ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಉಸಿರಲ್ಲಿ 17ಕ್ಕೂ ಹೆಚ್ಚು ರೋಗ ಪತ್ತೆ!

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

ಒಮ್ಮೆ ಉಫ್‌ ಎಂದು ಉಸಿರು ಬಿಟ್ಟರೆ ಸಾಕು. ಪಾರ್ಕಿನ್‌ಸನ್‌, ಕ್ಯಾನ್ಸರ್‌ ಸೇರಿದಂತೆ 17ಕ್ಕೂ ಹೆಚ್ಚು ರೋಗಗಳನ್ನು ಪತ್ತೆಮಾಡುವ ವಿಧಾನವನ್ನು ಇಸ್ರೇಲ್‌ ವೈದ್ಯತಜ್ಞರು ಅಭಿವೃದ್ಧಿಪಡಿಸುತ್ತಿದ್ದಾರೆ. ಇದರಿಂದ ವೈದ್ಯಕೀಯ ಪರೀಕ್ಷೆಗಳು ಮತ್ತಷ್ಟು ಅಗ್ಗವಾಗಲಿದ್ದು, ಸಾಮಾನ್ಯ ಜನರ ಪಾಲಿಗೆ ವರವಾಗಲಿವೆ.

ಉಸಿರಿನ ಮಾದರಿಗಳನ್ನು ಬಳಸಿಕೊಂಡು  ವಿವಿಧ ರೋಗಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಈ ಹಿಂದೆಯೂ ನಡೆದಿದ್ದವು.  ವಿಭಿನ್ನ ರೋಗಗಳ ಲಕ್ಷಣಗಳು ಮತ್ತು ಅವುಗಳ ನಡುವಿನ ವ್ಯತ್ಯಾಸಗಳನ್ನು ಉಸಿರಿನ ವಿಶಿಷ್ಟ ರಾಸಾಯನಿಕಗಳ ಮುಖೇನ ಪೂರ್ಣ ಪ್ರಮಾಣದಲ್ಲಿ ಗುರುತಿಸಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಒಂದಕ್ಕೊಂದು ಸಂಬಂಧ ಇರುವ ಕೆಲ ಕಾಯಿಲೆಗಳನ್ನು  ಮಾತ್ರ ಇದರಲ್ಲಿ ಗುರುತಿಸಲಾಗಿತ್ತು.

1,400 ರೋಗಿಗಳ ಪರೀಕ್ಷೆ: ­ಆದರೆ ಟೆಕ್ನಿನೊ ಇಸ್ರೇಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರೊ.  ಹೊಸಂ ಹೈಕ್‌ ಅವರ ತಂಡ 1,400 ರೋಗಿಗಳ ಉಸಿರನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ಸಂಶೋಧನೆ ನಡೆಸಿದೆ. ಈಗ ರೂಢಿಯಲ್ಲಿ ಇರುವ ಮಾಸ್‌ ಸ್ಪೆಕ್ಟ್ರೋಮೆಟ್ರಿ ವಿಧಾನ ಬಳಸಿ ಪ್ರತಿಯೊಬ್ಬ ರೋಗಿಯ ಉಸಿರಿನಲ್ಲಿ ಇರುವ ರಾಸಾಯನಿಕಗಳನ್ನು ಪ್ರತ್ಯೇಕಿಸಿ ಗುರುತಿಸಲು ಸಫಲವಾಗಿದೆ. ಹೀಗೆ ಅದು 13 ರಾಸಾಯನಿಕಗಳನ್ನು ಪತ್ತೆ ಮಾಡಿದೆ.

ಇವು ಶ್ವಾಸಕೋಶ, ಅಂಡಾಶಯ, ಮೂತ್ರಪಿಂಡ, ಉದರ ಹೀಗೆ ವಿವಿಧ ಅಂಗಾಂಗಗಳ ಕ್ಯಾನ್ಸರ್, ಪಾರ್ಕಿನ್‌ಸನ್‌, ತೀವ್ರ ಕರುಳು ಬೇನೆ, ರಕ್ತದೊತ್ತಡ ಮುಂತಾದ 17ಕ್ಕೂ ಹೆಚ್ಚು ರೋಗಗಳ ಪತ್ತೆಗೆ ನೆರವಾಗಿವೆ. ಪ್ರತಿಯೊಂದು ರೋಗಕ್ಕೂ ಪ್ರತ್ಯೇಕ ರಾಸಾಯನಿಕ ಮಿಶ್ರಣವನ್ನು ಗುರುತಿಸುವಲ್ಲಿ ತಂಡ ಯಶಸ್ಸು ಸಾಧಿಸಿದೆ.

ಇಸ್ರೇಲ್‌, ಫ್ರಾನ್ಸ್‌, ಅಮೆರಿಕ, ಲ್ಯಾಟ್ವಿಯಾ ಮತ್ತು ಚೀನಾದ 9 ಪ್ರಮುಖ ವೈದ್ಯಕೀಯ ಕೇಂದ್ರಗಳಲ್ಲಿ ಜ. 2011ರಿಂದ ಜೂನ್‌ 2014 ವ್ಯಕ್ತಿಗಳ ಉಸಿರಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ‘ಪ್ರತಿಯೊಬ್ಬ ವ್ಯಕ್ತಿಯ ಬೆರಳಚ್ಚು ಗುರುತಿನಲ್ಲಿ ವ್ಯತ್ಯಾಸ ಇರುವಂತೆ ಪ್ರತಿಯೊಂದು ಕಾಯಿಲೆಗೂ ಅದರದೇ ಆದ ರಾಸಾಯನಿಕ ಗುರುತು ಇದೆ.

ನಾವು ಅಭಿವೃದ್ಧಿಪಡಿಸಿದ ವಿಧಾನದ ಮೂಲಕ ಕಾಯಿಲೆಯನ್ನು ಸುಲಭವಾಗಿ ಕಂಡು ಹಿಡಿಯಬಹುದು’ ಎಂದು ಹೈಕ್‌ ತಿಳಿಸಿದ್ದಾರೆ. ಈ ವಿಧಾನಕ್ಕೆ ‘ಕೃತಕ ಬುದ್ಧಿಮತ್ತೆ ನ್ಯಾನೊ ಅರೈ’ ಎಂದು ನಾಮಕರಣ ಮಾಡಲಾಗಿದೆ.
(ಮಾಹಿತಿ: ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT