ್ರಗಳು, ಸಾಮಾಜಿಕ ಮತ್ತು ಭೌತಿಕ ಮೂಲ ಸೌಕರ್ಯ ಹಾಗೂ ಕೈಗೆಟುಕುವ ವಸತಿ ಸಮುಚ್ಛಯಗಳು ಬೇಡಿಕೆಯನ್ನು ಹೆಚ್ಚಿಸುತ್ತಿರುವ ಇತರೆ ಅಂಶಗಳಾಗಿವೆ.

ಸರತಿ ಸಾಲಿನಲ್ಲಿ ಥಣಿಸಂದ್ರ
ದೇವನಹಳ್ಳಿ ಜೊತೆಗೆ ಪೈಪೋಟಿಯಲ್ಲಿ ಬೆಳೆಯುತ್ತಿರುವ ಮತ್ತೊಂದು ಪ್ರದೇಶ ಥಣಿಸಂದ್ರ. ಈ ಪ್ರದೇಶದಲ್ಲಿ ವಸತಿ ಮತ್ತು ವಾಣಿಜ್ಯ ಅಭಿವೃದ್ಧಿ ಯೋಜನೆಗಳು, ಐಟಿ ಪಾರ್ಕ್‌ಗಳು, ಮಾಲ್‌ಗಳು ಮತ್ತು ಫುಡ್‌ ಕೋರ್ಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ತಲೆ ಎತ್ತಿವೆ.  ರೂ ₹30ರಿಂದ ₹50 ಲಕ್ಷ ದರದಲ್ಲಿ ಅಪಾರ್ಟ್‌ಮೆಂಟ್  ಲಭ್ಯವಾಗುತ್ತಿರುವುದು ಥಣಿಸಂದ್ರ ಅಭಿವೃದ್ಧಿಗೆ ಪೂರಕ ಸಂಗತಿ.

ಈ ಪ್ರದೇಶ ವೈಟ್‌ಫೀಲ್ಡ್‌ಗೆ ಹತ್ತಿರದಲ್ಲಿದೆ. ರಿಂಗ್ ರಸ್ತೆ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವೈಟ್‌ಫೀಲ್ಡ್‌ಗೆ ಸುಲಭವಾಗಿ ಸಂಪರ್ಕ ಹೊಂದಬಹುದು. ವೈಟ್‌ಫೀಲ್ಡ್‌ನ ಸುತ್ತಮುತ್ತಲಿನ ಕಂಪೆನಿಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಐಟಿ ಜನರು ಥಣಿಸಂದ್ರದಲ್ಲಿ ಮನೆ ಮಾಡಿಕೊಳ್ಳಲು ಬಯಸುತ್ತಿರುವುದೂ ಇದೇ ಕಾರಣಕ್ಕೆ.

*
ಹೆಚ್ಚಿದೆ ವಿಲ್ಲಾ ಆಕರ್ಷಣೆ
ವಿಮಾನ ನಿಲ್ದಾಣದ ಸ್ಥಾಪನೆ ಹಾಗೂ ಸಿಕ್ಸ್‌ ಲೇನ್‌ ರಸ್ತೆಯ ನಂತರ ಇದಕ್ಕೆ ಒಂದು ಪ್ರತಿಷ್ಠಿತ ಐಡೆಂಟಿಟಿ ಸಿಕ್ಕಿದ್ದು, ಈ ಪ್ರದೇಶದ ಮುಖಚರ್ಯೆಯೇ ಬದಲಾಗಲಿದೆ.

ಈಗಿನ ಟ್ರೆಂಡ್‌ ಪ್ರಕಾರ ಈ ಭಾಗದಲ್ಲಿ ವಿಲ್ಲಾ ಮನೆಗಳಿಗೆ ಹಾಗೂ ಗ್ರೂಪ್‌ ಹೌಸಿಂಗ್‌ಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಮುಖ್ಯವಾಗಿ ಇಲ್ಲಿನ ಐಟಿ ಕ್ಷೇತ್ರದಲ್ಲಿ  ಉದ್ಯೋಗ ಅರಸಿಕೊಂಡು ಬಂದ ಉತ್ತರ ಭಾರತದ ಜನರಿಗೆ ವಿಲ್ಲಾ ಪ್ರಾಜೆಕ್ಟ್ ಹೆಚ್ಚು ಆಕರ್ಷಿಸುತ್ತಿದೆ.

*
ನೋಟು ರದ್ದತಿಯ ನಂತರವೂ ಉತ್ತಮ ಮಾರುಕಟ್ಟೆ
ದೇವನಹಳ್ಳಿ ಮತ್ತು ಥಣಿಸಂದ್ರ ಉತ್ತರ ಬೆಂಗಳೂರಿನ ಮಹತ್ವದ ತಾಣಗಳು. ಬೆಂಗಳೂರು ನಗರದಿಂದ ಸುಮಾರು 35 ಕಿ.ಮೀ. ದೂರವಿದ್ದರೂ ಇವು ದಿನೇ ದಿನೇ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಸಾಗಿವೆ. ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿರುವ ಈ ವಲಯ ನೋಟು ರದ್ದತಿಯ ನಂತರವೂ ಉತ್ತಮ ಮಾರುಕಟ್ಟೆಯನ್ನು ಉಳಿಸಿಕೊಳ್ಳಲಿದೆ. ಆದರೆ ಪ್ರಸ್ತುತ ಡೋಲಾಯಮಾನವಾಗಿರುವ ಮಾರುಕಟ್ಟೆ ತನ್ನ ಸ್ಥಿರತೆಯನ್ನು ಮತ್ತೆ ಪಡೆಯುವವರೆಗೂ ಗ್ರಾಹಕರು ಹಾಗೂ ಡೆವೆಲಪರ್‌ಗಳು ತಾಳ್ಮೆಯಿಂದ ಇರಬೇಕು.
ದೇವನಹಳ್ಳಿ ಮುಂಬರುವ ವರ್ಷಗಳಲ್ಲಿ ಪ್ರಮುಖವಾದ ವಸತಿ ಮತ್ತು ಐಟಿ ಕೇಂದ್ರವಾಗಿ ಮಾರ್ಪಾಡುವ ಎಲ್ಲಾ ಸಾಧ್ಯತೆಗಳೂ ಇವೆ.
-ಬಿ.ಎಸ್. ಶಿವರಾಮ, ಕಾಂಕಾರ್ಡ್‌ ಸಮೂಹದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT