ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರ ಬಳಕೆಗೆ ಸಿಗದ ಈಜುಕೊಳ!

ಇದ್ದೂ ಇಲ್ಲದಂತಿರುವ ಸವಲತ್ತು: ಕಳಪೆ ಕಾಮಗಾರಿ ‘ಸೋರಿಕೆ’ಗೆ ಮೂಲ?: ಜೂನ್‌ ತಿಂಗಳಿನಿಂದಲೇ ಸ್ಥಗಿತ
Last Updated 9 ಜನವರಿ 2017, 8:13 IST
ಅಕ್ಷರ ಗಾತ್ರ
ಬಾಗಲಕೋಟೆ: ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ 15 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಸವಲತ್ತು ಹೊಂದಿದೆ ಎಂಬ ಹೆಗ್ಗಳಿಕೆಯಿಂದ ಆರಂಭವಾಗಿದ್ದ ಈಜುಕೊಳ ಈಗ ಕಳಪೆ ಕಾಮಗಾರಿ, ಸರಣಿ ಅವಘಡಗಳ ಕಾರಣಕ್ಕೆ ಸಾರ್ವಜನಿಕರ ಬಳಕೆಗೆ ಬಾರದಂತಾಗಿದೆ. 
 
ನವನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯಿಂದ 2002ರಲ್ಲಿ ಈ ಈಜುಕೊಳ ನಿರ್ಮಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಡೈವಿಂಗ್ ಅವಕಾಶ ಇರುವ ಏಕೈಕ ಈಜುಕೊಳವನ್ನು ಹೊಂದಿರುವ ಶ್ರೇಯ ಬಾಗಲಕೋಟೆ ಜಿಲ್ಲೆ ಹೊಂದಿದೆ. ಅಂತರರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ಆಯೋಜಿಸಬಹುದು ಎಂದು ಈಜುಕೊಳ ಕಟ್ಟುವಾಗಲೇ ಹೇಳಲಾಗಿತ್ತು. ಭೂಸೇನಾ ನಿಗಮ  ಈಜುಕೊಳ ಕಟ್ಟಿದೆ. ಇಲ್ಲಿನ ಸವಲತ್ತು ಅಂತರರಾಷ್ಟ್ರೀಯ ಮಟ್ಟದ್ದಾದರೂ ಗುಣಮಟ್ಟ ಮಾತ್ರ ಕಳಪೆಯಾದ ಕಾರಣ ಕೇವಲ ಒಂದೂವರೆ ದಶಕದಲ್ಲಿಯೇ ಈ ದುಃಸ್ಥಿತಿಗೆ ತಲುಪಿದೆ.
 
37 ಲಕ್ಷ ಗ್ಯಾನಲ್ ನೀರು ತುಂಬಬಹುದಾದ ಸಾಮರ್ಥ್ಯ ಹೊಂದಿರುವ ಈಜುಕೊಳದಲ್ಲಿ ಈಗ ನಿತ್ಯ 10 ಸಾವಿರ ಲೀಟರ್‌ಗೂ ಹೆಚ್ಚು ನೀರು ಸೋರಿಕೆಯಾಗುತ್ತಿದೆ. ಇದರಿಂದ ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಈಜುಕೊಳದ ಒಡಲಿಗೆ ನೀರು ತುಂಬಿಸುವುದೇ ಕ್ರೀಡಾ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ ಹಾಗಾಗಿ ಅದನ್ನು ಮುಚ್ಚಲಾಗಿದೆ.
 
ಹಲವು ಬಾರಿ ಸ್ಥಗಿತ: ‘ಈ ಹಿಂದೆ ನವನಗರದಲ್ಲಿ ನೀರಿನ ಸಮಸ್ಯೆಯ ಕಾರಣಕ್ಕೆ ಈಜುಕೊಳವನ್ನು ಹಲವು ಬಾರಿ ಮುಚ್ಚಲಾಗಿತ್ತು.ಮನೋಜ್‌ಜೈನ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸಣ್ಣಪುಟ್ಟ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಈಜುಕೊಳವನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಗಿತ್ತು. ಆದರೆ ನೀರಿನ ಸೋರಿಕೆ ಜಾಸ್ತಿಯಾದ ಕಾರಣ ಕಳೆದ ಜೂನ್‌ ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ’ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಲಾಸ್‌ ಗಾಡಿ ಹೇಳುತ್ತಾರೆ.
 
‘ಇಲ್ಲಿ ಡೈವಿಂಗ್ ಸೌಲಭ್ಯ ಇರುವ ಕಾರಣ ಒಂದು ಭಾಗದಲ್ಲಿ ಈಜುಕೊಳ18 ಅಡಿ ಆಳ ಇದೆ. ಇನ್ನೊಂದು ಕಡೆ 4 ಅಡಿ ಇದೆ. ಇದು ಕೂಡ ಈಜುಪಟುಗಳ ಸುರಕ್ಷತೆಗೂ ಆತಂಕಕಾರಿಯಾಗಿದೆ. ಸಾಮಾನ್ಯವಾಗಿ 4ರಿಂದ 6 ಅಡಿ ನೀರು ಇದ್ದರೆ ಅಷ್ಟಾಗಿ ಸಮಸ್ಯೆಯಾಗುವುದಿಲ್ಲ. ಆದರೆ ಹೆಚ್ಚು ಆಳ ಇರುವ ಕಡೆ ಜೀವಕ್ಕೆ ಎರವಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಇಲ್ಲಿ ಅವಘಡಗಳು ಘಟಿಸುತ್ತಿವೆ. ಇದೂ ಕೂಡ ಈಜುಕೊಳ ಮುಚ್ಚಲು ಪ್ರಮುಖ ಕಾರಣ’ ಎಂದು ಗಾಡಿ ಮಾಹಿತಿ ನೀಡಿದರು.
 
ಇಲ್ಲಿ ಈಜಲು ಬಂದು ಸಾವಿಗೀಡಾದ ಇಬ್ಬರಿಗೆ ಇತ್ತೀಚೆಗಷ್ಟೇ ₹ 5 ಲಕ್ಷ ಪರಿಹಾರ ನೀಡಲಾಗಿದೆ ಎಂದು ಹೇಳುವ ಅವರು, ಈಜುಕೊಳದ ಸೋರಿಕೆಯಿಂದಾಗಿ ಅದರ ನಿರ್ವಹಣೆ ವೆಚ್ಚವೇ ಮಾಸಿಕ ₹ 60 ಸಾವಿರ ಬರುತ್ತಿದೆ. ಮತ್ತೆ ಈಜುಕೊಳವನ್ನು ದುರಸ್ತಿಪಡಿಸಿ ಸಾರ್ವಜನಿಕ ಬಳಕೆಗೆ ನೀಡಲು ₹ 60ರಿಂದ 70 ಲಕ್ಷ ಅನುದಾನದ ಅಗತ್ಯವಿದೆ. ಹಣ ಕೊಡಲು ಜಿಲ್ಲಾ ಪಂಚಾಯ್ತಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
 
**
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಮುಳುಗಡೆ ನಗರಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಸವಲತ್ತು ಎಂಬ ಭಾರಿ ಪ್ರಚಾರದೊಂದಿಗೆ ಈಜುಕೊಳ ನಿರ್ಮಿಸಲಾಯಿತು. ಕಟ್ಟಿದ ಒಂದೂವರೆ ದಶಕದಲ್ಲಿ ಹತ್ತಾರು ಬಾರಿ ದುರಸ್ತಿಯ ನೆಪದಿಂದ ಈಜುಕೊಳವನ್ನು ಮುಚ್ಚಲಾಗಿದೆ. ಇದಕ್ಕೆ ಹೊಣೆ ಯಾರು ಎಂದು ನವನಗರದ ನಿವಾಸಿ ಅಬ್ದುಲ್ ಸತ್ತಾರ ಪಡೇಕಾನವರ ಪ್ರಶ್ನಿಸುತ್ತಾರೆ.
 
ಕಳಪೆ ಕಾಮಗಾರಿಯ ಬಗ್ಗೆ ಕೇಳಿದರೆ  ಕ್ರೀಡಾ ಇಲಾಖೆ ಅಧಿಕಾರಿಗಳು ಭೂಸೇನಾ ನಿಗಮದ ಕಡೆ ಕೈ ತೋರಿಸುತ್ತಾರೆ. ಹಣ ಕೊಟ್ಟವರಿಗೆ ಜವಾಬ್ದಾರಿ ಇರುವುದಿಲ್ಲವೇ. ನಾಳೆ ಸರ್ಕಾರ ಈಜುಕೊಳದ ದುರಸ್ತಿಗೆ ಹಣ ಕೊಟ್ಟರೂ ಅದು ಸರಿಯಾಗಿ ವಿನಿಯೋಗವಾಗಲಿದೆಯೇ. ಅಧಿಕಾರಿಗಳ ಈ ಧೋರಣೆಯಿಂದಾಗಿ ಊರಿನಲ್ಲಿ ಈಜುಕೊಳ ಇದ್ದೂ ಇಲ್ಲದಂತಾಗಿದೆ. ಕಟ್ಟಿದ ನಂತರ ಅರ್ಧಕ್ಕೂ ಹೆಚ್ಚು ಅವಧಿಯಲ್ಲಿ ಜನರ ಬಳಕೆಗೆ ಲಭ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
 
**
ಜಿಲ್ಲಾ ಪಂಚಾಯ್ತಿಯಿಂದ ಅನುದಾನ ಕೊಡಿಸಿ ಗುಣಮಟ್ಟದ ಕಾಮಗಾರಿ ಕೈಗೊಂಡು ಈಜುಕೊಳವನ್ನು ದುರಸ್ತಿ ಪಡಿಸಿ ಪುನರ್‌ ಆರಂಭಿಸಲಾಗುವುದು
-ವಿಕಾಸ ಕಿಶೋರ ಸುರೋಳಕರ,
ಜಿ.ಪಂ ಸಿಇಒ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT