ರಷ್ಯಾದ ‘ಟ್ರಾನ್ಸ್ ಸೈಬೀರಿಯನ್ ರೈಲ್ವೆ’ ವಿಶ್ವದ ಅತ್ಯಂತ ಉದ್ದನೆಯ ರೈಲು ಮಾರ್ಗವಾಗಿದೆ. ಸುಮಾರು ಒಂಬತ್ತು ಸಾವಿರ ಕಿಲೋಮೀಟರ್ ಉದ್ದದ ಈ ಮಾರ್ಗವನ್ನು ಕ್ರಮಿಸಲು ಏಳು ದಿನ ಬೇಕಾಗುತ್ತದೆ.
ಮಾಸ್ಕೊಂದಿಂದ ಆರಂಭವಾಗುವ ಈ ಮಾರ್ಗದ ಪ್ರಯಾಣ, ಯುರೋಪಿಯನ್ ರಷ್ಯಾ ಮಾರ್ಗವಾಗಿ ಉರಲ್ ಪರ್ವತ ಶ್ರೇಣಿ (ಯುರೋಪ್ ಮತ್ತು ಏಷ್ಯಾವನ್ನು ಪ್ರತ್ಯೇಕಿಸುವ) ದಾಟಿ ಸೈಬೀರಿಯಾ ಮೂಲಕ ಫೆಸಿಪಿಕ್ ಸಾಗರದಂಚಿನಲ್ಲಿರುವ ರಷ್ಯಾದ ಗಡಿಭಾಗದ ಬಂದರು ಪ್ರದೇಶ ವ್ಲಾಡಿವೊಟೊಕ್ ಎಂಬಲ್ಲಿ ಅಂತ್ಯಗೊಳ್ಳುತ್ತದೆ. ಪ್ರಯಾಣದ ವೇಳೆ ರಷ್ಯಾದ ಪ್ರಾಕೃತಿಕ ಸೌಂದರ್ಯವನ್ನು ಸವಿಯಬಹುದಾಗಿರುವುದಂದ ಈ ಮಾರ್ಗದಲ್ಲಿ ಪ್ರಯಾಣಿಸಲು ಪ್ರವಾಸಿಗರು ಹೆಚ್ಚು ಇಷ್ಟಪಡುತ್ತಾರೆ.
1891– 1916ರ ಅವಧಿಯಲ್ಲಿ ‘ಟ್ರಾನ್ಸ್ ಸೈಬೀರಿಯನ್ ರೈಲ್ವೆ’ ಮಾರ್ಗವನ್ನು ನಿರ್ಮಿಸಲಾಯಿತು. ಸೈಬೀರಿಯಾದ ಗಡಿಯಂಚಿನ ಭಾಗಗಳ ಅಭಿವೃದ್ಧಿಗೂ ಇದು ನೆರವಾಯಿತು. ಅಲ್ಲದೆ ಚೀನಾ, ಜಪಾನ್ ಹಾಗೂ ಯೂರೋಪ್ ದೇಶಗಳಿಗೆ ಸರಕು ಸಾಗಾಟ ಮಾಡುವುದಕ್ಕೂ ಸಹಕಾರಿಯಾಗಿದೆ.