ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದ ಚೋದನೆಗಳಿಗೆ ಮನದ ಸ್ಪಂದನ

ಪಿಸುಗುಡುವ ಚಿತ್ರಪಟ * ಮಹೇಶ್‌ ಭಟ್‌
Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ನಾಲ್ಕು ವರ್ಷಗಳ ಹಿಂದೆ, 2013ರ ಜನವರಿ 1ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ‘ನಿರ್ಭಯಾ’ ಅತ್ಯಾಚಾರ ಪ್ರಕರಣದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ‘ಫೇಸ್‌ಬುಕ್‌’ ಮೂಲಕ ಆ ಪ್ರತಿಭಟನೆಗೆ ಪ್ರಚಾರ ನೀಡಲಾಗಿತ್ತು. ‘ಇದರಲ್ಲಿ ಭಾಗವಹಿಸುತ್ತೇವೆ’ ಎಂದು ಫೇಸ್‌ಬುಕ್‌ನಲ್ಲಿ ಸಾವಿರಾರು ಜನರು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ ನಾನು ಆ ಸ್ಥಳಕ್ಕೆ ಹೋದಾಗ ಅಲ್ಲಿ ಸೇರಿದ್ದುದು ಬೆರಳೆಣಿಕೆಯಷ್ಟು ಜನ ಮಾತ್ರ. ಆಗ ನನಗೆ ನಿಜವಾಗಲೂ ನಿರಾಸೆಯಾಯತು.

ನಾನು ಅಲ್ಲಿ ಸ್ವಲ್ಪ ಸಮಯ ಕಳೆದು, ಕೆಲವು ಛಾಯಾಚಿತ್ರಗಳನ್ನು ತೆಗೆದು ನಂತರ ಬ್ರಿಗೇಡ್‌ ರಸ್ತೆಯ ಕಡೆಗೆ ನಡೆದೆ. (ಇಲ್ಲಿರುವ ಚಿತ್ರಗಳೆಲ್ಲ ಅಲ್ಲಿಯವೇ) ಬ್ರಿಗೇಡ್‌ ರಸ್ತೆಯಲ್ಲಿ ಜನಸಂದಣಿ ದಟ್ಟವಾಗಿತ್ತು. ಪ್ರತಿ ಹೊಸವರ್ಷವೂ ಕಳೆದ ಸಮಯಕ್ಕಿಂತ ಬೇರೆಯದಾಗಿ, ಹಿಂದಿನ ಸಮಸ್ಯೆಗಳೆಲ್ಲ ಹೋಗಿ ಹೊಸತನ ಬರಲಿ ಎಂದು ಜನರು ಹಾರೈಸುತ್ತಿದ್ದರೋ ಏನೋ.

***
‘ನಿರ್ಭಯಾ’ ಪ್ರಕರಣದ ನಂತರ ಭಾರತದಲ್ಲಿ ಬಹಳಷ್ಟು ಪ್ರತಿಭಟನೆಗಳ ನಡೆದವು. ಆದರೆ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳು ಕಡಿಮೆಯಾಗುವ ಸೂಚನೆಗಳು ಕಂಡುಬಂದಿಲ್ಲ.  ‘ಯತ್ರ ನಾರ್‍ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂದು ನಮ್ಮ ಭಾರತೀಯ ಸಂಸ್ಕೃತಿಯನ್ನು ಕೊಂಡಾಡುವ ನಾವು ನಾರಿಯರನ್ನು ಬಹಳ ನೀಚ ದೃಷ್ಟಿಯಿಂದ ನೋಡುತ್ತಿದ್ದೇವೆ. ಕಳೆದ ಡಿ. 31, ಜನವರಿ 1ರ ನಡುವೆ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಕಮ್ಮನಹಳ್ಳಿಯಲ್ಲಿ ನಡೆದ ಘಟನೆಗಳು ನನಗೆ 2013ರ ಘಟನೆಯನ್ನು ನೆನಪಿಗೆ ತಂದವು.

ಪ್ರತಿ ಸಲ ಇಂಥ ಘಟನೆಗಳು ನಡೆದಾಗಲೂ ನಾವು ಮೊಂಬತ್ತಿ ಹಚ್ಚಿ ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನಾ ಫಲಕಗಳನ್ನು ಹಿಡಿದು ನಿಲ್ಲುತ್ತೇವೆ.
ಆದರೆ ಒಬ್ಬ ಗಂಡಸು, ಹೆಂಗಸನ್ನು ನೋಡುವ ಕ್ರಮ ಬದಲಾಗಿಲ್ಲ. ನಾವು ಇಂದಿಗೂ ಹೆಣ್ಣನ್ನು ಬಳಕೆಯ ವಸ್ತುವನ್ನಾಗಿಯೇ ನೋಡುತ್ತಿದ್ದೇವೆ. ಅದನ್ನು ಹಾಗೆ ನೊಡುವ ಪ್ರತಿ ಗಂಡಸಿಗೂ ಅಮ್ಮ ಇರುತ್ತಾಳೆ. ಒಬ್ಬ ಅಕ್ಕನೋ ತಂಗಿಯೋ ಇರುತ್ತಾಳೆ. ಆದರೂ ಬೇರೆ ಮಹಿಳೆಯನ್ನು ವಸ್ತುವನ್ನಾಗಿಯೇ ನೋಡುತ್ತೇವೆ. ನನ್ನನ್ನು ಕಾಡಿದ ಈ ಎಲ್ಲ ಸಂಗತಿ–ಸಂಕಟಗಳೂ ನನ್ನ ಈ ಚಿತ್ರಗಳ ಹಿಂದಿವೆ.

***
ಕಥೆಗಾರನಿಗೆ ಕಥೆ ಎನ್ನುವುದು ‘ಒಂದಾನೊಂದು ಕಾಲದಲ್ಲಿ’ ಎಂದು ಕಥೆ ಹೇಳುವ ಸಾಧನ ಮಾತ್ರ ಅಲ್ಲ. ಯಶವಂತ ಚಿತ್ತಾಲ, ಶಿವರಾಮ ಕಾರಂತ, ದೇವನೂರ ಮಹಾದೇವ ಯಾರನ್ನೇ ತೆಗೆದುಕೊಂಡರೂ ಅವರು ಕಥೆಗಾಗಿ ಕಥೆ ಹೇಳಿದವರಲ್ಲ. ತಾನು ಬದುಕುವ ಸಮಾಜದ ಪ್ರಚೋದನೆಗಳಿಗೆ ನೀಡುವ ಸ್ಪಂದನವೇ ಕಥೆಗಳಾಗಿ ಹೊರಹೊಮ್ಮುತ್ತಿದ್ದವು.

ಛಾಯಾಗ್ರಹಣವೂ ಹಾಗೆಯೇ. ನಾನು ಛಾಯಾಗ್ರಾಹಕ. ಇದು ನನ್ನ ಮಾಧ್ಯಮ. ಸಮಾಜದಲ್ಲಿ ನನಗೆ ದೊರಕುವ ಪ್ರಚೋದನೆಗಳಿಗೆ ನಾನು ಹೇಗೆ ಸ್ಪಂದಿಸುತ್ತೇನೆ ಎನ್ನುವುದೇ ನನ್ನ ಫೋಟೊಗ್ರಫಿ ಮತ್ತು ಬರವಣಿಗೆಗಳಲ್ಲಿ ವ್ಯಕ್ತವಾಗುತ್ತಿರುತ್ತದೆ.

ತುಂಬ ಸುಂದರ ದೃಶ್ಯ, ಬೆಳಕಿನ ವಿನ್ಯಾಸ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಮಹತ್ವದ್ದೇ. ಯಾಕೆಂದರೆ ಅವು ಬದುಕಿನ ಸೌಂದರ್ಯವನ್ನು ಎತ್ತಿ ತೋರಿಸುತ್ತವೆ. ಅದೇ ರೀತಿಯಲ್ಲಿ ನಮ್ಮ ಕಾಲದ ಸಮಸ್ಯೆಗಳಿಗೆ–ಪ್ರಚೋದನೆಗಳಿಗೆ ಸ್ಪಂದಿಸುವುದು ತುಂಬ ಅಗತ್ಯ ಎಂದು ನನಗೆ ಅನ್ನಿಸುತ್ತದೆ.

***
ನಾನು ‘ಅನ್‌ಸಂಗ್’ ಅಂತೊಂದು ಪ್ರಾಜೆಕ್ಟ್‌ ಮಾಡಿದೆ. ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿಯೂ ಎಲೆಮರೆಯ ಕಾಯಿಯಂತಿರುವ ವ್ಯಕ್ತಿಗಳನ್ನು ಹುಡುಕಿ ಅವರ ಫೋಟೊ ತೆಗೆದು, ಅವರ ಬಗೆಗೆ ವಿವರ ಬರೆದು 2012ರಲ್ಲಿ ಒಂದು ಪುಸ್ತಕ ಮಾಡಿದೆ. ಅದರ ಆರು ಸಾವಿರ ಪ್ರತಿಗಳು ಖಾಲಿಯಾಗಿವೆ. ಆ ಪುಸ್ತಕಗಳಲ್ಲಿನ ಉಲ್ಲೇಖಿಸಿದ ಹಲವು ವ್ಯಕ್ತಿಗಳಿಂದ ತುಂಬಾ ಸಹಾಯ ದೊರಕಿದೆ. ಪ್ರಶಸ್ತಿಗಳು ಸಿಕ್ಕವು. ಅದೊಂದು ಬದಲಾವಣೆ ಅಲ್ಲವೇ?  ಹೀಗೆ ಛಾಯಾಗ್ರಹಣ ಅನೇಕ ಜನರ ಮನಸ್ಸನ್ನು ಬದಲಾಯಿಸಿದೆ. ಅದು ದೊಡ್ಡ ಮಟ್ಟದ ಬದಲಾವಣೆ ಅಲ್ಲದಿರಬಹುದು; ಆದರೂ ಮಹತ್ವದ್ದಲ್ಲ ಅನ್ನುವಂತಿಲ್ಲ.

***
ಯಾವುದೇ ಕಲೆ ಆಗಿರಲಿ, ಅದರ ಪ್ರಾಥಮಿಕ ತಿಳಿವಳಿಕೆ ತುಂಬ ಮುಖ್ಯ. ಬರವಣಿಗೆ ಮಾಡಬೇಕೆಂದರೆ ವ್ಯಾಕರಣ ತಿಳಿದಿರಬೇಕಲ್ಲ. ಹಾಗೆಯೇ ಛಾಯಾಗ್ರಹಣದಲ್ಲಿಯೂ ಅದರ ಪ್ರಾಥಮಿಕ ತಾಂತ್ರಿಕ ತಿಳಿವಳಿಕೆ ಇರಬೇಕು. ಅದು ನಿಮ್ಮ ಉಸಿರಾಟದಷ್ಟು ಸಹಜವಾಗಬೇಕು. ಹಾಗಾದಾಗ ಮಾತ್ರ ಆ ಮಾಧ್ಯಮದ ಮೂಲಕ ಏನನ್ನಾದರೂ ವ್ಯಕ್ತಪಡಿಸಲು ಸಾಧ್ಯ.

ಆದರೆ ಬರೀ ತಾಂತ್ರಿಕ ತಿಳಿವಳಿಕೆಯಿಂದಲೇ ಮಹತ್ವವಾದದ್ದನ್ನು ಹೇಳಲು ಸಾಧ್ಯವಿಲ್ಲ. ಅದರ ಜತೆಗೆ ನಿಮ್ಮ ಮನಸ್ಸನ್ನೂ ವಿಸ್ತರಿಸಿಕೊಳ್ಳಬೇಕು.
ಗಾರ್ಡನ್‌ ಪಾರ್ಕ್ಸ್‌ ಅಮೆರಿಕದ ದೊಡ್ಡ ಛಾಯಾಗ್ರಾಹಕ. ‘ಒಳ್ಳೆಯ ಛಾಯಾಗ್ರಾಹಕ ಆಗಬೇಕಾದರೆ ಆ ಮಾಧ್ಯಮದ ಮೂಲಕ ನೀವು ಏನನ್ನಾದರೂ ಹೇಳಲು ಸಾಧ್ಯವಾಗಬೇಕು’ ಎಂಬ ಅವರ ಮಾತು ನನಗೆ ಇಷ್ಟ. ಹಾಗೆಯೇ ನಾವು ಏನು ಹೇಳಬೇಕು ಎನ್ನುವುದರ ಬಗ್ಗೆಯೂ ಸ್ಪಷ್ಟತೆ ಇರಬೇಕು.

ಆದ್ದರಿಂದ ತಾಂತ್ರಿಕತೆಯಷ್ಟೇ ಮನಸ್ಸಿನ ಬೆಳವಣಿಗೆಯೂ ಮುಖ್ಯ. ಓದು, ಬರಹ, ಸಂಗೀತ ಹೀಗೆ ಬೇರೆ ಬೇರೆ ಕಲಾಪ್ರಕಾರಗಳನ್ನು ಗ್ರಹಿಸುವುದರ, ಬದುಕಿನಲ್ಲಿ ನಮ್ಮನ್ನು ನಾವು ಆಳವಾಗಿ ತೊಡಗಿಸಿಕೊಳ್ಳುವುದರ ಮೂಲಕ ಮಾತ್ರ ಅಂಥ ಬೆಳವಣಿಗೆ ಸಾಧ್ಯ. ಆಗ ಅದು ಸಹಜವಾಗಿಯೇ ನಮ್ಮ ಛಾಯಾಚಿತ್ರದಲ್ಲಿಯೂ ಪ್ರತಿಬಿಂಬಿತವಾಗುತ್ತದೆ.

ಮಹೇಶ್‌ ಭಟ್‌
‘ನಾನು ಬೆಂಗಳೂರಿನ ಛಾಯಾಗ್ರಾಹಕ. ಭಾರತ ನನ್ನ ಕ್ಯಾನ್ವಾಸ್‌. ಕಳೆದ ಇಪ್ಪತ್ತೈದು ವರ್ಷಗಳಿಂದ ಭಾರತ ಉಪಖಂಡದ ಬದುಕು–ಕಾಲಗಳನ್ನು ಛಾಯಾಗ್ರಹಣ ಮಾಧ್ಯಮದ ಮೂಲಕ ಸೆರೆಹಿಡಿಯುತ್ತಿದ್ದೇನೆ’ – ತಮ್ಮನ್ನು ಹೀಗೆ ಪರಿಚಯಿಸಿಕೊಳ್ಳುವ ಮಹೇಶ್‌ ಭಟ್‌ ಅವರ ಛಾಯಾಚಿತ್ರಗಳು ಜಗತ್ತಿನ 20ಕ್ಕೂ ಅಧಿಕ ದೇಶಗಳ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

‘ನ್ಯೂಯಾರ್ಕ್‌ ಟೈಮ್ಸ್‌’ನಿಂದ ಜಪಾನ್‌ ದೇಶದ ‘ನ್ಯೂಸ್‌ವೀಕ್‌’ ಪತ್ರಿಕೆಯವರೆಗೂ ಅವರ ಅನುಭವ ವಿಸ್ತರಣೆ ಹರಡಿದೆ. ಛಾಯಾಗ್ರಹಣದ ಹಲವು ಪ್ರಕಾರಗಳಲ್ಲಿ  ಅವರು ಪರಿಣತಿ ಗಳಿಸಿದ್ದಾರೆ. 

ಛಾಯಾಗ್ರಹಣ ಎಂದರೆ ನಮ್ಮೆದುರಿನ ಸುಂದರ ಸಂಗತಿಗಳನ್ನು ಸೆರೆಹಿಡಿಯುವುದಷ್ಟೇ ಅಲ್ಲ, ಅದು ಸಮಾಜದಲ್ಲಿ ತಲ್ಲಣ ಹುಟ್ಟಿಸುತ್ತಿರುವ ಸಂಗತಿಗಳಿಗೆ ಪ್ರತಿಕ್ರಿಯೆ ನೀಡುವ ಪ್ರತಿಭಟನಾ ಮಾರ್ಗವೂ ಹೌದು ಎಂಬ ಮಹೇಶ್‌ ಅವರ ನಂಬಿಕೆಗೆ ಅವರ ಹಲವು ಚಿತ್ರಸರಣಿಗಳೇ ಪುರಾವೆಯಾಗಿವೆ.

ಲಂಡನ್‌, ದೆಹಲಿ, ಗೋವಾ ಹೈದರಾಬಾದ್‌ಗಳಲ್ಲಿ ಅವರ ಛಾಯಾಚಿತ್ರಗಳು ಪ್ರದರ್ಶನ ಕಂಡಿವೆ. ಸಿನಿಮಾ ಮಾಧ್ಯಮದಲ್ಲಿಯೂ ಆಸಕ್ತರಾಗಿರುವ ಮಹೇಶ್‌ ಭಟ್‌ರ ಇನ್ನಷ್ಟು ಚಿತ್ರಗಳನ್ನು ಅವರ ಜಾಲತಾಣ maheshbhat.com ನಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT