ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಗಳತ್ತ ಭಕ್ತರ ದಂಡು: ವಿಶೇಷ ಪೂಜೆ

Last Updated 9 ಜನವರಿ 2017, 10:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವೈಕುಂಠ ಏಕಾದಶಿ ದಿನವಾದ ಭಾನುವಾರ ನಗರದ ಕಂದವಾರಪಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ವಿಷ್ಣು ದೇವಾಲಯ, ಗಂಗಮ್ಮನಗುಡಿ ರಸ್ತೆಯ ಕನ್ನಿಕಾ ಪರಮೇಶ್ವರಿ (ವಾಸವಿ) ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಕೆಲವೆಡೆ ದೇವರ ದರ್ಶನಕ್ಕಾಗಿ ಸಾಲುಗಳು ಕಂಡು ಬಂದವು.

ವೈಕುಂಠ ಏಕಾದಶಿ ಪ್ರಯುಕ್ತ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ, ವೈಕುಂಠ ದ್ವಾರದ ಪೂಜೆ, ನಾರಾಯಣನ ದರ್ಶನ ಮುಂತಾದ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ನಗರದ ಕಂದವಾರಪೇಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ಮತ್ತು ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯಗಳಲ್ಲಿ ನಸುಕಿನಲ್ಲೇ ಭಕ್ತರು ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

‘ವೈಕುಂಠ ಏಕಾದಶಿಯ ದಿನದಂದು ನಿರಾಹಾರಿಯಾಗಿ ಬಂದು ವಿಷ್ಣುವಿನ ದರ್ಶನ ಪಡೆದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದೊಂದು ವಿಶೇಷ ದಿನವಾದ್ದರಿಂದ ದರ್ಶನಕ್ಕೆ ಬಂದಿರುವೆ’ ಎಂದು ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಸುಬ್ಬರಾಯನ ಪೇಟೆ ನಿವಾಸಿ ಸೂರ್ಯನಾರಾಯಣ ತಿಳಿಸಿದರು.

ವೈಕುಂಠ ದರ್ಶನ
ಶಿಡ್ಲಘಟ್ಟ:
ವೈಕುಂಠ ಏಕಾದಶಿ ಅಂಗವಾಗಿ ಭಾನುವಾರ ತಾಲ್ಲೂಕಿನ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು.

ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ವೈಕುಂಠದ ದರ್ಶನಕ್ಕೆ ದ್ವಾರಗಳನ್ನು ಸ್ಥಾಪಿಸಿದ್ದು, ಸಪ್ತದ್ವಾರಗಳನ್ನು ದಾಟುತ್ತಿದ್ದಂತೆಯೇ ಲಕ್ಷ್ಮಿ ಶ್ರೀನಿವಾಸರ ಅಲಂಕೃತ ಬೃಹತ್‌ ಮೂರ್ತಿಗಳ ದರ್ಶನ ಸಿಗುವಂತೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು.

ತಾಲ್ಲೂಕಿನ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ  ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಗಾಗಿ ವೈಕುಂಠ ಉತ್ತರ ದ್ವಾರ ದರ್ಶನ ಏರ್ಪಡಿಸಲಾಗಿತ್ತು.
ತಾಲ್ಲೂಕಿನ ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ಒಡಯನಕೆರೆಯ ಅನಂತಪದ್ಮನಾಭಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಯಿತು.

‘ವೈಕುಂಠವನ್ನು ದರ್ಶಿಸಿ ಭಕ್ತರು ಸಾಯಿನಾಥ, ಗಣೇಶ, ಅಯ್ಯಪ್ಪ, ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದು, ಪ್ರಸಾದತೆಗೆದು ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ’ ಎಂದು ಸಾಯಿನಾಥ ಜ್ಞಾನ ಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದ್ದರು.

ಆಲಂಬಗಿರಿ ಯಲ್ಲಿ ಭಕ್ತರು
ಚಿಂತಾಮಣಿ: ತಾಲ್ಲೂಕಿನ ವಿವಿಧ ದೇವಾಲಯಗಲ್ಲಿ ಭಾನುವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪುರಾಣ ಪ್ರಸಿದ್ಧವಾದ ಆಲಂಬಗಿರಿ ಗ್ರಾಮದ ಕಲ್ಕಿ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ವೆಂಕಟರಮಣಸ್ವಾಮಿ ಉತ್ಸವ ವಿಗ್ರಹಕ್ಕೆ ಯೋಗನರಸಿಂಹಸ್ವಾಮಿಯ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಭಾನುವಾರ ಬೆಳಿಗ್ಗೆಯಿಂದಲೇ ಸುತ್ತಮುತ್ತಲ ಗ್ರಾಮಗಳು ಹಾಗೂ ದೂರ ದೂರದಿಂದ ಬಂದಿದ್ದರು. ಸಾವಿರಾರು ಭಕ್ತರು ವೈಕುಂಠದ್ವಾರದ ಬಳಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.

ಇಂದು ಮುಕ್ಕೋಟಿ ಏಕಾದಶಿ:  ಆಲಂಬಗಿರಿಯಲ್ಲಿ ಸೋಮವಾರ ಬೆಳಿಗ್ಗೆ ಮುಕ್ಕೋಟಿ ಏಕಾದಶಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.  ಧರ್ಮಾಧಿಕಾರಿಗಳ ನೇತೃತ್ವದಲ್ಲಿ ಸಂಕೀರ್ತನಾ ಮೆರವಣಿಗೆ, ಗರುಡೋತ್ಸವದಲ್ಲಿ ಉತ್ಸವ ನಡೆಯುತ್ತದೆ.

ನಗರದ ಶ್ರೀರಾಮಮಂದಿರ, ಅಜಾದ್‌ಚೌಕದ ಹರಿಹರೇಶ್ವರಸ್ವಾಮಿ ದೇವಾಲಯ, ತಾಲ್ಲೂಕಿನ ಐಮರೆಡ್ಡಿಹಳ್ಳಿಯ ದೇವಾಲಯದ ಮತ್ತಿತರ ಕಡೆ ವಿಜೃಂಭಣೆಯಿಂದ ವೈಕುಂಠ ಏಕಾದಶಿಯ ಆಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT