ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ, ಸಾಹಿತ್ಯ ವಿಮರ್ಶೆಯಿಂದ ಬೆಳಕಿಗೆ

Last Updated 11 ಜನವರಿ 2017, 6:02 IST
ಅಕ್ಷರ ಗಾತ್ರ

ಬಸವಕಲ್ಯಾಣ: `ಸಾಹಿತ್ಯ ವಿಮರ್ಶೆಗೆ ಒಳಗಾಗದ ಹೊರತು ಸಾಹಿತಿ ಬೆಳಕಿಗೆ ಬರಲಾರ’ ಎಂದು ಉಪನ್ಯಾಸಕ ಭೀಮಾಶಂಕರ ಬಿರಾದಾರ ಹೇಳಿದರು.
ತಾಲ್ಲೂಕಿನ ಹುಲಸೂರನಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಸಾಹಿತ್ಯದ ಅನನ್ಯತೆಗಳು ಗೋಷ್ಠಿಯಲ್ಲಿ ಅವರು ಯುವ ಸಾಹಿತ್ಯ ಕುರಿತು ಮಾತನಾಡಿದರು.

ಈ ಭಾಗದಲ್ಲಿ ಸಾಹಿತ್ಯ ರಚಿಸುವವರ ಕೊರತೆ ಇಲ್ಲ. ಯುವಕರಲ್ಲಿ ಈ ಬಗ್ಗೆ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದೆ. ಆದರೆ, ಅವರ ಸಾಹಿತ್ಯ ವಿಮರ್ಶಿಸಲ್ಪಡುತ್ತಿಲ್ಲ. ಆದ್ದರಿಂದ ರಾಜ್ಯಮಟ್ಟದಲ್ಲಿ ಅವರು ಬೆಳೆಯುತ್ತಿಲ್ಲ. ಯುವ ಜನತೆ ಇತ್ತಿಚಿಗೆ ಫೇಸ್ ಬುಕ್, ವಾಟ್ಸ್ಪ್ ನಲ್ಲಿ ಬರೆಯುವ ಆನಲೈನ್ ಸಾಹಿತ್ಯ ರಚಿಸುವದಕ್ಕೆ ಉತ್ಸಾಹ ತೋರುತ್ತಿದ್ದಾರೆ. ಆಧುನಿಕ ಜಗತ್ತಿಗೆ ಹೊಂದಿಕೊಂಡು ಹೋದರೆ ಹೆಚ್ಚಿನ ಪ್ರಚಾರ ದೊರಕಬಲ್ಲದು ಎಂದರು.

ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಶಿವಲಿಂಗ ಹೆಡೆ ಮಾತನಾಡಿ, ಪಂಪ, ರನ್ನನಿಂದ ಕುವೆಂಪು ಹಾಗೂ ಇತ್ತೀಚಿನ ಕೆಲ ಹಿರಿಯ ಸಾಹಿತಿಗಳು ಯುವಕರಿಗೆ ಪ್ರೇರಣೆ ನೀಡುವ ಸಾಹಿತ್ಯವನ್ನು ಬರೆದಿದ್ದಾರೆ. ಯಾವುದೇ ಸಾಹಿತ್ಯವಿದ್ದರೂ ಮೌಲ್ಯಯುತ ಆಗಿರಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ರಜಿಯಾ ಬಳಬಟ್ಟೆ ಮಹಿಳಾ ಸಾಹಿತ್ಯದ ಕುರಿತು ಮಾತನಾಡಿ, ಕನ್ನಡದಲ್ಲಿ ಮಹಿಳೆಯರಿಂದ ವಿಫುಲ ಸಾಹಿತ್ಯ ರಚನೆಯಾಗಿದೆ. ಆದರೆ, ಈ ಭಾಷೆಯ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದರೂ ಒಂದೂ ಮಹಿಳೆಯರಿಗೆ ದೊರೆತಿಲ್ಲ. ಇದನ್ನು ನೋಡಿದರೆ ಮಹಿಳಾ ಸಾಹಿತಿಗಳನ್ನು ಇನ್ನುವರೆಗೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.

ಜನಪದ ಸಾಹಿತ್ಯ ಮಹಿಳೆಯರಿಂದಲೇ ಹುಟ್ಟಿಕೊಂಡಿದೆ. 12 ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಸಮಾನ ಅವಕಾಶ ನೀಡಿ ಮಹಿಳಾ ಸಾಹಿತಿಗಳನ್ನು ಬೆಳೆಸಿದ್ದಾರೆ. ಜಯದೇವಿತಾಯಿ ಲಿಗಾಡೆ, ಗೀತಾ ನಾಗಭೂಷಣ, ನೇಮಿಚಂದ್ರ, ಸಾ.ರಾ.ಅಬೂಬಕರ್ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ ಕಾರ್ಯ ಮಾಡಿದ್ದಾರೆ ಎಂದರು.
ಎ.ಕೆ.ರಾಮೇಶ್ವರ ಮಾತನಾಡಿ, ಮಕ್ಕಳಲ್ಲಿ ನೈತಿಕ ಬಲವನ್ನು ತುಂಬಬಲ್ಲ ಮಕ್ಕಳ ಸಾಹಿತ್ಯ ರಚನೆ ಆಗಬೇಕು. ಶಾಲೆಗಳಲ್ಲಿ ಭವಿಷ್ಯ ಉಜ್ವಲಗೊಳಿಸುವ ಶಿಕ್ಷಣ ದೊರಕಬೇಕು ಎಂದು ಹೇಳಿದರು.

ಮಹಾದೇವಪ್ಪ, ವಿಜಯಲಕ್ಷ್ಮಿ ಇಜಾರೆ, ವೈಜನಾಥ ಕಮಠಾಣೆ, ಎಸ್.ಎಸ್.ಶಿವಣಕರ್, ವಿಜಯಕುಮಾರ ಗೌರೆ, ಜಗನ್ನಾಥ ಹಲಮಡಗೆ, ಬಾಬುರಾವ ಬಿರಾದಾರ, ಸೋಮಶೇಖರ, ವೇಣುಗೋಪಾಲ ಶೀಲವಂತ ಇವರನ್ನು ಸನ್ಮಾನಿಸಲಾಯಿತು. ಶಿವಾನಂದ ಸ್ವಾಮೀಜಿ, ಸಾಯಗಾಂವ ಶಿವಾನಂದ ದೇವರು, ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಎಂ.ಎಸ್.ಮನೋಹರ ಪಾಲ್ಗೊಂಡಿದ್ದರು.

ಗಡಿಗ್ರಾಮಗಳಲ್ಲಿ  ಕನ್ನಡ ಶಾಲೆಗಳ ಸ್ಥಾಪನೆಗೆ ಮನವಿ
ಬಸವಕಲ್ಯಾಣ: ತಾಲ್ಲೂಕಿನ ಗಡಿ ಭಾಗದ 15 ಗ್ರಾಮಗಳಲ್ಲಿ ಕನ್ನಡ ಶಾಲೆಗಳಿಲ್ಲ. ಆದ್ದರಿಂದ ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಯತ್ನಿಸಬೇಕು ಎಂದು ಗ್ರಾಮದ ವಿವಿಧ ಸಂಘಟನೆಗಳ ಪ್ರಮುಖರಿಂದ ಕಲ್ಯಣ ಕರ್ನಾಟಕ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಗಡಿ ಭಾಗದ ಅನ್ಯ ಭಾಷೆಯ ಶಾಲೆಗಳಲ್ಲಿನ ಕನ್ನಡ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಎಲ್ಲೆಡೆಯ ಅಂಗಡಿಗಳ ಹಾಗೂ ಸಂಘ ಸಂಸ್ಥೆಗಳ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಲು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ಸಮ್ಮೇಳನ ನಡೆಸುವುದಕ್ಕೆ ಪೂರ್ವದಲ್ಲಿ ಸರ್ವ ಸದಸ್ಯರ ಸಭೆ ಆಯೋಜಿಸಬೇಕು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಬೇಕು ಎಂದು ಆಗ್ರಹಿಸಲಾಯಿತು.

ಪ್ರಸ್ತುತ ಸಮ್ಮೇಳನ ನಡೆಸುತ್ತಿರುವ ಗುರುಬಸವೇಶ್ವರ ಸಂಸ್ಥಾನ ಮಠವು 12 ನೇ ಶತಮಾನದ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ದೇವರಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇದರ ಪ್ರಗತಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಬೇಕು. ಮಠದ ಹಿಂದಿನ ಪೀಠಾಧಿಪತಿ ಬಸವಕುಮಾರ ಶಿವಯೋಗಿಗಳ ಜೀವನಚರಿತ್ರೆಯನ್ನು ಪರಿಷತ್ತಿನಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂದೂ ಆಗ್ರಹಿಸಲಾಯಿತು.

ವಚನ ಸಾಹಿತ್ಯ ಪರಿಷತ್ತಿನ ವಲಯ ಘಟಕದ ಅಧ್ಯಕ್ಷ ಬಸವಕುಮಾರ ಕೌಟೆ, ಪ್ರಮುಖರಾದ ಶಿವರಾಜ ಖಪಲೆ, ಲೋಕೇಶ ಧರ್ಮಣೆ ಪಾಲ್ಗೊಂಡಿದ್ದರು.

ಸಮ್ಮೇಳನದ ನಿರ್ಣಯಗಳು
ಬಸವಕಲ್ಯಾಣ: ಇಲ್ಲಿರುವ ಪ್ರಸಿದ್ಧ ಕವಯತ್ರಿ ಜಯದೇವಿತಾಯಿ ಲಿಗಾಡೆಯವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಲು ತಾಲ್ಲೂಕಿನ ಹುಲಸೂರನಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗುರುಬಸವೇಶ್ವರ ಸಂಸ್ಥಾನ ಮಠದಿಂದ ಆಯೋಜಿಸಿದ್ದ ಮೂರು ದಿನಗಳ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾ ರೋಪ ಸಮಾರಂಭಕ್ಕೂ ಮೊದಲು ನಡೆದ ಬಹಿರಂಗ ಅಧಿವೇಶನದಲ್ಲಿ ಆಗ್ರಹಿಸಲಾಯಿತು.

ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಬಸವರಾಜ ಬಲ್ಲೂರ ಬೇಡಿಕೆಗಳನ್ನು ಮಂಡಿಸಿದರು. ಸಮ್ಮೇಳನಾಧ್ಯಕ್ಷ ಡಾ.ಚನ್ನಣ್ಣ ವಾಲಿಕಾರ, ಸಂಸದ ಭಗವಂತ ಖೂಬಾ, ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಶಿವಾನಂದ ಸ್ವಾಮಿ, ರುದ್ರಮಣಿ ಮಠಪತಿ ಪಾಲ್ಗೊಂಡಿದ್ದರು.

ರಾಜ್ಯದ ಗಡಿ ಭಾಗದ ಶಾಲೆಗಳಲ್ಲಿನ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದೂ ಆಗ್ರಹಿಸಲಾಯಿತು.

ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರಾಧಾನ್ಯತೆ ನೀಡಿ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಬೇಕು. ರಾಯಚೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಐಐಟಿಯ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಆರಂಭಿಸಬೇಕು. ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು.

ತಾಲ್ಲೂಕಿನ ಗೋರಟಾ(ಬಿ)ದಲ್ಲಿ ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ಮಂಜೂರಾಗಿರುವ ಪ್ರಾದೇಶಿಕ ಸಂಗೀತ ಅಧ್ಯಯನ ಕೇಂದ್ರಕ್ಕೆ ಮೂಲ ಸೌಲಭ್ಯ ಒದಗಿಸಬೇಕು. ಸಮಾನತೆ ಸಾರಿದ ಬಸವಾದಿ ಶರಣರ ನಾಡು ಬಸವಕಲ್ಯಾಣವನ್ನು ಅಂತರ್ ರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು.

ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಬೇಕು. 371(ಜೆ) ಕಾಯ್ದೆ ಕಲಂ ಅನುಷ್ಠಾನ ತೀವ್ರಗೊಳಿಸಬೇಕು. ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಡಿಜಿಟಲೀಕರಣಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT