ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಒತ್ತಾಯ

ಸರ್ಕಾರ, ಗಣಿ ಮತ್ತು ವಿಜ್ಞಾನ ಖಾತೆ ಸಚಿವರು, ಜಿಲ್ಲಾಡಳಿತಕ್ಕೆ ಶರಣರ ಪತ್ರ
Last Updated 10 ಜನವರಿ 2017, 7:51 IST
ಅಕ್ಷರ ಗಾತ್ರ
ಚಿತ್ರದುರ್ಗ: ‘325 ಅಡಿ ಎತ್ತರದ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಾಣ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಪುತ್ಥಳಿ ನಿರ್ಮಾಣ ಕಾಮಗಾರಿಗೆ ತೊಂದರೆಯಾಗಿದ್ದು, ಸರ್ಕಾರ ಶೀಘ್ರ ಕಲ್ಲು ಗಣಿಕಾರಿಕೆಯನ್ನು ನಿಷೇಧಿಸಬೇಕು’ ಎಂದು ಶಿವಮೂರ್ತಿ ಮುರುಘಾ ಶರಣರು ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇ ಶಕರು, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ ಕುಲಕರ್ಣಿ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
 
‘ವಿಶ್ವಕ್ಕೆ ಸಮಾನತೆ ಸಾರುವ ಭಾವೈಕ್ಯ ಮತ್ತು ಅಧ್ಯಯನ ಕೇಂದ್ರವಾಗಿಸುವ ಆಶಯದೊಂದಿಗೆ  ಶ್ರೀಮಠದ ಹಿಂಭಾಗದಲ್ಲಿ 325  ಅಡಿ ಎತ್ತರದ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ₹100 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸ ಲಾಗುತ್ತದೆ. ಅತ್ಯುತ್ತಮ ಪ್ರವಾಸಿ ತಾಣ ವಾಗಿಸುವ ಗುರಿ ಹೊಂದಿದೆ. ಭಕ್ತರು ಮತ್ತು ಸಾರ್ವಜನಿಕರ ನೆರವಿನಿಂದ ಈ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಪುತ್ಥಳಿ ನಿರ್ಮಾಣ ಪ್ರದೇಶದಲ್ಲಿ ಕಲ್ಲು ಗಣಿ ಗಾರಿಕೆ ವಿಪರೀತವಾಗಿದೆ’ ಎಂದು ವಿವರಿಸಿದ್ದಾರೆ.
 
‘ಕಲ್ಲು ಗಣಿಗಾರಿಕೆಯಿಂದ ಕೇವಲ ಪುತ್ಥಳಿಗಷ್ಟೇ ಅಲ್ಲ, ಶ್ರೀ ಮಠದಲ್ಲಿರುವ ಹಳೆಯ ಕಟ್ಟಡ, ಹೆಬ್ಬಾಗಿಲಿನ ಗೋಡೆಗಳಲ್ಲೂ ಬಿರುಕು ಕಾಣಿಸಿಕೊಂಡಿದೆ.  ಸಾರ್ವಜನಿಕರ ಹಿತ ದೃಷ್ಟಿಯಿಂದ ಕಟ್ಟಡವನ್ನು ತೆರವು ಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇತ್ತೀಚೆಗೆ ಹೊಳಲ್ಕೆರೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಲಕ್ಷ್ಮಣ ತೆಲಗಾವಿ ಭಾಷಣದಲ್ಲಿ ಗಣಿಗಾರಿಕೆಯಿಂದ ಉಲ್ಬಣಿಸಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಗಣಿಗಾರಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದರು’ ಎಂದು ಪತ್ರದಲ್ಲಿ ಶರಣರು ಉಲ್ಲೇಖಿಸಿದ್ದಾರೆ.
 
‘ಶ್ರೀಮಠದಲ್ಲಿರುವ ಅನುಭವ ಮಂಟಪ, ಅಲ್ಲಮಪ್ರಭು ಅಧ್ಯಯನ ಪೀಠ, ವಸತಿ ನಿಲಯ, ದಾಸೋಹ ಭವನ, ವಿದ್ಯಾರ್ಥಿ ನಿಲಯ ಕಟ್ಟಡಗಳು ಹಾಗೂ ಮಠದ ಅಕ್ಕಪಕ್ಕವಿರುವ ಕವಾಡಿಗರಹಟ್ಟಿ, ಮಠದ ಕುರುಬರಹಟ್ಟಿ ಗ್ರಾಮದ ವಸತಿ ಪ್ರದೇಶಗಳಲ್ಲೂ ಗಣಿಗಾರಿಕೆಯಿಂದ ಹಾನಿಯುಂಟಾಗುವ ಸಂಭವವಿದೆ. ಶ್ರೀಮಠ ಹಾಗೂ ಬಸವಣ್ಣನವರ ಕಂಚಿನ ಪುತ್ಥಳಿ ನಿರ್ಮಾಣ ಸ್ಥಳದ ಸುತ್ತಮುತ್ತ ೫ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿ ಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT