ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿರಹಿತ ರಾಷ್ಟ್ರಕ್ಕೆ ಶ್ರಮಿಸಿದ ಶರಣರು

ಹುಕ್ಕೇರಿಮಠದ ಲಿಂ.ಉಭಯ ಶ್ರೀಗಳ ಪುಣ್ಯ ಸ್ಮರಣೋತ್ಸವ: ಗಮನ ಸೆಳೆದ ಮೆರವಣಿಗೆ
Last Updated 9 ಜನವರಿ 2017, 8:49 IST
ಅಕ್ಷರ ಗಾತ್ರ
ಹಾವೇರಿ: ‘ಬಸವಾದಿ ಶರಣರು ಜಾತಿ, ವರ್ಗ, ವರ್ಣರಹಿತ ರಾಷ್ಟ್ರ ನಿರ್ಮಾಣಕ್ಕೆ ಅಹೋರಾತ್ರಿ ಶ್ರಮಿಸಿದ್ದಾರೆ’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಹೇಳಿದರು.
 
ನಗರದ ಹುಕ್ಕೇರಿಮಠದಲ್ಲಿ ಲಿಂ. ಶಿವಬಸವ ಶ್ರೀಗಳ 71ನೇ ಮತ್ತು ಲಿಂ.ಶಿವಲಿಂಗ ಶ್ರೀಗಳ 8ನೇ ಪುಣ್ಯ ಸ್ಮರಣೋತ್ಸವದ ‘ನಮ್ಮೂರು ಜಾತ್ರೆ’ಯಲ್ಲಿ ಶನಿವಾರ ಮಾತನಾಡಿದರು.
 
‘ಸ್ವಾಮಿಗಳಾದವರು ಹೆಚ್ಚು ಅಧ್ಯಯನಶೀಲರಾಗಬೇಕು. ತಮ್ಮ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು. ಭಕ್ತನ ಅಂತರಂಗದ ಭಾವನೆಯನ್ನು ಅರಿತು, ಸಮಾಜದ ಸಮಗ್ರ ಅಭ್ಯುದಯದಲ್ಲಿ ಸಮರ್ಪಣ ಮನೋಭಾವದಿಂದ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು’ ಎಂದ ಅವರು, ‘ಧಾರ್ಮಿಕತೆ ಇಲ್ಲದ ರಾಷ್ಟ್ರಗಳಲ್ಲಿ ಅರಾಜಕತೆ ತಾಂಡವವಾಡುತ್ತದೆ’ ಎಂದರು. 
 
‘ಈ ಹಿಂದೆ ಚೆನ್ನಾಗಿ ಪೂಜೆ ಬಲ್ಲವರನ್ನು ಸ್ವಾಮೀಜಿಗಳನ್ನಾಗಿ ಮಾಡುತ್ತಿದ್ದರು, ಪ್ರಸಕ್ತ ಸ್ನಾತಕೋತ್ತರ ಪದವೀಧರರನ್ನು ಮಠಾಧೀಶರನ್ನಾಗಿ ಮಾಡುವತ್ತ ಗಮನಕೊಡುತ್ತಿದ್ದಾರೆ’ ಎಂದರು. 
 
‘ಪ್ರವಚನ ನೀಡಲು ಧರ್ಮದ ಸಿದ್ಧಾಂತಗಳನ್ನು ಅರಿತುಕೊಳ್ಳುವುದು ಅವಶ್ಯಕ. ಧರ್ಮದ ಮೂಲ ಬೇರನ್ನೇ ಅರಿತುಕೊಳ್ಳದವ ಧರ್ಮಾಧಿಕಾರಿಯಾದರೆ, ಆ ಧರ್ಮದ ಬೆಳೆವಣಿಗೆ ಹೇಗೆ ಸಾಧ್ಯ’ ಎಂದರು.
 
‘ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನ ವೀರಶೈವ ಗುರುಕುಲವಾದ ‘ಶಿವಯೋಗ ಮಂದಿರ’ದ ಅಧ್ಯಕ್ಷರಾಗುವ ಅವಕಾಶ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಗಳಿಗೆ ದೊರೆಯಬಹುದು’ ಎಂದರು.
 
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ  ಮಾತನಾಡಿ, ‘ಇಂದು ಭೂಮಿಗೆ ಮತ್ತು ನೋಟಿಗೆ ಬರ ಬಂದಿದೆ, ಆದರೆ ಕನ್ನಡನಾಡಿನಲ್ಲಿ ಭಕ್ತಿಗೆ ಬರ ಬಂದಿಲ್ಲ. ಏಕೆಂದರೆ ಧಾರ್ಮಿಕ ಪರಂಪರೆಯಲ್ಲಿ ಮಾನವನ ವಿಕಾಸಕ್ಕೆ ಮಹತ್ವ ನೀಡಲಾಗಿದೆ’ ಎಂದರು.  
 
‘ನೈತಿಕ ನಡೆ ನುಡಿಗಳಿಂದ ಜ್ವಲಂತ ಜ್ಯೋತಿಗಳಾಗುತ್ತಾರೆ.  ಸಾಧಕರ ನಡೆನುಡಿ ನಮ್ಮ ಜೀವನದ ಮುನ್ನುಡಿ ಮತ್ತು ಬಾಳಿನ ಕನ್ನಡಿ, ಅವರ ಸಾಮಾಜಿಕ ಕಳಕಳಿ ನಮಗೆ ಜೀವನ ಆದರ್ಶ’ ಎಂದರು. 
 
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಏಕತಾರಿಪದ ಗಾಯಕ ಅಡಿವೆಪ್ಪ ಕುರಿಯವರನ್ನು ಮತ್ತು ಮಾಡಾಳುದ ಗುರುಶಿವಬಸವ ಶ್ರೀಗಳನ್ನು ಸನ್ಮಾನಿಸಲಾಯಿತು. ದೀಪಾ ಮುದ್ದಿ ಭರತನಾಟ್ಯವನ್ನು ಪ್ರದರ್ಶನ ನೀಡಿದರು. 
 
ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗಿ ಸ್ವಾಮೀಜಿ, ವಿಜಯಪುರದ ವೀರಭದ್ರ ದೇವರು, ವೀರಭದ್ರಶಾಸ್ತ್ರಿಗಳು ಹಿರೇಮಠ ಕುರುಬಗೊಂಡ,  ಮಾಜಿ ಶಾಸಕ ನೆಹರೂ ಓಲೇಕಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಮಹೇಶ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಹಾವೇರಿ, ರಾಮನಗೌಡ ಪಾಟೀಲ, ಶಿವರಾಜ ವಳಸಂಗಳದ, ಶಿವಯೋಗಿ ಬನ್ನಿಕೊಪ್ಪ, ಪ್ರಾಚಾರ್ಯ ಬಿ.ಬಸವರಾಜ, ಪಿ.ಡಿ ಶಿರೂರ, ನಾಗರಾಜ ನಡುವಿನಮಠ, ಶಿವಕುಮಾರ ಹಡಗಲಿ, ಎಸ್‌.ಸಿ ಮರಳಿಹಳ್ಳಿ, ರಾಮನಗೌಡರ ಪಾಟೀಲ  ಮತ್ತಿತರರು ಇದ್ದರು.
 
***
ಜಾತ್ರಾ ಮೆರವಣಿಗೆ
ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆಯು ಭಾನುವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಕೋಲಾಟ, ಗೊಂಬೆಗಳು, ಯಕ್ಷಗಾನ, ವೀರಗಾಸ, ಡೊಳ್ಳು ಮತ್ತಿತರ ವೈವಿಧ್ಯಮಯ ಕಲಾ ಮೇಳಗಳ ನಡುವೆ ತೇರು ಬಂತು. ಭಕ್ತರು ಉಭಯ ಶ್ರೀಗಳಿಗೆ ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು. 
 
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಂಜೀವಕುಮಾರ್ ನೀರಲಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಪರಮೇ ಶ್ವರಪ್ಪ ಮೇಗಳಮನಿ, ಸಿ.ಡಿ. ಹಾವೇರಿ ಮತ್ತಿತರರು ಇದ್ದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT