ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಬದಲಿಸುವ ಹಿಮದ ಗುಹೆ

Last Updated 8 ಜನವರಿ 2017, 19:30 IST
ಅಕ್ಷರ ಗಾತ್ರ

ಹೊರಗಿನಿಂದ ನೋಡಿದರೆ ಅದೊಂದು ಗುಹೆ. ಒಳಗೆ ಹೋದರೆ ಬಿಸಿ ನೀರಿನ ಪುಟ್ಟ ನದಿಯೊಂದು ಅಲ್ಲಿ ಪ್ರವಹಿಸುತ್ತಿದೆ. ಮತ್ತಷ್ಟು ಒಳಹೊಕ್ಕಿ ನೋಡಿದರೆ ಬಣ್ಣ ಬಣ್ಣದ ಬೆಳಕು. ಇಷ್ಟೆಲ್ಲಾ ವಿಸ್ಮಯಗಳ ಈ ಗುಹೆಯಿರುವುದು  ರಷ್ಯಾದ ಕಾಮ್‌ಚಟ್ಕ್‌  ಪ್ರದೇಶದಲ್ಲಿ.

ಏನಿದರ ವಿಶೇಷ?
ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಕಾಣುವ ಗುಹೆಗಳು ಕಲ್ಲು, ಮಣ್ಣು, ದೊಡ್ಡ ದೊಡ್ಡ ಬಂಡೆಗಳಿಂದ ನಿರ್ಮಾಣವಾಗಿರುತ್ತವೆ. ಆದರೆ ಈ ಗುಹೆ ಸಂಪೂರ್ಣ ಹಿಮದಿಂದ ನಿರ್ಮಾಣವಾಗಿದೆ. ಇದರ ಹೆಸರು ‘ವಂಡರ್‌ಲ್ಯಾಂಡ್‌ ಕಾಮ್‌ಚಟ್ಕ್‌ ಐಸ್‌ ಕೇವ್‌’.

ಇದು ಸುಮಾರು ಒಂದು ಕಿ.ಮೀ ಉದ್ದ ಇದೆ. ಒಳಗೆ ಸಾಕಷ್ಟು ತಿರುವುಗಳಿಂದ ಕೂಡಿದೆ. ಹಿಮದ ಈ ಗುಹೆಯ ಮೇಲ್ಛಾವಣಿ ಮತ್ತು ಗೋಡೆಗಳು ಯಾವಾಗಲೂ ಒಂದೇ ಬಣ್ಣದಿಂದ ಇರುವುದಿಲ್ಲ. ಬೆಳಕು, ವಾತಾವರಣಕ್ಕೆ ಅನುಗುಣವಾಗಿ ಹಳದಿ, ನೀಲಿ, ಹಸಿರು ಮತ್ತು ಕೆನ್ನೇರಳೆ...  ಹೀಗೆ ಬಣ್ಣ ಬದಲಾಗುತ್ತಿರುತ್ತದೆ.

ಗುಹೆ ಸೃಷ್ಟಿ...
ಕಾಮ್‌ಚಟ್ಕ್‌ ಪ್ರದೇಶವೆಲ್ಲಾ ಸಂಪೂರ್ಣ ಹಿಮದಿಂದ ಆವರಿಸಲ್ಪಟ್ಟಿದೆ. ಈ  ಪ್ರದೇಶಕ್ಕೆ ಸ್ವಲ್ಪ ದೂರದಲ್ಲಿ ಮುಟ್ನೋವೊಸ್ಕಿ ಎಂಬ ಜೀವಂತ ಜ್ವಾಲಮುಖಿ ಇದೆ. ಈ ಜ್ವಾಲಾಮುಖಿಯಿಂದ ನಿತ್ಯ ಲಾವಾರಸ ಚಿಮ್ಮುತ್ತದೆ. ಇದರಿಂದ ಸಮೀಪದಲ್ಲಿರುವ ಮಂಜುಗಡ್ಡೆಗಳು ಕರಗಿ ಬಿಸಿನೀರಾಗಿ ಪ್ರವಹಿಸುತ್ತವೆ.

ಹೀಗೆ ಬೆಟ್ಟ ಪ್ರದೇಶಗಳಿಂದ ಕೆಳಮುಖವಾಗಿ ಪ್ರವಹಿಸಿ ತಪ್ಪಲಿನಲ್ಲಿ ತೊರೆಗಳು ಏರ್ಪಟ್ಟಿವೆ. ಕಾಲಕ್ರಮೇಣ ಇವು ಗುಹೆಗಳಾಗಿ ಬದಲಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಾತಾವರಣದಲ್ಲಿ ಬಿಸಿ ಹೆಚ್ಚಾಗುತ್ತಿರುವುದರಿಂದ, ಈ ಮೊದಲು ಅತಿ ದಪ್ಪವಾಗಿದ್ದ ಈ ಗುಹೆಯ ಮೇಲ್ಛಾವಣಿ ಪದರ ಈಗ ತೆಳುವಾಗಿದೆ.

ಬಣ್ಣಗಳಿಗೆ ಕಾರಣ...
ಗುಹೆಯೊಳಗೆ ಸೂರ್ಯನ ಕಿರಣಗಳು ಬಿದ್ದು,  ಓರೆಕೋರೆಯಾದ ಮಂಜುಗಡ್ಡೆಗಳ ಮೇಲೆ ಪ್ರತಿಫಲಿಸಿ ವಿವಿಧ ಬಣ್ಣಗಳಲ್ಲಿ ಗೋಚರಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮುಂಜಾನೆಯ ಎಳೆ ಬಿಸಿಲಿನಲ್ಲಿ  ಒಂದು ರೀತಿಯ ಬಣ್ಣ ಬರುತ್ತದೆ. ಮಧ್ಯಾಹ್ನ ಸೂರ್ಯನ ಕಿರಣಗಳು ಹೆಚ್ಚು ಪ್ರಖರವಾಗಿರುವ ಕಾರಣ ಆಗ ಪ್ರತಿಫಲಿಸುವ ಬಣ್ಣವೇ ಮತ್ತೊಂದು ಬಗೆ. ಸಂಜೆ ಹೊತ್ತಲ್ಲಿ ಇನ್ನೊಂದು ಬಣ್ಣ. ಅದೇ ಈ ಗುಹೆಯ ವರ್ಣ ವಿಸ್ಮಯಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT