ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಗೋಡೆ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಬರಹ; ಮುಸ್ಲಿಂ ಸಂಘಟನೆಗಳ ಸದಸ್ಯರ ಆಕ್ರೋಶ, ಮನವಿ ಸಲ್ಲಿಕೆ
Last Updated 10 ಜನವರಿ 2017, 5:32 IST
ಅಕ್ಷರ ಗಾತ್ರ
ಶಿರಸಿ: ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮೂಲಕ ನಗರದ ಶಾಂತಿ, ಕೋಮು ಸೌಹಾರ್ದತೆ ಕೆಡಿಸುವವರನ್ನು ಮತ್ತು ಇದನ್ನು ಹಿಂದಿನಿಂದ ಬೆಂಬಲಿಸುವ ದುಷ್ಟರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಹನಫಿ ಸುನ್ನಿ ಮರ್ಕಜ್ ಕಮಿಟಿ ಹಾಗೂ ಹಜರತ್ ಸಯ್ಯದ್ ಮೋತಿಶಾ ಖಾದ್ರಿ ಉರೂಸ್ ಕಮಿಟಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಸೋಮವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. 
 
ಕೋಟೆಕೆರೆಯಿಂದ ಹೊರಟು ಹಳೆ ಬಸ್‌ ನಿಲ್ದಾಣದ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿದ ಮೆರವಣಿಗೆಯಲ್ಲಿ 2ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಹಲೆ– ಸುನ್ನತ್– ಜಮಾತ್ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಬಿಳಗಿ ಅವರು ‘ಮುಸ್ಲಿಮರು ಭಾರತೀಯ ಸಂವಿಧಾನಕ್ಕೆ ಗೌರವ ನೀಡುತ್ತಾರೆ. ಹಿಂದೂ- ಮುಸ್ಲಿಮರು ಸಹೋದರ ಭಾವನೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ಸೌಹಾರ್ದತೆಯಿಂದ ಜನರು ಬದುಕುತ್ತಿರುವ ಈ ನಗರದಲ್ಲಿ ಶಾಂತಿ ಕಾಪಾಡುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ’ ಎಂದರು. 
 
ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮೂಲಕ ಮುಖ್ಯಮಂತ್ರಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ‘ಕೋಮು ಸೌಹಾರ್ದಕ್ಕೆ ಶಿರಸಿ ಊರು ಮಾದರಿಯಾಗಿದೆ. ಎಂತಹ ಸಂದರ್ಭದಲ್ಲೂ ಇಲ್ಲಿನ ಜನರು ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಪ್ರೇರಿತವಾಗಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹೇಳಿಕೆ ನೀಡುವುದು, ಗೋವಿನ ಹೆಸರಿನಲ್ಲಿ ಹಲ್ಲೆ ನಡೆಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ನೀಡುವ ಚಿತ್ರ ಹರಿಬಿಡುವುದು, ಪ್ರಾರ್ಥನಾ ಸ್ಥಳಗಳಿಗೆ ಹಾನಿ ಮಾಡುವದು ಸೇರಿದಂತೆ ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡುತ್ತಿದ್ದಾರೆ.
 
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಬೇರೆ ಬೇರೆ ನೆಪದಲ್ಲಿ ಮುಸ್ಲಿಂ ಸಮುದಾಯವನ್ನು ಕೆಣಕುವ ಹಾಗೂ ಧಾರ್ಮಿಕ ಅಸ್ಮಿತಗೆ ಧಕ್ಕೆ ತರುವ ಕಾರ್ಯ ಮಾಡುತ್ತ ಬಂದಿರುವುದು ಖೇದಕರ ಸಂಗತಿಯಾಗಿದೆ. ತಾಲ್ಲೂಕಿನ ಹುಸರಿಯ ಹಜರತ್ ಸಯ್ಯದ್ ಮೋತಿಶಾ ಖಾದ್ರಿ ದರ್ಗದಾದ ಗೋಡೆಯ ಮೇಲೆ ಕಿಡಿಗೇಡಿಗಳು ಜೈಶ್ರೀರಾಮ, ಓಂ, ಸ್ವಸ್ತಿಕ್ ಗುರುತಗಳನ್ನು ಬರೆದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಈ ಘಟನೆಯಿಂದ ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವಾಗಿದೆ. ಘಟನೆ ಸಂಬಂಧ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡದಿದ್ದಲ್ಲಿ ಭವಿಷ್ಯದಲ್ಲಿ ಕೋಮು ಸೌಹಾರ್ದತೆ ಧಕ್ಕೆಯಾಗುವ ಜೊತೆಗೆ ಶಾಂತಿ ಪ್ರಿಯರಾದ ಇಲ್ಲಿನ ನಿವಾಸಿಗಳಿಗೆ ಹಾನಿ ಸಂಭವಿಸಬಹುದಾಗಿದೆ. ಸಮಾಜದಲ್ಲಿನ ಇಂತಹ ವಿಚ್ಛಿದ್ರಕಾರಿ ಶಕ್ತಿಗಳನ್ನು ನಿಯಂತ್ರಿಸುವ ಕಾರ್ಯವಾಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
 
ಸಮುದಾಯದ ಪ್ರಮುಖರಾದ ಖಾದರ್ ಆನವಟ್ಟಿ, ಅಬ್ಬಾಸ್ ತೋನ್ಸೆ, ಎಚ್‌.ಯು. ಪಠಾಣ್, ಜುಬೇರ್ ಜುಕಾಕೊ, ಇಸ್ಮಾಯಿಲ್ ಜುಕಾಕೊ, ಅನೀಸ್ ತಹಶೀಲ್ದಾರ್, ಇಮ್ತಿಯಾಜ್ ಆನವಟ್ಟಿ, ಸಯ್ಯದ್ ಮೋತಿಶಾ ಉರುಸ್ ಸಮಿತಿ ಪದಾಧಿಕಾರಿಗಳು ಇದ್ದರು.
 
**
ಹಿಂದೂ– ಮುಸ್ಲಿಮ ಸಮುದಾಯದವರು ಮಾನವ ದೇಹದ ಎರಡು ಕಣ್ಣುಗಳಂತೆ. ಯಾವುದೇ ಧರ್ಮಕ್ಕೂ ಧಕ್ಕೆಯಾದರೆ ಸಮಾಜ ಸಂಕಷ್ಟ ಎದುರಿಸುತ್ತದೆ 
-ಮಹಮ್ಮದ್ ಇಕ್ಬಾಲ್ ಬಿಳಗಿ 
ಅಹಲೆ– ಸುನ್ನತ್– ಜಮಾತ್ ಅಧ್ಯಕ್ಷ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT