ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜುಗಾರಿ ಕ್ರಾಸ್’ ಸಾರಥ್ಯ ಯಾರಿಗೆ?

‘ಜುಗಾರಿ ಕ್ರಾಸ್’ ಸಾರಥ್ಯ ಯಾರಿಗೆ?
Last Updated 10 ಜನವರಿ 2017, 10:20 IST
ಅಕ್ಷರ ಗಾತ್ರ
ಚಾಮರಾಜನಗರ: ‘ಜುಗಾರಿ ಕ್ರಾಸ್’– ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ. ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಮೇಲೆ ಬೆಳಕು ಚೆಲ್ಲುತ್ತದೆ. ಕಾಡು ಕಾಳದಂಧೆಗೆ ಸಿಲುಕಿ ನಲುಗುತ್ತಿ ರುವ ಬಗ್ಗೆ ಕನ್ನಡಿ ಹಿಡಿಯುತ್ತದೆ. ‘ಜುಗಾರಿ ಕ್ರಾಸ್‌’ನಲ್ಲಿ ನಡೆಯುವ ಕಾಳದಂಧೆ ಊಹೆಗೆ ನಿಲುಕದ್ದು. 
 
ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣವು ನೆರೆಯ ತಮಿಳುನಾಡು ಮತ್ತು ಕೇರಳಕ್ಕೆ ಸಂಪರ್ಕದ ಕೊಂಡಿ. ವನ್ಯಜೀವಿ ವ್ಯಾಪಾರ, ಮರಗಳ್ಳತನ, ಜಾನುವಾರು, ಅಕ್ರಮ ಮರಳು ಸಾಗಣೆಯ ಹೆಬ್ಬಾಗಿಲು ಆಗಿದೆ. ಹಾಗಾಗಿ, ಈ ಪಟ್ಟಣವೂ ‘ಜುಗಾರಿ ಕ್ರಾಸ್‌’ ಅನ್ನು ಹೋಲುತ್ತದೆ. 
 
ಸಹಕಾರ ಮತ್ತು ಸಕ್ಕರೆ ಸಚಿವ ರಾಗಿದ್ದ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಅಕಾಲಿಕ ನಿಧನದಿಂದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಈಗ ಸುದ್ದಿಯಲ್ಲಿದೆ. ಮಹದೇವಪ್ರಸಾದ್‌ ಮೈಸೂರು ಭಾಗದ ಲಿಂಗಾಯತ ಸಮುದಾಯದ ಪ್ರಭಾವಿ ರಾಜಕಾರಣಿ ಯಾಗಿದ್ದರು. ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು. ಹಾಗಾಗಿ, ಅವರ ಅಕಾಲಿಕ ನಿಧನ ಜಿಲ್ಲೆಯ ಕಾಂಗ್ರೆಸ್‌ ಕೋಟೆಯಲ್ಲಿ ಶೂನ್ಯಭಾವ ಮೂಡಿಸಿದೆ.
 
ಗುಂಡ್ಲುಪೇಟೆ ಕ್ಷೇತ್ರ ರಾಜಕೀಯ ವಾಗಿ ಜಿಲ್ಲೆಯ ಉಳಿದ ಕ್ಷೇತ್ರಗಳಿಗಿಂತ ತುಸು ಭಿನ್ನ. ಆರು ದಶಕದ ಈ ಕ್ಷೇತ್ರದ ರಾಜಕೀಯ ಇತಿಹಾಸ ಅವಲೋಕಿಸಿದರೆ ಇದು ವೇದ್ಯವಾಗುತ್ತದೆ. ಕೆ.ಎಸ್‌.ನಾಗ ರತ್ನಮ್ಮ, ಎಚ್‌.ಕೆ. ಶಿವರುದ್ರಪ್ಪ ಮತ್ತು ಮಹದೇವಪ್ರಸಾದ್‌ ಅವ ರಲ್ಲಿಯೇ ಈ ಕ್ಷೇತ್ರದ ಅಧಿಕಾರ ಹಂಚಿಕೆಯಾಗಿತ್ತು.
 
1952ರ ಪ್ರಥಮ ಚುನಾವಣೆಯಲ್ಲಿ ಈ ಕ್ಷೇತ್ರ ದ್ವಿಸದಸ್ಯ ಸ್ಥಾನ ಹೊಂದಿತ್ತು. ಹೆಗ್ಗಡದೇವನಕೋಟೆ ಮತ್ತು ಗುಂಡ್ಲು ಪೇಟೆ ಸೇರಿಸಿ ಕ್ಷೇತ್ರ ರಚಿಸಲಾಗಿತ್ತು. ಗುಂಡ್ಲುಪೇಟೆ ಕ್ಷೇತ್ರದಿಂದ ಶಿವರುದ್ರಪ್ಪ ಮತ್ತು ಹೆಗ್ಗಡದೇವನಕೋಟೆ ಕ್ಷೇತ್ರದಿಂದ ಸಿದ್ದಯ್ಯ ಪಕ್ಷೇತರರಾಗಿ ಜಯಗಳಿಸಿದ್ದರು.
 
ಆ ನಂತರ ನಾಗರತ್ನಮ್ಮ ಅವರು ಏಳು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದರು. 1978ರ ಚುನಾವಣೆಯಲ್ಲಿ ಮಾತ್ರ ಶಿವ ರುದ್ರಪ್ಪ ಗೆದ್ದಿದ್ದರು. ನಾಗರತ್ನಮ್ಮ ವಿರುದ್ಧ ಮಹದೇವಪ್ರಸಾದ್‌ ಅವರು 1985 ಮತ್ತು 1989ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.
 
1993ರಲ್ಲಿ ನಾಗರತ್ನಮ್ಮ ನಿಧನ ರಾದರು. ಮರುವರ್ಷವೇ ವಿಧಾನಸಭೆಗೆ ಚುನಾವಣೆಯೂ ಘೋಷಣೆಯಾಯಿತು. 1994ರ ಚುನಾವಣೆಯಲ್ಲಿ ಮಹದೇವ ಪ್ರಸಾದ್‌ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಸತತ 5 ಬಾರಿ ಜಯಗಳಿಸಿ ದಾಖಲೆ ಬರೆದರು.
 
ಪ್ರಬಲ ಪೈಪೋಟಿ: ಮಹದೇವಪ್ರಸಾದ್‌ ಅವರ ಪ್ರಭೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಕೈಪಾಳಯದಲ್ಲಿ ಎರಡನೇ ಸ್ತರದ ನಾಯಕರು ಬೆಳೆದಿಲ್ಲ. ಅವರ ಪುತ್ರ ಕೂಡ ರಾಜಕೀಯವಾಗಿ ಗುರುತಿಸಿ ಕೊಂಡಿಲ್ಲ. ಹಾಗಾಗಿ, ಮಹದೇವ ಪ್ರಸಾದ್‌ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಗೆ ಅವರ ಪತ್ನಿ ಗೀತಾ ಮಹದೇವಪ್ರಸಾದ್‌ ಅವರನ್ನೇ ಕಣಕ್ಕಿಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ.
 
ಈ ನಡುವೆ ರಾಜಕೀಯ ಪ್ರವೇಶಿಸುವ ಬಗ್ಗೆ ಗೀತಾ ಅವರೂ ಮುನ್ಸೂಚನೆ ನೀಡಿದ್ದಾರೆ. ಇದು ಕಾಂಗ್ರೆಸ್‌ ಪಾಲಿಗೆ ಕೊಂಚ ಸಮಾಧಾನ ತಂದಿದ್ದರೆ ಅಚ್ಚರಿಪಡಬೇಕಿಲ್ಲ.
 
ಆದರೆ, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರುವುದು ಸ್ಪಷ್ಟ. 2008ರ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪ್ರಸಾದ್‌ ಅವರು ಪಡೆದಿರುವ ಗೆಲುವಿನ ಮತಗಳ ಅಂತರ ಇದಕ್ಕೆ ಪುಷ್ಟಿ ನೀಡುತ್ತದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಎಸ್‌. ನಿರಂಜನ್‌ಕುಮಾರ್‌ ವಿರುದ್ಧ ಆ ಚುನಾವಣೆಯಲ್ಲಿ ಮಹದೇವಪ್ರಸಾದ್‌ ಅವರು ಕೇವಲ 2,203 ಮತಗಳ ಅಂತರದಿಂದ ಜಯಗಳಿಸಿದ್ದರು.
 
2013ರ ಚುನಾವಣೆಯಲ್ಲೂ ಮಹದೇವಪ್ರಸಾದ್‌ ಅವರ ಗೆಲುವಿನ ಅಂತರ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಲಿಲ್ಲ. ಕೆಜೆಪಿಯಿಂದ ಸ್ಪರ್ಧಿಸಿದ್ದ ನಿರಂಜನ್‌ಕುಮಾರ್‌ ವಿರುದ್ಧ 7,675 ಮತಗಳ ಅಂತರದಿಂದ ಜಯ ಗಳಿಸಿದರು.
 
ಇತ್ತೀಚೆಗೆ ನಡೆದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇತ್ತು. ಈ ನಡುವೆಯೂ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿತ್ತು. ಹಾಗಾಗಿ, ‘ಜುಗಾರಿ ಕ್ರಾಸ್‌’ನ ಆಧಿಪತ್ಯ ಯಾರಿಗೆ? ಎನ್ನುವ ಪ್ರಶ್ನೆಗೆ ಉಪ ಚುನಾವಣೆ ವರೆಗೂ ಕಾಯುವುದು ಅನಿವಾರ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT