ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಂದೇಕೆ ಪವಾಡ ನಿರೀಕ್ಷೆ?

Last Updated 10 ಜನವರಿ 2017, 20:15 IST
ಅಕ್ಷರ ಗಾತ್ರ

ದೊಂಬಿ, ಗಲಾಟೆ, ಅಪಘಾತ, ಸಾಮೂಹಿಕ ಹಿಂಸಾಚಾರದಂತಹ ಅತಿ ಸೂಕ್ಷ್ಮ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವಾಗ ರೋಗಿಯ ಕಡೆಯವರ ಕೋಪಕ್ಕೆ ಸುಲಭವಾಗಿ ತುತ್ತಾಗುವವರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ.  ತುರ್ತು ಚಿಕಿತ್ಸಾ ವಿಭಾಗ ಹಾಗೂ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಇಂತಹ  ಹಲ್ಲೆಗಳ ಪ್ರಮಾಣ ಹೆಚ್ಚು.

ಹೀಗಾಗಿ ಇಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ತಮ್ಮ ಜೀವ ಪಣಕ್ಕಿಟ್ಟುಕೊಂಡೇ ಇನ್ನೊಂದು ಜೀವವನ್ನು ಉಳಿಸುವ ಸವಾಲಿನ ಕರ್ತವ್ಯ ನಿರ್ವಹಿಸುವಂತಹ ಪರಿಸ್ಥಿತಿ ಭಾರತದಲ್ಲಿದೆ. ಪ್ರತಿ ನಾಲ್ವರ ಪೈಕಿ ಮೂವರು ವೈದ್ಯರು ಇಂತಹ ಒಂದಿಲ್ಲೊಂದು ದೈಹಿಕ ಹಿಂಸೆಗೆ ಗುರಿಯಾಗಿರುವುದನ್ನು ಭಾರತೀಯ ವೈದ್ಯಕೀಯ ಸಂಘ ಗುರುತಿಸಿದೆ.

ಕಳೆದ ವರ್ಷದ ಅಕ್ಟೋಬರ್ 16ರಂದು ಪೊಲೀಸನೊಬ್ಬ ಆಸ್ಪತ್ರೆಯೊಂದಕ್ಕೆ ತಾನು ಕರೆತಂದ ರೋಗಿಯನ್ನು ಸರಿಯಾಗಿ ಉಪಚರಿಸಲಿಲ್ಲವೆಂಬ ಕಾರಣವೊಡ್ಡಿ, ಮೂಳೆ ತಜ್ಞರನ್ನು ಮನಬಂದಂತೆ ಥಳಿಸಿದ್ದ.

ಸೆಪ್ಟೆಂಬರ್ 25ರಂದು ಮತ್ತೊಂದು ಆಸ್ಪತ್ರೆಯಲ್ಲಿ ಮೂರು ವರ್ಷದ ಮಗುವೊಂದು ಡೆಂಗಿ ಜ್ವರದಿಂದ ಸಾವಿಗೀಡಾದಾಗ ಅದನ್ನು ಉಪಚರಿಸಿದ ವೈದ್ಯರ ಮೇಲೆ ತೀವ್ರ ಹಲ್ಲೆ ನಡೆಯಿತು.

ಮತ್ತೊಂದು ಆಸ್ಪತ್ರೆಯಲ್ಲಿ, ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದ 75 ವರ್ಷ ವಯಸ್ಸಿನ ಮಹಿಳೆಯ ಸಾವಿಗೆ ವೈದ್ಯರೊಬ್ಬರನ್ನು ಕಾರಣ ಮಾಡಿ, ಅವರ ಮೂಗಿನ ಮೂಳೆ ಮುರಿಯುವಂತೆ ಹಲ್ಲೆ ಮಾಡಿ ಆಸ್ಪತ್ರೆಯನ್ನು ಪುಡಿಗಟ್ಟಿಸಲಾಗಿತ್ತು. ತಕ್ಷಣ ಇದೇ ಆಸ್ಪತ್ರೆಯ ಐಸಿಯುನಲ್ಲಿ ಈ ವೈದ್ಯರಿಗೆ ಚಿಕಿತ್ಸೆ ನೀಡಿ ಉಪಚರಿಸಲಾಯಿತು.

ಈ ಮೂರೂ ಘಟನೆಗಳು ನಡೆದದ್ದು ಮುಂಬೈನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ. ಇಲ್ಲಿಯ ಬಹುಪಾಲು ರೋಗಿಗಳು ಸಮಾಜದ ಮೇಲ್ಪದರಕ್ಕೆ ಸೇರಿದವರು. ರೋಗಪತ್ತೆ ಮತ್ತು ಚಿಕಿತ್ಸೆ, ಅದರ ಅಡ್ಡ ಪರಿಣಾಮಗಳ ಬಗ್ಗೆ ಸ್ಪಷ್ಟ ಅರಿವಿದ್ದವರು, ವೈದ್ಯಕೀಯ ಮಿತಿ ಮತ್ತು ಸಾಧ್ಯತೆಗಳ ಬಗೆಗೆ ಅಲ್ಪಸ್ವಲ್ಪವಾದರೂ ಜ್ಞಾನ ಉಳ್ಳವರು. ಒಂದು ವೇಳೆ ರೋಗಿ ಸಾವಿಗೀಡಾದರೂ ಅದರಲ್ಲಿ ವೈದ್ಯರ ಪಾತ್ರದ ಮಿತಿಯನ್ನು ಬಲ್ಲವರು. ಇದನ್ನು ಮೀರಿ ವೈದ್ಯರ ಮೇಲೆ ಕೈ ಮಾಡಿದರೆ ಆಗುವ ಕಾನೂನು ಪರಿಣಾಮಗಳನ್ನು  ಬಲ್ಲವರು.

ಇದು ಶಹರದ ಕತೆಯಾದರೆ, ಬಡ ಭಾರತದ ಹಳ್ಳಿಗಳ ಕಥೆಯೇ ಬೇರೆ. ಇಲ್ಲಿ  ಆರೋಗ್ಯದ ತುರ್ತು ಪರಿಸ್ಥಿತಿಗಳಲ್ಲಿ ಉಪಚರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿರುವುದಿಲ್ಲ. ಅಂಥವರು ಅವಲಂಬಿಸಬೇಕಾಗಿರುವುದು  ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳನ್ನು. ಇಲ್ಲಿ ಮತ್ತದೇ ರೋಗಿಗಳು ಮತ್ತು ವೈದ್ಯರ ಅನುಪಾತದ ಪ್ರಶ್ನೆ ಉದ್ಭವಿಸುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಿದ್ದರೂ ಅಲ್ಲಿನ ಖರ್ಚನ್ನು ಭರಿಸುವ ಶಕ್ತಿ ಅವರಿಗೆ ಇರುವುದಿಲ್ಲ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸರದಿ ಸರಿಯುವುದಿಲ್ಲ. ಮೇಲಿನ ಘಟನೆಗಳು ಬೇರೆ ಬೇರೆ ಕಾರಣಗಳಿಂದ ಮಾಧ್ಯಮದ ಗಮನಕ್ಕೆ ಬಂದಂತಹವು. ಇನ್ನು ದಿನನಿತ್ಯ ಎಷ್ಟೋ ಪ್ರಕರಣಗಳು ಬೆಳಕಿಗೇ ಬರುವುದಿಲ್ಲ. ವ್ಯಂಗ್ಯವೆಂದರೆ, ಮೇಲಿನ ಮೂರೂ ಆಸ್ಪತ್ರೆಗಳಲ್ಲಿ ವೈದ್ಯರ ಕಾವಲಿಗಾಗಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.

ಕಳೆದ ವರ್ಷ ಧಾರವಾಡದ ಶಾಸಕರೊಬ್ಬರು ಹುಬ್ಬಳ್ಳಿಯ ‘ಕಿಮ್ಸ್‌’ನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಈಗ ಉತ್ತರ ಕನ್ನಡದ ಬೆಂಕಿಯ ಚೆಂಡಿನಂತಹ ಸಂಸದರೊಬ್ಬರು ಇದೇ ಸಾಲಿಗೆ ಸೇರ್ಪಡೆಯಾಗಿ ತಮ್ಮ ಕ್ಷೇತ್ರದ ಸರ್ಕಾರಿ ವೈದ್ಯಕೀಯ ಸೌಲಭ್ಯದ ಕೊರತೆಯನ್ನು ಈ ಮೂಲಕ ಸಾಬೀತುಪಡಿಸುವಲ್ಲಿ ಸಫಲರಾಗಿದ್ದಾರೆ. ಮತ್ತು ಅವರು ಹೇಳಿ ಕೇಳಿ ಸಂಸದರು. ಸರ್ಕಾರಿ ಆಸ್ಪತ್ರೆಗೆ ತಮ್ಮವರನ್ನು ಕರೆದುಕೊಂಡು ಹೋಗಲಾದೀತೆ? ಸರ್ಕಾರದ ಆಸ್ಪತ್ರೆಗಳೇನಿದ್ದರೂ ಜನಸಾಮಾನ್ಯರಿಗೆ.

ಗಮನಿಸಬೇಕಾದ ಅಂಶವೆಂದರೆ, ದೇಶದಲ್ಲಿ ಇಷ್ಟೆಲ್ಲ ವೈದ್ಯಕೀಯ ಪದವೀಧರರು ಪ್ರತಿವರ್ಷ ಪಾಸಾಗಿ ಬಂದರೂ ಪ್ರತಿ ಸಾವಿರ ರೋಗಿಗೆ ಒಬ್ಬ ವೈದ್ಯರು ಮಾತ್ರ ಲಭ್ಯವಿರುವ ಅನುಪಾತವಿದೆ. ಹಾಗಿದ್ದರೆ ಪದವಿ ಪಡೆದ ವೈದ್ಯರೆಲ್ಲರೂ  ಹೋಗುತ್ತಿರುವುದಾದರೂ ಎಲ್ಲಿಗೆ?

ಸಾಕಷ್ಟು ಸಂಬಳ ಸೌಲಭ್ಯಗಳನ್ನು ಸರ್ಕಾರ ಕೊಡುತ್ತಿದ್ದರೂ ಹಳ್ಳಿಗಳಿಗೆ ಹೋಗಲು ವೈದ್ಯರೇಕೆ ಮನಸ್ಸು ಮಾಡುತ್ತಿಲ್ಲ? ಒಬ್ಬ ವೈದ್ಯಕೀಯ ವಿದ್ಯಾರ್ಥಿಗೆ ಸರ್ಕಾರ ಎಷ್ಟೆಲ್ಲ ಖರ್ಚು ಮಾಡಿ ಕಲಿಸಿದರೂ ಅದೇ ವೈದ್ಯರನ್ನು ಹಳ್ಳಿಗಳ ಸೇವೆಗೆ ಅಣಿ ಮಾಡಲು ಕಾನೂನು ಮಾಡುವಂತಹ ಅನಿವಾರ್ಯ ಯಾಕೆ ಸೃಷ್ಟಿಯಾಯಿತು? ದಂಡ ಕಟ್ಟಿ ಕೆಲವು ವೈದ್ಯರು ಹಳ್ಳಿಗಳ ಸೇವೆಯಿಂದ ತಪ್ಪಿಸಿಕೊಂಡಂತಹ ದಯನೀಯ ಸ್ಥಿತಿ ನಿರ್ಮಾಣ ಮಾಡುವಲ್ಲಿ ವ್ಯವಸ್ಥೆಯ ಹೊಣೆ ಎಷ್ಟು ಎಂಬಂಥ ಪ್ರಶ್ನೆಗಳು ಇಲ್ಲಿ ಪ್ರಸ್ತುತವಾಗುತ್ತವೆ.

ಒಂದು ಕಾಲವಿತ್ತು. ವೈದ್ಯರನ್ನು ಸ್ವತಃ ನಾರಾಯಣನಿಗೆ ಹೋಲಿಸಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಂಡೇನೆಂಬ ಅವಿವೇಕತನವೂ ಇಲ್ಲಿದೆ. ಅದಕ್ಕೆ ಸರಿಯಾಗಿ ಆಸ್ಪತ್ರೆಗಳ ಕಾರ್ಪೊರೇಟೀಕರಣ ಕೂಡ ಸಾಥ್‌ ನೀಡಿದೆ. ದುಡ್ಡು ಕೊಟ್ಟು ಹೆಚ್ಚಿನ ಆರೋಗ್ಯ ನಿರೀಕ್ಷಿಸುವುದು ತಪ್ಪೇನೂ ಆಗಲಾರದು. ಆದರೆ ಹೋಗುತ್ತಿರುವ ಜೀವ ಉಳಿಸಲು ವೈದ್ಯರು ದೇವರಲ್ಲವಲ್ಲ! ಪವಾಡಗಳನ್ನು ಹುಲುಮಾನವರಾದ ವೈದ್ಯರಿಂದ ನಿರೀಕ್ಷಿಸಲಾದೀತೇ?

ವೈದ್ಯರ ಮೇಲಿನ ಹಲ್ಲೆಗಳು ಭಾರತದಲ್ಲಿ ಅಷ್ಟೇ ಅಲ್ಲ, ಮುಂದುವರಿದ ರಾಷ್ಟಗಳಲ್ಲೂ ಇವೆ. ಆದರೆ ಪ್ರಶ್ನೆ ಇರುವುದು, ಭಾರತದಲ್ಲಿ ಸಾವಿರಕ್ಕೊಬ್ಬ ವೈದ್ಯರ ಮೇಲಿರುವ ಕೆಲಸದ ಒತ್ತಡದ ಬಗ್ಗೆ. ಹಲ್ಲೆಗೆ ಜಾಮೀನುರಹಿತ ಬಂಧನದಂತಹ ಕಠಿಣ ಕಾನೂನುಗಳು ಕಾಗದದ ಮೇಲಷ್ಟೆ ಇವೆ. ಆದರೆ ಕಾನೂನನ್ನು ಮೀರಿದ ಈ ರೋಗಿ– ವೈದ್ಯರ ಸಂಬಂಧ ಬಹು ವಿಶ್ವಾಸಾರ್ಹ ಅಂತಃಕರಣದ ಮಾನವ ಸಹಜ ಸಂಬಂಧವನ್ನು ಅಪೇಕ್ಷಿಸುತ್ತದೆ.

ಅಷ್ಟಕ್ಕೂ ವೈದ್ಯರು ಕೂಡ ಮನುಷ್ಯರೇ ಅಲ್ಲವೇ? ಇದನ್ನೆಲ್ಲ ಮೀರಿಯೂ ಅವರಿಗೆ ಅವರದೇ ಆದ ಆರೋಗ್ಯ ಸಮಸ್ಯೆಗಳಿವೆ, ಕುಟುಂಬವಿದೆ, ತಮ್ಮದೇ ಆದ ವೈಯಕ್ತಿಕ ಬದುಕನ್ನು ಬದುಕುವ ಹಕ್ಕಿದೆ.

ಈ ಘಟನೆಯೊಂದು ತಮ್ಮ ಆತ್ಮವಿಮರ್ಶೆಗೆ ಈ ಸಂಸದರಿಗೆ ಪ್ರೇರಣೆಯಾಗಿ, ಈ ಮೂಲಕ ಆರೋಗ್ಯ ಸೇವೆಯು ಉತ್ತಮಗೊಂಡರೆ, ಯಾವ ತಾಯಿಯೂ ಆಸ್ಪತ್ರೆಯ ಕಾರಿಡಾರಿನಲ್ಲಿ ನರಳಲಾರಳು. ಇಲ್ಲವಾದಲ್ಲಿ, ಭಾರತದಲ್ಲಿ ಇಂತಹ ಘಟನೆ ಮೊದಲನೆಯದೂ ಅಲ್ಲ ಕೊನೆಯದೂ ಆಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT