ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರೆಗಣ್ಣು

ಈ ಭಾನುವಾರ
Last Updated 7 ಜನವರಿ 2017, 19:30 IST
ಅಕ್ಷರ ಗಾತ್ರ

ಸೆಟ್ಲ್‌ ಮಾಡ್ಕೊಂಡು ಬರ್ತೀವಿ
ವಿಜಯಪುರ:
ಇಲ್ಲಿನ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಲಿಖಿತ ಸಂಪ್ರದಾಯವೊಂದು ಜಾರಿಯಲ್ಲಿದೆ. ಅದು ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲೂ ಪಾಲನೆಯಾಯಿತು. ಸಭೆಯ ಆರಂಭದ ಅರ್ಧ ತಾಸು ಹಳೆಯ ವಿಷಯಗಳ ಚರ್ಚೆಗೆ ಮೀಸಲು. ಈ ವಿಷಯಗಳು ಪ್ರತಿ ಸಭೆಯಲ್ಲೂ ಚರ್ಚೆಗೆ ಬರುತ್ತವೆ. ಆದರೆ ಇದುವರೆಗೂ ಅವುಗಳಿಗೆ ಉತ್ತರ ಸಿಕ್ಕಿಲ್ಲ. ಈ ಬಾರಿಯೂ ಪುನರಾವರ್ತನೆಯಾಯಿತು. ಸದಸ್ಯರು ಅರ್ಧ ತಾಸು  ಮಾತನಾಡಿದರೂ ಮೇಯರ್ ಅನೀಸ್ ಫಾತಿಮಾ ಬಕ್ಷಿ ಸಹ ಮೌನ ಮುರಿಯದ ತಮ್ಮ ಸಂಪ್ರದಾಯಕ್ಕೆ ಜೋತುಬಿದ್ದರು.

ಇದೇ ಸಮಯಕ್ಕೆ ಕಾದಿದ್ದ ಹಿರಿಯ ಸದಸ್ಯರೊಬ್ಬರು ಎಂದಿನಂತೆ ತಮ್ಮ ಕಣ್ಸನ್ನೆ ರವಾನಿಸಿ, ಅಲಿಖಿತ ಸಂಪ್ರದಾಯವಾದ ‘ಸಭಾತ್ಯಾಗ’ಕ್ಕೆ ಸಿದ್ಧರಾದರು. ಉಳಿದ ಸದಸ್ಯರು ಹಿಂಬಾಲಿಸಿದರು.
 
ಸಭೆಯಲ್ಲಿ ಹಾಜರಿದ್ದ ಮೇಯರ್ ಪತಿ ತಕ್ಷಣವೇ, ‘ಬನ್ನಿ, ಎಲ್ಲ ಮೇಲೆ ಹೋಗೋಣ’ ಎಂದು ಸದಸ್ಯರಿಗೆ ಆಹ್ವಾನ ನೀಡಿ ಕರೆದೊಯ್ದರು. ‘ಇದೇನು ಸಭಾತ್ಯಾಗವೋ ಮತ್ತೆ ಸಭೆ ನಡೆಯುತ್ತದೆಯೋ’ ಎಂದು ಪತ್ರಕರ್ತರು ಸದಸ್ಯರನ್ನು ಪ್ರಶ್ನಿಸಿದಾಗ, ಅವರಿಗೂ ಕಣ್ಣು ಹೊಡೆದ ಸದಸ್ಯರು, ‘ನಿಮ್ಗ ಗೊತ್ತಿಲ್ಲದ್ದು ಏನಿದೆ. ಎಲ್ಲ ಸೆಟ್ಲ್‌ ಮಾಡ್ಕೊಂಡು ಬರ್ತೀವಿ, ಇಲ್ಲೇ ಇರಿ’ ಎಂದು ಹೇಳಿ ಜಾಗ ಖಾಲಿ ಮಾಡಿದರು. ಚಹಾ ಕುಡಿದು ಮೇಲೆ ಹೋದ ಸದಸ್ಯರು ಬರೋಬ್ಬರಿ ಎರಡು ತಾಸು ‘ಮಾತುಕತೆ’ ನಡೆಸಿಕೊಂಡು ಮಧ್ಯಾಹ್ನ ಊಟದ ವೇಳೆಗೆ ಮತ್ತೆ ಸಭೆಗೆ ಹಾಜರಾದರು!
-ಡಿ.ಬಿ.ನಾಗರಾಜ,
 
***
ಬಂದ ಪುಟ್ಟ ಹೋದ ಪುಟ್ಟ...
ಯಾದಗಿರಿ: ಬಿಜೆಪಿಯ ಬರ ಅಧ್ಯಯನ ತಂಡದಿಂದ ಹೊರಗಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈಶ್ವರಪ್ಪ ಅಪ್ಪಿತಪ್ಪಿ ಏನಾದರೂ ಅಂದುಬಿಟ್ಟರೆ ದೊಡ್ಡ ಸುದ್ದಿ ಆದೀತು ಎಂದುಕೊಂಡು ಪತ್ರಕರ್ತರೂ ರೈತರ ಜೊತೆ ಬಿಸಿಲಲ್ಲಿ ‘ಶಸ್ತ್ರಸನ್ನದ್ಧ’ರಾಗಿ ಹಾಜರಿದ್ದರು.
 
ವರ್ಕನಹಳ್ಳಿ, ನಾಯ್ಕಲ್‌, ಕಡೇಚೂರು ಗ್ರಾಮಗಳಲ್ಲಿನ ಬರಪೀಡಿತ ಪ್ರದೇಶದ ರೈತರು ಈಶ್ವರಪ್ಪನವರ ದಾರಿ ಕಾಯುತ್ತಿದ್ದರು. ರಸ್ತೆ ಮೇಲೆ ಬರುವ ಕಾರುಗಳನ್ನು ಅವರು ಲೆಕ್ಕ ಹಾಕುತ್ತಲೇ ಹೊತ್ತು ಮುಳುಗಿತ್ತು. 
 
ಈಶ್ವರಪ್ಪ ಯಾದಗಿರಿಯಲ್ಲಿ ಯುವ ಬ್ರಿಗೇಡ್‌ ಉದ್ಘಾಟಿಸಿ ಸಂಭ್ರಮಿಸುತ್ತಿದ್ದ ಸುದ್ದಿ ಸಂಜೆ ಹೊತ್ತಿಗೆ ಹೇಗೋ ರೈತರನ್ನು ತಲುಪಿತು. ಅತ್ತ ಈಶ್ವರಪ್ಪ ಬರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯಿಂದ ಅನೌಪಚಾರಿಕವಾಗಿ ಅಂಕಿಅಂಶ ಪಡೆದು ಪುಕ್ಕಟೆ ಸಲಹೆ ಕೊಟ್ಟು ಹೋಗಿದ್ದರು. 
 
ಹೊಲ–ಮನೆ ಕೆಲಸ ಬಿಟ್ಟು ಇಡೀ ದಿನ ಬಿಸಿಲಲ್ಲಿ ಕಾದು ಕುಳಿತ ರೈತರಿಗೆ ಮಾತ್ರ ‘ಬಂದ ಪುಟ್ಟ ಹೋದ ಪುಟ್ಟ’ನ ಉದ್ದೇಶ ತಿಳಿಯಲೇ ಇಲ್ಲ! ಈಶ್ವರಪ್ಪನವರಿಗೂ ಈ ರೈತರು ನೆನಪಾಗಲಿಲ್ಲ.
-ಮಲ್ಲೇಶ್ ನಾಯಕನಹಟ್ಟಿ
 
***
45–50 ವರ್ಷ ಯಾವ ಪುರುಷಾರ್ಥಕ್ಕೆ?
ಕಲಬುರ್ಗಿ: ‘ಶಾಸಕನಾಗಿ ನನಗೆ 45, ಶರದ್‌ ಪವಾರ್‌ ಅವರಿಗೆ 50 ವರ್ಷ ಆದ್ರೂ ಯಾವ ಪುರುಷಾರ್ಥಕ್ಕೆ?!’ ಇಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದು ಹೀಗೆ.
 
‘ದೆಹಲಿಯಲ್ಲಿ ಈಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ 15 ಜನ ಇದ್ದೆವು. ಪ್ರಧಾನಿ ಮೋದಿ ಅವರು ಶರದ್‌ ಪವಾರ್‌ ಅವರಿಗೆ ರಾಜಕೀಯಲ್ಲಿ 50 ವರ್ಷ ಆಯಿತು ಎಂದರು. ಆಗ ನಾನು ಮೋದಿಜಿ, ನನಗೂ ಮುಂದಿನ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದ್ರೆ ನನ್ನ ರಾಜಕೀಯ ಬದುಕಿಗೆ 50 ವರ್ಷ ತುಂಬುತ್ತದೆ. ಪಾರ್ಲಿಮೆಂಟ್‌ ಅವಧಿ ಮುಗಿಯುವ ಹೊತ್ತಿಗೆ 47 ಅಂತೂ ಕಾಯಂ. ಆದರೆ, ಅದೆಲ್ಲ ಯಾವ ಪುರುಷಾರ್ಥಕ್ಕೆ? ಅದರಿಂದೇನೂ ಪ್ರಯೋಜನ ಆಗಿಲ್ಲ ಎಂದು ಹೇಳಿದೆ. ಆಗ ಮೋದಿ ಅವರು ಯಾಕೆ ಅಂದ್ರು.’
 
‘ನೀವು ಮಧ್ಯಪ್ರದೇಶದಲ್ಲಿ ಆರ್‌ಎಸ್‌ಎಸ್‌ ಪ್ರಚಾರ ಮಾಡ್ತಾ ಇದ್ರಿ. ಶಾಸಕ ಆಗಿರದ ತಮ್ಮನ್ನು ಅಡ್ವಾಣಿಯವರು ಗುಜರಾತ್‌ ಸಿ.ಎಂ ಮಾಡಿದ್ರು. ಒಂದೇ ಸಲ ಸಂಸದರಾಗಿ ಆಯ್ಕೆಯಾಗಿ ಪ್ರಧಾನಮಂತ್ರಿಯೂ ಆದ್ರಿ. ನಾನು 11 ಸಲ, ಶರದ್‌ ಅವರು 12 ಸಲ ಆಯ್ಕೆಯಾದ್ರೂ ಅದನ್ನ ತಗೊಂಡು ಏನ್‌ ಮಾಡಬೇಕಾಗಿದೆ. ತೊಳ್ಕೊಂಡು ನೀರು ಕುಡಿಬೇಕಾ? ಅದಕ್ಕೆ ನಿಮ್‌ ಲಕ್‌ ಭಾರಿ. ಎಂಎಲ್‌ಎ ಆಗದೆ ಚೀಫ್‌ ಮಿನಿಸ್ಟರ್‌ ಆದ್ರಿ. ಒಂದೇ ಸಲ ಎಂ.ಪಿ ಆಗಿ ಪ್ರೈಮ್‌ ಮಿನಿಸ್ಟರ್‌ ಆದ್ರಿ. ಇದಕ್ಕಂತರಾ ಲಕ್!’ ಅಂದಾಗ ಸಭಿಕರಲ್ಲಿ ನಗೆಯ ಅಲೆ ಎದ್ದಿತು.
-ವಿಶ್ವಾರಾಧ್ಯ ಎಸ್‌.ಹಂಗನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT