ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ, ಇಳಕಲ್‌ನಲ್ಲಿ ‘ಅರ್ಬನ್ ಹಾಥ್‌’ ನಿರ್ಮಾಣ

ನೂತನ ಸಂಘದ ಉದ್ಘಾಟನೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಲಬುರ್ಗಿ ಪ್ರಕಟ
Last Updated 9 ಜನವರಿ 2017, 8:15 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಇಳಕಲ್‌ನಲ್ಲಿ ತಲಾ ₹ 2 ಕೋಟಿ ಅನುದಾನದಲ್ಲಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲವಾಗುವ ‘ಅರ್ಬನ್ ಹಾಥ್‌’ ಎಂಬ ಬೃಹತ್‌ ಸಂಕೀರ್ಣಗಳನ್ನು ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ಭರವಸೆ ಇದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು. 
 
ಇಲ್ಲಿನ ನೇಕಾರ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹುಬ್ಬಳ್ಳಿ ತಾಲ್ಲೂಕು ನೇಕಾರ ಸಮುದಾಯಗಳ ನೂತನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
 
‘ಅರ್ಬನ್‌ ಹಾಥ್‌’ ನಿರ್ಮಾಣದಿಂದ ಕೈಮಗ್ಗ ಉತ್ಪನ್ನಗಳು ಒಂದೇ ಕಡೆ ದೊರೆಯುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
 
₹ 115 ಕೋಟಿ ನಷ್ಟದಲ್ಲಿರುವ ಕೈಮಗ್ಗ ಅಭಿವೃದ್ಧಿ ನಿಗಮದ ಪುನಶ್ಚೇತನಕ್ಕೆ ₹ 150 ಕೋಟಿ ವಿಶೇಷ ಪ್ಯಾಕೇಜ್‌ ನೀಡುವಂತೆ ಸರ್ಕಾರವನ್ನು ಕೋರಲಾಗಿದ್ದು, ಅನುಮೋದನೆ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
 
ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, ಜವಳಿ ಸಚಿವರಿಗೆ ನೇಕಾರಿಕೆಯನ್ನು ಉಳಿಸಿ, ಬೆಳಸಬೇಕು ಎಂಬ ಆಸಕ್ತಿ ಹೊಂದಿದ್ದರೂ ಸಹ ಅಧಿಕಾರಿಗಳು ಅಡ್ಡದಾರಿಗೆ ಎಳೆಯುತ್ತಿದ್ದಾರೆ. ಇವರನ್ನು ಸರಿದಾರಿಗೆ ತರುವ ಕೆಲಸ ಮುಖ್ಯಮಂತ್ರಿಯಿಂದ ಆಗಬೇಕು ಎಂದರು.
 
ನಗರ ಪ್ರದೇಶದಲ್ಲಿ ವಿದ್ಯುತ್‌ ಚಾಲಿತ ಮಗ್ಗಗಳಿಗೆ ಲೈಸೆನ್ಸ್‌ ನೀಡುವುದು ಸ್ಥಗಿತಗೊಳಿಸಲಾಗಿದೆ. ಇದರಿಂದ ನೇಕಾರರಿಗೆ ಸಮಸ್ಯೆಯಾಗಿದೆ. ಯಾವುದೇ ಕಾರಣಕ್ಕೂ ಲೈಸೆನ್ಸ್‌ ನೀಡುವುದನ್ನು ನಿಲ್ಲಿಸಬಾರದು ಎಂದು ಆಗ್ರಹಿಸಿದರು.
 
ನೇಕಾರ ಒಕ್ಕೂಟದಿಂದ ಬಡ ಮತ್ತು ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು, ಉನ್ನತ ಶಿಕ್ಷಣದ ಸಂಪೂರ್ಣ ಖರ್ಚು, ವೆಚ್ಚ ಭರಿಸಲಾಗುವುದು ಎಂದು ಹೇಳಿದರು.
 
ರೈತರು ಮತ್ತು ನೇಕಾರರು ಈ ದೇಶದ ಎರಡು ಕಣ್ಣುಗಳಿದ್ದಂತೆ. ಸರ್ಕಾರ ಎರಡು ಕ್ಷೇತ್ರವನ್ನು ಸಮಾನವಾಗಿ ಕಾಣಬೇಕು. ರಾಜ್ಯದ ನೇಕಾರರು ನೇಯ್ದ ಬಟ್ಟೆಯನ್ನೇ ಸರ್ಕಾರ ಖರೀದಿಸಬೇಕು. ಯಾವುದೇ ಕಾರಣಕ್ಕೂ ಗುಜರಾತ್‌, ರಾಜಸ್ತಾನ್‌ ಮತ್ತಿತರರ ರಾಜ್ಯಗಳಿಂದ ಬಟ್ಟೆಯನ್ನು ತರಿಸಿಕೊಳ್ಳಬಾರದು ಎಂದು ಹೇಳಿದರು.
 
ಶಾಸಕ ಪ್ರಸಾದ್‌ ಅಬ್ಬಯ್ಯ ಮಾತನಾಡಿ, ನೋಟು ರದ್ದುಗೊಂಡ ಬಳಿಕ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿಯತೊಡಗಿದೆ ಎಂದು ಹೇಳಿದರು.
 
ನೇಕಾರ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗಬೇಕು ಎಂದರು.
 
ಧಾರವಾಡ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರವಿ ಲೋಲೆನವರ, ಪಾಲಿಕೆ ಸದಸ್ಯ ಮಂಜುನಾಥ ಚಿಂತಗಿಂಜಲ್‌, ಬಿಜೆಪಿ ಜಿಲ್ಲಾ ನೇಕಾರ ಘಟಕದ ಅಧ್ಯಕ್ಷ ವೀರೇಶ ನೀಲನೂರ, ಪ್ರಭುದೇವ ಹಿಪ್ಪರಗಿ, ವೀರಣ್ಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
 
***
ಕೈಮಗ್ಗಗಳಿಗೆ ಸಿಂಗಲ್‌ ಫೇಸ್‌ ಮೋಟಾರ್‌
ಆಂಧ್ರಪ್ರದೇಶದ ನಾರಾಯಣಪೇಟೆಯಲ್ಲಿ ಸಿಂಗಲ್‌ ಫೇಸ್‌ ಮೋಟಾರ್‌ ಅಳವಡಿಸಿಕೊಂಡು ಕೈಮಗ್ಗಗಳನ್ನು ನಡೆಸಲಾಗುತ್ತಿದ್ದು, ಇದರಿಂದ ನೇಕಾರರಿಗೆ ಅನುಕೂಲವಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದಲ್ಲೂ ಪರಿಚಯಿಸಲಾಗುವುದು ಹಾಗೂ ಮೋಟಾರ್‌ ಅಳವಡಿಕೆ ಮಾಡಿದ್ದರೂ ಸಹ ಕೈಮಗ್ಗ ಎಂದೇ ಇದನ್ನು ಪರಿಗಣಿಸಲಾಗುವುದು ಎಂದು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.
 
ತಮಿಳುನಾಡಿನಲ್ಲಿ ಕೈಮಗ್ಗಗಳಲ್ಲೇ ರೇಷ್ಮೆ ಸೀರೆಗಳನ್ನು ನೇಯಲಾಗುತ್ತದೆ. ಪ್ರತಿ ಸೀರೆಗೆ ₹ 1 ಸಾವಿರ ಕೂಲಿಯನ್ನು ನೇಕಾರರಿಗೆ ನೀಡಲಾಗುತ್ತದೆ. ಇದರಿಂದ ಕೈಮಗ್ಗ ನೇಕಾರರು ಆರ್ಥಿಕವಾಗಿ ಸದೃಢವಾಗಬಹುದಾಗಿದ್ದು, ಈ ವ್ಯವಸ್ಥೆಯನ್ನು ರಾಜ್ಯದಲ್ಲಿ ಪರಿಚಯಿಸಲಾಗುವುದು ಎಂದು ತಿಳಿಸಿದರು.
 
***
ನೇಕಾರ ಸಮುದಾಯಗಳ ಒಕ್ಕೂಟದಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ದೇವರ ದಾಸಿ ಮಯ್ಯ ವಸತಿ ನಿಲಯ’ ಸ್ಥಾಪಿಸಿ, ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುವುದು.
-ರವೀಂದ್ರ ಕಲಬುರ್ಗಿ
ಅಧ್ಯಕ್ಷ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT