ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯನಾದರೂ ಹಿರಿದಾದ ಸಾಧನೆ

ಸಂಸಾರದ ಭಾರಕ್ಕೆ ಚೀಲ ಹೊರುವುದು ಅನಿವಾರ್ಯ
Last Updated 10 ಜನವರಿ 2017, 6:30 IST
ಅಕ್ಷರ ಗಾತ್ರ
ಗಜೇಂದ್ರಗಡ: ನೋಡಲು ಬಡಕಲು ಶರೀರ, ಜೊತೆಗೆ ಕುಳ್ಳ ಬೇರೆ. ಆದರೆ ಕುಳ್ಳನೆಂಬ ಕೀಳರಿಮೆ ಹೊಂದದೇ, ಈತ ಮಾಡುವ ಕೆಲಸ ಮಾತ್ರ ಹಿರಿದಾದುದು. ತುತ್ತಿನ ಚೀಲ ತುಂಬಿಸಿಕೊಳ್ಳಲು, ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಇಲ್ಲದಿದ್ದರೇ ಅವರ ಸಂಸಾರದ ಬಂಡಿ ನಡೆಯುವುದೇ ದುಸ್ತರ.
 
ಇಲ್ಲಿಯ ಎ.ಪಿ.ಎಂ.ಸಿಯಲ್ಲಿ ಹಮಾಲಿ ಕೆಲಸ ಮಾಡುವ ಫಕೀರಪ್ಪ ವದೇಗೊಳ 4.2 ಫೂಟು ಎತ್ತರವಿದ್ದು, ತನ್ನ ವಯಸ್ಸಿಗೆ ಮೀರಿ ಹಿರಿದಾದ ಸಾಹಸ ಮಾಡುತ್ತಿದ್ದಾರೆ. 38 ವರ್ಷದ ಇವರು ಶಾಲೆಯ ಮುಖವನ್ನೇ ನೋಡಿಲ್ಲ. ಬಡ ಕುಟುಂಬದಿಂದ ಬಂದಿರುವ ಇವರ ತಂದೆ ದಿವಂಗತ ಪರಸಪ್ಪ ಕೂಡಾ ಹಮಾಲಿ ಕೆಲಸ ಮಾಡುತ್ತಿದ್ದರು. ಪರಸಪ್ಪನವರ ಮೂವರು ಮಕ್ಕಳಲ್ಲಿ ಒಬ್ಬ ಮೃತಪಟ್ಟಿದ್ದು, ಮಲ್ಲಪ್ಪ ಮತ್ತು ಫಕೀರಪ್ಪ ಎ.ಪಿ.ಎಂ.ಸಿಯಲ್ಲಿ ದುಡಿಯುತ್ತಿದ್ದಾರೆ. ಇವರ ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಫಕೀರಪ್ಪ ಅವರ ಹೆಂಡತಿ ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳನ್ನು ಓದಿಸಬೇಕೆಂಬ ಹಂಬಲದಿಂದ ಸ್ವಾಭಿಮಾನ ತೊರೆದು, ಈ ದಂಪತಿ ದುಡಿಯುತ್ತಿದ್ದಾರೆ.
 
ಪರಂಪರಾಗತವಾಗಿ ಬಂದ ಹಮಾಲಿ ಕೆಲಸ ಇವರ ಕುಟುಂಬಕ್ಕೆ ಸಿಕ್ಕ ಬಳುವಳಿ. ಸುಮಾರು 20 ವರ್ಷಗಳಿಂದ ಫಕೀರಪ್ಪ ಹಮಾಲಿ ಮಾಡುತ್ತಿದ್ದು, ಆಗಾಗ ಇವರಿಗೆ ಕಾಲು ಮತ್ತು ಸಂದುಗಳಲ್ಲಿ ನೋವು ಕಾಣಿಸುತ್ತದೆ.
 
‘ನಮ್ಗ ಮನಿ ನಡಸಾಕ್‌ ಹಮಾಲಿ ಬಿಟ್ರ ಬ್ಯಾರೆ ಕೆಲ್ಸಾ ಬರೂದಿಲ್ಲಾ. ಒಂದೊಂದ್‌ ಸಲಾ ಕೆಲಸಾ ಸಿಗೂದಿಲ್ಲಾ. ಹಂಗಾಗಿ ಭಾಳ ತ್ರಾಸ್‌ಪಟ್ಟೇವಿ. ರೈತರು ಎ.ಪಿ.ಎಂ.ಸಿಗೆ ಮಾಲು ತಂದ್ರ ಮಾತ್ರ ದಿನಕ್ಕ 200 ರಿಂದ 300 ರೂಪೈ ಕಮಾಯಿ ಆಗತೈತಿ....’ ಎನ್ನುತ್ತಾರೆ ಫಕೀರಪ್ಪ.
 
ಸಂಸಾರದ ಭಾರ ಹೊರಲು ಇವರು ಧಾನ್ಯದ ಭಾರವಾದ ಚೀಲಗಳನ್ನು ಹೊರುವುದು ಅನಿವಾರ್ಯವಾಗಿದೆ. ಸಹೋದರರ ಪೈಕಿ ಚಿಕ್ಕವನಾದ ಇವರು ಛಲದಿಂದ ಬದುಕುತ್ತಿದ್ದು, ಇವರನ್ನು ಎ.ಪಿ.ಎಂ.ಸಿ ಹಮಾಲರು ಬಲು ಅಕ್ಕರತೆಯಿಂದ ಕಾಣುತ್ತಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT