ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಪಾವತಿಗೆ ‘ಭೀಮ’ ಬಲ!

Last Updated 10 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌ ಮತ್ತು ಮೊಬೈಲ್‌ ಫೋನ್‌ ಅಧಾರಿತ ಪಾವತಿಗಳ ಅವಲಂಬನೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇತರರಿಗೆ ಹಣ ಪಾವತಿಸಲು ಅಥವಾ ಹಣ ವರ್ಗಾಯಿಸಲು ಅಪಾರ ಸಂಖ್ಯೆಯಲ್ಲಿ ಜನರು ಇಂದು ‘ಪೇಟಿಯಂ’, ‘ಫ್ರೀಚಾರ್ಜ್’ನಂತಹ ಮೊಬೈಲ್‌ ವಾಲೆಟ್‌ಗಳನ್ನು ಬಳಸುತ್ತಿದ್ದಾರೆ. 

ಪ್ರಧಾನಿ ಅವರು ಈಚೆಗೆ BHIM (Bharat Interface for Money -ಬಿಎಚ್‌ಐಎಂ) ಹೆಸರಿನ ಆ್ಯಪ್‌ ಅನ್ನು ಬಿಡುಗಡೆ ಮಾಡಿದ್ದು, ತ್ವರಿತವಾಗಿ ಹಣ ಪಾವತಿಗೆ ಇದು ಇನ್ನಷ್ಟು ಸರಳ ಮಾರ್ಗವಾಗುವ ಎಲ್ಲ ಲಕ್ಷಣಗಳು ಕಾಣಿಸಿವೆ. ಹಣ ಪಾವತಿಗೆ ‘ಭೀಮ’ ಬಲ ತರಲಿರುವ ಈ ಆ್ಯಪ್‌  ಬಳಸುವುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

* ‘ಭೀಮ್‌’ ಎಂದರೇನು?
ಬಿಎಚ್‌ಐಎಂ ‘ಭಾರತ್‌ ಇಂಟರ್‌ಫೇಸ್‌ ಫಾರ್‌ ಮನಿ’ ಎಂಬ ಪದದ ಸಂಕ್ಷಿಪ್ತ ರೂಪ. ಆಂಡ್ರಾಯ್ಡ್‌ ಫೋನ್‌ಗಳಿಗೆ ಯುಪಿಐ ಆಧಾರದಲ್ಲಿ ಹಣ ವರ್ಗಾವಣೆ ಮಾಡುವ ಮೊಬೈಲ್‌ ಕಿರುತಂತ್ರಾಂಶ ಇದು.

* ಯುಪಿಐ ಎಂದರೇನು?
ಯುಪಿಐ ಎಂದರೆ ಯುನೈಟೆಡ್‌ ಪೇಮೆಂಟ್‌ ಇಂಟರ್‌ಫೇಸ್‌. ಅಂದರೆ ಪಾವತಿ ಮಾಡುವುದಕ್ಕೆ ಇರುವ ಒಂದು ಸಂಯುಕ್ತ ಸಂಪರ್ಕ ವ್ಯವಸ್ಥೆ. ವ್ಯಕ್ತಿಗಳ ಬ್ಯಾಂಕ್‌ ಖಾತೆಗೆ ಸೆಕೆಂಡ್‌ಗಳಲ್ಲಿ ಹಣ ವರ್ಗಾವಣೆ ಮಾಡುವುದು ಇಲ್ಲಿ ಸಾಧ್ಯವಿದೆ. ಹಣ ವರ್ಗಾವಣೆ ಇಂಟರ್‌ನೆಟ್‌ ಮಿನಿಯೇಚರ್‌ ಪಿನ್‌ಶ್ಚರ್‌ ಸರ್ವೀಸ್‌ (ಐಎಂಪಿಎಸ್‌) ಮೂಲಕ ನಡೆಯುತ್ತದೆ. ಇಲ್ಲಿ ವ್ಯಕ್ತಿ ಹಣ ವರ್ಗಾವಣೆ ಮಾಡುವ  ಅಥವಾ ಹಣ ಸ್ವೀಕರಿಸುವ ವ್ಯಕ್ತಿಗೆ ಬ್ಯಾಂಕ್‌ ವಿವರ ಅಥವಾ ಮೊಬೈಲ್‌ ನಂಬರ್ ವಿವರ ತಿಳಿಯುವ ಅಗತ್ಯ ಇಲ್ಲ.

ಒಂದು ನಿರ್ದಿಷ್ಟ ಪಾವತಿ ವಿಳಾಸದ Virtua* Payment Address – VPA)  ಮೂಲಕ ಈ ಹಣ ವರ್ಗಾವಣೆ ಮತ್ತು ಸ್ವೀಕಾರ ನಡೆಯುತ್ತದೆ. ಈ ವಿಪಿಎ ಸಾಮಾನ್ಯವಾಗಿ xxxx@icici.. ಹೀಗೆ ಇರುತ್ತದೆ. ಬಹುತೇಕ ಎಲ್ಲ ಬ್ಯಾಂಕ್‌ಗಳು ತಮ್ಮದೇ ಯುಪಿಐ ಆ್ಯಪ್‌ಗಳನ್ನು ಹೊಂದಿರುತ್ತವೆ ಅಥವಾ ತಮ್ಮಲ್ಲಿ ಈಗಾಗಲೇ ಇರುವ ಆ್ಯಪ್‌ಗಳಿಗೆ  ಯುಪಿಐ ಜತೆ ಸಂಪರ್ಕ ಕಲ್ಪಿಸಿಕೊಟ್ಟಿರುತ್ತವೆ.

* ಹಾಗಿದ್ದರೆ ‘ಭೀಮ್‌’ ಏಕಾಗಿ?
‘ಭೀಮ್‌’ ಎಂಬುದು ಯಾವುದೇ ಬ್ಯಾಂಕ್‌ನಲ್ಲಿ ಬಳಸಿಕೊಳ್ಳಬಹುದಾದ ಒಂದು ಆ್ಯಪ್‌.  ಎಲ್ಲ ಬ್ಯಾಂಕ್‌ಗಳ ಹಣ ಪಾವತಿ ವಿಳಾಸವು  ...@UPI ಎಂಬಂತೆ ಕೊನೆಗೊಳ್ಳುತ್ತದೆ. ಉದಾಹರಣೆಗೆ xxxx@UPI.

* ಭೀಮ್‌ ಆ್ಯಪ್‌ ಅನ್ನು ನಾನು ಎಲ್ಲಿ ಪಡೆಯಬೇಕು?
ಗೂಗಲ್‌ ಪ್ಲೇಸ್ಟೋರ್‌ನಿಂದ ಇದನ್ನು ಪಡೆಯಬೇಕು. https://goo.g*/wSsd5h

* ಈ ಪ್ಲೇಸ್ಟೋರ್‌ ಆಂಡ್ರಾಯ್ಡ್‌ಗೆ ಮಾತ್ರ ಇರುವುದು. ನನ್ನಲ್ಲಿ ಐಫೋನ್‌ ಇದೆ. ನಾನೇನು ಮಾಡಲಿ?
ಸದ್ಯ ಆಂಡ್ರಾಯ್ಡ್‌ನಲ್ಲಿ ಮಾತ್ರ ಈ ಆ್ಯಪ್‌ ಲಭ್ಯ ಇದೆ. ಐಒಎಸ್‌, ವಿಡೋಸ್‌ ಫೋನ್‌, ಬ್ಲ್ಯಾಕ್‌ಬರ್ರಿಗಳಿಗೆ ಶೀಘ್ರ ಇದು ಸಿಗಬಹುದು.

* ಸರಿ, ಡೌನ್‌ಲೋಡ್ ಮಾಡಿಯಾಯ್ತು, ಮುಂದೇನು?
ಆ್ಯಪ್‌ ಅನ್ನು ತೆರೆದು ನಿಮ್ಮ ಮೊಬೈಲ್‌ ನಂಬರ್‌ ನಮೂದಿಸಿ. ನಿಮ್ಮ ಮೊಬೈಲ್‌ ನಂಬರ್ ಅನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಆ್ಯಪ್‌ ಅದನ್ನು ಪರಿಶೀಲನೆ ನಡೆಸುತ್ತದೆ. ಬಳಿಕ ನೀವು ನಿಮ್ಮ ಖಾತೆ ಇರುವ ಬ್ಯಾಂಕ್‌  ಆಯ್ಕೆ ಮಾಡಬೇಕು. ಆ್ಯಪ್‌ ಮತ್ತೊಮ್ಮೆ ನಿಮ್ಮ ಮೊಬೈಲ್‌ಗೆ ಬ್ಯಾಂಕ್‌ ಖಾತೆ ಹೊಂದಿರುವ ಸಂಪರ್ಕ ಪರಿಶೀಲಿಸುತ್ತದೆ ಮತ್ತು ಅದನ್ನು ತೋರಿಸುತ್ತದೆ. ಖಾತೆ ಸಂಖ್ಯೆ ಸರಿಯಾಗಿದ್ದರೆ ಅದನ್ನು ಆಯ್ಕೆ ಮಾಡಿ.

ಈಗ ನಿಮ್ಮ ಖಾತೆಯನ್ನು ಆ್ಯಪ್‌ ಜತೆಗೆ ಸಂಪರ್ಕ ಸಾಧಿಸಿದಂತಾಯಿತು. ನಿಮಗೆ ಸ್ವಯಂಚಾಲಿತ ವಿಪಿಎ@ಯುಪಿಐ ಐಡಿ ದೊರೆಯುತ್ತದೆ. ಬಳಿಕ ನೀವೇ ನಿಮ್ಮ ವಿಶಿಷ್ಟ ಗುರುತಿನ ಹೆಸರನ್ನು ಅವಕಾಶ ಇದ್ದರೆ ಬಳಸಿಕೊಳ್ಳಬಹುದು. ಆಗ ಕ್ಯೂಆರ್‌ ಕೋಡ್‌ (Quick Response Code) ತೋರಿಸಲಾಗುತ್ತದೆ. ಇದನ್ನು ನೀವು ಸಂಗ್ರಹಿಸಿ ಇಟ್ಟುಕೊಳ್ಳಬಹುದು ಅಥವಾ ಮುದ್ರಿಸಿ ಇಟ್ಟುಕೊಳ್ಳಬಹುದು. ಭದ್ರತೆಗಾಗಿ ಪಿನ್‌ ಕೋಡ್‌ ಅನ್ನೂ ನಮೂದಿಸಲು ಸೂಚಿಸಲಾಗುತ್ತದೆ.

* ಹಣ ವರ್ಗಾವಣೆ ಮಾಡುವುದು ಹೇಗೆ?
ಹಣ ಪಾವತಿಸಲು / ವರ್ಗಾಯಿಸಲು  ಹಲವಾರು ಮಾರ್ಗಗಳಿವೆ. ಮೊಬೈಲ್‌ ನಂಬರ್‌ ಅಥವಾ ಯುಪಿಐ ಐಡಿ ಮೂಲಕ ಹಣ ವರ್ಗಾಯಿಸಬಹುದು.
1. ಹಣ ಪಡೆಯಬೇಕಿರುವವರ ಮೊಬೈಲ್‌ ನಂಬರ್‌ ಅಥವಾ ಯುಪಿಐ ಐಡಿ ನಮೂದಿಸಿ.
2. ಮೊತ್ತ ನಮೂದಿಸಿ
3. ನಿಮ್ಮ ಪಿನ್‌ ಅನ್ನು ನಮೂದಿಸಲು ಸೂಚನೆ ಬರುತ್ತದೆ
4. ರಹಸ್ಯ ಸಂಖ್ಯೆ ನಮೂದಿಸುತ್ತಿದ್ದಂತೆ   ತಕ್ಷಣ ಹಣ ವರ್ಗಾವಣೆಗೊಳ್ಳುತ್ತದೆ

* ಕ್ಯೂಆರ್‌ ಕೋಡ್‌ ಮೂಲಕ ಹಣ ವರ್ಗಾವಣೆ
1.   ಹಣ ಪಡೆಯಬೇಕಿರುವವರ ಕ್ಯೂಆರ್ ಕೋಡ್‌ ಅನ್ನು ಅಥವಾ ಪ್ರಿಂಟ್‌ಔಟ್‌ನಲ್ಲಿರುವ ಕ್ಯೂಆರ್‌ ಕೋಡ್‌ ಅನ್ನು ನಿಮ್ಮ ಮೊಬೈಲ್‌ನಿಂದ ಸ್ಕ್ಯಾನ್‌ ಮಾಡಿ
2. ಮೊತ್ತ  ನಮೂದಿಸಿ
3. ನಿಮ್ಮ ಪಿನ್‌ ಅನ್ನು ಕೇಳಬಹುದು
4. ಪಿನ್‌ ನಮೂದಿಸುತ್ತಿದ್ದಂತೆ  ತಕ್ಷಣ ಹಣ ವರ್ಗಾವಣೆಗೊಳ್ಳುತ್ತದೆ

* ನಾನು ಹಣ ಬೇಕೆಂದು ಕೇಳಬಹುದೆ?
ಖಂಡಿತವಾಗಿ. ಈ ಭೀಮ್‌ ಆ್ಯಪ್‌ ಮೂಲಕ ಇತರ ಭೀಮ್‌ ಬಳಕೆದಾರರಿಂದ ಹಣವನ್ನು ಪಡೆಯುವುದಕ್ಕೆ ಬೇಡಿಕೆ ಮುಂದಿಡಬಹುದು. ಇದಕ್ಕಾಗಿ ನೀವು ‘ರಿಕ್ವೆಸ್ಟ್‌’ ಲಿಂಕ್‌ ಅನ್ನು ತೆರೆಯಬೇಕು ಮತ್ತು ಯುಪಿಐ ಐಡಿ ಅಥವಾ ಮೊಬೈಲ್ ನಂಬರ್‌ ಅನ್ನು ನಮೂದಿಸಬೇಕು. ನಿಮ್ಮ ಕೋರಿಕೆಯ ಕಾಲಮಿತಿಯನ್ನೂ ನೀವು ನಮೂದಿಸಬಹುದು. ಹಣ ಕಳುಹಿಸುವ ಮೊದಲು ಅಂತಹ ವ್ಯಕ್ತಿ ತನ್ನ ಪಿನ್‌ ನಂಬರ್‌ ನಮೂದಿಸಬೇಕಾಗಬಹುದು.

* ನಾನು ಹಣ ವರ್ಗಾವಣೆ ಮಾಡಬೇಕಿರುವ ವ್ಯಕ್ತಿಯ ಬಳಿ ಯುಪಿಐ ವಿಪಿಎ ಇಲ್ಲವಾದರೆ ನಾನೇನು ಮಾಡಬೇಕು?
ಹೀಗಿದ್ದಾಗ ‘ಸೆಂಡ್‌ ಮನಿ’ ಐಚ್ಛಿಕದಲ್ಲಿ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳಿಗೆ ಕ್ಲಿಕ್‌ ಮಾಡಬೇಕು. ಆಗ ‘ಅಕೌಂಟ್‌+ಐಎಫ್‌ಎಸ್‌ಸಿ’ ಎಂಬ ಐಚ್ಛಿಕ ಮೂಡುತ್ತದೆ. ಹಣ ಪಡೆಯಬೇಕಿರುವವರ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್‌ ಆಧರಿಸಿ ಹಣ  ವರ್ಗಾವಣೆ ಮಾಡಬಹುದು.

* ನಾನು ಎಷ್ಟು ಮೊತ್ತವನ್ನಾದರೂ ವರ್ಗಾಯಿಸಬಹುದೇ?
ಇಲ್ಲ. ಒಂದು ಬಾರಿ ಕಳುಹಿಸುವಾಗ ₹ 10 ಸಾವಿರದ ಮಿತಿ ಇದೆ. 24 ಗಂಟೆಯೊಳಗೆ ₹ 20 ಸಾವಿರದಷ್ಟು ದುಡ್ಡು ಕಳುಹಿಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

* ನಾನು ಬಹುಸಂಖ್ಯೆಯ ಖಾತೆಗಳನ್ನು ಸೇರ್ಪಡೆ ಮಾಡಿಕೊಳ್ಳಬಹುದೇ?
ಹೌದು ಮತ್ತು ಇಲ್ಲ. ನೀವು ಬಹು ಖಾತೆಗಳನ್ನು ಸೇರಿಸಿಕೊಳ್ಳಬಹುದು, ಆದರೆ, ಒಂದು ಬಾರಿಗೆ ಒಂದು ಖಾತೆಯನ್ನು ಮಾತ್ರ ನೀವು ಬಳಸಿಕೊಳ್ಳಬಹುದು. ಖಾತೆ ಬದಲಾಯಿಸಿದರೂ ‘ವಿಪಿಎ’ ಒಂದೇ ಆಗಿರುತ್ತದೆ.

* ಭೀಮ್‌ನಿಂದ ಇತರ ವಾಲೆಟ್‌ಗಳಿಗೆ ನಾನು ಹಣ ವರ್ಗಾಯಿಸಬಹುದೇ?
ಇಲ್ಲ,  ಆ್ಯಪ್‌ನಲ್ಲಿ ಈ ಅವಕಾಶ ಇಲ್ಲ.

* ನನ್ನ ಬಳಿ ಫೋನ್ ಇಲ್ಲ, ಕಂಪ್ಯೂಟರ್‌ ಮೂಲಕ ಈ ಆ್ಯಪ್‌ ಬಳಸಬಹುದೇ?
ಇಲ್ಲ, ಇಂಟರ್‌ನೆಟ್‌ ಸಂಪರ್ಕ ಇರುವ ಆಂಡ್ರಾಯ್ಡ್‌ ಫೋನ್‌ ಬೇಕೇ ಬೇಕು.

* ಹಣ ಪಡೆಯುವವರಿಗೂ ಮೊಬೈಲ್‌ ಬೇಕೇ ಬೇಕೇ?
ಇಲ್ಲ, ಹಣ ಪಡೆಯಲು ಮೊಬೈಲ್ ಬೇಕೆಂದೇನೂ ಇಲ್ಲ. ಹಣ ಆತನ/ ಆಕೆಯ ಖಾತೆಗೆ ನೇರವಾಗಿ ಸೇರುತ್ತದೆ. ಆದರೆ ಹಣ ಪಡೆಯುವಾತನಿಗೆ ‘ವಿಪಿಎ’ ಇರಲೇಬೇಕು. ಇಲ್ಲವಾದರೆ ಹಣ ಪಡೆಯುವವರ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಆಧಾರದಲ್ಲಿ ಹಣ ವರ್ಗಾವಣೆ ಮಾಡಬಹುದು.

* ಇತರ ಯುಪಿಐ ಆ್ಯಪ್‌ಗಳಿಗಿಂತ ಈ ಆ್ಯಪ್‌ ಹೇಗೆ ಭಿನ್ನ?
ಇದು ತುಂಬ ಸರಳವಾಗಿದೆ. ಪ್ರತಿ ಬ್ಯಾಂಕ್‌ಗೂ ವಿಪಿಎ ಭಿನ್ನವಾಗಿರುತ್ತದೆ. ಉದಾಹರಣೆಗೆ, ನಿಮಗೆ ಐಸಿಐಸಿಐನಲ್ಲಿ ಖಾತೆ ಇದೆ ಎಂದಾದರೆ ಅದರ ವಿಪಿಎ xxxx@icici ಆಗಿರುತ್ತದೆ. ಭೀಮ್‌ ಇಂತಹ ವಿಭಿನ್ನ ಐಡಿಗಳನ್ನು ನಿವಾರಿಸುತ್ತದೆ. ಎಲ್ಲ ಭೀಮ್‌ ವಿಪಿಎಗಳು xxxx@UPI ನಲ್ಲಿ ಕೊನೆಗೊಳ್ಳುತ್ತದೆ. ಹೆಚ್ಚಿನ ಬ್ಯಾಂಕ್‌ಗಳ ಯುಪಿಐ ಆ್ಯಪ್‌ಗಳಲ್ಲಿ ಕ್ಯೂಆರ್‌ ಕೋಡ್‌ ಇರುವುದಿಲ್ಲ. ಭೀಮ್‌ನಲ್ಲಿ ಈ ಐಚ್ಛಿಕತೆ ಇದೆ.

* ಪೇಟಿಯಂ, ಮೊಬಿಕ್ವಿಕ್‌ನಂತಹ ಇತರ ವಾಲೆಟ್‌ಗಳಿಗಿಂತ ಭೀಮ್‌ ಹೇಗೆ ಅನುಕೂಲಕರ?
ಇತರ ವಾಲೆಟ್‌ಗಳಲ್ಲಾದರೆ ನೀವು ಹಣವನ್ನು ವಾಲೆಟ್‌ನಲ್ಲಿ ಸಂಗ್ರಹಿಸಿ ಇಡಬೇಕು. ನಿಮ್ಮ ಹಣವನ್ನು ಮೊಬೈಲ್‌ ವಾಲೆಟ್‌ನಲ್ಲಿ ದಾಸ್ತಾನು ಇಡುವ ಮೂಲಕ ನಿಮಗೆ ಬರುವ ಬಡ್ಡಿಯನ್ನು ಕಳೆದುಕೊಳ್ಳುತ್ತೀರಿ. ‘ಭೀಮ್‌’ನಲ್ಲಿ ಹಾಗಲ್ಲ. ಹಣ ವರ್ಗಾವಣೆ ಮಾಡುವ ತನಕವೂ ನಿಮ್ಮ ಹಣ ನಿಮ್ಮ ಬ್ಯಾಂಕ್‌ ಖಾತೆಯಲ್ಲೇ ಇರುತ್ತದೆ. ಬೇರೊಬ್ಬರು ನಿಮಗೆ ಹಣ ವರ್ಗಾವಣೆ ಮಾಡಿದಾಗಲೂ ಅಷ್ಟೇ, ಹಣ ನಿಮ್ಮ ಖಾತೆಗೇ ನೇರವಾಗಿ ಬಂದುಬಿಡುತ್ತದೆ. 

***
ಏನಿದು ಕ್ಯುಆರ್‌ ಕೋಡ್‌?

ಕ್ವಿಕ್‌ ರಿಸ್ಪಾನ್ಸ್‌ ಕೋಡ್‌ (Quick Response Code– QR CODE)  ಎನ್ನುವುದು ಉತ್ಪನ್ನ ಅಥವಾ ಸೇವೆಯ ವ್ಯಾಪಾರ ಚಿಹ್ನೆಯನ್ನು ಸಾಧನದ ನೆರವಿನಿಂದ ಎರಡು ಆಯಾಮಗಳಲ್ಲಿ ಓದುವ ವಿಧಾನವಾಗಿದೆ. ಇದು ಉತ್ಪನ್ನ ಮತ್ತು ಸೇವೆಯ ಎಲ್ಲ ಬಗೆಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಮೊಬೈಲ್‌ನಲ್ಲಿರುವ ಕೋಡ್‌ ಓದುವ ಕಿರು ತಂತ್ರಾಂಶದಿಂದ (ಸ್ಕ್ಯಾನರ್‌ ಆ್ಯಪ್‌ ) ಈ  ಕೋಡ್‌ ಸ್ಕ್ಯಾನ್ ಮಾಡುತ್ತಿದ್ದಂತೆ ಉತ್ಪನ್ನದ ವಿವರಗಳೆಲ್ಲ ಮಾಹಿತಿ ಮತ್ತು ವಿಡಿಯೊ ರೂಪದಲ್ಲಿ ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

ಸರಕು ಮಳಿಗೆಗಳಲ್ಲಿ ಬಿಲ್‌ ಮಾಡುವವರು ಬಾರ್‌ಕೋಡ್‌ ಸಾಧನದ ನೆರವಿನಿಂದ ಉತ್ಪನ್ನದ ಹೊರ ಭಾಗದ ನಿರ್ದಿಷ್ಟ ಸ್ಥಳದಲ್ಲಿ ಸ್ಕ್ಯಾನ್‌ ಮಾಡಿದಾಗ ಕಂಪ್ಯೂಟರ್‌ ಪರದೆ ಮೇಲೆ ಉತ್ಪನ್ನದ ಬೆಲೆ ಮೂಡುತ್ತದೆ. ಅದೇ ರೀತಿ ಮೊಬೈಲ್‌ನಲ್ಲಿರುವ ಸ್ಕ್ಯಾನರ್‌ ಆ್ಯಪ್‌ ಮೂಲಕ ವರ್ತಕರ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಅವರ ಬ್ಯಾಂಕ್‌ ವಿಳಾಸ ನಮೂದಾಗಿ ಅದಕ್ಕೆ ಸುಲಭವಾಗಿ ಹಣ ವರ್ಗಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT