ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀಟ್’ ಗೊಂದಲವೆಂಬ ಸ್ವಯಂ ಸೃಷ್ಟಿ

ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗದೇ ಇರುವುದಕ್ಕೆ ರಾಜ್ಯ ಸರ್ಕಾರ ಕಾರಣವೇ ಹೊರತು ಕೇಂದ್ರವಲ್ಲ
Last Updated 10 ಜನವರಿ 2017, 20:14 IST
ಅಕ್ಷರ ಗಾತ್ರ

ಬರುವ ಮೇ ತಿಂಗಳಿನಲ್ಲಿ ನಡೆಯಲಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ– ‘ನೀಟ್‌’) ಇಂಗ್ಲಿಷ್‌,  ಹಿಂದಿ, ಅಸ್ಸಾಮಿ, ಬಂಗಾಳಿ, ಮರಾಠಿ, ಗುಜರಾತಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ ಡಿಸೆಂಬರ್ 19ರಂದು ಪ್ರಕಟಿಸಿದಾಗ ಕನ್ನಡಿಗರಿಗೆ ತೀವ್ರ ಆಘಾತವಾಯಿತು.

ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ದೊರೆಯುತ್ತದೆ ಎಂದು ನಂಬಿದ್ದ ಕರ್ನಾಟಕದ ಜನರಿಗೆ ಈ  ಪ್ರಕಟಣೆ ತುಂಬಾ ನಿರಾಸೆಯನ್ನು ಉಂಟು ಮಾಡಿತು. ‘ನೀಟ್’ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕೈಬಿಟ್ಟಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರಕ್ಕೆ ಪ್ರತಿಭಟನಾ ಪತ್ರವನ್ನು ಬರೆದು ಬಿಸಿ ಮುಟ್ಟಿಸುವುದಾಗಿ ಘೋಷಿಸಿದರು.

ಮುಖ್ಯಮಂತ್ರಿ ಜೊತೆಯಲ್ಲಿ ಅನೇಕ ಧುರೀಣರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕೇಂದ್ರ ಸರ್ಕಾರದ್ದೇ ತಪ್ಪೆಂದು ಟೀಕಿಸಿದರು. ಆದರೆ ವಿವಾದ ಬಿಚ್ಚಿಕೊಳ್ಳುತ್ತಿದ್ದಂತೆ ಸತ್ಯ ಹೊರಬಂದು ನಿಜಾಂಶದ ಅರಿವಾದಾಗ, ತಪ್ಪು ಮಾಡಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ ಎಂಬುದು ಸ್ಪಷ್ಟವಾಗುತ್ತದೆ.

‘ನೀಟ್’ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವುದರ ಕುರಿತು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಗಮನಿಸಿದರೆ ಗಾಬರಿಯಾಗುತ್ತದೆ. 2013ರಲ್ಲಿ ‘ನೀಟ್’ ಪರೀಕ್ಷೆ ಸಂವಿಧಾನಬಾಹಿರ ಎಂದು ತಾನು ನೀಡಿದ್ದ ತೀರ್ಪನ್ನು 2016ರಲ್ಲಿ ಮರು ಪರಿಶೀಲಿಸಿ, ಹಿಂದಿನ ತೀರ್ಪನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ‘ನೀಟ್‌’ಗೆ ಅನುಮತಿ ನೀಡಿದ ಬಳಿಕ 2016ರಲ್ಲಿ ಈ ಪರೀಕ್ಷೆಯನ್ನು ದೇಶದಾದ್ಯಂತ ನಡೆಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ‘ನೀಟ್’ ಪರೀಕ್ಷೆ ಇಂಗ್ಲಿಷ್‌ನಲ್ಲಿ ನಡೆಯಿತು. ತದನಂತರ ಕೇಂದ್ರ ಸರ್ಕಾರ, ಮುಂದಿನ ವರ್ಷಗಳ ಪರೀಕ್ಷೆ ಕುರಿತು ಸಮಾಲೋಚಿಸಿದಾಗಲೂ ರಾಜ್ಯ ಸರ್ಕಾರ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಬೇಕೆಂದು ಸೂಚಿಸಲಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಅಭಿಪ್ರಾಯ ಪಡೆದು ಒಂದು ನೀತಿಯನ್ನು ರೂಪಿಸುವುದು ಸ್ವಾಭಾವಿಕ.

ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ (ಶಿಕ್ಷಣ– ರಾಜ್ಯಗಳ ಪಟ್ಟಿಯಲ್ಲಿದೆ)  ಕೇಂದ್ರ ತನ್ನಷ್ಟಕ್ಕೆ ತಾನೇ ನಿರ್ಣಯ ತೆಗೆದುಕೊಳ್ಳಲು ಸಂವಿಧಾನದಲ್ಲಿ ಅವಕಾಶ ನೀಡಿಲ್ಲ. ಹೀಗಾಗಿ ಕನ್ನಡದಲ್ಲಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರದಿಂದ ಪ್ರಸ್ತಾವ ಸಲ್ಲಿಕೆ ಆಗದೇ ಇರುವುದು ಹಾಗೂ ಇಂಗ್ಲಿಷ್‌ನಲ್ಲಿ ನಡೆಸಲಾಗುವುದು ಎಂದು ರಾಜ್ಯ ಸರ್ಕಾರವೇ ತಿಳಿಸಿದ್ದರಿಂದ 2017ರ ಪರೀಕ್ಷಾ ಪ್ರಕಟಣೆಯನ್ನು ಕೇಂದ್ರ ಈಗಾಗಲೇ ಮಾಡಿದೆ.

ಈ ಪ್ರಕಟಣೆ ಹೊರಬಿದ್ದ ಮೇಲೆ ನಮ್ಮ ಸರ್ಕಾರಕ್ಕೆ, ಅಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗೆ ಜ್ಞಾನೋದಯವಾಯಿತು! ಕನ್ನಡ ಜನರ ಕೆಂಗಣ್ಣಿಗೆ ಗುರಿಯಾಗಲು ಅಂಜಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ, ಟೀಕಿಸಿ, ಪತ್ರ ಬರೆಯುವುದಾಗಿ ಹೇಳಿ ಕೈ ತೊಳೆದುಕೊಂಡರು.

ಡಿಸೆಂಬರ್ 14ರಂದೇ ಸಿದ್ಧವಾಗಿದ್ದ ಈ ಪತ್ರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಹಿ ಹಾಕಿದ್ದು ಡಿಸೆಂಬರ್‌ 20ರಂದು. ಅಂದರೆ ಕೇಂದ್ರದ ಆದೇಶ ಹೊರಬಿದ್ದ ಒಂದು ದಿನದ ನಂತರ. ಎರಡು ದಿನ ಬಿಟ್ಟು, ಅಂದರೆ ಡಿಸೆಂಬರ್ 22ಕ್ಕೆ ಈ ಪತ್ರವನ್ನು ಕೇಂದ್ರಕ್ಕೆ ರವಾನಿಸಲಾಗುತ್ತದೆ! ಅದಕ್ಷತೆ, ಅಶ್ರದ್ಧೆ ಮತ್ತು ಅನಾಸಕ್ತಿಯ ಆಡಳಿತಕ್ಕೆ ಇದಕ್ಕಿಂತಲೂ ಕೆಟ್ಟ ಉದಾಹರಣೆ ಸಿಗುವುದಿಲ್ಲ.

ಈಗ ಕನ್ನಡದ ಜನ ಪ್ರಶ್ನಿಸಬೇಕಾಗಿರುವುದು ಕೇಂದ್ರ ಸರ್ಕಾರವನ್ನಲ್ಲ, ರಾಜ್ಯ ಸರ್ಕಾರವನ್ನು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ, ಸ್ಥಾನಮಾನದ ಕುರಿತು ಮುಖ್ಯಮಂತ್ರಿಗೆ ಬದ್ಧತೆ ಇದೆಯೇ? ಇದ್ದಿದ್ದರೆ ಹೀಗಾಗಲು ಸಾಧ್ಯವೇ ಎಂದು ಜನ ಕೇಳುವ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರ ಏನು?
ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ನಡೆದ ಪ್ರಕರಣವೊಂದು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಶ್ರದ್ಧೆ ಮತ್ತು ಬದ್ಧತೆಗಳಿಂದ ತೊಡಗಿಸಿಕೊಂಡು ಕೆಲಸ ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಪ್ರಕರಣ ಉತ್ತಮ ನಿದರ್ಶನವಾಗಿದೆ:

1987- 88ರ ಅವಧಿಯಲ್ಲಿ ನಾನು ಹೆಗಡೆ ನೇತೃತ್ವದ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿದ್ದೆ. ಕಾರ್ಯನಿಮಿತ್ತ ದೆಹಲಿಗೆ ತೆರಳಿದ್ದ ನನಗೆ, ಕೇಂದ್ರ ಸರ್ಕಾರದ ಶಿಕ್ಷಣ ಯೋಜನೆಯ ಅನ್ವಯ ಕರ್ನಾಟಕ ಸಲ್ಲಿಸಬೇಕಾಗಿದ್ದ ಪ್ರಸ್ತಾವವನ್ನು ಸಲ್ಲಿಸಿರಲಿಲ್ಲ ಎಂಬುದು ತಿಳಿದು ಬಂದಿತು. ಪ್ರಸ್ತಾವ ಸಲ್ಲಿಸಲು 3-4 ದಿನಗಳು ಮಾತ್ರ ಬಾಕಿ ಉಳಿದಿದ್ದವು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಘೋಷಿಸಿದ್ದ ಹೊಸ ಶಿಕ್ಷಣ ನೀತಿ- 1986: ಕಪ್ಪು ಹಲಗೆ ಕಾರ್ಯಾಚರಣೆ (Operation Black Board Scheme) ಯೋಜನೆಯಲ್ಲಿ ರಾಜ್ಯಗಳಿಗೆ ಕೇಂದ್ರ ಉದಾರವಾಗಿ ಅನುದಾನ ನೀಡುತ್ತಿತ್ತು.

ಈ ಯೋಜನೆಯಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಮತ್ತು ಹೊಸದಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲು ನೆರವು ದೊರೆಯುತ್ತಿತ್ತು. ವೃತ್ತಿಪರ ಶಿಕ್ಷಣವನ್ನು (Vocational education) ಪಿ.ಯು.ಸಿಯ  ಸಮಾನ ದರ್ಜೆಗೆ ಏರಿಸಲು ಮತ್ತು ಡಯಟ್ (DIET) ಅಂದರೆ ಜಿಲ್ಲೆಗಳ ಮಟ್ಟದಲ್ಲಿ ಶಿಕ್ಷಕರ ತರಬೇತಿ ಕೇಂದ್ರಗಳನ್ನು ತೆರೆದು ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆಗೆ ಕೇಂದ್ರದಿಂದ ನೆರವು ಪಡೆದುಕೊಳ್ಳಬಹುದಿತ್ತು.

ಒಟ್ಟಾರೆ ಮೂರು ಯೋಜನೆಗಳಲ್ಲಿ ರಾಜ್ಯವು ಕೇಂದ್ರದಿಂದ ನೆರವು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುವ  ಅವಕಾಶ ಸಿದ್ಧವಾಗಿ ನನ್ನನ್ನು ಎದುರು ನೋಡುತ್ತಿತ್ತು. ಆದರೆ ಪ್ರಸ್ತಾವ ಸಲ್ಲಿಸಲು ಉಳಿದಿದ್ದು ಮೂರು–ನಾಲ್ಕು ದಿನಗಳು ಮಾತ್ರ. ನಾನು ಈ ತುರ್ತನ್ನು ಮನಗಂಡು ದೆಹಲಿಯಲ್ಲೇ ಬಿಡಾರ ಹೂಡಿ, ಬೆಂಗಳೂರಿನಲ್ಲಿದ್ದ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯನ್ನು ಸಂಪರ್ಕಿಸಿದೆ. ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ಸರ್ಕಾರದ ಸೀಲುಗಳೊಡನೆ ತುರ್ತಾಗಿ ದೆಹಲಿಗೆ ಅಧೀನ ಕಾರ್ಯದರ್ಶಿ ಜೊತೆಯಲ್ಲಿ ಕಳುಹಿಸಿಕೊಡುವಂತೆ ಸೂಚಿಸಿದೆ.

ನಂತರ ಹೆಗಡೆಯವರನ್ನು ಸಂಪರ್ಕಿಸಿ ಎಲ್ಲಾ ವಿಷಯಗಳನ್ನು ವಿವರಿಸಿದೆ. ಪ್ರಸ್ತಾವಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಲು ಸಮಯ ಇಲ್ಲದಿದ್ದರಿಂದ ಈಗ ಅವನ್ನು ಕೇಂದ್ರಕ್ಕೆ ಸಲ್ಲಿಸಿ ನಂತರ ಸಚಿವ ಸಂಪುಟದ ಮುಂದೆ ಒಪ್ಪಿಗೆ ಪಡೆದುಕೊಳ್ಳಬಹುದು (Ratification), ಇಲ್ಲದಿದ್ದರೆ ಯೋಜನೆ ಕರ್ನಾಟಕಕ್ಕೆ ಲಭ್ಯವಾಗುವುದಿಲ್ಲ ಎಂದು ಹೇಳಿದೆ. ತಕ್ಷಣ ನನ್ನ ಸಲಹೆಗೆ ಸಮ್ಮತಿಸಿದ ಹೆಗಡೆಯವರು ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು.

ಅದರಂತೆ ‘ಕರ್ನಾಟಕ ಭವನ’ವನ್ನೇ ಶಿಕ್ಷಣ ಮಂತ್ರಿಗಳ ಕಾರ್ಯಾಲಯವನ್ನಾಗಿ ಪರಿವರ್ತಿಸಿ, ಎಲ್ಲಾ ಪ್ರಸ್ತಾವಗಳಿಗೂ ಸೂಕ್ತ ಟಿಪ್ಪಣಿ ಬರೆದು, ಕೈಯಾರೆ ಸೀಲು ಹಾಕಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. ಇದರ ಎಲ್ಲಾ ಮಾಹಿತಿಯನ್ನು ಕೇಂದ್ರದ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ವಿವರಿಸಿದ್ದೂ ಆಯಿತು.
ನಮ್ಮ ಪ್ರಸ್ತಾವಗಳನ್ನು ಮೆಚ್ಚಿಕೊಂಡು ಸ್ಪಂದಿಸಿದ ಕೇಂದ್ರ ಸರ್ಕಾರ ‘ಕಪ್ಪು ಹಲಗೆ’ ಯೋಜನೆಯನ್ನು ಮಂಜೂರು ಮಾಡಿಕೊಟ್ಟಿತು. ಇದರಿಂದ ಮೊದಲ ವರ್ಷ 1,500 ಕೊಠಡಿಗಳ ನಿರ್ಮಾಣ, 3 ಸಾವಿರ ಶಿಕ್ಷಕರ ನೇಮಕಾತಿಗೆ ನೆರವು ದೊರೆಯಿತು.

ವೃತ್ತಿಪರ ಶಿಕ್ಷಣ ಯೋಜನೆಯ ಅಡಿಯಲ್ಲಿ 300 ಕಾಲೇಜುಗಳಲ್ಲಿ +2 ಕೋರ್ಸ್, 5 ಸಾವಿರ ಶಿಕ್ಷಕರ ನೇಮಕಾತಿ ಮತ್ತು ಷೆಡ್‌ಗಳ ನಿರ್ಮಾಣಕ್ಕೆ ಪ್ರತಿ ಕೊಠಡಿಗೆ ₹ 50 ಸಾವಿರದಂತೆ ಅನುದಾನ ಪ್ರಾಪ್ತಿಯಾಯಿತು. ಜಿಲ್ಲೆಗಳಲ್ಲಿ ಡಯಟ್‌ಗಳ ಸ್ಥಾಪನೆಗೆ ನೆರವು ದೊರೆತು 248 ತರಬೇತಿ ಶಿಕ್ಷಕರ ನೇಮಕಾತಿಗೆ ನಾಂದಿಯಾಯಿತು. ಒಟ್ಟಾರೆಯಾಗಿ ವರ್ಷಕ್ಕೆ ₹ 258 ಕೋಟಿಯಂತೆ 5 ವರ್ಷಗಳಿಗೆ ₹ 1,285 ಕೋಟಿ ಕೇಂದ್ರದ ಅನುದಾನದಿಂದಾಗಿ, ಡಯಟ್ ಯೋಜನೆಯನ್ನು ಪ್ರಥಮವಾಗಿ ಭಾರತದಲ್ಲಿ ಜಾರಿಗೆ ತಂದ ರಾಜ್ಯ ಎಂದು ಕರ್ನಾಟಕ ಹೆಸರು ಮಾಡಿತು.

ಇದೇ ಸಂದರ್ಭದಲ್ಲಿ ನಮ್ಮ ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಕರ ತರಬೇತಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆಯನ್ನು ಅವರ ಗುಣಮಟ್ಟ ಹೆಚ್ಚಿಸಲಿಕ್ಕೋಸ್ಕರ ಎಸ್ಸೆಸ್ಸೆಲ್ಸಿಯಿಂದ ಪಿಯುಸಿಗೆ ಏರಿಸಿತು. ಈ ಕ್ರಮಗಳಿಂದ ಕರ್ನಾಟಕದ ಪ್ರಾಥಮಿಕ ಶಿಕ್ಷಕರ ಗುಣಮಟ್ಟ ಉತ್ತಮವಾಗಿ ಇಂದಿಗೂ ರಾಷ್ಟ್ರದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಪ್ರಾಮಾಣಿಕ ಪರಿಶ್ರಮಕ್ಕೆ ಫಲ ದೊರೆಯುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ಕೇಂದ್ರದಲ್ಲಿ ಒಂದು ಪಕ್ಷ, ರಾಜ್ಯಗಳಲ್ಲಿ ಮತ್ತೊಂದು ಪಕ್ಷ ಆಡಳಿತವಿದ್ದ ಮಾತ್ರಕ್ಕೆ ‘ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತದೆ, ನಿರ್ಲಕ್ಷಿಸುತ್ತದೆ ಅಥವಾ ನಿರಾಕರಿಸುತ್ತದೆ’ ಎಂದು ಹೇಳುವುದು ತಪ್ಪಾಗುತ್ತದೆ. ಪಕ್ಷ ಯಾವುದೇ ಆಗಿರಲಿ ಕೇಂದ್ರ ಸರ್ಕಾರಕ್ಕೆ ಒಕ್ಕೂಟ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿ ಇರುತ್ತದೆ. ಇದರಿಂದ ನುಣುಚಿಕೊಳ್ಳಲು ಸುಲಭವಾಗಿ ಸಾಧ್ಯವಾಗುವುದಿಲ್ಲ. ನಾನು ಇದುವರೆಗೆ ವಿವರಿಸಿದ ಪ್ರಕರಣದಲ್ಲಿ ನಮ್ಮದು ಜನತಾ ಪಕ್ಷದ ಸರ್ಕಾರವಾದರೆ, ಕೇಂದ್ರದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿತ್ತು. ಆದರೆ ಉತ್ತಮವಾಗಿ ಸ್ಪಂದಿಸಿ ಸಹಕರಿಸಲಿಲ್ಲವೇ?

ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸವನ್ನು ಸಕಾಲದಲ್ಲಿ ನಿಯಮಬದ್ಧವಾಗಿ ಮಾಡದೆ  ಕೇಂದ್ರವನ್ನು ದೂರುವುದರಲ್ಲಿ ಅರ್ಥವಿಲ್ಲ. ಜಗತ್ತು ಒಪ್ಪಿಕೊಳ್ಳುವುದೂ ಇಲ್ಲ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರು, ಕರ್ನಾಟಕ ಸೂಕ್ತ ಪ್ರಸ್ತಾವ ಸಲ್ಲಿಸಿದರೆ ಪುನರ್ ಪರಿಶೀಲಿಸುವುದಾಗಿ ಭರವಸೆ ನೀಡಲಿಲ್ಲವೇ? ಕೇಂದ್ರ ಸರ್ಕಾರ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ?

ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ (ಇಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲ) ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಇವರು ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಸಮೀಪಿಸುತ್ತಿದ್ದರೂ ಕನ್ನಡದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುತ್ತಿಲ್ಲ ಏಕೆ?

ಎಲ್ಲಾ ರಾಜ್ಯಗಳು ಒಪ್ಪಿಕೊಂಡು ರಚನೆಯಾಗಿರುವ ‘ನೀಟ್’  ನಿಯಮಾವಳಿ ಪ್ರಕಾರ, ಕರ್ನಾಟಕ ಮೂರು ವರ್ಷ ಕನ್ನಡದಲ್ಲಿ ಸಿಇಟಿ  ನಡೆಸಿದ್ದರೆ ಮಾತ್ರ  ‘ನೀಟ್’ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಅವಕಾಶ ದೊರೆಯುತ್ತದೆ ಎಂಬ ಅಂಶ ಮುಖ್ಯಮಂತ್ರಿಯ ಗಮನಕ್ಕೆ ಬಂದಿಲ್ಲವೇ?

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ (1983) ಕನ್ನಡದ ಸೇವೆ ಮಾಡಲು, ಹಿರಿಮೆ ಸ್ಥಾಪಿಸಲು ದೀಕ್ಷಾಬದ್ಧರಾದ ಸಿದ್ದರಾಮಯ್ಯನವರಿಗೆ ಕನ್ನಡದ ಬಗ್ಗೆ ಇರುವ ಶ್ರದ್ಧೆ ಹಾಗೂ ಬದ್ಧತೆಗಳನ್ನು ವಿಷಾದದಿಂದ ಪ್ರಶ್ನಿಸಬೇಕಾಗಿದೆ.

ಏಕೆಂದರೆ ಕನ್ನಡದ ರಕ್ಷಣೆಯಾಗುವುದು, ಹಿರಿಮೆ ಹೆಚ್ಚುವುದು ಮಾತುಗಳಿಂದಲ್ಲ, ಆರೋಪಗಳಿಂದಲ್ಲ. ಸದ್ದು-ಸಡಗರವಿಲ್ಲದೆ ಮಾಡುವ ಕೆಲಸಗಳಿಂದ, ನಿದ್ದೆ ಮಾಡದೆ ಎಚ್ಚರದಿಂದ ಆಡಳಿತ ನಡೆಸುವುದರಿಂದ.
-ಲೇಖಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT