ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ನೇ ವೇತನ ಆಯೋಗ ಶಿಫಾರಸು ಜಾರಿ

ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ
Last Updated 10 ಜನವರಿ 2017, 7:52 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಇಪ್ಪತ್ನಾಲ್ಕು ಗಂಟೆಯೊಳಗೆ ಏಳನೇ ವೇತನ ಆಯೋಗದ ವರದಿಯ ಶಿಫಾರಸನ್ನು ಜಾರಿಗೊಳಿಸುತ್ತೇನೆ’  ಎಂದು ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
 
 ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಪಿ.ಆರ್‌.ಬಸವರಾಜ ಪರ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.
 
‘ಜನಸಂಘದ ಕಾಲದಿಂದಲೂ ಬಿಜೆಪಿ ಪಕ್ಷ ಶಿಕ್ಷಕರ ಪರ ಕೆಲಸ ಮಾಡಿದೆ. ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ 8 ಸಾವಿರ ಸಹ ಶಿಕ್ಷಕರು, 4 ಸಾವಿರ ಪಿಯು ಉಪನ್ಯಾಸಕರನ್ನು ನೇಮಕ ಮಾಡಿದ್ದೇವೆ. 4,500 ಜೆಒಸಿ ಶಿಕ್ಷಕರನ್ನು ಕಾಯಂ ಮಾಡಿದ್ದೇವೆ. 5ನೇ ವೇತನ ಆಯೋಗ ಮತ್ತು 6ನೇ ವೇತನ ಆಯೋಗ ರಚಿಸುವ ಜತೆಗೆ ಹಣಕಾಸು ಇಲಾಖೆ ಸಮಸ್ಯೆ ನಡುವೆಯೇ ಯುಜಿಸಿ ಶ್ರೇಣಿ ಜಾರಿಗೊಳಿಸಿದ್ದೆವು’ ಎಂದು ನೆನಪಿಸಿದರು.
 
‘ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಐದು ಜಿಲ್ಲೆಯ 37 ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಈ ಐದು ಜಿಲ್ಲೆಗಳಲ್ಲಿ ಸುಮಾರು 21 ಸಾವಿರ ಮತದಾರರಿದ್ದು, ಚಿತ್ರದುರ್ಗ ದಲ್ಲಿ ಅಂದಾಜು 3,300 ಮತದಾರರಿದ್ದಾರೆ’ ಎಂದು ಹೇಳಿದರು. 
 
‘ಈ ಉಪಚುನಾವಣೆ ಅಭ್ಯರ್ಥಿ ಅವಧಿ 15 ತಿಂಗಳು ಎಂದು ನಿರ್ಲಕ್ಷ್ಯ ಮಾಡಬೇಡಿ. ಒಂದೊಂದು ಚುನಾವಣೆಯೂ ಅದರದ್ದೇ ಆದ ಮಹತ್ವ ಪಡೆದುಕೊಂಡಿವೆ. ಹಾಗಾಗಿ ಯಾವುದೇ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಂತೆ ನೋಡಿ ಕೊಳ್ಳಬೇಕು’ ಎಂದರು.
 
‘ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡಿದೆ. ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಈ ಚುನಾವಣೆ ನಂತರ ಒಂದು ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ರೈತರು, ಕೂಲಿಕಾರ್ಮಿಕರ ವರ್ಗಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು. 
 
ಶಾಸಕ ವೈ.ಎ.ನಾರಾಯಣಸ್ವಾಮಿ, ‘2016ರ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಫಲಿತಾಂಶ 2018ರ ವಿಧಾನಸಭಾ  ಚುನಾವಣೆಯ ದಿಕ್ಸೂಚಿಯಾಗಲಿದೆ. ಹಾಗಾಗಿ, ಈ ಚುನಾವಣೆಯನ್ನು ನಿರ್ಲಕ್ಷಿಸಬೇಡಿ. ಕಳೆದ ಎರಡು ಚುನಾವಣೆಯಲ್ಲಿ ಚಿತ್ರದುರ್ಗದ ಮತದಾರರು ನನ್ನನ್ನು ಕೈಬಿಟ್ಟಿಲ್ಲ. ಇದು ಬಿಜೆಪಿಯ ಕ್ಷೇತ್ರ. ಅದು ಕೈತಪ್ಪಿ ಹೋಗಬಾರದು’ ಎಂದು ಮನವಿ ಮಾಡಿದರು.
 
ಸಂಸದರಾದ ಜಿ.ಎಂ.ಸಿದ್ದೇಶ್ವರ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ರೇಣುಕಾಚಾರ್ಯ, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್. ತಿಪ್ಪೇಸ್ವಾಮಿ ಮಾಜಿ ಶಾಸಕರಾದ ಎಂ.ಚಂದ್ರಪ್ಪ, ಪಿ.ಆರ್.ರಮೇಶ್, ಆರ್. ರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಸೇರಿದಂತೆ ಹಲವು ಗಣ್ಯರು  ಉಪಸ್ಥಿತರಿದ್ದರು. 
 
**
‘ರೈತರ ಸಾಲ ಮನ್ನಾ ಮಾಡಿ ’
‘ರಾಜ್ಯ ಸರ್ಕಾರ ಸಾಲ ಮನ್ನಾ ಮಾಡದಿದ್ದರೆ ರೈತರು ಬೀದಿಗಿಳಿಯುತ್ತಾರೆ, ಆಗ ನಾವು ಕೂಡ ಸರ್ಕಾರದ ಮೂಗು ಹಿಡಿದು ಕೇಳಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.
 
ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಸೋಮವಾರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ, ಅಧಿಕಾರ ಬಿಟ್ಟು ತೊಲಗುವಂತೆ ಸರ್ಕಾರಕ್ಕೆ ಹೇಳಬೇಕು. ರಾಜ್ಯದಲ್ಲಿ  ತೀವ್ರ ಬರವಿದೆ. ರೈತರು ಸಾಲ ಪಾವತಿಸುವ ಪರಿಸ್ಥಿತಿಯಲ್ಲಿಲ್ಲ, ಮೊದಲು ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮಾಡಲಿ. ನಂತರ ಉಳಿದ ಚರ್ಚೆ ಮಾಡೋಣ’ ಎಂದು ಸಲಹೆ ನೀಡಿದರು.
 
 ‘ಕೇಂದ್ರ ಈಗಾಗಲೇ ₹ 1,750 ಕೋಟಿ ಬಿಡುಗಡೆ ಮಾಡಿದೆ. ಕಳೆದ ಬಾರಿ ನೀಡಿದ್ದ ₹1,540 ಕೋಟಿ ಇನ್‌ಪುಟ್‌ ಸಬ್ಸಿಡಿ ಹಣ ಖರ್ಚು ಮಾಡಿದ ವರದಿಯನ್ನು ಕೇಂದ್ರಕ್ಕೆ ನೀಡಿಲ್ಲ’ ಎಂದು ಆಕ್ಷೇಪಿಸಿದರು.
 
‘ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸಲಿಲ್ಲ, ಪ್ರಾಮಾಣಿಕವಾಗಿ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದೆವು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಅಗತ್ಯ’ ಎಂದು ವಿವರಿಸಿದರು. 
 
 ಬರ ಅಧ್ಯಯನ ನಡೆಸಿದ ನಂತರ ಕೇಂದ್ರಕ್ಕೆ ವರದಿ ಕೊಡುತ್ತೇವೆ. ಈ ಕುರಿತು ಸಂಸತ್ತಿನಲ್ಲೂ ಪ್ರಸ್ತಾಪ ಮಾಡುತ್ತೇವೆ. ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗಾಗಿ ಕೇಂದ್ರಕ್ಕೆ ಒತ್ತಾಯ ಮಾಡುತ್ತೇವೆ’ ಎಂದು ಉತ್ತರಿಸಿದರು.
 
ಸೂಕ್ತ ವ್ಯಕ್ತಿ ನೇಮಿಸಿ 
‘ಲೋಕಾಯುಕ್ತ ಸಂಸ್ಥೆ ವರ್ಷಾನುಗಟ್ಟಲೆ ನಿಷ್ಕ್ರಿಯವಾಗಿ ಭ್ರಷ್ಟಾಚಾರಕ್ಕೆ ನಾಂದಿ ಆಗಿದೆ. ಇನ್ನಾದರೂ ಆ ಸ್ಥಾನಕ್ಕೆ ಉತ್ತಮ ಹಾಗೂ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂಬುದು ನಮ್ಮ ಅಪೇಕ್ಷೆ. ಈಗ ವಿಶ್ವನಾಥಶೆಟ್ಟಿ ಅವರ ಹೆಸರು ಕೇಳಿಬರುತ್ತಿದೆ. ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಸಭೆಯ ಚರ್ಚೆ, ತೀರ್ಮಾನ ನೋಡಿಕೊಂಡು ಮುಂದಿನ ಕ್ರಮಗಳ ಬಗ್ಗೆ ಚಿಂತಿಸುತ್ತೇವೆ. ನಾನು ಯಾರ ಪರವೂ ಇಲ್ಲ, ಯೋಗ್ಯ ಹಾಗೂ ಪ್ರಾಮಾಣಿಕ ವ್ಯಕ್ತಿಯನ್ನು ಈ ಸಂಸ್ಥೆಗೆ ನೇಮಿಸಬೇಕು ಎಂಬುದು ನಮ್ಮ ಆಶಯ’ ಎಂದು ಅವರು ಸ್ಪಷ್ಟನೆ ನೀಡಿದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT