ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಾಗಿ ಬ್ರಿಗೇಡ್‌ ಸಿಮೀತವಿಲ್ಲ

Last Updated 11 ಜನವರಿ 2017, 5:52 IST
ಅಕ್ಷರ ಗಾತ್ರ

ಕಲಬುರ್ಗಿ: ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಿಮೀತವಾಗಿಲ್ಲ. ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಸಮಾಜದ ಎಲ್ಲ ಬಡವರಿಗೆ ನ್ಯಾಯ ಸಿಗಬೇಕೆನ್ನುವುದು ಬ್ರಿಗೇಡ್‌ ಉದ್ದೇಶ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಜಿಲ್ಲಾಮಟ್ಟದ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದರು.

‘ಒಬ್ಬ ವ್ಯಕ್ತಿಯನ್ನು ನಂಬಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆವು. ಆದರೆ ಅವರು ಮೋಸ ಮಾಡಿದರು. ಶಕ್ತಿ ಕೊಟ್ಟವರನ್ನೇ  ಮರೆತರು ಎಂದು ಮುಕುಡಪ್ಪ, ವಿರೂಪಾಕ್ಷಪ್ಪ ಅವರಂಥ ಹಿರಿಯರು ನನಗೆ ಹೇಳಿದರು. ಇದರಿಂದಾಗಿ ರಾಯಣ್ಣ ಬ್ರಿಗೇಡ್‌ಗೆ ಬರಬೇಕಾಯಿತು. ಬ್ರಿಗೇಡ್‌ನಲ್ಲಿ ಇರಬೇಕು ಎನ್ನುವುದು ನನ್ನ ಕನಸಿನಲ್ಲೂ ಇರಲಿಲ್ಲ’ ಎಂದು ತಿಳಿಸಿದರು.

‘ರಾಯಣ್ಣ ಬ್ರಿಗೇಡ್‌ ಸೇರಿದ ಬಳಿಕ ನಾನು ಕೂಡಾ ಪರಿವರ್ತನೆಗೆ ಒಳಗಾಗಿದ್ದೇನೆ. ಬಡವರಿಗಾಗಿ ಕೆಲಸ ಮಾಡಬೇಕೆನ್ನುವ ಧ್ಯೇಯ ಗಟ್ಟಿಯಾಗಿದೆ. ಸಮಾಜದಲ್ಲಿ ಬಡವರಿಗೆ, ಹಿಂದುಳಿದವರಿಗೆ ಇಂದಿಗೂ ನ್ಯಾಯ ಸಿಗುತ್ತಿಲ್ಲ. ಮಾತೃಭೂಮಿಗಾಗಿ ಕೆಲಸ ಮಾಡಬೇಕು ಎನ್ನುವ ಆರ್‌ಎಸ್‌ಎಸ್‌ನಿಂದ ಕಲಿತ ಸಂಸ್ಕಾರವು ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ. ಯಾವುದೇ ಜಾತಿಗೆ ಸಿಮೀತವಾಗಿ ಕೆಲಸ ಮಾಡುವುದು ನನಗೆ ರೂಢಿಯಿಲ್ಲ’ ಎಂದರು.

ಎಲ್ಲ ಜಾತಿಗಳ ಮಠಾಧೀಶರ ಸಮ್ಮುಖದಲ್ಲಿ ರಾಯಣ್ಣ ಬ್ರಿಗೇಡ್‌ ಸಮಾವೇಶ ಆಯೋಜಿಸಲಾಗುತ್ತಿದೆ. ದಲಿತ, ಹಿಂದುಳಿದವರಲ್ಲಿ ಮಾತ್ರವಲ್ಲ ಲಿಂಗಾಯತ, ಬ್ರಾಹ್ಮಣರಲ್ಲೂ ಬಡವರಿದ್ದಾರೆ. ಬಡವರಲ್ಲಿ ಜಾಗೃತಿ ಬರಬೇಕು. ಚುಣಾವಣೆಯಲ್ಲಿ ಹಣಕ್ಕೆ ಬಾಯಿ ಬಿಡದೆ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಜಾತಿ, ಹಣದ ಲೆಕ್ಕ ಹಾಕಬಾರದು. ಜಾತಿ, ಉಪಜಾತಿಗಳ ಭೇದವು ನಮ್ಮೆಲ್ಲರನ್ನು ಹಾಳು ಮಾಡುತ್ತಿವೆ ಎಂದು ಹೇಳಿದರು.

ರಾಯಣ್ಣ ಸಮಾವೇಶಕ್ಕೆ ಮೋದಿ: ‘ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಧ್ಯೆ ಭಿನ್ನಾಭಿಪ್ರಾಯ ಎಂದು ಬಿಂಬಿಸಲಾಗುತ್ತಿದೆ. ಆದರೆ ಸಣ್ಣ ಗೊಂದಲಗಳನ್ನು ಮರೆತು ನಾವು ಖಂಡಿತವಾಗಿಯೂ ಒಂದಾಗುತ್ತೇವೆ. ಒಬ್ಬರು ಹಿರಿಯರು ಈಚೆಗೆ ನಮ್ಮಿಬ್ಬರನ್ನು ಕೂಡಿಸಿಕೊಂಡು ಸಮಾಲೋಚಿಸಿದರು. ದೀನ, ದಲಿತರು ಹಾಗೂ ಹಿಂದುಳಿದ ಜನಾಂಗದ ಅಭಿವೃದ್ಧಿಗಾಗಿ ಮಠಾಧೀಶರೊಂದಿಗೆ ವೇದಿಕೆಯಲ್ಲಿ ಪಾಲ್ಗೊಳ್ಳುವುದು ಹೇಗೆ ತಪ್ಪಾಗುತ್ತದೆ ಎಂದು ನಾನು ಪ್ರಶ್ನಿಸಿದೆ. ಮಠಾಧೀಶರ ಸಮ್ಮುಖದಲ್ಲಿ ಸಮಾವೇಶ ಮಾಡುವುದಾದರೆ ರಾಯಣ್ಣ ಬ್ರಿಗೇಡ್‌ ಮುಂದುವರಿಸಿ ಎಂದು ಹಿರಿಯರೆ ಪ್ರೋತ್ಸಾಹಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ ಕೂಡಾ ಈ ಬಗ್ಗೆ ಕೇಳಿದ್ದರು. ಅವರಿಗೂ ಮನವರಿಕೆ ಮಾಡಿದ್ದೇನೆ. ಜನವರಿ 26 ರಂದು ಕೂಡಲಸಂಗಮದಲ್ಲಿ 5 ಲಕ್ಷ ಜನರ ಸಮಾವೇಶ ಮಾಡಲಾಗುತ್ತಿದೆ. 10 ಲಕ್ಷ ಜನರನ್ನು ಸೇರಿಸಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬ್ರಿಗೇಡ್‌ ಕಾರ್ಯಕ್ರಮಕ್ಕೆ ಬರಲು ವ್ಯವಸ್ಥೆ ಮಾಡುವಂತೆ ಅಮಿತಾ ಷಾ ಅವರನ್ನು ಕೇಳಿಕೊಂಡಿದ್ದೇನೆ’ ಎಂದು ಹೇಳಿದರು.

ಬ್ರಿಗೇಡ್‌ ರಾಜ್ಯ ಸಂಚಾಲಕ ವಿರೂಪಾಕ್ಷಪ್ಪ  ಮಾತನಾಡಿ, ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಮಾನತೆ, ಸಂಪತ್ತಿನ ಲಾಭ, ರಾಜಕೀಯ ಲಾಭವನ್ನು ಅವರು ತಲುಪಿಸಲಿಲ್ಲ. ಈಶ್ವರಪ್ಪ ಅವರನ್ನು ಹಿಯಾಳಿಸಿದವರಿಗೆ ಬ್ರಿಗೇಡ್‌ ಸಮಾವೇಶಗಳ ಮೂಲಕ ತಕ್ಕ ಉತ್ತರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೆಪಿಎಸ್‌ಸಿ ಮಾಜಿ ಸದಸ್ಯ ಕೆ. ಮುಕುಡಪ್ಪ ಮಾತನಾಡಿ, ಎನ್‌. ಧರ್ಮಸಿಂಗ್‌ ಅವರು ಹಿಂದುಳಿದ ಹಾಗೂ ದಲಿತ ವರ್ಗದ ಒಬ್ಬ ವ್ಯಕ್ತಿಯನ್ನೂ ಶಾಸಕನಾಗಿ ಮಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಚಿವರನ್ನು ತೆಗೆದು ಹಾಕಿಸಿ ಪುತ್ರನಿಗೆ ಸಚಿವ ಸ್ಥಾನ ಪಡೆದುಕೊಂಡರು ಎಂದು ಟೀಕಿಸಿದರು.

ನಿವೃತ್ತ ಪೊಲೀಸ್‌ ಅಧಿಕಾರಿ ಸಂಗ್ರಾಮಸಿಂಗ್‌ ಹಾಗೂ ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ, ಮೋರಟಗಿ–ಯಲಗೋಡ ವಿರಕ್ತಮಠದ ಗುರುಲಿಂಗ ಜಂಗಮಾರ್ಚನೆ ಸ್ವಾಮೀಜಿ ಹಾಗೂ ತೊನಸನಹಳ್ಳಿ ಅಲ್ಲಂಪ್ರಭು ಸಂಸ್ಥಾನ ಮಠದ ಮಲ್ಲಣ್ಣಪ್ಪ ಸ್ವಾಮೀಜಿ ಮಾತನಾಡಿ, ‘ಜಾತಿ, ಮತಗಳನ್ನು ಲೆಕ್ಕಿಸದೆ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನೆಲ್ಲ ಬೆಂಬಲಿಸುವುದು ಸ್ವಾಮೀಜಿಗಳ ಕರ್ತವ್ಯ. ದೇಶಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಈಶ್ವರಪ್ಪ ಅವರು ಬಡವರ ಸೇವೆ ಮಾಡಲು ನಿರ್ಧರಿಸಿದ್ದಾರೆ. ಅವರಿಗೆ ಎಲ್ಲ ಸ್ವಾಮೀಜಿಗಳ ಬೆಂಬಲ ಸದಾ ಇದೆ’ ಎಂದರು.

ಮುಖಂಡರಾದ ಶರಣಪ್ಪ ತಳವಾರ, ರಮೇಶ ಯಾಕಾಪುರ, ಧರ್ಮಣ್ಣಾ ದೊಡ್ಡಮನಿ, ಅವ್ವಣ್ಣಾ ಮ್ಯಾಕೇರಿ, ಮುಕುಂದ ಕೊಡದೂರ, ಶಂಕರ ಚವಾಣ, ರಾಜೇಂದ್ರ ವಿಕಾರಾಬಾದ, ಮರೆಪ್ಪ ಬಡಿಗೇರ, ತಮ್ಮಣ್ಣ ಡಿಗ್ಗಿ ಮತ್ತಿತರರು ಇದ್ದರು. ಸಮಾವೇಶ ಆರಂಭಕ್ಕೂ ಮೊದಲು ಜಗತ್‌ವೃತ್ತದಿಂದ ರಂಗಮಂದಿರದವರೆಗೂ ತೆರೆದ ವಾಹನದಲ್ಲಿ ಮುಖಂಡರ ಮೆರವಣಿಗೆ ನಡೆಯಿತು.


ಸ್ವಾಮೀಜಿಗಳಿಂದ ಈಶ್ವರಪ್ಪಗೆ ಬೆಳ್ಳಿ  ಕಿರೀಟ
ಕಲಬುರ್ಗಿ: ವೇದಿಕೆಯಲ್ಲಿದ್ದ ಸ್ವಾಮೀಜಿಗಳು ಒಟ್ಟಾಗಿ ಕೆ.ಎಸ್‌.ಈಶ್ವರಪ್ಪ ಅವರನ್ನು ಸನ್ಮಾನಿಸಿ ಬೆಳ್ಳಿಕಿರೀಟ ತೊಡಿಸಿದರು.

‘ಹಿಂದುಳಿದವರ, ಬಡವರ ಕೆಲಸಕ್ಕೆ ಬದ್ಧವಾಗಿರುವುದಕ್ಕೆ ಸ್ವಾಮೀಜಿಗಳು ಕಿರೀಟ ತೊಡಿಸಿದ್ದಾರೆ. ನಾನು ಅದನ್ನು ಗೌರವದಿಂದ ಮನ್ನಿಸಿ ಸನ್ಮಾನ ಸ್ವೀಕರಿಸುತ್ತೇನೆ. ನ್ಯಾಯ ಕೊಡಿಸಲು ಬದ್ಧವಾಗಿದ್ದೇನೆ ಎನ್ನುವುದಕ್ಕಾಗಿ ಕಿರೀಟವನ್ನು ಲಂಬಾಣಿ ಮಹಿಳೆಯರಿಗೆ ತೊಡಿಸುತ್ತಿದ್ದೇನೆ’ ಎಂದು ಈಶ್ವರಪ್ಪ ಅವರು ಲಂಬಾಣಿ ಮಹಿಳೆಯರನ್ನು ವೇದಿಕೆಗೆ ಆಹ್ವಾನಿಸಿ ಕಿರೀಟ ತೊಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT