ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಗುರುಗಳ ಶ್ಯಾಣ್ಯಾತನದ ಸಂಶೋಧನಾ ಲಹರಿ!

Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಎದ್ರ, ಬಿದ್ರ, ಕುಂತ್ರ, ನಿಂತ್ರ, ಮಲಗಿದ್ರ, ಕಡೀಕ ಕನಸಿನ್ಯಾಗ ಸೈತ ಕಲಬುರ್ಗಿ ಮಾಸ್ತರು ಸಂಶೋಧನಾದ ಬಗ್ಗೇನs ಚಿಂತೀ ಮಾಡತಿದ್ರು ಅನ್ನೂದು ಎಲ್ಲಾರ್‍ಗ್ಯೂ ಗೊತ್ತಿರೋ ವಿಚಾರ. ಅಷ್ಟs ಯಾಕ, ಅವರು ಉಡೂದು, ತೊಡೂದು, ಉಣ್ಣೂದು, ತಿನ್ನೂದು, ಯಾರರ ಭೇಟ್ಟ್ಯಾದಾಗ ಮಾತಾಡೂದು ಸೈತ ಸಂಶೋಧನಾದ ಬಗ್ಗೇನs ಇರ್‍ತಿತ್ತು. ಯಾವ್ದs ಹೊಸಾ ಶಬ್ದಾ, ಘಟನಾ ಕಿಂವಿಗೆ ಬಿತ್ತಂದ್ರ ಸಾಕು – ಅದರ ಮೂಲಾ ಜಾಲಾಡ್ಸಿದಾಗs ಅವರಿಗೆ ಸಮಾಧಾನ.

ಒಂದ್ಸರೆ ‘ಕಟ್ಟೀಮನಿ ಟ್ರಸ್ಟ್’ ಮೀಟಿಂಗ್‌ಗೆ ಕಾರಿನ್ಯಾಗ ಬೇಳಗಾವಿಗೆ ಹೊಂಟಾಗ, ‘ಸಾದರ್, ಇವತ್ತ ಮನ್ಯಾಗ ಏನಾತ ಗೊತ್ತನ? ನನ ಮೊಮ್ಮಗ ಹೊರಗ ಹೋಗಿದ್ದಾ. ಅಂವ ಹೊಳ್ಳಿ ಬಂದ್‌ ಕೂಡ್ಲೆ, ಏನಪಾ ಎಲ್ಲಿಗೋಗಿದ್ದೀ? ಅಂದ್ಯಾ. ಅದಕ್ಕ ಅಂವಾ ‘ಗಾರ್ಡನ್ನಿಗೆ ಹೋಗಿದ್ವಿ’ ಅಂದಾ. ಯಾರ್‍ಯಾರು ಹೋಗಿದ್ರೆಪಾ ಅಂತ ಕೇಳ್ದ್ಯಾಗ ಅಂವಾ, ‘ಅಜ್ಜಿ ಮತ್ತ್‌ ನಾನು ಇಬ್ಳಾರು ಹೋಗಿದ್ವಿ’ ಅನಬೇಕಾ!’
‘ಸಹಜ ಐತೆಲ್ರಿ ಸರ್‌. ಅಜ್ಜಿ ಕೂಡ ಗಾರ್ಡನ್ನಿಗೆ ಹೋಗಿದ್ದನ್ನ ಹೇಳ್ಯಾನಂವಾ’ ಅಂದ್ಯಾ ನಾನು.

‘ಇಲ್ಲೇ, ಇಲ್ಲೇ ನಿಮಗ ತೆಲೀ ಇಲ್ಲನ್ನೂದು. ನಾ ಹೇಳಿದ್ದನ್ನ ನೀ ಚೆಂದಾಗಿ ಕೇಳಿಸ್ಕೊಳ್ಲಿಲ್ಲ. ಅಂವಾ ಮಾತು ಹೇಳ್ಕೊಂತ ‘ಇಬ್ಳಾರು’ ಅನ್ನೂ ಶಬ್ದಾ ಬಳಸಿದ್ನೋ. ಕೇಳೀದಿಲ್ಲೊ? ಅದನ್ನ ಕೇಳಿ ನನಗ ವಿಚಿತ್ರ ಅನ್ನಿಸ್ತು. ಕೇಶಿರಾಜ ಸೈತ ಬಳಸಲಾರದ ಬಹುವಚನದ ಪ್ರತ್ಯಯಾನ ನನ್ನ ಮೊಮ್ಮಗ ಬಳಸಿದ್ನಲ್ಲ? ಅದು ನನಗ ವಿಚಿತ್ರ ಅನಿಸಿದ್ದು.

ಆ ‘ಬ್ಳಾರು’ ಅನ್ನೂ ಪ್ರತ್ಯಯ ಹೆಂಗ್‌ ಬಂತು? ಇಂವಗ ಅದು ಎಲ್ಲಿ ಗೊತ್ತಾತು? ತಿಳಕೋಬೇಕ್‌ ನೋಡು’ ಅಂತ ತೆಲೀ ಕೆರಕೊಳ್ಳಾಕ ಹತ್ತಿದ್ರು. ನಾನು ‘ಅದೇನ್‌ ಮಹಾ ಬಿಡ್ರಿ ಸರ್‌, ಶಿಗ್ಗಾಂವಿ ಸವಣೂರು ತಾಲೂಕಿನ್ಯಾಗ ಇಬ್ಬರಿಗೆ ‘ಇಬ್ಳಾರು’ ಅಂತ ಪ್ರತ್ಯಯ ಬಳಸೂದು ಸಹಜ ರೂಢಿಯೊಳಗೈತಿ’ ಅಂದ್ಯಾ.

‘ಇರಬೌದು. ಆದ್ರ ಈ ಶಬ್ದ ಇಂವಗ ಹೆಂಗ್‌ ಗೊತ್ತಾತು?’ – ಈ ಸಂಶೋಧನಾದ ಹುಳಾ ತೆಲ್ಯಾಗ ಹೊಗಿಸ್ಕೊಂಡು, ಬೆಳಗಾವಿ ಮುಟ್ಟಿ ಅವತ್ತಿನ ಮೀಟಿಂಗ್‌ ಮುಗಿಸ್ಕೊಂಡ್‌ ವಾಪಸ್‌ ಬರೂವಾಗೂ ಕಾರಿನ್ಯಾಗ ಅವರು ಅದರ ಬಗ್ಗೇನs ಯೋಚ್ನೆ ಮಾಡ್ತಿದ್ರು. ಇವರು ಇನ್ ಸುಮ್ನ ಕುಂದ್ರೂವವರಲ್ಲ ಅಂತ ತಿಳಕೊಂಡು ನಾನು ಅವರ ಗಮನಾನ ಬ್ಯಾರೆ ಕಡೆ ತರೂ ಪ್ರಯತ್ನ ಮಾಡಿದ್ಯಾ.

‘ಸರ್‌, ನೀವು ನಮಗ ಒಮ್ಮೆ ಕ್ಲಾಸ್‌ನ್ಯಾಗ ಹೇಳಿದ್ರೆಲ್ಲಾ – ಅಕ್ಷರಾ ಬರಿಯೂದರ ಮ್ಯಾಲ ಯಾರ್‍ಯಾರು ಎಷ್ಟೆಷ್ಟು ಶ್ಯಾಣ್ಯಾರನ್ನೂದನ್ನ ಕಂಡ್ಕೋಬೌದು ಅಂತ, ನೀವs ಕಂಡುಹಿಡಿದ ಆ ಸಂಶೋಧನಾ ಅಗ್ದೀ ಮಜಾ ಅನ್ಸಿತ್ತು ನೋಡ್ರಿ ಎಲ್ಲಾ ಹುಡುಗೂರ್‍ಗ್ಯೂ’ ಅಂದ್ಯಾ. ‘ಆಂ, ಹೌದಾ! ಏನದು?’ ಅನಕೊಂತನs, ನಡನಡುವೆ ‘ಈ ನಮ್ಮ ಮಂಗ್ಯಾ ಹುಡುಗ, ‘ಇಬ್ಳಾರು’ ಅನ್ನೂ ಶಬ್ದಾ ಎಲ್ಲಿಂದ ತಂದಾ?’ ಅಂತ ತೆಲಿ ಕೆರಕೊಳ್ಳುದನ್ನ ಮಾತ್ರ ಬಿಟ್ಟಿರ್‍ಲಿಲ್ಲ. ನಾನು ಮೂವತ್ತೈದು ವರ್ಷದ ಹಿಂದ ನಮ್ಮ ಕ್ಲಾಸ್‌ ರೂಮಿನ್ಯಾಗ ನಡದಿದ್ದ ಘಟನಾನ ಬಿಚ್ಚಿದ್ಯಾ.

ಅವತ್ತ ಆಗಿದ್ದೇನಂದ್ರ, ಕಲಬುರ್ಗಿ ಸರ್‌ ನಮ್ಮ ಎರಡ್ನೇ ಸೆಮಿಸ್ಟರ್‌ನ ಇಂಟರ್ನಲ್ ಪರೀಕ್ಷೇದ ಪೇಪರ್‌ಗಳನ್ನ ಚೆಕ್ ಮಾಡಿ ನಮಗ ವಾಪಸ್‌ ಕೊಡಾಕಂತ ತಂದಿದ್ರು. ಆಗ ‘ಇಲ್ಲಿ ನೋಡ್ರಿ. ನಾನು ನಿಮ್ಮ ಎಲ್ಲಾ ಪೇಪರ್‌ಗಳನ್ನ ಎರಡು ಬ್ಯಾರೆ ಬ್ಯಾರೆ ಬಂಡಲ್ ಮಾಡಿ ತಂದೇನಿ. ಯಾಕ ಹಂಗ್‌ ಮಾಡಿರಬೇಕು? ಯಾರಾದ್ರೂ ಹೇಳ್ರಿ ನೋಡೂಣು, ನಿಮ್ಮ ಶ್ಯಾಣ್ಯಾತನಾ ತಿಳಕೊಳ್ಳೂನು’ – ಅಂತ ಸವಾಲ್‌ ಎಸದ್ರು. ಹಂಗ್‌ ಹೇಳೂವಾಗನs ಅವರು ‘ನೋಡ್ರಿ ನಾನು ಇವತ್ತು ನಿಮ್ಮ ಈ ಪೇಪರ್‌ಗಳ ಆಧಾರದ ಮ್ಯಾಲ ಒಂದ್‌ ಹೊಸಾ ಶೋಧನಾ ಮಾಡೇನಿ. ಅದು ಏನು ಅನ್ನೂದನ್ನ ನೀವು ಹೇಳ್ಬೇಕು’ ಅಂತ ಕ್ಲ್ಯೂರಹಿತ ಕುತೂಹಲ ಹುಟ್ಟಿಸಿದ್ರು.

ಎಲ್ಲಾ ಹುಡುಗೂರೂ ಹುಡುಗ್ಯಾರೂ ತೆಲಿ ಕೆರಕೊಂಡಿದ್ದs ಕೆರಕೊಂಡಿದ್ದು. ‘ನನಗ ಗೊತ್ತಿಲ್ಲನು ನಿಮ್‌ ಬುದ್ಧೀ ಮಟ್ಟ?’ ಅನಕೊಂತ ತಾವs ಕಂಡುಹಿಡಿದ ಸಂಶೋಧನಾದ ವಿವರಗಳನ್ನ ಬಿಚ್ಚಿಡಾಕ್ಹತ್ತಿದ್ರು.

‘ನೋಡ್ರಿ, ಈ ಎಡಗಡೇದ ಬಂಡಲ್‌ ಏನ್‌ ಐತೆಲ್ಲಾ, ಇದರಾಗ ಐವತ್ರೊಂಬತ್ತು ಪೇಪರ್‌ ಅದಾವ. ಬಲಗಡೇದ್ರಾಗ ನಲವತ್ತೈದು ಅದಾವ. ಒಟ್ಟs ಒಂದ್‌ ನೂರಾ ನಾಲ್ಕು ಪೇಪರ್ರು. ಎಡಗಡೆ ಬಂಡಲ್‌ನ್ಯಾಗ ಇರೋ ಐವತ್ನಾಲ್ಕು ಪೇಪರಿನ್ಯಾಗ ಹೈಯೆಸ್ಟು ಮಾರ್ಕ್ಸ್ ಅಂದ್ರ ಐದು (ಇದು ಹತ್ತು ಅಂಕಗಳಿಗೆ).

ಉಳದದ್ವು ಮೂರು, ನಾಲ್ಕು ಹೀಂಗ್‌ ತೊಗೊಂಡ ಪೇಪರು ಅದಾವು. ಇದು ಎಡಗಡೇ ಪೇಪರ್‍ಗೋಳ ಮಾತಾತು. ಇನ್ನ, ಬಲಗಡೇ ಬಂಡಲ್‌ನ್ಯಾಗ ಇರೂ ಪೇಪರುಗೋಳ ಮಾರ್ಕ್ಸ್ ಸುರೂವಾಗೂದs ಏಳರಿಂದ. ಅದು ಒಂಬತ್ತರ ತನಕಾ ಹೋಗೇತಿ. ಅಂದ್ರ ಇದರಿಂದ ಏನ್‌ ತೀಳೀತು?’
ಎಲ್ಲಾ ವಿದ್ಯಾರ್ಥಿಗಳೂ ಬಾಯಿ ತೆಕ್ಕೊಂಡು ‘ಏನಿದು ಹಕೀಕತಿ’ ಅಂತ ಕುತೂಹಲದಿಂದ ಕುಂತಿದ್ರು!!

‘ಏನ್‌ ಹಂಗ್‌ ಬಾಯಿ ಬಾಯಿ ಬಿಟಗೊಂಡು ಕುಂತೀರಿ? ಮಜಾ ಕೇಳ್ರಿಲ್ಲೆ, ಏನಂದ್ರ, ಎಡಗಡೇ ಬಂಡಲ್‌ನ್ಯಾಗಿನ ಪೇಪರಗೋಳೇನಿದ್ದಾವಲ್ಲ, ಆ ಪೇಪರಗೋಳ ಒಳಗಿನ ಅಕ್ಷರಗಳು ಛಂದ್‌ ಅದಾವ, ದುಂಡಗ ಅದಾ, ಬಲಗಡೇ ಬಂಡಲ್‌ ಏನ್‌ ಐತೆಲ್ಲಾ ಅದರಾಗಿನ ಪೇಪರಗೋಳೊಳಗಿನ ಅಕ್ಷರಗಳು ಕಾಗೀ ಕಾಲು, ಗುಬ್ಬೀ ಕಾಲು ಆಗ್ಯಾವ. ಅಂದ್ರ ಬಲಗಡೆ ಪೇಪರ್‍ಗೋಳ್ದು ಬ್ರಹ್ಮಲಿಪಿ! ಇದರ ಮ್ಯಾಲಿಂದನs ನಾನು ಮಾಡಿದ್ದು ಈ ಶೋಧನಾ! ಅದು ಏನಿರಬೌದು ಹೇಳ್ರಿ ನೋಡೂನು?’ – ಮತ್ತ ದಿಗಿಲು ಬಡಿಸೋ ಪ್ರಶ್ನೆ.

ಇನ್ನ ಎಲ್ಲರ್‍ದೂ ತೆಲೀ ಕೆಡೂದೊಂದs ಬಾಕಿ. ಒಬ್ಬಾಂವಾ ‘ಅಕ್ಷರಾ ದುಂಡಗ ಬರ್‍ಯಾಕ ಕಲಕೋಬೇಕು’ ಅಂದ. ಮತ್ತೊಬ್ಬಾಂವಾ ‘ಛಂದ್‌ ಅಕ್ಷರ ಬರದ್ರ ಮಾರ್ಕ್ಸು ಚೊಲೋ ಬರ್‍ತಾವು’ ಅಂದ.

‘ಏನ್‌ ಛಂದ! ಛಂದಾ ತೊಗೊಂಡು ನೆಕ್ಕತೀಯೇನು? ಛಂದಾ ನೋಡ್ಕೊಂತ ಕುಂತ್ರ, ಮುಂದ್‌ ಹೋಗೂದು ಹೆಂಗ್‌. ಇಷ್ಟೂ ತೀಳೀವಲ್ದs ನಿಮಗ? ಡಿಗ್ರೀ ಕಾಲೇಜಿನ್ಯಾಗ ಯಾರ್‍ಯಾರೋ ಹೆಂಗೆಂಗೋ ಕಲ್ಸಿರ್‍ತಾರ. ಇಲ್ಲಿ ಬಂದ್‌ ಮ್ಯಾಲ ನಿಮ್ಮ ಹಣೇಬರಾ ಏನನ್ನೂದು ಹಿಂಗ್‌ ತಿಳೀತೈತಿ. ಕೇಳ್ರಿಲ್ಲೆ...’
ಒಬ್ಬರ ಮಕಾ ಇನ್ನೊಬ್ರು ನೋಡ್ಕೊಂತ ನಾವೆಲ್ಲಾ ಮಂಗ್ಯಾನಂಗ್‌ ಕುಂತಿದ್ವಿ. ಮಾಸ್ತರು ತಮ್ಮ ಹೊಸ ಶೋಧನಾದ ನಿರ್ಣಯಾನ ನಮ್ಮ ಮುಂದ್‌ ಬಿಚ್ಚಿಡಾಕ್ಹತ್ತಿದ್ರು.

‘ಈ ಎಡಗಡೇ ಪೇಪರ್‌ಗಳೊಳಗಿನ ಅಕ್ಷರಗಳು ಛಂದ ಆಗಿದ್ರೂ ಮಾರ್ಕ್ಸು ಕಡಿಮಿ ಬಂದಾವ, ಮತ್ತ, ಬಲಗಡೆ  ಪೇಪರಗಳೊಳಗಿನ ಅಕ್ಷರಗೋಳು ಖರಾಬ್‌ ಇದ್ರೂ ಮಾರ್ಕ್ಸು ಚೊಲೋ ಬಂದಾವ. ಇದರ ಅರ್ಥಾ ಏನಾತು? ಅಕ್ಷರಾ ಛಂದ್‌ ಬರಿಯೂವವರು, ಹಂಗ್‌ ಛಂದಾಗಿ ಬರೀಬೇಕನ್ನೂದರ ಕಡೇನs ಗಮನಾ ಕೊಟ್ಟು ವಿಷಯದ ಕಡೆ ನಿರ್ಲಕ್ಷ ಮಾಡವ್ರು ಅಂತಾತು. ಇನ್ನ, ವಿಷಯಾ ಚಲೋ ತಿಳಕೊಂಡವ್ರು, ತಿಳಕೊಂಡದ್ದನ್ನ ಲಗು–ಲಗೂನs ಬರೀಬೇಕಂತ ಹೋಗಿ ಅಕ್ಷರಗಳ್ನ ಕಾಗೀ ಕಾಲು, ಗುಬ್ಬೀ ಕಾಲು ಮಾಡ್ತಾರ ಹೌದಿಲ್ಲೋ?’

‘ಹೌದ್ರೀ ಸರ್‌’ – ಇಡೀ ಕ್ಲಾಸಿಗೆ ಕ್ಲಾಸs ದನೀ ಮಾಡಿತು!
‘ಅಂದ್ರ, ಇದರ ಮ್ಯಾಲಿಂದ್‌ ಕಂಡ್‌ ಬರೋ ಸತ್ಯ ಏನಂತಂದ್ರ, ದಡ್ಡ ಇದ್ದವ್ರ ಅಕ್ಷರಾ ಛಂದ್‌ ಇರ್‍ತಾವು; ಹಂಗs ಶ್ಯಾಣ್ಯಾ ಇದ್ದವ್ರ ಅಕ್ಷರಾ ಖರಾಬ್‌ ಇರ್‍ತಾವು. ಹೌದಲ್ಲೋ...?’

ಎಲ್ಲಾರೂ ಒಪ್ಪೂ ಮಾತs ಇದು! ಒಂದ್‌ ನಾಲ್ಕೈದು ಹುಡುಗೂರು ಈ ಸಂಶೋಧನಾನ ಒಪ್ಪಾಕ ತಯಾರಿರಲಿಲ್ಲ. ಆದ್ರೂ ಬಹುಸಂಖ್ಯೆಯ ಮೆಜಾರ್ಟಿಯ ವಿರುದ್ಧವಾಗಿ ಅವರು ಬಾಯಿ ಎತ್ತೂವಂಗಿರಲಿಲ್ಲ. ಸೆಮಿಸ್ಟರ್‌ ಬ್ಯಾರೆ!

ಅವರ್ನೂ ಒಳಗೊಂಡಂಗs ಮತ್ತೊಮ್ಮೆ ‘ಹೌದ್ರಿ ಸರ್‌’ ಅಂತ ಒಕ್ಕೊರಲಿನ ಒಪ್ಪಿಗೀ ಕೊಟ್ರು. ಗುರುಗಳಿಗೂ ಅದು ಖುಷಿ ಆತು. ಆದ್ರ ಸಂಶೋಧನಾ ಅಂದ್ರ ಅಷ್ಟಕ್ಕs ಮುಗಿಯೂ ಮಾತಲ್ಲ! ಅದಕ್ಕ ಸಾಕ್ಷಿ – ಶಾಧಾರಾ ಕೊಡಬೇಕಾಕ್ಕೈತಿ. ಕಲಬುರ್ಗಿ ಸರ್‌ ಅಂತೂ ಏನs ಶೋಧನಾ ಮಾಡಿದ್ರೂ ಅದಕ್ಕ ಪೂರಕ ಆಗೂವಂಥಾ ಆಧಾರಗಳ್ನ ಕೊಡೂದು ಎಲ್ಲಾರ್‍ಗ್ಯೂ ಗೊತ್ತು. ಅದು ಅವರ ಸಂಶೋಧನಾದ ಕ್ರಮ ಸೈತ. ಈ ಹಿನ್ನೆಲಿಯೊಳಗ ಅವ್ರು ಈಗ ಅಂತಿಮವಾಗಿ ತಾವು ಕಂಡುಹಿಡಿದ ಶೋಧನಾಕ್ಕ ಉದಾಹರ್ಣೆ ಕೊಡಾಕ್ಹತ್ತಿದ್ರು.

‘...ಅಂದ್ರ ಒಟ್ಟs ಇದರ ತೀರ್ಮಾನಾ ಏನಾತು? ಭಾಳ ಶ್ಯಾಣ್ಯಾ ಇದ್ರವ್ರ ಅಕ್ಷರಾ ಛಂದ್‌ ಇರೂದುಲ್ಲಾ, ಕಾಗೀ ಕಾಲು, ಗುಬ್ಬೀ ಕಾಲು ಆಗಿರ್ತಾವು ಅಂತ ಆಯ್ತಿಲೋ? ಇದಕ್ಕ ಉದಾಹರಣೆ ನಾನs... ನನ್ನ ಅಕ್ಷರಾ ನೋಡೀರಿಲ್ಲೊ? ಅವು ಬ್ರಹ್ಮಲಿಪಿ ಇದ್ದಂಗ್‌ ಇರ್‍ತಾವ.. ಅಂದ್ರs... ನಾನು... ನಾನು... ಭಾಳ... ಆಂ... ಆಂ...’ ಅನಕೊಂತನs ತಾನು ಏನ್‌ ಹೇಳಾಕತ್ತೇನನ್ನೂದರ ಎಚ್ಚರಾಗಿ, ತೆಲೀ ಬಗ್ಗೀಸಿ ಹಗೂರ್‍ ನಾಲಿಗಿ ಕಚ್ಚಿಕೊಂಡ್ರು.

ಅಷ್ಟಾಗೂದ್ರಾಗ ಅವರ ಬಾಯಿಂದ – ‘ನಾನು ಭಾಳ ಶ್ಯಾಣ್ಯಾ, ಅದಕ್ಕ ನನ್ನ ಅಕ್ಷರಾ ಕಾಗೀ ಕಾಲು, ಗುಬ್ಬೀ ಕಾಲು ಆಗ್ಯಾವ’ ಅನ್ನು ಅವರ ಶೋಧದ ಮಾತು ಹೊರಗ ಹೋಗೇಬಿಟ್ಟಿತ್ತು. ಇದು ನಡದ ವಾಜಮಿ ಹಕೀಕತಿ. ಕಾರಿನ್ಯಾಗ ಧಾರವಾಡ ಕಡೆ ಹೊಂಟಿದ್ದ ನನಗ ಆ ಕ್ಷಣಕ್ಕ ಇದು ಚೂರ ನೆನಪಾತು.

ಸರ್‌ ನಿದ್ದೀ ಮಬ್ಬಿನ್ಯಾಗ ಇದ್ರು. ನಾನು ನನ್ನ ಮನಸ್ಸಿನ್ಯಾಗ ಈ ಘಟನಾ ನೆನಪು ಮಾಡ್ಕೊಂತನs ಆ ಕಡೇ ಮಾತಿನ ಹಂತಕ್ಕ ಬಂದಾಗ ಅ
ವತ್ತು ಇಡೀ ಕ್ಲಾಸಿನ್ಯಾಗಿನ ಹುಡುಗೂರು ಕೂಗಿದೆಂಗs ‘ಹೋ... ಹೋ...‘ ಅಂತ ಒದರಿಬಿಟ್ಟ್ಯಾ. ಇಮ್ಮಿಗಲೇ ಎಚ್ಚರಾದ ಮಾಸ್ತರು ‘ಯಾಕೋ... ಏನಾತ್‌... ಏನಾತು...? ಅಂತ ಗಪ್ನs ಎದ್ದಬಿಟ್ರು. ನಾನು ಸುಳ್ಳು ಹೇಳೂದು ಬ್ಯಾಡಂತ.

‘ಸರ್‌ ಅವತ್ತ ಕ್ಲಾಸಿನ್ಯಾಗ ನೀವು ಭಾಳ ಶ್ಯಾಣ್ಯಾರನ್ನೂದನ್ನ ನೀವs ಕಂಡ್‌ ಹಿಡದ್‌ ಸಂಶೋಧನಾದ ಹಿನ್ನೆಲಿಯೊಳಗ ಹೇಳಿದ್ರೆಲ್ಲಾ, ಅವರು ನೆನಪಾಗಿ ಹಂಗ್‌ ಕೂಗೀದ್ಯಾ’ –ಅಂತ ಇದ್ದಿದ್ದನ್ನ ಇದ್ದಂಗ್‌ ಹೇಳಿಬಿಟ್ಟ್ಯಾ. ಅವರ ಮುಖದ ಮ್ಯಾಲ ಒಂದ್‌ ಸಣ್ಣ ನಾಚೂನಗೀ ಮೂಡಿದ್ದನ್ನ ನೋಡಿ ನನಗೂ ಮುಜುಗರ ಆದಂತಾಗಿತ್ತು.

ಒಂದ್‌ ವಾರ ಆದಮ್ಯಾಲ, ಒಂದಿನಾ ಮುಂಜ್‌ ಮುಂಜೇಲೆ ಆರು ಗಂಟೇಕ್ಕs ಫೋನ್‌ ಮಾಡಿದ ಸರ್‌ ಅವರು ಹೇಳಿದ್ದು – ‘ಏ ಸಾದರ್‌, ಅವತ್ತು ನನ್ನ ಮೊಮ್ಮಗಾ ಅಂದಿದ್ನಲ್ಲಾ ‘ಇಬ್ಳಾರು’ ಅಂತ ಹೊಸಾ ಶಬ್ದಾನ. ನೆನಪೈತ್ಯೋ ಇಲ್ಲೋ? ಅದನ್ನ ಅಂವಾ ಎಲ್ಲಿಂದ ಕಲಿತಿದ್ದಾ ಅನ್ನೂದು ಗೊತ್ತಾತ್‌ ನೋಡು. ಅಂವಾ ಅವರ ಅಜ್ಜೀ ಕೂಡ ಗಾರ್ಡನ್‌ಗೆ ಹೋದಾಗ, ಅಲ್ಲೆ ಸೂಟೀಗಂತ ಧಾರವಾಡಕ್ಕೆ ಬಂದಿದ್ದ ಅಂವನ ವಾರಿಗೀ ಶಿಗ್ಗಾಂವಿ ಹುಡುಗನ ಕೂಡ ಮಾತಾಡುವಾಗ ಈ ಶಬ್ದಾ ಕೇಳಿದ್ನಂತ.

ಮನೀಗೆ ಬಂದಾಗ ನನ್ನ ಕೂಡ ಮಾತಾಡುವಾಗ ಅಂವಾ ಅದನ್ನ ಬಳಸಿದ್ದಾ ನೋಡು’, ಬಹುಶಃ ಅವರ ಸಂಶೋಧಕ ಮನಸ್ಸಿಗೆ ಆಗ ನಿರಾಳ ಆಗಿರಬೇಕು. ಇಂಥ ಘಟನಾ ಎಷ್ಟ್‌ ಬೇಕೋ ಅಷ್ಟ್‌ ಅದಾವ. ಎಲ್ಲೂ ದಾಖಲೆ ಆಗಿರಲಾರದ ಇಂಥವನ್ನ ನೆನಿಸ್ಕೊಳ್ಳೂದs ಒಂದ್‌ ಖುಷಿ ಸಂಶೋಧನಾ. ಗುರುಗಳ್ನ ನೆನಪು ಮಾಡಿಕೊಂಡ್ರ ಕಣ್ಣು ತ್ಯಾಂವ ಅಕ್ಕಾವ! ಇನ್ನೆಲ್ಲಿಂದ ತರೂದು ಅವರ್‍ನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT