ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ಗಾಂಧಿ ನಗರವೆಂಬ ಪಾಪದ ಕೂಸು

ಮೇಯರ್ ಮಂಜುಳಾ ಅಕ್ಕೂರ ಪ್ರತಿನಿಧಿಸುವ 22ನೇ ವಾರ್ಡ್‌ನಲ್ಲಿ 5 ಗ್ರಾಮ, 30 ಬಡಾವಣೆಗಳು
Last Updated 9 ಜನವರಿ 2017, 9:13 IST
ಅಕ್ಷರ ಗಾತ್ರ
ಹುಬ್ಬಳ್ಳಿ: ದುಡಿಯುವ ಜನವರ್ಗವೇ ಹೆಚ್ಚಾಗಿ ವಾಸಿಸುವ ಧಾರವಾಡದ ಕಲಘಟಗಿ ರಸ್ತೆಯಲ್ಲಿನ ರಾಜೀವ್‌ ಗಾಂಧಿ ನಗರ ಕೊಳೆಗೇರಿ ಪ್ರದೇಶ. ಇಲ್ಲಿ ಓಡಾಡಬೇಕು ಎಂದರೆ ಮೂಗು ಮುಚ್ಚಿಕೊಳ್ಳಲೇಬೇಕು. ತುಂಬಿದ ಗಟಾರುಗಳು, ಬಿದ್ದಲ್ಲೇ ಬಿದ್ದ ಕಸವು ಹೊರಹೊಮ್ಮಿಸುವ ದುರ್ಗಂಧ­ದಿಂದಾಗಿ ನಾಸಿಕವನ್ನು ತೆರದಿಟ್ಟು­ಕೊಂಡು ಓಡಾಡಬೇಕೆಂದರೆ ಭಾರಿ ಸಾಹಸವನ್ನೇ ಮಾಡಬೇಕು.
 
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮಂಜುಳಾ ಅಕ್ಕೂರ ಅವರು ಪ್ರತಿನಿಧಿಸುವ ಈ ವಾರ್ಡ್‌ನಲ್ಲಿ ಹೆಜ್ಜೆ ಹೆಜ್ಜೆಗೂ ಕಸದ ದರ್ಶನವಾಗುತ್ತದೆ.
ಗಟಾರುಗಳು ಪ್ಲಾಸ್ಟಿಕ್ ಕಸವನ್ನು ತುಂಬಿಕೊಂಡಿದ್ದರಿಂದ ಕಟ್ಟಿಕೊಂಡಿವೆ. ಪಾಲಿಕೆಯ ಕಾಯಂ ಪೌರಕಾರ್ಮಿಕರು ಇಲ್ಲಿನ ಕಸವನ್ನು ವಿಲೇವಾರಿ ಮಾಡು­ತ್ತಾರೆ.
 
ಒಂದು ದಿನ ಬಂದು ಗಟಾರಿನ ಕಸವನ್ನು ತಂದು ಎತ್ತಿ ಪಕ್ಕದಲ್ಲಿ ತಂದು ಹಾಕುತ್ತಾರೆ. ಹಾಗೆ ಬಿಟ್ಟು ಹೋಗುವ ಅವರು ಮತ್ತೆ ಬರುವುದು ಎರಡು ಮೂರು ದಿನಗಳಾದ ಮೇಲೆ. ಅಷ್ಟರಲ್ಲಿ ಹಂದಿಗಳ ಸೈನ್ಯ ಇಡೀ ಕಸದ ಮೇಲೆ ದಾಳಿ ಮಾಡಿ ಒಂದಷ್ಟನ್ನು ಮರಳಿ ಗಟಾರಕ್ಕೂ, ಮತ್ತೊಂದಷ್ಟನ್ನು ರಸ್ತೆಯ ಮೇಲೂ ಚೆಲ್ಲುತ್ತವೆ. ಹೀಗಾದರೆ ಅಷ್ಟೊಂದು ಶ್ರಮ ಹಾಕಿ ಕಸ ತೆಗೆದಿದ್ದರ ಪ್ರಯೋಜನವೇನು ಎಂದು ಪ್ರಶ್ನಿಸು­ತ್ತಾರೆ ಬಡಾವಣೆಯ ಮುಖಂಡ ಶಂಷುದ್ದೀನ್ ಹಂಚಿನಮನಿ.
ಜನರ ಅನುಕೂಲಕ್ಕಾಗಿ ನಗರದ ಕೊನೆ ಅಂಚಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮೇಯರ್ ಸ್ಥಾಪಿ­ಸಿ­ದ್ದಾರೆ. ಅದರ ಪಕ್ಕದಲ್ಲೇ ಕಸ ಹಾಕುವ ತಾಣ ಇರುವುದರಿಂದ ನೀರು ಹಿಡಿ­ಯಲು ಬರುವವರು ಮೂಗು ಮುಚ್ಚಿಕೊಂಡೇ ಬರಬೇಕಿದೆ.
 
ರಾಜೀವಗಾಂಧಿ ನಗರಕ್ಕೆ ಭೇಟಿ ನೀಡಿ ಕಸದ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದನ್ನು ಗಮನಿಸಿ ಪತ್ರಿಕೆಯವರು ಎಂಬುದನ್ನು ಖಾತ್ರಿ ಮಾಡಿಕೊಂಡ ಮಹಿಳೆ ಜೈನಾಬಿ ಪೆಂಡಾರಿ, ಮೊದಲು ಈ ಸಮಸ್ಯೆಯ ಬಗ್ಗೆ ಬರೀರಿ. ವಾರಕ್ಕೊಂದು ಸಾರಿ ಕಸದ ಟಿಪ್ಪರ್ ಬರ್ತದ. ಆದರೆ, ಅದು ಯಾವ ಸಪ್ಪಳ ಮಾಡಲ್ದನ ಹಂಗ ಹೋಗಿಬಿಡ್ತದ. ನಾವು ಮನೆಯಿಂದ ಕಸ ತರಬೇಕು ಅಂತ ಕಾಯ್ದಕೋತ ಕೂತಿ­ರ­ತೀವಿ. ಅಷ್ಟರಲ್ಲಿ ಮುಂದಕ್ಕೆ ಹೋಗಿ­ಬಿಟ್ಟಿರ್ತದ ಎಂದು ಅಲವತ್ತುಕೊಂಡರು.
 
ರಾಜೀವ್‌ ಗಾಂಧಿ ನಗರದ ಸೇತುವೆ ಕೆಳಗಿನಿಂದ ಹಾಯ್ದು ಗಾಂಧಿ­ನಗರಕ್ಕೆ ಹೋದಾಗ, ಆ ಬಡಾವಣೆ ಸ್ವಚ್ಛವಾಗಿರಬಹುದು ಎಂಬ ನಿರೀಕ್ಷೆ ಸುಳ್ಳಾಯಿತು. 6ನೇ ಕ್ರಾಸಿನಲ್ಲಿ ಮೇಲ್ಭಾ­ಗ­ದಿಂದ ಬಂದ ಚರಂಡಿ ನೀರು ಮುಂದಕ್ಕೆ ಹೋಗಲಾಗದೇ ನಿಂತು ಬಿಟ್ಟಿತ್ತು. ಆನತಿ ದೂರದಲ್ಲೇ ಕಸವೂ ಸ್ವಚ್ಛ ಭಾರತ ಅಭಿಯಾನವನ್ನು ಅಣಕಿಸುವಂತೆ ಬಿದ್ದುಕೊಂಡಿತ್ತು.
 
ನಾವೂ ಬಾಯಿಯವರಿಗೆ (ಮೇಯರ್) ಕಂಪ್ಲೇಂಟ್ ಮಾಡಿ ಮಾಡಿ ಸಾಕಾಗೇದ್ರಿ. ಈ ಗಟಾರ್ ಸಮಸ್ಯೆ ಹೇಳಲು ಈಗಷ್ಟೇ ಫೋನ್ ಮಾಡಿದ್ನಿ. ಮೀಟಿಂಗ್‌ನ್ಯಾಗ ಅದಾ­ರಂತ ಮೆಸೇಜ್ ಕಳಿಸಿದ್ರು. ಆಗಾಗ ರಸ್ತೆಯ ಮೇಲಿನ ಕಸ ಹಾಗೂ ಗಟಾರಿನ ಹೂಳನ್ನೂ ತಗೀತಾ ಇದ್ದರ ಇಷ್ಟೊಂದು ಕಸ ಗಟಾರಿನಲ್ಲಿ ಸಿಕ್ಕಿ ಹಾಕಿಕೊಳ್ಳೂದಿಲ್ಲ ಎಂದು ಎದುರಿನ ಬಯಲಿನಲ್ಲಿ ಆಟದ ಮೈದಾನ ನಿರ್ಮಾಣ ಮಾಡುವಲ್ಲಿ ತೊಡಗಿದ್ದ ಯುವಕರ ತಂಡವೊಂದು ಹೇಳಿತು.
 
***
ಕೆಲಸ ಮಾಡಿಸಿದ್ದು ಗೊತ್ತಾಗುವುದಿಲ್ಲ: ಮಂಜುಳಾ
‘ಪ್ರಜಾವಾಣಿಯಲ್ಲಿ ಬರುತ್ತಿರುವ ಕಸ–ಸಂಕಟ ಸರಣಿ ಲೇಖನಗಳನ್ನು ಕಳೆದ ಒಂದು ವಾರದಿಂದ ಓದುತ್ತಿದ್ದೇನೆ. ಜನಪ್ರತಿನಿಧಿಗಳಿಗೂ, ಸಾರ್ವಜನಿಕರಿಗೂ ಅರಿವು ಮೂಡಿಸುವ ವರದಿಗಳು ಪ್ರಕಟವಾಗುತ್ತಿವೆ. ಅದಕ್ಕಾಗಿ ಪ್ರಜಾವಾಣಿಗೆ ಅಭಿನಂದನೆ’ ಎನ್ನುತ್ತಲೇ ಮಾತು ಆರಂಭಿಸಿದರು ಮೇಯರ್ ಮಂಜುಳಾ ಅಕ್ಕೂರ.
 
ನಾನು ಪ್ರತಿನಿಧಿಸುತ್ತಿರುವ ವಾರ್ಡ್ ಅನ್ನು ಕಳೆದ ಮೂರು ಅವಧಿಗಳಿಂದ ಮಹಿಳೆಯರೇ ಪ್ರತಿನಿಧಿಸುತ್ತಿದ್ದಾರೆ. ಇದು ಖುಷಿಯ ಸಂಗತಿ. ಬೇಸರದ ಸಂಗತಿ ಎಂದರೆ ನನ್ನ ವಾರ್ಡ್ ವ್ಯಾಪ್ತಿ ಬಹಳ ದೊಡ್ಡದಿರುವುದರಿಂದ ಏನೇ ಕೆಲಸ ಮಾಡಿದರೂ ಕಂಡು ಬರುವುದಿಲ್ಲ. 30 ಬಡಾವಣೆಗಳು ಸೇರಿದಂತೆ ತಡಸಿನಕೊಪ್ಪ, ಇಟ್ಟಿಗಟ್ಟಿ, ಜೋಗೆಲ್ಲಾಪುರ, ಸತ್ತೂರ, ಸುತಗಟ್ಟಿ ಗ್ರಾಮಗಳೂ ಬರುತ್ತವೆ. ಇರುವ 32 ಪೌರಕಾರ್ಮಿಕರು ಇಷ್ಟೂ ಬಡಾವಣೆ, ಗ್ರಾಮಗಳನ್ನು ನೋಡಿಕೊಳ್ಳುವುದು ಆಗುವುದಿಲ್ಲ. ಉಪಮೇಯರ್ ಆಗಿದ್ದಾಗ ಒಂದು ಆಟೊ ಟಿಪ್ಪರ್ ಪಡೆದುಕೊಂಡಿದ್ದೆ. ಮೇಯರ್ ಆದ ಮೇಲೆ ಮತ್ತೊಂದು ಬಂದಿದೆ. ಮೊದಲಿಗಿಂತ ಹೆಚ್ಚು ಸಮಸ್ಯೆ ಬಗೆಹರಿದಿದೆ. ಎಷ್ಟು ಕೆಲಸ ಮಾಡಿದರೂ ಕಣ್ಣಿಗೆ ಬೀಳದ ಪ್ರದೇಶಕ್ಕೆ (ರಾಜೀವ್‌ ಗಾಂಧಿ ನಗರ) ನೀವು ಹೋಗಿ­ದ್ದೀರಿ. ಹಳ್ಳಿಗಳಿಗೆ ಬಂದಿದ್ದರೆ ಇನ್ನೂ ಹೆಚ್ಚು ಕೆಲಸ ಮಾಡಿಸಿ­ದ್ದು ಗೊತ್ತಾಗುತ್ತಿತ್ತು. ರಾಜೀವ್ ಗಾಂಧಿ ನಗರದಲ್ಲಿ ಆರ್‌ಒ ಪ್ಲಾಂಟ್ ಬಳಿ ಇದ್ದ ಕಸದ ತೊಟ್ಟಿಯನ್ನು ತೆಗೆಸಿ ಅಲ್ಲಿ ಆಟೊ ಟಿಪ್ಪರ್ ಕಳಿಸುತ್ತಿದ್ದೇನೆ. ಆದರೆ, ಜನರು ಅಲ್ಲಿಯೇ ಮತ್ತೆ ಕಸ ಹಾಕುತ್ತಿದ್ದಾರೆ. ಜನರಲ್ಲಿಯೂ ಈ ಬಗ್ಗೆ ಅರಿವು ಮೂಡಬೇಕು ಎಂದರು.

***

ಕಸ ಬಳಿಯುವಂತೆ ಫೋನ್ ಮಾಡಿದಾಗ ಕಂಪ್ಲೇಂಟ್ ತಗೊಂಡು ಸುಮ್ಮನಾಗ್ತಾರ. ತೀರಾ ಜೋರ ಮಾಡಿದ್ರ ನಾವೆಲ್ಲಿ ಹೇಳಿರ್ತೀವಿ ಅಷ್ಟ ಸ್ವಚ್ಛ ಮಾಡಿ ಹೋಗ್ತಾರ
-ಶಂಷುದ್ದೀನ್,  ರಾಜೀವ್‌ ಗಾಂಧಿ ನಗರ

***

ಇಲ್ಲಿ ಹಾಕಿದ ಕಸ ಎತ್ತಾಕ ಯಾರೂ ಬರೂದಿಲ್ರಿ. ಸಂಜಿ ಆತಂದ್ರ ಸಾಕು ಸೊಳ್ಳೆಲ್ಲ ಮನೆ ಹೊಕ್ಕು ನಮ್ಮನ್ನ ಹೈರಾಣು ಮಾಡತಾವು. ಮೇಯರ್ ಬಂದಾಗ ಸ್ವಲ್ಪ ಸ್ವಚ್ಛ ಆದಂಗ ಅಕ್ಕೈತಿ.
-ಗಂಗವ್ವ ಭಜಂತ್ರಿ, ರಾಜೀವ್‌ ಗಾಂಧಿ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT