ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಡಿಯಲ್ಲಿ ಕನ್ನಡ ಶಾಲೆಗಳು ಹೆಚ್ಚಾಗಲಿ’

ಹೊಸ ಇದ್ದಲಹೊಂಡದಲ್ಲಿ ಸಂಭ್ರಮದ ಬೆಳಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Last Updated 9 ಜನವರಿ 2017, 8:45 IST
ಅಕ್ಷರ ಗಾತ್ರ
ರಾಜಾ ಲಖಮಗೌಡ ವೇದಿಕೆ (ಹೊಸ ಇದ್ದಲಹೊಂಡ): ‘ಗಡಿಯಲ್ಲಿ ಕನ್ನಡ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸಬೇಕು. ಈ ವಿಷಯದಲ್ಲಿ ರಾಜಕೀಯ ಸಲ್ಲದು’ ಎಂದು ಸಾಹಿತಿ ಎಂ.ಸಿ. ಅಂಟಿನ ಸರ್ಕಾರವನ್ನು ಆಗ್ರಹಿಸಿದರು.
 
ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದಿಂದ ತಾಲ್ಲೂಕಿನ ಹೊಸ ಇದ್ದಲಹೊಂಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬೆಳಗಾವಿ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
 
‘ಕರ್ನಾಟಕ ಏಕೀಕರಣವಾಗಿ 60 ವರ್ಷ ದಾಟಿದರೂ ಕನ್ನಡವು ಆಡಳಿತ ಭಾಷೆಯಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಾರದಿರುವುದು ಕಳವಳಕಾರಿ ಯಾಗಿದೆ. ಸರ್ಕಾರದ ಹಾಗೂ ಕನ್ನಡಿಗರ ಉದಾಸೀನತೆ ಪರಿಣಾಮ ಕನ್ನಡ ಶಾಲೆಗಳು ಮುಚ್ಚುತ್ತಿವೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳು ಅಧಿಕೃತ ಗೊಳ್ಳುತ್ತಿವೆ. ಗಡಿ ಭಾಗದಲ್ಲಿ ನಮ್ಮ ಭಾಷೆ ಗಡಿಪಾರಾಗುತ್ತಿರುವುದು ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಬೆಳಗಾವಿಯು ಅನ್ಯ ರಾಜ್ಯಗಳ ಅಂಚಿನಲ್ಲಿ ಇರುವುದರಿಂದ, ನಮ್ಮಲ್ಲಿ ನಾಡು–ನುಡಿಯ ಅಭಿಮಾನ ಸದಾ ಮಿಡಿಯುತ್ತಿರಬೇಕು. ಗಡಿ ಗಟ್ಟಿ ಇದ್ದರೆ ಮಾತ್ರ ನಾಡು ಉಳಿಯುತ್ತದೆ ಎನ್ನುವು ದನ್ನು ಮರೆಯಬಾರದು’ ಎಂದು ಸೂಚ್ಯವಾಗಿ ಹೇಳಿದರು.
 
ಅಧಿಕಾರಿ, ಜನಪ್ರತಿನಿಧಿಗಳ ಮಕ್ಕಳು ಓದಲಿ: ‘ಬ್ರಿಟಿಷ್‌ ಆಡಳಿತಕ್ಕೆ ಹಾಗೂ ಅದಕ್ಕೂ ಮೊದಲು ಈ ನಾಡಿನಲ್ಲಿ ಕನ್ನಡದ ಜನ ಮೂಲನಿವಾಸಿಗಳಾಗಿದ್ದರ ಬಗ್ಗೆ ಚರಿತ್ರೆ ಹೇಳುತ್ತದೆ. ನ್ಯಾಯಾಲಯದ ತೀರ್ಪುಗಳು ಕೂಡ ಕನ್ನಡದಲ್ಲಿಯೇ ಇದ್ದವು ಎನ್ನುವುದನ್ನು ದಾಖಲೆಗಳು ಸಾಬೀತುಪಡಿಸಿವೆ’ ಎಂದರು.
 
‘ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿ ಸಂಸ್ಕಾರವಂತರಾಗಲು, ಉತ್ತಮ ಭವಿಷ್ಯ ಕಂಡುಕೊಳ್ಳಲು ಪೋಷಕರು, ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮುಚ್ಚುತ್ತಿರುವ ಕನ್ನಡ ಶಾಲೆಗಳು ಮತ್ತೆ ತೆರೆಯುವಂತಾಗಬೇಕು. ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳ ಮಕ್ಕಳು ಪ್ರವೇಶ ಪಡೆಯುವುದು ಕಡ್ಡಾಯ ಎನ್ನುವ ಕಾನೂನು ಜಾರಿಗೊಳಿಸಬೇಕು. ಹಿಂದಿನಂತೆಯೇ ಪ್ರತಿ ಶಾಲೆಗಳಲ್ಲೂ ಪೂರ್ವಪ್ರಾಥಮಿಕ ಶಾಲೆಗಳು ಆರಂಭವಾಗಬೇಕು. ಆಗ ಮಕ್ಕಳ ದಾಖಲಾತಿ ಹೆಚ್ಚಾಗುವುದರಲ್ಲಿ ಸಂದೇಶವಿಲ್ಲ’ ಎಂದು ಹೇಳಿದರು.
 
ಸಮಾನ ಶಿಕ್ಷಣ ನೀತಿ ಜಾರಿಯಾಗಲಿ: ‘ಸಮಾನ ಶಿಕ್ಷಣ ನೀತಿ ಜಾರಿ ಗೊಳಿಸಬೇಕು. ಶಾಲೆಗಳಲ್ಲಿ ಕನ್ನಡ ಸಾಹಿತ್ಯ ಅಭಿರುಚಿಯ ಕಾರ್ಯಕ್ರಮ ಆಯೋಜಿಸಬೇಕು. ತಿಂಗಳ ಅತಿಥಿಯಾಗಿ ಒಬ್ಬ ಸಾಹಿತಿಯನ್ನು ಶಾಲೆಗೆ ಆಹ್ವಾನಿ ಸಬೇಕು. ಆಗ, ಮಕ್ಕಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಅಭಿಮಾನ ನೆಲೆಯೂರು ತ್ತದೆ. ಪಠ್ಯಕ್ರಮದಲ್ಲಿ ನೈತಿಕ ಮೌಲ್ಯದಿಂದ ಕೂಡಿದ, ನಾಡು–ನುಡಿ, ದೇಶಾಭಿಮಾನ ಮೂಡಿಸುವ ವಿಷಯಗಳನ್ನು ಅಳವಡಿ ಸುವುದು ಇಂದಿನ ತುರ್ತಾಗಿದೆ. ಮಕ್ಕಳಲ್ಲಿ ಶ್ರಮ ಸಂಸ್ಕೃತಿಯ ಅರಿವನ್ನು ಬಿತ್ತಬೇಕು’ ಎಂದು ಅವರು ಸಲಹೆ ನೀಡಿದರು.
 
‘ಒಂದು ನಾಡಿನ ಪ್ರಗತಿ ಅಳೆಯುವುದು ಅಲ್ಲಿನ ಸಂಸ್ಕೃತಿ, ನೈತಿಕ ಪರಂಪರೆ ಹಾಗೂ ಆದರ್ಶ ಪರಿಸರ ದಿಂದ ಎನ್ನುವುದನ್ನು ಮರೆಯಬಾರದು. ಪ್ರಕೃತಿ ಸಂಪತ್ತು ಉಳಿದರೆ ನಮ್ಮ ಭವಿಷ್ಯ ವಿಪತ್ತಿನಿಂದ ಪಾರಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ, ಪರಿಸರ ಉಳಿಸಬೇಕು. ಜಾತಿ, ಮತ ತಾರತಮ್ಯರಹಿತ ಮಾನವ ಧರ್ಮದ ನವಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ತೊಡಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
 
ಕನ್ನಡ ರಾಜ್ಯಭಾಷೆಯಾಗಲಿ: ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ‘ಕನ್ನಡವನ್ನು ರಾಜ್ಯಭಾಷೆ ಎಂದು ಘೋಷಿಸಬೇಕು. ಆಗ ಎಲ್ಲರಿಂದಲೂ ಗೌರವ ದೊರೆಯುತ್ತದೆ. ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಹಿಂದಿ ಜೊತೆಗೆ ಕನ್ನಡಕ್ಕೂ ಸಮಾನವಾದ ಸ್ಥಾನಮಾನ ನೀಡುವಂತಾಗಬೇಕು’ ಎಂದು ಹೇಳಿದರು.
 
ಅಧ್ಯಕ್ಷತೆ ವಹಿಸಿದ್ದ ಕನ್ನಡಪರ ಹೋರಾಟಗಾರ ಸಿದ್ದನಗೌಡ ಪಾಟೀಲ, ‘ಇಂಗ್ಲಿಷ್‌ ಮಾಧ್ಯಮದಲ್ಲಿ ಓದದಿದ್ದರೆ ಮಕ್ಕಳು ಬೆಳೆಯುವುದಿಲ್ಲ ಎನ್ನುವ ಮನೋಭಾವ ಪೋಷಕರಿಂದ ದೂರಾಗ ಬೇಕು’ ಎಂದರು.
 
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ‘ಇಂಗ್ಲಿಷ್‌ ವ್ಯಾಮೋಹ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವೇದಿಕೆಗಳಲ್ಲಿ ಕನ್ನಡದ ಬಗ್ಗೆ ಮಾತನಾಡುವವರು ಎಚ್ಚರದಿಂದ ಇರಬೇಕು. ಕನ್ನಡ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು’ ಎಂದು ಅವರು  ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ರಾಜಗೋಳಿಯ ಓಲಂ ಶುಗರ್‌್ಸ್‌ ಘಟಕ ಮುಖ್ಯಸ್ಥ ಭರತ ಕುಂಡಲ್‌, ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ ಹಂಜಿ ಮುಂತಾದವರು ಭಾಗವಹಿಸಿದ್ದರು.
 
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಸಾಲಟ್ಟಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿ ದರು. ಎಂ.ವೈ. ಮೆಣಸಿನಕಾಯಿ ಕಾರ್ಯಕ್ರಮ ನಿರ್ವಹಿಸಿದರು. ಲಲಿತಾ ಕ್ಯಾಸನ್ನವರ ವಂದಿಸಿದರು.
 
***
‘ಸಂಕಟದ ಸಾಹಿತ್ಯವೇ ನಿಜವಾದ ಸಾಹಿತ್ಯ’ರಾಣಿ ಚನ್ನಮ್ಮ ವಿಶ್ವವಿದ್ಯಾಲ ಯದ ಕುಲಸಚಿವ ರಂಗರಾಜ ವನದುರ್ಗ ಮಾತನಾಡಿ, ‘ಗೆದ್ದವರ ಕುರಿತು ಬರೆಯುವುದು ಸಂಭ್ರಮದ ಸಾಹಿತ್ಯ. ಸೋತವರ ಬಗ್ಗೆ ಬರೆಯುವುದು ಸಂಕಟದ ಸಾಹಿತ್ಯ. ಸಂಕಟದ ಸಾಹಿತ್ಯವೇ ನಿಜವಾದ ಸಾಹಿತ್ಯ ಎಂದರು.
 
ಇದರಿಂದಾಗಿಯೇ ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿತು ಬರೆದ ಸಾಹಿತ್ಯ ಇಂದಿಗೂ ಜೀವಂತವಾಗಿದೆ. ಶರಣರ ವಚನಗಳೂ ಹೀಗೆಯೇ ಉಳಿದಿವೆ. ರೈತರು, ಕೂಲಿಕಾರರು, ಮಹಿಳೆಯರು, ವ್ಯಾಪಾರಿಗಳು, ಮಕ್ಕಳು ಹಾಗೂ ಕನ್ನಡ ಸಂಕಟದ ಬಗ್ಗೆಯೂ ಬರೆಯಬೇಕಾಗಿದೆ. ಅನೇಕ ಮೌನಗಳನ್ನು ಮಾತನಾಡಿಸ ಬೇಕಾದ ಅಗತ್ಯ ಹಿಂದಿಗಿಂತಲೂ ಇಂದು ಜಾಸ್ತಿ ಇದೆ. ಹೊಗಳುವ ಸಾಹಿತ್ಯ ಸಾಹಿತ್ಯವೇ ಅಲ್ಲ. ಅದಕ್ಕೆ ಆಯಸ್ಸು ಕೂಡ ಇಲ್ಲ’ ಎಂದು ವಿಶ್ಲೇಷಿಸಿದರು.
 
‘ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿ ಇದೆ.  ಅವರು ಮನುಷ್ಯತ್ವ ಮರೆಯಬಾರದು. ಮನುಷ್ಯನಾಗುವ ಹಲವು ಅವಕಾಶಗಳನ್ನು ಸಾಹಿತಿಗಳು ಬಳಸಿಕೊಳ್ಳಬೇಕು. ಎಲ್ಲರನ್ನು ಕುರಿತು ಮಾತನಾಡುವ, ಬರೆಯುವ ಸಾಹಿತಿ ಗಳು ಸದಾ ಎಚ್ಚರದಿಂದ ಇರಬೇಕು. ಮನುಷ್ಯತ್ವ ಮಾರಾಟವಾಗುತ್ತಿರುವ ಈ ಸಂದರ್ಭದಲ್ಲಿ ಸಾಹಿತಿ ತನ್ನ ಲೇಖನವನ್ನು ಮಾರಿಕೊಳ್ಳಬಾರದು’ ಎಂದು ಹೇಳಿದರು.
 
 
***
ಗೋಧಿ ಹುಗ್ಗಿಯೂಟ
ಸಮ್ಮೇಳನದಲ್ಲಿ ಭಾಗವಹಿಸಿ ದ್ದವರಿಗೆ ಮಧ್ಯಾಹ್ನ ಉತ್ತರ ಕರ್ನಾಟಕದ ವಿಶೇಷ ಹುಗ್ಗಿ ಊಟ ಬಡಿಸಲಾಯಿತು. ರೊಟ್ಟಿ, ಬದನೆ ಕಾಯಿ ಪಲ್ಯ, ಚಟ್ನಿ, ಅನ್ನ–ಸಾಂಬಾರು ಹಾಗೂ ಮಜ್ಜಿಗೆಯ ಊಟದ ವ್ಯವಸ್ಥೆಯನ್ನು ಗಣ್ಯರಿಗೆ ಶಾಲೆಯ ಕೊಠಡಿಯಲ್ಲಿ ಹಾಗೂ ಸಾರ್ವಜನಿಕರಿಗೆ ಶಾಲೆಯ ಆವ ರಣದಲ್ಲಿ ಅಚ್ಚುಕಟ್ಟಾಗಿ ಮಾಡ ಲಾಗಿತ್ತು. ಗ್ರಾಮಸ್ಥರು ಮಾತ್ರ ವಲ್ಲದೆ ವಿವಿಧ ಊರುಗಳಿಂದ ಬಂದಿದ್ದ ಕನ್ನಡಪ್ರೇಮಿಗಳು ಹುಗ್ಗಿಯೂಟದ ಸವಿ ಸವಿದರು.
 
***
ಯುವಜನರಿಗೆ ಉದ್ಯೋಗದ ಭರವಸೆ ದೊರೆಯಬೇಕು. ರೈತರು ಬೆಳೆಯುವ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುವಂತಾಗಬೇಕು
-ಎಂ.ಸಿ. ಅಂಟಿನ,
ಸಮ್ಮೇಳನಾಧ್ಯಕ್ಷ 
 
 
***
ವೇದಿಕೆಗಳಲ್ಲಿ ಕನ್ನಡದ ಬಗ್ಗೆ ಉದ್ದುದ್ದದ ಭಾಷಣ ಬಿಗಿಯುವ ಎಷ್ಟು ಮಂದಿ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸಿದ್ದಾರೆ ಎನ್ನುವುದನ್ನು ನೋಡಬೇಕಾಗಿದೆ
-ಗುರುಸಿದ್ದ ಸ್ವಾಮೀಜಿ,
ಕಾರಂಜಿಮಠ, ಬೆಳಗಾವಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT